ಎಮರ್ಜೆನ್ಸಿ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು? ಬಾಕ್ಸ್ ಆಫೀಸ್‌ನಲ್ಲಿ ಮಗದೊಮ್ಮೆ ಮಕಾಡೆ ಮಲಗಿದ ಕಂಗನಾ ರಣಾವತ್
Emergency Box office Collection Day 1: ಕಂಗನಾ ರಣಾವತ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿರುವ ಎಮರ್ಜೆನ್ಸಿ ಸಿನಿಮಾ ಜ. 17ರಂದು ಬಿಡುಗಡೆ ಆಗಿದೆ. ಹೇಳಿಕೊಳ್ಳುವ ಹೈಪ್ ಸೃಷ್ಟಿ ಮಾಡದ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲಿಯೂ ಸದ್ದು ಮಾಡಲಿಲ್ಲ. ಹಾಗಾದರೆ, ಮೊದಲ ದಿನ ಈ ಸಿನಿಮಾ ಗಳಿಸಿದ್ದು ಎಷ್ಟು? ಇಲ್ಲಿದೆ ರಿಪೋರ್ಟ್

Emergency Box office Collection Day 1: ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ಬಹುನಿರೀಕ್ಷಿತ ಚಿತ್ರ ಎಮರ್ಜೆನ್ಸಿ ಜನವರಿ 17 ರಂದು ಬಿಡುಗಡೆಯಾಗಿದೆ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ 1975ರ ಅವಧಿಯಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿ ಆಧರಿಸಿ ಈ ಸಿನಿಮಾವನ್ನು ಸ್ವತಃ ಕಂಗನಾ ನಿರ್ದೇಶಿಸಿ ನಿರ್ಮಿಸಿದ್ದರು. ಆದರೆ, ಮೊದಲ ದಿನವೇ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಮರ್ಶೆ ಜತೆಗೆ ಕಲೆಕ್ಷನ್ ವಿಚಾರದಲ್ಲಿ ಈ ಸಿನಿಮಾ ಮೂಡಿ ಮಾಡಿಲ್ಲ.
ಸ್ಯಾಕ್ನಿಲ್ಕ್ ಪ್ರಕಾರ, ಎಮೆರ್ಜೆನ್ಸಿ ಚಿತ್ರವು ಶುಕ್ರವಾರ ರಾತ್ರಿ 9:25 ರವರೆಗೆ ಸುಮಾರು 2.09 ಕೋಟಿ ರೂ. ಗಳಿಸಿದೆ. ಕಂಗನಾ ಅವರ ಕೊನೆಯ ಚಿತ್ರ ತೇಜಸ್ ಮೊದಲ ದಿನ 1.20 ಕೋಟಿ ರೂ. ಗಳಿಸಿತ್ತು. 2020ರಲ್ಲಿ ಬಿಡುಗಡೆಯಾದ ಪಂಗಾ 2.70 ಕೋಟಿ ರೂ. ಆರಂಭಿಕ ಗಳಿಕೆ ಮಾಡಿತ್ತು. ಇದೀಗ ಎಮರ್ಜೆನ್ಸಿ ಈ ಎರಡು ಸಿನಿಮಾಗಳಿಗಿಂತಲೂ ಹಿಂದಿದೆ. ಇನ್ನೇನು ಶೀಘ್ರದಲ್ಲಿ ಚಿತ್ರತಂಡದಿಂದ ಅಧಿಕೃತ ಕಲೆಕ್ಷನ್ ರಿಪೋರ್ಟ್ ಹೊರಬೀಳಬೇಕಿದೆ.
ಟಿಕೆಟ್ ಕಡಿಮೆ ಮಾಡಿದ್ರೂ ಜನ ಬರಲಿಲ್ಲ..
