ಪೂನಂ ಪಾಂಡೆ ನಿಧನ: ಮಾದಕ ನಟಿಯ ದಾಂಪತ್ಯ ಇದ್ದಿದ್ದು ಎರಡೇ ವಾರ; ಆಕೆಯ ಪತಿಯಾಗಿದ್ದ ಸ್ಯಾಮ್ ಬಾಂಬೆ ಯಾರು?, ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ಮನರಂಜನೆ  /  ಪೂನಂ ಪಾಂಡೆ ನಿಧನ: ಮಾದಕ ನಟಿಯ ದಾಂಪತ್ಯ ಇದ್ದಿದ್ದು ಎರಡೇ ವಾರ; ಆಕೆಯ ಪತಿಯಾಗಿದ್ದ ಸ್ಯಾಮ್ ಬಾಂಬೆ ಯಾರು?, ಇಲ್ಲಿದೆ ಮಾಹಿತಿ

ಪೂನಂ ಪಾಂಡೆ ನಿಧನ: ಮಾದಕ ನಟಿಯ ದಾಂಪತ್ಯ ಇದ್ದಿದ್ದು ಎರಡೇ ವಾರ; ಆಕೆಯ ಪತಿಯಾಗಿದ್ದ ಸ್ಯಾಮ್ ಬಾಂಬೆ ಯಾರು?, ಇಲ್ಲಿದೆ ಮಾಹಿತಿ

ಪೂನಂ ಪಾಂಡೆ ನಿಧನರಾಗಿದ್ದು, ಗರ್ಭಕೋಶದ ಕ್ಯಾನ್ಸರ್ ಸಮಸ್ಯೆ ನಿಧನಕ್ಕೆ ಕಾರಣ. ಈ ಮಾದಕಿ ನಟಿಯ ದಾಂಪತ್ಯ ಇದ್ದಿದ್ದು ಎರಡೇ ವಾರವಾಗಿತ್ತು. ಆಕೆಯ ಪತಿಯಾಗಿದ್ದ ಸ್ಯಾಮ್ ಬಾಂಬೆ ಯಾರು ಎಂಬ ಮಾಹಿತಿ ಇಲ್ಲಿದೆ.

ಸ್ಯಾಮ್ ಬಾಂಬೆ ಮತ್ತು ಪೂನಂ ಪಾಂಡೆ (ಕಡತ ಚಿತ್ರ)
ಸ್ಯಾಮ್ ಬಾಂಬೆ ಮತ್ತು ಪೂನಂ ಪಾಂಡೆ (ಕಡತ ಚಿತ್ರ) (HT)

ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲಿದ್ದ ಮಾದಕ ನಟಿ 32 ವರ್ಷದ ಪೂನಂ ಪಾಂಡೆ ಶುಕ್ರವಾರ (ಫೆ.2) ಬೆಳಗ್ಗೆ ಮೃತಪಟ್ಟರು. ಅವರ ಅಕಾಲಿಕ ನಿಧನದ ಸುದ್ದಿ ಎಲ್ಲರನ್ನೂ ದಂಗಾಗುವಂತೆ ಮಾಡಿದ್ದು, ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಯಿತು.

ವಿವಾದಾತ್ಮಕವಾಗಿ ಬದುಕಿದ್ದ ಪೂನಂ ಪಾಂಡೆ ದಾಂಪತ್ಯ ಬದುಕು ಬಹಳ ಅಲ್ಪಾವಧಿಯದ್ದು. ಎಲ್ಲರಿಗೂ ಗೊತ್ತಿರುವಂತೆ ಸ್ಯಾಮ್ ಬಾಂಬೆಯನ್ನು 2020ರ ಸೆಪ್ಟೆಂಬರ್ 10 ರಂದು ವಿವಾಹವಾಗಿದ್ದ ಅವರು, ಕೆಲವೇ ತಿಂಗಳಲ್ಲಿ ಆತನ ವಿರುದ್ಧ ಕೌಟುಂಬಿಕ ದೌರ್ಜನ್ಯ, ದೈಹಿಕ ಹಲ್ಲೆ ಕೇಸ್ ದಾಖಲಿಸಿದ್ದರು. ಹೀಗೆ ಈ ದಾಂಪತ್ಯ ಮುರಿದುಬಿದ್ದಿತ್ತು.

