Deepika Padukone Baby: ಪುಟ್ಟ ದೇವತೆಯನ್ನು ಬರಮಾಡಿಕೊಂಡ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್
ಬಾಲಿವುಡ್ ತಾರಾ ಜೋಡಿ ದೀಪಿಕಾ ಪಡುಕೋಣೆ, ಗಣೇಶ ಹಬ್ಬದ ಮರುದಿನವೇ ಅಂದರೆ, ಭಾನುವಾರ (ಸೆ. 8) ಮುದ್ದಾದ ಮಗುವನ್ನು ಬರಮಾಡಿಕೊಂಡಿದ್ದಾರೆ.
Deepika Padukone baby: ಬಾಲಿವುಡ್ ತಾರಾ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಕಳೆದ ಒಂಬತ್ತು ತಿಂಗಳಿನಿಂದ ಕಾತರದಿಂದ ಕಾಯುತ್ತಿದ್ದ ದಿನ ಕೊನೆಗೂ ಬಂದಿದೆ. ದೀಪಿಕಾ ಪಡುಕೋಣೆ ಭಾನುವಾರ ತಾಯಿಯಾಗಿದ್ದಾರೆ. ಮುಂಬೈನ H.N ರಿಲಯನ್ಸ್ ಆಸ್ಪತ್ರೆಯಲ್ಲಿ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಶನಿವಾರ ಸಂಜೆ ರಣವೀರ್ ಸಿಂಗ್ ಪತ್ನಿ ದೀಪಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಪುಟ್ಟ ದೇವತೆಯ ಆಗಮನ
ವರ್ಷದ ಆರಂಭದಲ್ಲಿ ದೀಪಿಕಾ ಪಡುಕೋಣೆ ತಾನು ತಾಯಿಯಾಗಲಿದ್ದೇನೆ ಎಂಬ ಶುಭ ಸುದ್ದಿಯನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದರು. ಮದುವೆಯಾದ 6 ವರ್ಷಗಳ ನಂತರ, ದೀಪಿಕಾ- ರಣವೀರ್ ಪುಟ್ಟ ದೇವತೆಯ ಪೋಷಕರಾಗಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ದಂಪತಿಗೆ ಅಭಿನಂದನೆ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಮೂಲಗಳ ಪ್ರಕಾರ, ದೀಪಿಕಾ ಪಡುಕೋಣೆ ಸಿ-ಸೆಕ್ಷನ್ ಮೂಲಕ ಮಗಳಿಗೆ ಜನ್ಮ ನೀಡಿದ್ದಾರೆ ಎನ್ನಲಾಗುತ್ತಿದೆ.
ಎರಡು ದಿನಗಳ ಹಿಂದಷ್ಟೇ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನದ ಹೊರಗೆ ರಣವೀರ್ ಸಿಂಗ್ ಜೊತೆ ದೀಪಿಕಾ ಕಾಣಿಸಿಕೊಂಡಿದ್ದರು. ಸಿದ್ದಿವಿನಾಯಕನ ಆಶೀರ್ವಾದ ಪಡೆದಿದ್ದರು. ಅದಾದ ಬಳಿಕ ಮರುದಿನ ಶನಿವಾರ ಸಂಜೆ ಮುಂಬೈನ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಯ ಹೊರಗೆ ದೀಪಿಕಾ- ರಣ್‌ವೀರ್ ಕಾರು ಕಾಣಿಸಿಕೊಂಡಿತ್ತು. ಸ್ವಲ್ಪ ಸಮಯದ ನಂತರ, ದೀಪಿಕಾ ಅವರ ತಾಯಿ ಮತ್ತು ಸಹೋದರಿ ಕೂಡ ಆಸ್ಪತ್ರೆ ತಲುಪಿದರು. ಇದೀಗ ಭಾನುವಾರ ಇಂದು ಮುದ್ದಾದ ಹೆಣ್ಣು ಮಗುವನ್ನು ಈ ದಂಪತಿ ಬರಮಾಡಿಕೊಂಡಿದೆ.
ಮಕ್ಕಳು ದೇವರ ಕಾಣಿಕೆ
ಕೆಲ ದಿನಗಳ ಹಿಂದೆ ರಣವೀರ್ ಸಿಂಗ್ ಅವರಿಗೆ, ಮಗ ಬೇಕಾ ಅಥವಾ ಮಗಳು ಬೇಕಾ ಎಂದು ಕೇಳಿದಾಗ ನಟನ ಉತ್ತರ ಎಲ್ಲರ ಮನ ಗೆದ್ದಿತ್ತು. ಮಕ್ಕಳು ದೇವರ ಕಾಣಿಕೆ ಇದ್ದಂತೆ, ಅದನ್ನು ನೀವು ಮನಃಪೂರ್ವಕವಾಗಿ ಸ್ವೀಕರಿಸಬೇಕು ಎಂದು ನಟ ಹೇಳಿದ್ದರು. ಇದೀಗ ರಣವೀರ್ ಹೆಣ್ಣು ಮಗಳ ತಂದೆಯಾಗಿದ್ದಾರೆ. ಸಹಜವಾಗಿ ಸೆಲೆಬ್ರಿಟಿಗಳ ಮಕ್ಕಳ ಮುಖ ದರ್ಶನ ಅಷ್ಟು ಸುಲಭದ್ದಲ್ಲ. ಹಾಗಾಗಿ ಈ ಜೋಡಿಯ ಮಗುವಿನ ದರ್ಶನ ಅದ್ಯಾವಾಗ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.