ಅತಿಥಿಗಳಿಗೆ ರೋಟಿ ಜತೆ ಚಿನ್ನ ಬಡಿಸಿದ ಅಂಬಾನಿ ಕುಟುಂಬ! ಅನಂತ್- ರಾಧಿಕಾ ಪ್ರಿವೆಡ್ಡಿಂಗ್ ಇವೆಂಟ್ ನೆನಪಿಸಿಕೊಂಡ ಸಾರಾ ಆಲಿ ಖಾನ್
Actress Sara Ali Khan: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಕಾರ್ಯಕ್ರಮದ ಕುರಿತು ನಟಿ ಸಾರಾ ಆಲಿಖಾನ್ ಮಾಹಿತಿ ನೀಡಿದ್ದಾರೆ. ಈ ಕಾರ್ಯಕ್ರಮ ಎಷ್ಟು ಅದ್ಧೂರಿಯಾಗಿತ್ತು? ಅಲ್ಲಿ ಏನೆಲ್ಲ ಇತ್ತು ಎಂಬ ವಿವರ ನೀಡಿದ್ದಾರೆ.
ಬೆಂಗಳೂರು: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭವು ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ ತಿಂಗಳಿನಲ್ಲಿ ನಡೆದಿತ್ತು. ಇದು ಸಾಕಷ್ಟು ಸುದ್ದಿಯಾಗಿತ್ತು. ಹಲವು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ದೇಶ-ವಿದೇಶದ ಅನೇಕ ಗಣ್ಯರು ಭಾಗವಹಿಸಿದ್ದರು. ಇದರಲ್ಲಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಅವರ ಇಡೀ ಕುಟುಂಬವೂ ಸೇರಿದೆ. ಸಾರಾ ಅಲಿ ಖಾನ್ ಮಾತ್ರವಲ್ಲದೆ ಅವರ ಕುಟುಂಬದ ಸದಸ್ಯರಾದ ಕರೀನಾ ಕಪೂರ್, ಸೈಫ್, ತೈಮೂರ್, ಇಬ್ರಾಹಿಂ ಮತ್ತು ಜೆಹ್ ಕೂಡ ಮದುವೆಯ ಪೂರ್ವ ಸಮಾರಂಭದಲ್ಲಿ ಭಾಗವಹಿಸಿದ್ದರು.
ಅತಿಥಿಗಳಿಗೆ ಆಹಾರದ ಜತೆ ಚಿನ್ನ ಬಡಿಸಿದ್ರಂತೆ
ಇತ್ತೀಚೆಗಷ್ಟೇ ಮಿಡ್ ಡೇಗೆ ನೀಡಿದ ಸಂದರ್ಶನದಲ್ಲಿ ಸಾರಾ ಅಲಿ ಖಾನ್ ಪ್ರೀ ವೆಡ್ಡಿಂಗ್ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಹೇಗಿತ್ತು ಕಾರ್ಯಕ್ರಮ? ಅಲ್ಲಿ ಏನೆಲ್ಲ ಇತ್ತು ಎಂಬ ಪ್ರಶ್ನೆಗೆ ತಮಾಷೆಯಾಗಿ ಸಾರಾ ಆಲಿಖಾನ್ ಹೀಗಂದ್ರು. "ಅಲ್ಲಿ ಎಲ್ಲೆಲ್ಲೂ ವಜ್ರಗಳಿದ್ದವು. ಊಟದ ಜತೆಗೆ ಚಿನ್ನಾಭರಣ ಕೂಡ ಬಡಿಸಿದ್ರು" ಎಂದು ಹೇಳಿ ನಕ್ಕರು. ಇದಾದ ಬಳಿಕ ಗಂಭೀರವಾಗಿ ಆ ಕಾರ್ಯಕ್ರಮದ ಕುರಿತು ಸಾಕಷ್ಟು ವಿವರ ನೀಡಿದ್ದಾರೆ. "ಕಾರ್ಯಕ್ರಮವು ತುಂಬಾ ಸುಂದರವಾಗಿತ್ತು. ಅತ್ಯುತ್ತಮ ಆತಿಥ್ಯ ದೊರಕಿತು" ಎಂದು ತಿಳಿಸಿದ್ದಾರೆ. ಇದರ ಜತೆ ಅನಂತ್ ಅಂಬಾನಿ ಜತೆಗೆ ಶಾಲೆಗೆ ಹೋಗಿರುವ ವಿಚಾರ, ರಾಧಿಕಾ ಮರ್ಚೆಂಟ್ ಅವರನ್ನು ಸಾಕಷ್ಟು ವರ್ಷಗಳಿಂದ ನೋಡುತ್ತ ಬಂದಿದ್ದೇನೆ" ಎಂದೆಲ್ಲ ಹೇಳಿದ್ದಾರೆ. ಇದೇ ಸಮಯದಲ್ಲಿ ಸಾರಾ ಆಲಿ ಖಾನ್ ಅಂಬಾನಿ ಕುಟುಂಬದವರನ್ನು ಹೊಗಳಿದ್ದಾರೆ. ಎಲ್ಲರನ್ನೂ ತುಂಬಾ ಆತ್ಮೀಯವಾಗಿ ಸ್ವಾಗತಿಸುತ್ತಾರೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಅಚ್ಚುಮೆಚ್ಚಿನ ನೆನಪುಗಳು
