Janhvi Kapoor: ಅಬ್ಬಬ್ಬಾ ಬರೀ ಮೊಣಕಾಲಿನಲ್ಲೇ ತಿರುಪತಿ ದೇಗುಲದ ಮೆಟ್ಟಿಲೇರಿದ ಜಾನ್ವಿ ಕಪೂರ್; ಬೋನಿ ಮಗಳ ಭಕ್ತಿಗೆ ಚಕಿತಗೊಂಡ ಓರಿ
ಬಾಲಿವುಡ್ ನಟಿ ಜಾನ್ವಿ ಕಪೂರ್ ಈ ತಿಂಗಳ ಆರಂಭದಲ್ಲಿ ತನ್ನ ಹುಟ್ಟುಹಬ್ಬದಂದು ತಿರುಪತಿ ದೇಗುಲಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದ ಅನುಭವವನ್ನು ಆಕೆಯ ಸ್ನೇಹಿತ ಓರಿ ತನ್ನ ವ್ಲಾಗ್‌ನಲ್ಲಿ ಹಂಚಿಕೊಂಡಿದ್ದಾರೆ. ತಿರುಪತಿ ದೇಗುಲದ ಮೆಟ್ಟಿಲುಗಳನ್ನು ಮೊಣಕಾಲಿನಲ್ಲಿ ಏರುತ್ತಿರುವ ಜಾನ್ವಿ ಕಪೂರ್ ಫೋಟೋಗಳು ವೈರಲ್ ಆಗುತ್ತಿವೆ.

ಬಾಲಿವುಡ್ ನಟಿ ಜಾನ್ವಿ ಕಪೂರ್ ಈ ತಿಂಗಳ ಆರಂಭದಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸಂಗತಿ ಎಲ್ಲರಿಗೂ ಗೊತ್ತಿದೆ. ಅಂದು ಅವರು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಮಾಡಿದ್ದರು. ಶಿಖರ್ ಪಹರಿಯಾ, ಆಕೆಯ ಸ್ನೇಹಿತ ಓರಿ ಮತ್ತು ಇತರೆ ಆತ್ಮೀಯರು ಆಕೆಯ ಜತೆಗಿದ್ದರು. ಇದೀಗ ಓರಿ ಅವರು ಯೂಟ್ಯೂಬ್‌ನಲ್ಲಿ ವ್ಲಾಗ್ ಹಂಚಿಕೊಂಡಿದ್ದು, ತಿರುಪತಿ ಮೆಟ್ಟಲು ಏರುವ ಅನುಭವವನ್ನು ಹಂಚಿಕೊಂಡಿದ್ದಾರೆ.
ಮೊಣಕಾಲಲ್ಲಿ ತಿರುಪತಿ ಮೆಟ್ಟಿಲೇರಿದ ಜಾನ್ವಿ ಕಪೂರ್
ಜಾನ್ವಿ ಕಪೂರ್ ತಿರುಪತಿ ದೇಗುಲದ ಮೆಟ್ಟಿಲನ್ನು ಮೊಣಕಾಲಲ್ಲಿ ಏರಿರುವ ಕುರಿತು ಎಲ್ಲರೂ ಆಶ್ಚರ್ಯಪಟ್ಟಿದ್ದಾರೆ. ಆದರೆ, ಅದಕ್ಕೂ ಆಶ್ವರ್ಯದ ಸಂಗತಿಯೆಂದರೆ ಈ ನಟಿಗೆ ಇದು ಮೊದಲ ಅನುಭವ ಅಲ್ಲ. ಈಕೆ ಈ ರೀತಿ ಮೆಟ್ಟಿಲು ಏರುತ್ತಿರುವುದು 50ನೇ ಬಾರಿಯಂತೆ. ಆದರೆ, ಆಕೆಯ ಸ್ನೇಹಿತ ಓರಿಗೆ ಇದು ಮೊದಲ ಅನುಭವ. ಜಾನ್ವಿ ಕಪೂರ್ ಹಲವು ಬಾರಿ ತನ್ನ ತಂದೆ ಬೋನಿ ಕಪೂರ್ ಮತ್ತು ಸಹೋದರಿ ಖುಷಿ ಕಪೂರ್ ಜತೆಗೆ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡುತ್ತಿದ್ದರು. ತಿರುಪತಿಗೆ ಹೋಗುವ ಮೊದಲು ಜಾನ್ವಿ ಕಪೂರ್ ಅವರ ಚೆನ್ನೈ ನಿವಾಸದಲ್ಲಿ ವಿಶ್ರಾಂತಿ ಪಡೆದಿರುವುದಾಗಿ ಓರಿ ಹೇಳಿದ್ದಾರೆ. ಅಲ್ಲಿಂದ ತಿರುಪತಿಗೆ ಹೊರಟ ಬಳಿಕ ಸ್ನೇಹಿತರ ಮನೆಯಲ್ಲಿ ಊಟಕ್ಕಾಗಿ ಒಮ್ಮೆ ಕಾರು ನಿಲ್ಲಿಸಿದ್ದಾಗಿ ಅವರು ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.
