ದೂರ ನಿಲ್ಲಿ ಮುಟ್ಟಬೇಡಿ, ಹತ್ತಿರ ಬಂದ ಅಭಿಮಾನಿ ಕಂಡು ಮುಖ ಸಿಂಡರಿಸಿದ ಹೇಮಾ ಮಾಲಿನಿ; ಹಿರಿಯ ನಟಿ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಫ್ಯಾನ್ಸ್
ಸೆಲಬ್ರಿಟಿಗಳು ಅಭಿಮಾನಿಗಳೊಂದಿಗೆ ನಡೆದು ಕೊಳ್ಳುವ ರೀತಿ ಆಗ್ಗಾಗ್ಗೆ ಸುದ್ದಿಯಾಗುತ್ತದೆ. ಮಹಿಳಾ ಅಭಿಮಾನಿಯೊಬ್ಬರು ತಮ್ಮ ಬಳಿ ಫೋಟೋ ತೆಗೆಸಿಕೊಳ್ಳಲು ಬಂದಾಗ, ಆಕೆಯನ್ನು ತಡೆದು ನನ್ನ ಮುಟ್ಟದಿರಿ ಎಂದು ಬಾಲಿವುಡ್ ನಟಿ ಹೇಮಾ ಮಾಲಿನಿ ಹೇಳಿರುವ ವಿಡಿಯೋ ವೈರಲ್ ಆಗುತ್ತಿದೆ. ಸಂಸದೆ ವರ್ತನೆಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸ್ಟಾರ್‌ಗಳು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದೇ ಅಪರೂಪ. ಅಂಥದರಲ್ಲಿ ಅವರು ಅಭಿಮಾನಿಗಳ ಎದುರಿಗೆ ಬಂದ್ರೆ ಒಮ್ಮೆಯಾದರೂ ಅವರ ಕೈ ಕುಲುಕಿ, ಫೋಟೋ ತೆಗೆಸಿಕೊಳ್ಳಬೇಕು ಅಂತ ಮುಗಿ ಬೀಳುವುದು ಸಹಜ. ಕೆಲವು ಸ್ಟಾರ್‌ಗಳು ಅಹಂ ಬಿಟ್ಟು ಫ್ಯಾನ್ಸ್ ಜೊತೆ ನಗು ನಗುತ್ತಾ ಫೋಟೋಗೆ ಪೋಸ್ ಕೊಟ್ಟರೆ, ಕೆಲವು ಸ್ಟಾರ್‌ಗಳಂತೂ ನೋಡಿಯೂ ನೋಡದಂತೆ ಸುಮ್ಮನಿರುತ್ತಾರೆ.
ಮುಂಬೈ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಹೇಮಾ ಮಾಲಿನಿ
ತಮ್ಮ ಮೆಚ್ಚಿನ ನಟ, ನಟಿಯೊಂದಿಗೆ ಫೋಟೋ ತೆಗೆಸಿಕೊಳ್ಳುವಾಗ ಅವರ ಕೈ ಹಿಡಿದುಕೊಳ್ಳಬೇಕು, ಅವರ ಹೆಗಲ ಮೇಲೆ ಕೈ ಹಾಕಬೇಕು ಅಂತ ಕೆಲವು ಅಭಿಮಾನಿಗಳು ಆಸೆ ಪಡ್ತಾರೆ. ಫ್ಯಾನ್ಸ್ ಆ ರೀತಿ ಆಸೆ ಪಡುವುದೇ ತಪ್ಪು, ಅದು ದೊಡ್ಡ ಅಪರಾಧ ಎನ್ನುವಂತೆ ಕೆಲವು ಸ್ಟಾರ್‌ಗಳು ವರ್ತಿಸುತ್ತಾರೆ. ಬಾಲಿವುಡ್ ನಟಿ , ರಾಜಕಾರಣಿ ಹೇಮಾ ಮಾಲಿನಿ ಕೂಡಾ ಈಗ ಇದೇ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಮಹಿಳಾ ಅಭಿಮಾನಿಯೊಬ್ಬರು ತಮ್ಮ ಜೊತೆ ಫೋಟೋ ತೆಗೆಸಿಕೊಳ್ಳುವಾಗ ಆಕೆಯೊಂದಿಗೆ ಹಿರಿಯ ನಟಿ ವರ್ತಿಸಿದ್ದನ್ನು ಕಂಡು ಜನರು ಗರಂ ಆಗಿದ್ದಾರೆ. ನಿಮ್ಮನ್ನು ಮುಟ್ಟಿದರೆ ಏನು ತಪ್ಪು? ಎಂದು ಪ್ರಶ್ನಿಸುತ್ತಿದ್ದಾರೆ.
