ಚಿತ್ರಮಂದಿರಗಳಲ್ಲಿ ಕಾಣದ ಯಶಸ್ಸನ್ನು ಒಟಿಟಿಯಲ್ಲಿ ಪಡೆದ ಸಿನಿಮಾಗಳು; ಟ್ರೆಂಡಿಗ್‌ನಲ್ಲಿವೆ ಎಮೆರ್ಜೆನ್ಸಿ, ಆಜಾದ್
ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದ ಎರಡು ಸಿನಿಮಾಗಳು ಈಗ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದೇ ಇದ್ದರೂ ಒಟಿಟಿಯಲ್ಲಿ ಕಂಗನಾ ರನೌತ್ ಅವರ ‘ಎಮರ್ಜೆನ್ಸಿ’ ಮತ್ತು ಅಜಯ್ ದೇವಗನ್ ಅವರ ‘ಆಜಾದ್’ ಸಿನಿಮಾವನ್ನು ಸಿನಿಪ್ರಿಯರು ಇಷ್ಟಪಟ್ಟಿದ್ದಾರೆ.

ಒಟಿಟಿಯಲ್ಲಿ ವೈವಿಧ್ಯಮಯ ವಿಷಯವನ್ನು ಹೊಂದಿರುವ ಚಲನಚಿತ್ರಗಳನ್ನು ಡಿಜಿಟಲ್ ಸ್ಟ್ರೀಮ್ ಮಾಡಲಾಗುತ್ತದೆ. ಚಿತ್ರಮಂದಿರಗಳಲ್ಲಿ ಓಡದ ಅದೆಷ್ಟೋ ಸಿನಿಮಾಗಳು ಒಟಿಟಿಗೆ ಬಂದ ತಕ್ಷಣ ಫೇಮಸ್ ಆಗುತ್ತವೆ. ಅದೇ ಸಾಲಿಗೆ ಈಗ ಇನ್ನೆರಡು ಸಿನಿಮಾಗಳು ಸೇರಿದೆ. ಕಂಗನಾ ರನೌತ್ ಅವರ ‘ಎಮರ್ಜೆನ್ಸಿ’ ಮತ್ತು ಅಜಯ್ ದೇವಗನ್ ಅವರ ‘ಆಜಾದ್’ ಸಿನಿಮಾವನ್ನು ಹಲವರು ಇಷ್ಟಪಟ್ಟು ನೋಡುತ್ತಿದ್ದಾರೆ.
ಒಟಿಟಿಯಲ್ಲಿ ಸಿನಿಮಾಗಳ ಓಟ
ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯದ ಚಲನಚಿತ್ರಗಳು ಒಟಿಟಿಯಲ್ಲಿ ಧೂಳೆಬ್ಬಿಸುತ್ತಿವೆ. ಈ ವರ್ಷ ಒಂದೇ ದಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎರಡು ದೊಡ್ಡ ಬಜೆಟ್‌ನ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಕಲೆಕ್ಷನ್ ಇಲ್ಲದೆ ಬಣಗುಟ್ಟಿದವು. ಈಗ ಅದೇ ಎರಡು ಸಿನಿಮಾಗಳು ನಿರಂತರವಾಗಿ ಒಟಿಟಿ ಟ್ರೆಂಡಿಂಗ್‌ನಲ್ಲಿವೆ.
ಬಾಲಿವುಡ್ ಕ್ವೀನ್ ಕಂಗನಾ ರನೌತ್ ಮೊದಲ ಬಾರಿಗೆ ನಿರ್ದೇಶಿಸಿದ ಐತಿಹಾಸಿಕ ರಾಜಕೀಯ ಚಿತ್ರ ಎಮರ್ಜೆನ್ಸಿ. ಕಂಗನಾ ರನೌತ್ ಚಿತ್ರಕಥೆ ಬರೆದು, ಮುಖ್ಯ ಪಾತ್ರದಲ್ಲಿ ನಟಿಸಿದ ಮತ್ತು ನಿರ್ಮಿಸಿದ ಸಿನಿಮಾ ಇದಾಗಿದ್ದು, ಚಿತ್ರಮಂದಿರಗಳಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಸಿನಿಮಾ ಪ್ರಚಾರದ ಹಂತದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ತದನಂತರದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಯಿತು ಈಗ ಈ ಸಿನಿಮಾ ಟ್ರೆಂಡಿಂಗ್‌ನಲ್ಲಿದೆ.
