Akshay Kumar: ಸೋತಿರಬಹುದು, ಸತ್ತಿಲ್ಲ! ಸರಣಿ ಸಿನಿಮಾಗಳ ಸೋಲಿನ ಬಗ್ಗೆ ಬೇಸರ ಹೊರಹಾಕಿದ ಅಕ್ಷಯ್ ಕುಮಾರ್
ಇತ್ತೀಚಿನ ಕೆಲ ವರ್ಷಗಳಿಂದ ನಟ ಅಕ್ಷಯ್ ಕುಮಾರ್ ಗೆಲುವಿನ ಸಿಹಿಯುಂಡಿಲ್ಲ. ಸೋಲು ಸೋಲು.. ಬರೀ ಸೋಲು ಇದೇ ಆಗಿದೆ. ಬಹು ನಿರೀಕ್ಷೆ ಮೂಡಿಸಿದ ಸಿನಿಮಾಗಳು ನೋಡುಗನಿಂದ ಮೆಚ್ಚುಗೆ ಪಡೆದರೂ, ಗಳಿಕೆ ವಿಚಾರದಲ್ಲಿ ಮಕಾಡೆ ಮಲಗುತ್ತಿವೆ. ಈಗ ಈ ಸೋಲಿನ ಬಗ್ಗೆ ಮಾತನಾಡಿದ್ದಾರೆ.
Akshay Kumar: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ನಸೀಬು ಇನ್ನೂ ಸುಧಾರಿಸಿಲ್ಲ. ಒಂದರ ಹಿಂದೆ ಒಂದರಂತೆ ಅವರ ಸಾಲು ಸಾಲು ಸಿನಿಮಾಗಳು ಸೋಲು ಕಾಣುತ್ತಿವೆ. ಕೆಲ ವರ್ಷಗಳ ಹಿಂದೆ ಮುಟ್ಟಿದ್ದೆಲ್ಲ ಚಿನ್ನ ಅನ್ನೋ ರೀತಿಯಲ್ಲಿ ಸರಣಿ ಹಿಟ್ ಸಿನಿಮಾ ನೀಡುತ್ತ ಬಂದಿದ್ದ ಅಕ್ಷಯ್ ಕುಮಾರ್, ಇತ್ತೀಚಿನ ಕೆಲ ವರ್ಷಗಳಿಂದ ಗೆಲುವಿನ ಸಿಹಿ ಕಂಡಿಲ್ಲ. ಸೋಲು ಸೋಲು.. ಬರೀ ಸೋಲು ಇದೇ ಆಗಿದೆ. ಬಹು ನಿರೀಕ್ಷೆ ಮೂಡಿಸಿದ ಸಿನಿಮಾಗಳು ನೋಡುಗನಿಂದ ಮೆಚ್ಚುಗೆ ಪಡೆದರೂ, ಗಳಿಕೆ ವಿಚಾರದಲ್ಲಿ ಮಕಾಡೆ ಮಲಗುತ್ತಿವೆ. ಈಗ ಆ ಸೋಲಿನ ಬಗ್ಗೆ ಮಾತನಾಡಿದ್ದಾರೆ.
ಇನ್ನೇನು ಆಗಸ್ಟ್ 15ರಂದು ಅಕ್ಷಯ್ ಕುಮಾರ್ ಅವರ ಮತ್ತೊಂದು ಸಿನಿಮಾ ತೆರೆಗೆ ಬರಲು ಅಣಿಯಾಗಿದೆ. ಬಹುತಾರಾಗಣದ 'ಖೇಲ್ ಖೇಲ್ ಮೇ' ಸಿನಿಮಾ ಮೂಲಕ ನಗಿಸುವ ಕಾಯಕಕ್ಕೆ ಮರಳಿದ್ದಾರೆ. ಆ ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆಗೆ ವಾಣಿ ಕಪೂರ್, ತಾಪ್ಸಿ ಪನ್ನು, ಆಮಿ ವಿರ್ಕ್, ಪ್ರಜ್ಞಾ ಜೈಸ್ವಾಲ್, ಫರ್ದೀನ್ ಖಾನ್ ಮತ್ತು ಆದಿತ್ಯ ಸೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದ 'ಖೇಲ್ ಖೇಲ್ ಮೇ' ಕಾಮಿಡಿ ಸಿನಿಮಾ. ಈ ಹಿಂದಿನ ಅವರ ಕೆಲವು ಕಾಮಿಡಿ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡಿವೆ. ಇದೀಗ 'ಖೇಲ್ ಖೇಲ್ ಮೇ' ಮೂಲಕ ಹಳೇ ಫಾರ್ಮ್‌ಗೆ ಮರಳಿದ್ದಾರೆ. ಹಾಗಾಗಿಯೇ ಈ ಸಿನಿಮಾ ಮೇಲೆಯೂ ನಿರೀಕ್ಷೆ ಹೆಚ್ಚಾಗಿದೆ. ಈ ನಡುವೆ ಇದೇ ಸಿನಿಮಾದ ಟ್ರೈಲರ್ ಲಾಂಚ್ ವೇಳೆ ತಮ್ಮ ಸೋಲಿನ ಬಗ್ಗೆ ಅಕ್ಷಯ್ ಕುಮಾರ್ ಹೇಳಿಕೊಂಡಿದ್ದು ಹೀಗೆ.
