Chhaava OTT release: ನಾಳೆಯಿಂದ ಒಟಿಟಿಯಲ್ಲಿ ಛಾವಾ ಹವಾ; ಬಾಕ್ಸ್ ಆಫೀಸ್‌ನಲ್ಲಿ 804 ಕೋಟಿ ಗಳಿಸಿದ ಬ್ಲಾಕ್‌ಬಸ್ಟರ್ ಸಿನಿಮಾ
Chhaava OTT release: ವಿಕ್ಕಿ ಕೌಶಲ್ ನಟಿಸಿರುವ ಮತ್ತು ಲಕ್ಷ್ಮನ್ ಉಟೇಕರ್ ನಿರ್ದೇಶನ ಮಾಡಿರುವ ಛಾವಾ ಸಿನಿಮಾವು ಏಪ್ರಿಲ್ 11ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಬಾಕ್ಸ್ ಆಫೀಸ್‌ನಲ್ಲಿ 804 ಕೋಟಿ ಗಳಿಸಿದ ಬ್ಲಾಕ್‌ಬಸ್ಟರ್ ಸಿನಿಮಾವನ್ನು ಒಟಿಟಿಯಲ್ಲಿ ಮನೆಯಲ್ಲೇ ಕಣ್ತುಂಬಿಕೊಳ್ಳಬಹುದು.

Chhaava OTT release: ವಿಕ್ಕಿ ಕೌಶಲ್ ನಟಿಸಿರುವ ಛಾವಾ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮ್ಯಾಜಿಕ್ ಮಾಡಿತ್ತು. ಈ ಸಿನಿಮಾದಲ್ಲಿ ಚತ್ರಪತಿ ಸಾಂಬಾಜಿ ಮಹಾರಾಜ್‌ರ ಕಥೆಯಿತ್ತು. ಬಾಕ್ಸ್ ಆಫೀಸ್‌ನಲ್ಲಿ 804 ಕೋಟಿ ರೂಪಾಯಿ ಬಾಚಿಕೊಂಡ ಈ ಸಿನಿಮಾ ಇದೀಗ ಒಟಿಟಿಯತ್ತ ಮುಖ ಮಾಡಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 11ರಿಂದ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಸಿನಿಮಾಕ್ಕೆ ಲಕ್ಷ್ಮನ್ ಉಟೇಕರ್ ನಿರ್ದೇಶನವಿದೆ. ದಿನೇಶ್ ವಿಜಾನ್ ನಿರ್ಮಾಣ ಮಾಡಿದ್ದಾರೆ. ಚಿತ್ರಮಂದಿರಗಳಲ್ಲಿ ಛಾವಾ ಸಿನಿಮಾ ಫೆಬ್ರವರಿ 14ರಂದು ಬಿಡುಗಡೆಯಾಗಿತ್ತು.
ಒಟಿಟಿಯಲ್ಲಿ ಛಾವಾ ಸಿನಿಮಾ ಬಿಡುಗಡೆ
ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ, ವಿನೀತ್ ಕುಮಾರ್ ಸಿಂಗ್ ಮತ್ತು ಅಶುತೋಷ್ ರಾಣಾ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಛಾವಾ ಸಿನಿಮಾವು ಏಪ್ರಿಲ್ 11, 2025ರಂದು ರಿಲೀಸ್ ಆಗಲಿದೆ. ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ನೆಟ್‌ಫ್ಲಿಕ್ಸ್ ಅಧಿಕೃತವಾಗಿ ಅಪ್‌ಡೇಟ್ ನೀಡಿದೆ. "ಧೈರ್ಯಶಾಲಿ ರಾಜನ ಕಥೆ ಏಪ್ರಿಲ್ 11ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ" ಎಂದು ನೆಟ್‌ಫ್ಲಿಕ್ಸ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ.