ಈ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮತ್ತೊಂದು ಹಿಂದಿ ಚಿತ್ರ, 'ಆಜಾದ್'. ಇದೊಂದು ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ ನಾಯಕನಾಗಿ ಮತ್ತು ರವೀನಾ ಟಂಡನ್ ಅವರ ಮಗಳು ರಾಶಾ ತಡಾನಿ ನಾಯಕಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಅಜಯ್ ದೇವಗನ್ ಅವರ 'ಆಜಾದ್' ಚಿತ್ರದಲ್ಲಿ ಸ್ಟಾರ್ ಕಿಡ್ಸ್ ಆಗಿ ಅಮನ್ ಮತ್ತು ರಾಶಾ ಅವರ ಬಾಲಿವುಡ್ ಚೊಚ್ಚಲ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಭಿಷೇಕ್ ಕಪೂರ್ ನಿರ್ದೇಶನದ ಈ ಚಿತ್ರವನ್ನು ಸುಮಾರು 80 ಕೋಟಿ ರೂ.ಗಳ ಬೃಹತ್ ಬಜೆಟ್ ನಿರ್ಮಾಣವಾಗಿತ್ತು. ಆದರೂ ಜನವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಆಜಾದ್ ಬಾಕ್ಸ್ ಆಫೀಸ್ ನಲ್ಲಿ ಕೇವಲ 9.17 ರಿಂದ 10 ಕೋಟಿ ರೂ ಮಾತ್ರ ಗಳಿಸಿತ್ತು. ಆದರೆ ಈಗ ಇದೇ ಸಿನಿಮಾ ಒಟಿಟಿಗೆ ಪಾದಾರ್ಪಣೆ ಮಾಡಿದೆ. ಒಟಿಟಿಯಲ್ಲಿನ ಓಟ ತುಂಬಾ ಚೆನ್ನಾಗಿದೆ.
ಯಾವ ಒಟಿಟಿಯಲ್ಲಿ ವೀಕ್ಷಿಸಬಹುದು?
ಒಂದೇ ದಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಎಮರ್ಜೆನ್ಸಿ ಮತ್ತು ಆಜಾದ್ ಪ್ರಸ್ತುತ ಒಂದೇ ಒಟಿಟಿ ಪ್ಲಾಟ್ಫಾರ್ಮ್‌ನಲ್ಲಿ ಬಿಡುಗಡೆಯಾಗಿದ್ದು, ಟ್ರೆಂಡಿಂಗ್‌ನಲ್ಲಿದೆ. ಈ ಎಡರೂ ಸಿನಿಮಾಗಳು ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ. ಕ್ರಮವಾಗಿ ಟಾಪ್ 3 ಮತ್ತು ಟಾಪ್ 4 ಸ್ಥಾನಗಳಲ್ಲಿ ಒಟಿಟಿಯಲ್ಲಿ ಟ್ರೆಂಡಿಂಗ್‌ನಲ್ಲಿವೆ. ಆಜಾದ್ ಒಟಿಟಿಯಲ್ಲಿ ಮಾರ್ಚ್ 14 ರಿಂದ ಸ್ಟ್ರೀಮಿಂಗ್ ಆಗುತ್ತಿದೆ. ಎಮರ್ಜೆನ್ಸಿ ಸಿನಿಮಾ ಮಾರ್ಚ್ 17 ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದೆ.
ಬಾಲಿವುಡ್‌ಗೆ ಕಾಲಿಟ್ಟ ರವೀನಾ ಪುತ್ರಿ
ಆಗಲೇ ತಿಳಿಸಿದಂತೆ ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ ಮತ್ತು ಅಜಯ್ ದೇವಗನ್ ಅವರ ಸೋದರಳಿಯ ಅಮನ್ ದೇವಗನ್ 'ಆಜಾದ್' ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದಾರೆ. ಈ ಇಬ್ಬರೂ ಸ್ಟಾರ್ ಮಕ್ಕಳ ಮೊದಲ ಚಿತ್ರವೇ ಆಜಾದ್ ಆಗಿದ್ದು, ಚಿತ್ರಮಂದಿರಗಳಲ್ಲಿ ಯಶಸ್ಸು ಲಭ್ಯವಾದೆ ಇದ್ದರೂ ಒಟಿಟಿಯಲ್ಲಿ ಹಿಟ್ ಆಗುತ್ತಿದ್ದಾರೆ.