ಅಂದು ಸದ್ದಿಲ್ಲದೇ ನಡೆದ ವಿವಾಹದ ಫೋಟೋಗಳು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿತ್ತು. ಅಂದ ಹಾಗೆ, ಈ ಸ್ಯಾಮ್ ಬಾಂಬೆ ಯಾರು? ಅವರ ಹಿನ್ನೆಲೆ ಏನು ಎಂಬಿತ್ಯಾದಿ ವಿವರ ಇಲ್ಲಿದೆ.

ಸ್ಯಾಮ್ ಬಾಂಬೆ ಹಿಂದಿ ಸಿನಿಮಾ ರಂಗದ ಸೆಲೆಬ್ರಿಟಿ ನಿರ್ಮಾಪಕ. ಸ್ಯಾಮ್ ಅಹ್ಮದ್ ಬಾಂಬೆ ಎಂಬುದು ಅವರ ಪೂರ್ಣ ಹೆಸರು. ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಲ್ಲಿ ಹುಟ್ಟಿ ಬೆಳೆದವರು. ಜೆಬೆಲ್ ಅಲಿ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ದುಬೈ ವಿಶ್ವವಿದ್ಯಾನಿಲಯದಲ್ಲಿ ಪದವಿಯನ್ನು ಪಡೆದರು.

ಜಾಹೀರಾತು, ಸಿನಿಮಾ ಉದ್ಯಮಕ್ಕೆ ಬಂದ ಸ್ಯಾಮ್

ಸ್ಯಾಮ್ ಬಾಂಬೆ ಅವರು 21ನೇ ವಯಸ್ಸಿನಲ್ಲಿ ಜಾಹೀರಾತು ಮತ್ತು ಸಂವಹನ ಉದ್ಯಮದ ಮೂಲಕ ವೃತ್ತಿ ಬದುಕು ಶುರುಮಾಡಿದರು. 28ನೇ ವಯಸ್ಸಿನಲ್ಲಿ ದುಬೈನ ವೈ ಆಂಡ್ ಆರ್‌ನ ಕ್ರಿಯೇಟಿವ್ ಡೈರೆಕ್ಟರ್ ಆದರು. ನಂತರ 31ನೇ ವಯಸ್ಸಿಗೆ ಅದೇ ಕಂಪನಿಯ ಪಾಲುದಾರ ಮತ್ತು ಪ್ರಾದೇಶಿಕ ಕಾರ್ಯನಿರ್ವಾಹಕ, ಕ್ರಿಯೇಟಿವ್ ಡೈರೆಕ್ಟರ್ ಆದರು. ಇದಾದ ಬಳಿಕ, ಸ್ಟುಡಿಯೋ ಸೆಂಟ್ರಲ್ ಎಂಬ ಚಲನಚಿತ್ರ ಮತ್ತು ಛಾಯಾಗ್ರಹಣ ಕಂಪನಿಯನ್ನು ಪ್ರಾರಂಭಿಸಿದರು. ಬಾಂಬೆ ಮ್ಯಾಟಿನಿ ಫಿಲ್ಮ್ಸ್ ಎಂಬ ಸ್ವಂತ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಐಎಂಡಿಬಿ ಪ್ರಕಾರ, ಸ್ಯಾಮ್ 2017 ರಲ್ಲಿ ನಟ ಅಕ್ಷಯ್ ಕುಮಾರ್ ನಟಿಸಿದ ಕಿಂಗ್ ಆಫ್ ದಿ ರಿಂಗ್ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಅವರು ವಿದ್ಯುತ್ ಜಮ್ವಾಲ್ ಮತ್ತು ಊರ್ವಶಿ ರೌಟೇಲಾ-ಸ್ಟಾರ್ ಮ್ಯೂಸಿಕ್ ವಿಡಿಯೋ ಗಲ್ ಬನ್ ಗಯಿ ಅನ್ನು ಸಹ ನಿರ್ದೇಶಿಸಿದರು. ಸ್ಯಾಮ್ ಅವರು ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಒಳಗೊಂಡ ರೊಮ್ಯಾಂಟಿಕ್ ಮ್ಯೂಸಿಕ್ ವಿಡಿಯೋ ಬೆಫಿಕ್ರಾವನ್ನು ನಿರ್ದೇಶಿಸಿದ್ದಾರೆ. ಸ್ಯಾಮ್ ಬಾಂಬೆ ಅವರು ದೀಪಿಕಾ ಪಡುಕೋಣೆ, ತಮನ್ನಾ ಭಾಟಿಯಾ, ಅಲ್ಲು ಅರ್ಜುನ್ ಮತ್ತು ಯುವರಾಜ್ ಸಿಂಗ್ ಮುಂತಾದ ಸೆಲೆಬ್ರಿಟಿಗಳೊಂದಿಗೆ ಜಾಹೀರಾತು ಚಲನಚಿತ್ರ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