ಛಾವಾ ಒಟಿಟಿ ಬಿಡುಗಡೆ ಕುರಿತು ವಿಕ್ಕಿ ಕೌಶಲ್ ಹೀಗಂದ್ರು
ವಿಕ್ಕಿ ಕೌಶಲ್ ಅವರು ಛಾವಾ ಸಿನಿಮಾದಲ್ಲಿ ಅತ್ಯಂತ ಪ್ರಬಲ ಪಾತ್ರದಲ್ಲಿ ನಟಿಸಿದ್ದಾರೆ. ಇದು ವಿಕ್ಕಿ ಈವರೆಗೆ ನಟಿಸಿರುವ ಅತ್ಯಂತ ಪ್ರಬಲ ಪಾತ್ರಗಳಲ್ಲಿ ಒಂದಾಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಬರೆದಿದ್ದಾರೆ. "ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ನಟಿಸುವುದು ಪದಗಳಿಗೆ ಮೀರಿದ ಗೌರವ ಮತ್ತು ನನ್ನ ವೃತ್ತಿಜೀವನದ ಅತ್ಯಂತ ತೃಪ್ತಿಕರ ಅನುಭವಗಳಲ್ಲಿ ಒಂದಾಗಿದೆ. ಮಹಾರಾಜ್ ಅವರ ಧೈರ್ಯ, ಪರಂಪರೆ ಪ್ರಪಂಚದ ಪ್ರತಿಯೊಂದು ಮೂಲೆಯನ್ನೂ ತಲುಪಬೇಕು. ನೆಟ್‌ಫ್ಲಿಕ್ಸ್ ಮೂಲಕ ಇವರ ಕಥೆಯು ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟಕ್ಕೆ ತಲುಪಲಿದೆ. ಒಟಿಟಿಯಲ್ಲಿ ಬಿಡುಗಡೆಯಾಗುವುದನ್ನು ಕಾಯುತ್ತಿದ್ದೇವೆ" ಎಂದು ವಿಕ್ಕಿ ಕೌಶಲ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
"ಛಾವಾ ಸಿನಿಮಾವು ನಮ್ಮೆಲ್ಲರಿಗೂ ಪ್ರೀತಿಯ ಶ್ರಮ ಮತ್ತು ಭಾವನಾತ್ಮಕ ಪ್ರಯಾಣವಾಗಿದೆ. ನಾವು ಮುಖ್ಯವಾದ ಕಥೆಗಳನ್ನು ಹೇಳುವುದರಲ್ಲಿ ಉತ್ಸುಕರಾಗಿದ್ದೇವೆ. ಛಾವಾ ಕೇವಲ ಧೈರ್ಯದ ಕಥೆಯಲ್ಲ, ಇದು ಪರಂಪರೆ, ಧೈರ್ಯ ಮತ್ತು ತ್ಯಾಗದ ಆಚರಣೆಯಾಗಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಜಾಗತಿಕ ಪ್ರೇಕ್ಷಕರಿಗೆ ಇದನ್ನು ತರಲು ನಾವು ಉತ್ಸುಕರಾಗಿದ್ದೇವೆ. ಅಲ್ಲಿ ಕಥೆಯು ಜೀವಂತವಾಗಿರುತ್ತದೆ. ಪ್ರಪಂಚದಾದ್ಯಂತದ ವೀಕ್ಷಕರಿಗೆ ಸ್ಫೂರ್ತಿ ನೀಡುತ್ತದೆ”ಎಂದು ನಿರ್ಮಾಪಕ ದಿನೇಶ್ ವಿಜನ್ ಹೇಳಿದ್ದಾರೆ.
ಛಾವಾ ಸಿನಿಮಾದ ಬಗ್ಗೆ
ವಿಕ್ಕಿ ಕೌಶಲ್ ನಟಿಸಿರುವ ಛಾವಾ ಸಿನಿಮಾವು ಐತಿಹಾಸಿಕ ವಿಷಯಗಳನ್ನು ಹೊಂದಿದೆ. ಇದು ಛತ್ರಪತಿ ಶಿವಾಜಿ ಮಹಾರಾಜ್ ಅವರ ಮಗ ಸಂಭಾಜಿ ಮಹಾರಾಜನ ಸಾಹಸದ ಕಥೆಯನ್ನು ಹೊಂದಿದೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಈ ಸಿನಿಮಾದಲ್ಲಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ಯೇಸುಬಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಅಕ್ಷಯ್ ಖನ್ನಾ, ದಿವ್ಯಾ ದತ್ತ, ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮರಾಠಿ ಲೇಖಕ ಶಿವಾಜಿ ಸಾವಂತ್ ಬರೆದ ಛಾವಾ (ಸಿಂಹದ ಮರಿ) ಹೆಸರಿನ ಕೃತಿಯನ್ನು ಆಧರಿಸಿ ಈ ಚಲನಚಿತ್ರ ನಿರ್ಮಿಸಲಾಗಿದೆ.

ವಿಭಾಗ