ಏನೇ ಆದರೂ ಅದು ಒಳ್ಳೆಯದಕ್ಕೆ...
ತಮಿಳಿನ ಸೂರರೈ ಪೋಟ್ರು ಚಿತ್ರವನ್ನು ಹಿಂದಿಯಲ್ಲಿ ಸರ್ಫಿರಾ ಹೆಸರಿನಲ್ಲಿ ನಿರ್ಮಾಣ ಮಾಡಿದ್ದರು ನಟ ಸೂರ್ಯ. ಅಕ್ಷಯ್ ಕುಮಾರ್ ನಾಯಕನಾಗಿ ನಟಿಸಿದ್ದರು. ಇತ್ತೀಚೆಗಷ್ಟೇ ಈ ಸಿನಿಮಾ ಬಿಡುಗಡೆ ಆಗಿತ್ತು. ಆದರೆ, ಚಿತ್ರ ಮಾತ್ರ ಹೀನಾಯವಾಗಿ ಸೋತಿತು. ಈ ಸೋಲಿನ ಬಗ್ಗೆ ಟ್ರೇಲರ್ ಲಾಂಚ್ ಇವೆಂಟ್‌ನಲ್ಲಿ ಸಾಕಷ್ಟು ಪ್ರಶ್ನೆ ಬಂದಿದ್ದವು, ಆ ಬಗ್ಗೆ ಮಾತನಾಡಿದ ಅವರು, "ಏನೇ ಆಗಲಿ ಒಳ್ಳೆಯದಕ್ಕಾಗಿಯೇ ನಡೆಯುತ್ತದೆ" ಎಂದಿದ್ದಾರೆ.
ಸೋತಿರಬಹುದು ಸತ್ತಿಲ್ಲ..
"ಸೋಲಿನ ಬಗ್ಗೆ ಜನ ಪ್ರಶ್ನೆ ಕೇಳ್ತಾರೆ. ಆದರೆ, ಕ್ಷಮಿಸಿ, ಚಿಂತೆ ಮಾಡಬೇಡಿ. ಎಲ್ಲವೂ ಸರಿಯಾಗುತ್ತದೆ. ಏಕೆಂದರೆ, ನಾನು ಸತ್ತಿಲ್ಲ. ಬದುಕಿದ್ದೇನೆ. ನಾನು ಎಲ್ಲಿಯೂ ಹೋಗಿಲ್ಲ. ಇಲ್ಲಿಯೇ ಇದ್ದೇನೆ. ನಾನು ಯಾವಾಗಲೂ ಕೆಲಸ ಮಾಡುತ್ತೇನೆ. ಮಾಡುತ್ತಲೇ ಇರುತ್ತೇನೆ. ಜನರು ಏನು ಬೇಕಾದರೂ ಹೇಳಬಹುದು. ನಾನು ಏನು ಸಂಪಾದಿಸಿದರೂ, ಸ್ವಂತ ಬಲದಿಂದಲೇ ಸಂಪಾದಿಸುತ್ತೇನೆ. ಅವರು (ನಿರ್ಮಾಪಕರು) ನನ್ನನ್ನು ಕೆಲಸದಿಂದ ತೆಗೆದುಹಾಕುವವರೆಗೂ ನಾನು ಕೆಲಸ ಮಾಡುತ್ತಲಿರುತ್ತೇನೆ” ಎಂದು ಸೋಲಿನ ಬಗ್ಗೆ ಮಾತನಾಡಿದ್ದಾರೆ.
ಆಗಸ್ಟ್ 15ಕ್ಕೆ ತೆರೆಗೆ
‘ಖೇಲ್ ಖೇಲ್ ಮೇ’ ಮೂಲಕ ಅಕ್ಕಿ ಮತ್ತೊಮ್ಮೆ ತಮ್ಮ ಹಳೆಯ ಶೈಲಿಗೆ ಮರಳುತ್ತಿದ್ದಾರೆ. ಈ ಬಾರಿ ಪ್ರೇಕ್ಷಕರಿಗೆ ಕಾಮಿಡಿ ಚಿತ್ರ ನೀಡಲು ಹೊರಟಿದ್ದಾರೆ. ಈ ಚಿತ್ರವನ್ನು ಗುಲ್ಶನ್ ಕುಮಾರ್, ಟಿ-ಸೀರೀಸ್ ಮತ್ತು ವಕಾವೋ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗಿದೆ. ಅಕ್ಷಯ್ ಅವರ ಈ ಚಿತ್ರವನ್ನು ಮುದಸ್ಸರ್ ಅಜೀಜ್ ನಿರ್ದೇಶಿಸಿದ್ದಾರೆ. ಈ ಚಿತ್ರ ಆಗಸ್ಟ್ 15 ರಂದು ಥಿಯೇಟರ್‌ಗೆ ಬರಲಿದೆ. ಅದೇ ದಿನ ಶ್ರದ್ಧಾ ಕಪೂರ್ ಮತ್ತು ರಾಜಕುಮಾರ್ ರಾವ್ ಅವರ ಸ್ತ್ರೀ 2 ಸಿನಿಮಾ ಸಹ ಬಿಡುಗಡೆ ಆಗುತ್ತಿದೆ.
ವಿಭಾಗ