ಸ್ಯಾಮ್‌ ಬಾಂಬೆಗೆ ಪೂನಂ ಪಾಂಡೆ ಎರಡನೇ ಪತ್ನಿ

ಪೂನಂ ಪಾಂಡೆಗೂ ಮುನ್ನ ಸ್ಯಾಮ್ ಬಾಂಬೆ ಮಾಡೆಲ್ ಎಲ್ಲೆ ಅಹ್ಮದ್ ಎಂಬ ಮಾಡೆಲ್ ಒಬ್ಬರನ್ನು ವಿವಾಹವಾಗಿದ್ದರು. ಎಲ್ಲೆಯೊಂದಿಗೆ, ಸ್ಯಾಮ್‌ಗೆ ಇಬ್ಬರು ಮಕ್ಕಳಿದ್ದಾರೆ - ಮಗ ಟ್ರಾಯ್ ಬಾಂಬೆ ಮತ್ತು ಮಗಳು ಟಿಯಾ ಬಾಂಬೆ. ಈ ದಾಂಪತ್ಯ ಬಂಧ ಮುರಿದುಕೊಂಡ ಸ್ಯಾಮ್ ಬಾಂಬೆ, ನಂತರ 2020ರ ಜುಲೈನಲ್ಲಿ ಪೂನಂ ಪಾಂಡೆ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡರು. ಸೆಪ್ಟೆಂಬರ್‌ನಲ್ಲಿ ವಿವಾಹವಾದರು. ಹನಿಮೂನ್‌ಗೆ ಸ್ಯಾಮ್ ಬಾಂಬೆ, ಪೂನಂ ಪಾಂಡೆ ಜೋಡಿ ಲಾಸ್ ಏಂಜಲೀಸ್‌ಗೆ ಹೋಗಿತ್ತು. ಅಲ್ಲಿಂದ ಗೋವಾಕ್ಕೆ ತಲುಪಿದ್ದರು.

ಸ್ಯಾಮ್ ಬಾಂಬೆ ಪೂನಂ ಪಾಂಡೆ ಅಲ್ಪಾವಧಿ ದಾಂಪತ್ಯ, ದೈಹಿಕ ಹಲ್ಲೆ, ಕೌಟುಂಬಿಕ ಹಿಂಸೆ ಕೇಸ್‌

ಲಾಸ್ ಏಂಜಲೀಸ್‌ನಲ್ಲಿ ಹನಿಮೂನ್‌ ಮುಗಿಸಿ ಪತಿ ಸ್ಯಾಮ್ ಬಾಂಬೆ ಜೊತೆಗೆ ಗೋವಾ ತಲುಪಿದ್ದ ಪೂನಂ ಪಾಂಡೆ ಅಲ್ಲಿ ಚಲನಚಿತ್ರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅಲ್ಲಿ ಇಬ್ಬರ ನಡುವೆ ಸಂಘರ್ಷವೇರ್ಪಟ್ಟು ಪೂನಂ ಪಾಂಡೆ ಪೊಲೀಸ್ ದೂರು ದಾಖಲಿಸಿದರು.

ಸ್ಯಾಮ್ ಬಾಂಬೆ ದೈಹಿಕ ಹಲ್ಲೆ, ಕೌಟುಂಬಿಕ ಹಿಂಸಾಚಾರ ನಡೆಸಿದ್ದಾಗಿ ಪೂನಂ ಪಾಂಡೆ ದೂರು ದಾಖಲಿಸಿದರು. ಗೋವಾ ಪೊಲೀಸರು ಸ್ಯಾಮ್ ಬಾಂಬೆಯನ್ನು ಬಂಧಿಸಿದ್ದರು. ಮಾರನೇ ದಿನವೇ ಸ್ಯಾಮ್‌ಗೆ ಜಾಮೀನು ಸಿಕ್ಕಿತು. ಎರಡೇ ವಾರದಲ್ಲಿ ಸ್ಯಾಮ್ ಬಾಂಬೆ- ಪೂನಂ ಪಾಂಡೆ ದಾಂಪತ್ಯ ಮುರಿದುಬಿತ್ತು.

Whats_app_banner