ಫ್ರೀ ವೆಡ್ಡಿಂಗ್ ಇವೆಂಟ್‌ನಲ್ಲಿ ನಿಮ್ಮ ನೆಚ್ಚಿನ ನೆನಪು ಯಾವುದು ಎಂಬ ಪ್ರಶ್ನೆಗೂ ಸಾರಾ ಉತ್ತರಿಸಿದ್ದಾರೆ. "ಅನಂತ್ ಮತ್ತು ರಾಧಿಕಾ ವಿವಾಹದ ಪೇಪರ್‌ಗಳಿಗೆ ಸಹಿ ಹಾಕಿ ಪರಸ್ಪರ ಪ್ರೀತಿಯಿಂದ ನೋಡುತ್ತಿರುವ ಆ ಸಂದರ್ಭ ಸ್ಮರಣೀಯ" ಎಂದು ಸಾರಾ ಹೇಳಿದ್ದಾರೆ. ಮಿಡ್‌ಡೇಗೆ ನೀಡಿದ ಸಂದರ್ಶನದಲ್ಲಿ ಇನ್ನೂ ಹಲವು ಸಂಗತಿಗಳನ್ನು ಸಾರಾ ಹೇಳಿದ್ದಾರೆ. ನೀತಾ ಅಂಬಾನಿ ಪ್ರದರ್ಶಿಸಿದ ಭರತನಾಟ್ಯವಂತೂ ಅದ್ಭುತವಾಗಿತ್ತು. ನಾನು ಆ ಕಾರ್ಯಕ್ರಮವನ್ನು ರೆಪ್ಪೆ ಎವೆಯಿಕ್ಕದೆ ನೋಡಿದೆ ಎಂದು ಅವರು ಹೇಳಿದ್ದಾರೆ.
ಸಾರಾ ಆಲಿ ಖಾನ್ ಬಗ್ಗೆ
ಮರ್ಡರ್ ಮುಬಾರಕ್ ಮತ್ತು ಏ ವತನ್ ಮೇರೆ ವತನ್ ಎಂಬ ಸಿನಿಮಾಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಅನುರಾಗ್ ಬಸು ನಿರ್ದೇಶನದ ಮೆಟ್ರೋ ಇವರ ಮುಂಬರುವ ಸಿನಿಮಾ. ಈ ಸಿನಿಮಾದಲ್ಲಿ ಆದಿತ್ಯ ರಾಯ್ ಕಪೂರ್, ಸನಾ ಶೇಖ್, ನೀನಾ ಗುಪ್ತಾ, ಕೊಂಕಣಾ ಸೇನ್ ಶರ್ಮಾ, ಅನುಪಮ್ ಖೇರ್, ಪಂಕಜ್ ತ್ರಿಪಾಠಿ, ಅಲಿ ಫಜಲ್ ಮುಂತಾದವರು ನಟಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಅನಂತ್ ಅಂಬಾನಿ ಮತ್ತು ರಾಧೀಕಾ ಮರ್ಚೆಂಟ್ ಮದುವೆ ಪೂರ್ವ ಕಾರ್ಯಕ್ರಮಗಳು ಮಾರ್ಚ್ ಮೊದಲ ವಾರದಲ್ಲಿ ನಡೆದಿತ್ತು. ಸಲ್ಮಾನ್ ಖಾನ್, ಅಮಿರ್ ಖಾನ್ ಮತ್ತು ಶಾರೂಖ್ ಖಾನ್ ಕೂಡ ಆಗಮಿಸಿದ್ದರು. ರಾಮ್ ಚರಣ್ ಮತ್ತು ಎನ್‌ಟಿಆರ್ ಜೂನಿಯರ್ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೂ ಇವರು ಹೆಜ್ಜೆ ಹಾಕಿದ್ದರು. ಖಾನ್‌ಗಳು ಮಾತ್ರವಲ್ಲದೆ ಹಲವು ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ರಾಣಿ ಮುಖರ್ಜಿ, ವರುಣ್ ಧವನ್, ಜಾನ್ ಅಬ್ರಾಹಂ, ಸಿದ್ಧಾರ್ಥ ಮಲ್ಹೋತ್ರಾ, ಕಿಯಾರ ಅಡ್ವಾಣಿ, ಸೈಫ್ ಆಲಿ ಖಾನ್, ಕರೀನ್ ಕಪೂರ್, ಸಾರಾ ಆಲಿ ಖಾನ್, ಅನನ್ಯ ಪಾಂಡೆ, ಜಾನ್ವಿ ಕಪೂರ್ ಮುಂತಾದವರು ಅನಂತ್ ಅಂಬಾನಿ ಮದುವೆ ಪೂರ್ವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.