ಜನವರಿ 17ರಂದು ಎಮರ್ಜೆನ್ಸಿ ಸಿನಿಮಾ ಬಿಡುಗಡೆಯಾಗಿದೆ. ಈ ದಿನದಂದು, ಕೆಲವು ಆಯ್ದ ಚಿತ್ರಮಂದಿರಗಳಲ್ಲಿ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿತ್ತು. ಈ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ಕಂಗನಾ, 99 ರೂ.ಗೆ 'ಎಮರ್ಜೆನ್ಸಿ' ಸಿನಿಮಾ ನೋಡಬಹುದು ಎಂದು ಘೋಷಿಸಿದ್ದರು. ಆದರೆ, ಅದೂ ಸಹ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿಲ್ಲ. ಕೆಲ ವರದಿಗಳ ಪ್ರಕಾರ 25 ಕೋಟಿ ರೂ. ವೆಚ್ಚದಲ್ಲಿ ಎಮರ್ಜೆನ್ಸಿ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.
ಎಮರ್ಜೆನ್ಸಿ ಚಿತ್ರದ ಜೊತೆಗೆ, ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ ಮತ್ತು ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿಯ 'ಆಜಾದ್' ಚಿತ್ರ ಕೂಡ ಚಿತ್ರಮಂದಿರಗಳಲ್ಲಿ ಶುಕ್ರವಾರ ಬಿಡುಗಡೆಯಾಗಿದೆ. ಮೊದಲ ದಿನ 'ಆಜಾದ್' ಚಿತ್ರಕ್ಕೆ ಹೋಲಿಸಿದರೆ 'ಎಮರ್ಜೆನ್ಸಿ' ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಎಮರ್ಜೆನ್ಸಿ ಸಿನಿಮಾ 2.09 ಕೋಟಿ ರೂ. ಗಳಿಸಿದರೆ, 'ಆಜಾದ್' 1.42 ಕೋಟಿ ರೂ. ಗಳಿಸಿದೆ.
ಬಾಲಿವುಡ್‌ಗೆ ಕಾಲಿಟ್ಟ ರವೀನಾ ಪುತ್ರಿ
ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ ಮತ್ತು ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ 'ಆಜಾದ್' ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದಾರೆ. ಈ ಇಬ್ಬರೂ ಸ್ಟಾರ್ ಮಕ್ಕಳ ಮೊದಲ ಚಿತ್ರವೇ ಆಜಾದ್. ಅಭಿಷೇಕ್ ಕಪೂರ್ 'ಆಜಾದ್' ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಹಿಂದಿನ ಸಿನಿಮಾಗಳ ಕಲೆಕ್ಷನ್ ಹೇಗಿತ್ತು..
ಎಮರ್ಜೆನ್ಸಿ ಸಿನಿಮಾದಲ್ಲಿ ಕಂಗನಾ ರಣಾವತ್ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಿದರೆ, ಇನ್ನುಳಿದಂತೆ, ಅನುಪಮ್ ಖೇರ್, ಮಹಿಮಾ ಚೌಧರಿ, ಶ್ರೇಯಸ್ ತಲ್ಪಡೆ, ಸತೀಶ್ ಕೌಶಿಕ್, ಮಿಲಿಂದ್ ಸೋಮನ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಕಂಗನಾ ನಟನೆಯ ಈ ಹಿಂದಿನ ಸಿನಿಮಾಗಳ ಮೊದಲ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಹೇಳುವುದಾದರೆ, ತೇಜಸ್ 1.20 ಕೋಟಿ ರೂ, ಧಾಕಡ್ 55 ಲಕ್ಷ ಗಳಿಸಿದರೆ, ತಲೈವಿ ಕೇವಲ 32 ಲಕ್ಷ ಗಳಿಸಿತ್ತು. ಪಂಗಾ 2.70 ಕೋಟಿ ರೂ, ಜಡ್ಜ್‌ಮೆಂಟಲ್ ಹೈ ಕ್ಯಾ ಸಿನಿಮಾ 4.50 ಕೋಟಿ ಗಳಿಕೆ ಕಂಡಿತ್ತು.
