ಸೀತಾರೆ ಜಮೀನ್ ಪರ್ ಸಿನಿಮಾ ಚಾಂಪಿಯನ್ಸ್‌ನ ಯಥಾವತ್ ನಕಲು... ಅಮೀರ್ ಖಾನ್ ಸಿನಿಮಾದ ವಿರುದ್ಧ ಆಕ್ರೋಶ
ಸೀತಾರೆ ಜಮೀನ್ ಪರ್ ಸಿನಿಮಾದ ಟ್ರೈಲರ್ ರಿಲೀಸ್ ಆದಾಗ ಅಮೀರ್ ಖಾನ್ ಅಭಿಮಾನಿಗಳು ಖುಷಿಪಟ್ಟಿದ್ದರು. ತಾರೆ ಜಮೀನ್ ಪರ್ ಸಿನಿಮಾದಂತಹ ಇನ್ನೊದು ಸಿನಿಮಾ ಎಂದುಕೊಂಡಿದ್ದರು. ಆದರೆ, ಇದೀಗ ಇದು ಚಾಂಪಿಯನ್ಸ್ ಎಂಬ ಸಿನಿಮಾದ ನಕಲು ಎಂದು ತಿಳಿದು ನೆಟ್ಟಿಗರು ಆಕ್ರೋಶಗೊಂಡಿದ್ದಾರೆ.

ಅಮೀರ್ ಖಾನ್ ಅವರ ಮುಂಬರುವ ಚಿತ್ರ 'ಸೀತಾರೆ ಜಮೀನ್ ಪರ್' ಹೊಸ ವಿವಾದಕ್ಕೆ ಕಾರಣವಾಗಿದೆ. ಇದು 'ಚಾಂಪಿಯನ್ಸ್' ಚಿತ್ರದ "ಫ್ರೇಮ್-ಬೈ-ಫ್ರೇಮ್" ನಕಲು ಆಗಿರಬಹುದು ಎಂದು ತಿಳಿದುಕೊಳ್ಳುತ್ತಿದ್ದಾರೆ. ಚಾಂಪಿಯನ್ಸ್ ಎನ್ನುವುದು ಸ್ಪ್ಯಾನಿಷ್ ಚಿತ್ರ 'ಕ್ಯಾಂಪಿಯೋನ್ಸ್' ಇಂಗ್ಲಿಷ್ ರಿಮೇಕ್ ಆಗಿದೆ. ಆಮಿರ್ ಖಾನ್ ಅವರ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಈ ಟ್ರೈಲರ್‌ನಲ್ಲಿರುವ ಪ್ರತಿಫ್ರೇಮ್‌ಗಳು ಚಾಂಪಿಯನ್ಸ್ ಸಿನಿಮಾದ ಫ್ರೇಮ್‌ಗಳಿಗೆ (ದೃಶ್ಯಗಳಿಗೆ) ಹೋಲಿಕೆಯಾಗುತ್ತದೆ.
ಜಿಯೋಹಾಟ್‌ಸ್ಟಾರ್‌ನಲ್ಲಿ ಚಾಂಪಿಯನ್ಸ್ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಅವಮಾನಗೊಂಡ ಟ್ರೈನರ್ ಒಬ್ಬರು ಬೌದ್ಧಿಕವಾಗಿ ವಿಶೇಷ ಚೇತನರಾಗಿರುವ ಕ್ರೀಡಾಪಟುಗಳ ತಂಡಕ್ಕೆ ಮಾರ್ಗದರ್ಶನ ನೀಡುತ್ತಾರೆ. ವಿಶೇಷಚೇತನರ ಸಾಮರ್ಥ್ಯ ಬಹಿರಂಗಪಡಿಸುತ್ತಾರೆ. ಇದೇ ರೀತಿಯ ಕಥೆ ಇರುವ ಸುಳಿವನ್ನು ಸೀತಾರೆ ಜಮೀನ್ ಪರ್ ಟ್ರೈಲರ್ ನೀಡಿದೆ. ನೆಟಿಜನ್‌ಗಳು ರೆಡ್ಡಿಟ್‌ನಲ್ಲಿ ಫ್ರೇಮ್-ಬೈ-ಫ್ರೇಮ್ ಹೋಲಿಕೆಯ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಅಮೀರ್ ಖಾನ್ ಅಭಿಮಾನಿಗಳು ಸೀತಾರೆ ಜಮೀನ್ ಪರ್ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. 3 ಈಡಿಯೆಟ್ಸ್, ತಾರೆ ಜಮೀನ್ ಪರ್‌ನಂತಹ ಇನ್ನೊಂದು ಚಿತ್ರವೆಂದು ಭಾವಿಸಿದ್ದರು. ಆದರೆ, ಇದು ನಕಲು ಎಂದುಕೊಂಡು ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೆಟ್ಟಿಗರ ಆಕ್ರೋಶ
ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಕಾಮೆಂಟ್‌ಗಳು ಹೀಗಿವೆ. "ಫಾರೆಸ್ಟ್ ಗಂಪ್ ವೈಫಲ್ಯದ ನಂತರ ಅಮೀರ್ ಖಾನ್ ರೀಮೇಕ್‌ಗಳು ಅಥವಾ ರೂಪಾಂತರ ಸಿನಿಮಾಗಳಿಂದ ದೂರವಿರಬೇಕಿತ್ತು" ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. "ಅದೃಷ್ಟವಶಾತ್ ಚಾಂಪಿಯನ್ಸ್ ಫಾರೆಸ್ಟ್ ಗಂಪ್‌ಗಿಂತ ಕಡಿಮೆ ಜನಪ್ರಿಯವಾಗಿದೆ. ಹೀಗಾಗಿ ಕಡಿಮೆ ಜನರಿಗೆ ಈ ವಿಷಯ ಗೊತ್ತಾಗಬಹುದು. ಆದರೆ ಇನ್ನೂ ಉತ್ತಮ ವಿಧಾನವಲ್ಲ" ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ. "ಚಿತ್ರವನ್ನು ಫ್ರೇಮ್‌ನಿಂದ ಫ್ರೇಮ್‌ಗೆ ನಕಲಿಸುವಲ್ಲಿ ನಿರ್ದೇಶಕರು ಎಕ್ಸ್‌ಪರ್ಟ್ ಅನಿಸುತ್ತದೆ" ಎಂದೆಲ್ಲ ಜನರು ಕಾಮೆಂಟ್ ಮಾಡುತ್ತಿದ್ದಾರೆ.
'ಸೀತಾರೆ ಜಮೀನ್ ಪರ್' ಟ್ರೈಲರ್ ನೋಡಿದರೆ ತಾರೆ ಜಮೀನ್ ಪರ್ ನೆನಪಿಗೆ ಬರಬಹುದು. ತಾರೇ ಜಮೀನ್ ಪರ್‌ನಲ್ಲಿ ಡಿಸ್ಲೆಕ್ಸಿಯಾ ತೊಂದರೆ ಇರುವ ಮಗುವಿನ ಜತೆ ಅಮೀರ್ ಖಾನ್‌ರ ಭಾವುಕ ಪ್ರಯಾಣ ಇತ್ತು. ಇದರಲ್ಲಿ ಮಾನಸಿಕವಾಗಿ ತೊಂದರೆಯಲ್ಲಿರುವ ವ್ಯಕ್ತಿಗಳಿಗೆ ಬಾಸ್ಕೆಟ್ ಬಾಲ್ ತರಬೇತಿ ನೀಡುವ ತರಬೇತುದಾರನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಸಬ್ ಕಾ ಅಪ್ನಾ ಅಪ್ನಾ ನಾರ್ಮಲ್" ಎನ್ನುವುದು ಟ್ರೈಲರ್‌ನಲ್ಲಿ ಗಮನ ಸೆಳೆಯುವ ಪ್ರಮುಖ ಅಂಶ. ನಟ-ನಿರ್ಮಾಪಕ ಅಮೀರ್ ಖಾನ್ ಅವರ ಫೀಲ್ ಗುಡ್ ಸಿನಿಮಾದ ಕುರಿತು ಪ್ರೇಕ್ಷಕರಲ್ಲಿ ಈ ಟ್ರೈಲರ್ ಕುತೂಹಲ ಹೆಚ್ಚಿಸಿದೆ. ಆದರೆ, ಇದೀಗ ಚಾಂಪಿಯನ್ಸ್ ಹೋಲಿಕೆ ನೋಡಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.
ಅಮೀರ್ ಖಾನ್ ಅವರು ಕೊನೆಯದಾಗಿ ಕಾಜೋಲ್ ಅವರ 'ಸಲಾಮ್ ವೆಂಕಿ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇವರು ಸೀತಾರೆ ಜಮೀನ್ ಪರ್' ಚಿತ್ರದ ಮೂಲಕ ಬಾಲಿವುಡ್‌ಗೆ ಮರಳುತ್ತಿರುವ ಏಕೈಕ ನಟನಲ್ಲ. ಜೆನೆಲಿಯಾ ಡಿ'ಸೋಜಾ ದೇಶ್ಮುಖ್ ಕೂಡ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಮರಳಲಿದ್ದಾರೆ. ಈ ಚಿತ್ರದಲ್ಲಿ ತಾರೆ ಜಮೀನ್ ಪರ್ ಚಿತ್ರದ ದರ್ಶೀಲ್ ಸಫಾರಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಟ್ರೈಲರ್‌ನಲ್ಲಿ ಅವರ ಪಾತ್ರವನ್ನು ತೋರಿಸಿಲ್ಲ. ಅರೋಶ್ ದತ್ತಾ, ಗೋಪಿ ಕೃಷ್ಣ ವರ್ಮಾ, ಸಂವಿತ್ ದೇಸಾಯಿ, ವೇದಾಂತ್ ವರ್ಮಾಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.