ಹೇಮಾ ಮಾಲಿನಿ ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಸಮಯದಲ್ಲಿ ಅಭಿಮಾನಿಗಳು ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಸುತ್ತುವರೆದಿದ್ದಾರೆ. ಅದರಲ್ಲಿ ಮಹಿಳೆಯೊಬ್ಬರು ನಟಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಹಾಗೇ ಡ್ರೀಮ್ ಗರ್ಲ್ ತೋಳುಗಳ ಮೇಲೆ ಕೈ ಇಡಲು ಪ್ರಯತ್ನಿಸಿದ್ದಾರೆ. ಆದರೆ ಅಷ್ಟರಲ್ಲಿ ಹೇಮಾ ಮಾಲಿನಿ ಹಾಥ್ ನಹೀ ( ಕೈ ಹಾಕಬೇಡಿ) ಎನ್ನುತ್ತಾ ಆಕೆಯನ್ನು ತಡೆದಿದ್ದಾರೆ. ಅದೇ ಸಮಯಕ್ಕೆ ವ್ಯಕ್ತಿಯೊಬ್ಬರು ಬಂದು, ದೂರ ನಿಲ್ಲುವಂತೆ ಅಭಿಮಾನಿಗೆ ಸೂಚಿಸಿದ್ದಾರೆ. ಇಷ್ಟಾದರೂ ಆ ಮಹಿಳಾ ಅಭಿಮಾನಿ ಏನೂ ಆಗಿಲ್ಲ ಎನ್ನುವಂತೆ ದೂರ ನಿಂತು, ನಗು ನಗುತ್ತಲೇ ಫೋಟೋ ತೆಗೆಸಿಕೊಂಡಿದ್ದಾರೆ.
ಹೇಮಾ ಮಾಲಿನಿ ವರ್ತನೆಗೆ ಫ್ಯಾನ್ಸ್ ಬೇಸರ
ಈ ವಿಡಿಯೋ ವೈರಲ್ ಆಗುತ್ತಿದ್ದು ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅವರು ಸೆಲಬ್ರಿಟಿಗಳು, ಸಾಮಾನ್ಯ ಜನರೆಲ್ಲಿ ಅವರೆಲ್ಲಿ, ಸ್ಟಾರ್‌ಗಳು ಪ್ರೈವೆಸಿ ಬಯಸುತ್ತಾರೆ, ಹೆಗಲ ಮೇಲೆ ಕೈ ಹಾಕಿದರೆ ಅವರಿಗೆ ಮುಜುಗರ ಉಂಟಾಗಬಹುದು ಅದಕ್ಕೆ ಹಾಗೆ ಹೇಳಿದ್ದಾರೆ, ಅವರದ್ದೇನು ತಪ್ಪಿಲ್ಲ ಎಂದು ಕೆಲವರು ಹೇಮಾ ಮಾಲಿನಿ ಪರ ವಹಿಸಿಕೊಂಡು ಮಾತನಾಡಿದ್ದಾರೆ. ಆದರೆ ಇನ್ನೂ ಕೆಲವರು ಹಿರಿಯ ನಟಿಯ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹುಟ್ಟಿದಾಗಲೇ ನೀವು ಸ್ಟಾರ್ ಆಗಲಿಲ್ಲ. ನಿಮ್ಮನ್ನು ಸೆಲಬ್ರಿಟಿಯನ್ನಾಗಿ ಮಾಡಿದ್ದು ಜನರು. ಈಗ ಅಭಿಮಾನಿಗಳು ನಿಮ್ಮನ್ನು ಮುಟ್ಟಿದರೆ ಸಹಿಸುವುದಿಲ್ಲ. ಆದರೆ ಚುನಾವಣೆ ಸಮಯದಲ್ಲಿ ಜನ ಜಂಗುಳಿ ಮಧ್ಯೆ ನಿಂತು ನಮಸ್ಕರಿಸಿ, ಶೇಕ್ ಹ್ಯಾಂಡ್ ಕೊಟ್ಟು ಏಕೆ ಮತ ಕೇಳುತ್ತೀರಿ, ಆಗ ನಿಮಗೆ ಮುಜುಗರವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ನಟಿಯ ವರ್ತನೆ ನೆಟ್ಟಿಗರ ಕಣ್ಣು ಕೆಂಪಾಗಿಸಿದ್ದಂತೂ ನಿಜ.
ಹೇಮಾ ಮಾಲಿನಿ ಈಗ ಫುಲ್ ಟೈಮ್ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿರುವ ಡ್ರೀಮ್ ಕರ್ಲ್ ಹೇಮಾ ಮಾಲಿನಿ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಥುರಾ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸಂಸದೆ ಆಗಿ ಆಯ್ಕೆ ಆಗಿದ್ದಾರೆ.