ಮೆಟ್ಟಿಲು ಏರುವ ಮೊದಲು ಜಾನ್ವಿ ಕಪೂರ್ ಅವರು ಓರಿಗೆ ಮೆಟ್ಟಿಲನ್ನು ಮೊಣಕಾಲಲ್ಲಿ ಏಕೆ ಏರುವೆ ಎಂದು ವಿವರಿಸಿದ್ದರಂತೆ. "ತಿರುಪತಿ ಯಾತ್ರೆಯು ಗಮ್ಯವಲ್ಲ. ಅದೊಂದು ಪ್ರಯಾಣ. ಜೀವನದಲ್ಲಿಯೂ ಈ ರೀತಿ ಕಷ್ಟಪಟ್ಟು ಮೇಲಕ್ಕೆ ಏರುತ್ತಿರಬೇಕು. ಇದರಿಂದ ನಾವು ವಿನಮ್ರರಾಗುತ್ತೇವೆ ಎಂದು ನಾನು ಭಾವಿಸುವೆ" ಎಂದು ಜಾನ್ವಿ ಕಪೂರ್ ಹೇಳಿದ್ದರಂತೆ. "ಈ ರೀತಿ ಮೆಟ್ಟಿಲು ಏರುವಾಗ ಮೇಲಕ್ಕೆ ನೋಡಬೇಡಿ. ಏಕೆಂದರೆ, ತಲುಪಬೇಕಾದ ಮೆಟ್ಟಿಲುಗಳನ್ನು ನೋಡಿದರೆ ನಿಮಗೆ ಭಯವಾಗಬಹುದು. ಇದರ ಬದಲು ಕೆಳಕ್ಕೆ ನೋಡಿ. ಒಂದು ಸಮಯದಲ್ಲಿ ನೀವು ಇಡುತ್ತಿರುವ ಒಂದು ಹೆಜ್ಜೆಯ ಬಗ್ಗೆ ಮಾತ್ರ ಗಮನ ನೀಡಿ" ಎಂದು ಜಾನ್ವಿ ಜತೆಗಿದ್ದ ಶಿಖರ್ ಹೇಳಿದ್ದರು.
ಓರಿ ಹಂಚಿಕೊಂಡ ಕೊನೆಯ ವಿಡಿಯೋದಲ್ಲಿ ಜಾನ್ವಿ ಅವರು ಕೊನೆಯ ಮೆಟ್ಟಿಲನ್ನು ತನ್ನ ಮೊಣಕಾಲಿನ ಮೂಲಕ ತಲುಪಿರುವ ದೃಶ್ಯವಿದೆ. ಜಾನ್ವಿ ಕಪೂರ್ ಅವರ ಈ ಪ್ರಯತ್ನವನ್ನು ನೋಡಿ ಸ್ಪೂರ್ತಿಗೊಂಡ ಓರಿ ಕೂಡ ಈ ರೀತಿ ಮೆಟ್ಟಿಲು ಹತ್ತಲು ಪ್ರಯತ್ನಿಸಿದ್ದರಂತೆ.
ಆರ್‌ಸಿ16ನಲ್ಲಿ ಜಾನ್ವಿ ಕಪೂರ್
ಜಾನ್ವಿ ಕಪೂರ್ ಮತ್ತು ಆಕೆಯ ತಂದೆ ಇತ್ತೀಚೆಗೆ ಹೈದರಾಬಾದ್‌ನಲ್ಲಿ ತಮ್ಮ ಮುಂಬರುವ ತೆಲುಗು ಸಿನಿಮಾದ ಲಾಂಚಿಂಗ್ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಬುಚ್ಚಿ ಬಾಬು ಸನಾ ಅವರ ಇನ್ನೂ ಹೆಸರಿಡದ ಚಿತ್ರಕ್ಕೆ ಜಾನ್ವಿ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದ ಮೂಲಕ ಜಾನ್ವಿ ಕಪೂರ್ ರಾಮ್ ಚರಣ್ ಜತೆ ನಟಿಸಲಿದ್ದಾರೆ. "ಆರ್‌ಸಿ16ಗಾಗಿ ಎದಿರು ನೋಡುತ್ತಿದ್ದೇವೆ" ಎಂದು ಈಕೆಯ ಚಿತ್ರದೊಂದಿಗೆ ರಾಮ್ ಚರಣ್ ಇನ್‌ಸ್ಟಾಗ್ರಾಂನಲ್ಲಿ ಅಪ್‌ಡೇಟ್ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಚಿರಂಜೀವಿ ಮತ್ತು ಅಲ್ಲು ಅರ್ಜುನ್ ಸಹ ಇದ್ದರು.
ಜಾನ್ವಿ ಕಪೂರ್ ಅವರ ಮುಂದಿನ ಪ್ರಾಜೆಕ್ಟ್‌ಗಳು
ಜೂನಿಯರ್ ಎನ್‌ಟಿಆರ್ ನಾಯಕ ನಟನಾಗಿರುವ ದೇವರ ಸಿನಿಮಾದಲ್ಲಿ ಜಾನ್ವಿ ಕಪೂರ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಇದರೊಂದಿಗೆ ಹಿಂದಿಯ ಮಿಸ್ಟರ್ ಆಂಡ್ ಮಿಸೆಸ್ ಮಹಿಯಲ್ಲೂ ನಟಿಸಲಿದ್ದಾರೆ. ಉಲ್ಜಾ ಸಿನಿಮಾವೂ ಇವರ ಕೈಯಲ್ಲಿದೆ.
