ಭರ್ಜರಿ 5 ನಿಮಿಷದ ಟ್ರೇಲರ್, ಐವರು ಹೀರೋಗಳು, ನಾಲ್ವರು ವಿಲನ್‌ಗಳು, ಮೈ ಜುಂ ಎನಿಸೋ ಮೇಕಿಂಗ್; ದಶಕದ ಬಳಿಕ ಮತ್ತೆ ಬಂದ ಸಿಂಗಂ ಅಗೇನ್
ಬಹುನಿರೀಕ್ಷಿತ ಬಹುತಾರಾಗಣದ ಸಿಂಗಂ ಅಗೇನ್ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ನವೆಂಬರ್ 1ರಂದು ಥಿಯೇಟರ್‌ಗೆ ಬರಲಿರುವ ಈ ಸಿನಿಮಾ, ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.
Singham Again Trailer: ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ಸಿಂಗಂ ಅಗೇನ್ ಸಹ ಒಂದು. ಇನ್ನೇನು ದೀಪಾವಳಿಗೆ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಲು ಚಿತ್ರಮಂದಿರಗಳತ್ತ ಆಗಮಿಸಲಿದೆ. ಸಿನಿಮಾ ಘೋಷಣೆ ಆಗಿಯೇ ವರ್ಷಗಳು ಕಳೆದರೂ, ಸಿನಿಮಾ ಬಗ್ಗೆ ಹೆಚ್ಚಿನ ಅಪ್‌ಡೇಟ್ ಕೊಟ್ಟಿರಲಿಲ್ಲ ನಿರ್ದೇಶಕ ರೋಹಿತ್ ಶೆಟ್ಟಿ. ಇದೀಗ ತಡವಾದರೂ, ಅಷ್ಟೇ ಗ್ರ್ಯಾಂಡ್ ಆಗಿಯೇ ಟ್ರೇಲರ್ ಮೂಲಕ ನಿರೀಕ್ಷೆಯನ್ನು ಆಕಾಶಕ್ಕೆ ಕೊಂಡೊಯ್ದಿದ್ದಾರೆ. ಬಹುತಾರಾಗಣದ ಈ ಸಿನಿಮಾದಲ್ಲಿ ಹಲವು ಹೊಸತುಗಳಿಗೆ ಕನ್ನಡಿ ಹಿಡಿದಿದ್ದಾರೆ ನಿರ್ದೇಶಕರು.
ರೋಹಿತ್ ಶೆಟ್ಟಿ ಮತ್ತು ಅಜಯ್ ದೇವಗನ್ ಅಭಿನಯದ ಸಿಂಗಂ ಅಗೇನ್ ಸಿನಿಮಾ ನವೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಂದು (ಅಕ್ಟೋಬರ್ 7) ಬಹು ದಿನಗಳಿಂದ ಕಾಯಿಸಿ ಚಿತ್ರದ ಟ್ರೈಲರ್‌ಅನ್ನು ಹೊರತಂದಿದ್ದಾರೆ ಚಿತ್ರದ ನಿರ್ಮಾಪಕರು. 2014ರಲ್ಲಿ ತೆರೆಗೆ ಬಂದಿದ್ದ ಸಿಂಗಂ ರಿಟರ್ನ್ಸ್ ಚಿತ್ರದ ಮುಂದುವರಿದ ಭಾಗ ಇದಾಗಿದ್ದು, ದೀಪಾವಳಿ ನಿಮಿತ್ತ ಥಿಯೇಟರ್‌ಗೆ ಅಪ್ಪಳಿಸಲಿದೆ ಈ ಸಿನಿಮಾ.
5 ನಿಮಿಷದ ಟ್ರೇಲರ್‌ನಲ್ಲಿ ಏನಿದೆ?
ಈ ಸಲದ ಸಿಂಗಂ ಅಗೇನ್ ಸಿನಿಮಾದಲ್ಲಿ ರಾಮಾಯಣದ ಎಳೆಯನ್ನು ನಿರ್ದೇಶಕರು ಟಚ್ ಮಾಡಿದ್ದಾರೆ. ಬರೋಬ್ಬರಿ 4 ನಿಮಿಷ 58 ಸೆಕೆಂಡ್‌ಗಳ ಟ್ರೇಲರ್‌ಅನ್ನು ಹೊರತಂದಿದ್ದಾರೆ. ಸಾಹಸ ಸನ್ನಿವೇಶಗಳ ವೈಭೋಗವನ್ನೇ ತೆರೆಮೇಲೆ ತಂದಿದ್ದಾರೆ. ಈ ಸಲದ ಸಿಂಗಂ ಅಗೇನ್ ಸಿನಿಮಾದಲ್ಲಿ ಕೇವಲ ಅಜಯ್ ದೇವಗನ್ ಮಾತ್ರವಲ್ಲ, ಸೂರ್ಯವಂಶಿಯಾಗಿ ಅಕ್ಷಯ್ ಕುಮಾರ್, ಕರೀನಾ ಕಪೂರ್ ಖಾನ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಅರ್ಜುನ್ ಕಪೂರ್, ಟೈಗರ್ ಶ್ರಾಫ್, ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಾಪ್ ಯೂನಿವರ್ಸ್‌ನ 5ನೇ ಸಿನಿಮಾ
ಸಿಂಗಮ್ ಎಗೇನ್ ಚಿತ್ರದಲ್ಲಿ ಸಲ್ಮಾನ್ ಖಾನ್ ಚುಲ್ಬುಲ್ ಪಾಂಡೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ. 2014 ರ ಬಿಡುಗಡೆಯಾದ ಸಿಂಘಂ ರಿಟರ್ನ್ಸ್‌ನ ಮುಂದುವರಿದ ಭಾಗವೇ ಈ ಸಿಂಗಂ ಅಗೇನ್. ಸಿಂಘಂ, ಸಿಂಗಮ್ ಎಗೇನ್, ಸಿಂಬಾ ಮತ್ತು ಸೂರ್ಯವಂಶಿ ನಂತರ ರೋಹಿತ್ ಶೆಟ್ಟಿ ಅವರ ಕಾಪ್ ಯೂನಿವರ್ಸ್‌ನ ಐದನೇ ಸಿನಿಮಾ ಇದಾಗಿದೆ.
ಯಾರಿಗೆ ಯಾವ ಪಾತ್ರ?
ಸಿಂಗಂ ಅಗೇನ್ ಚಿತ್ರದಲ್ಲಿ ಬಾಜಿರಾವ್ ಸಿಂಗಂ ಪಾತ್ರದಲ್ಲಿ ಅಜಯ್ ದೇವಗನ್ ಮುಂದುವರಿದರೆ, ರಣವೀರ್ ಸಿಂಗ್ ಸಂಗ್ರಾಮ್ ಭಲೇರಾವ್ (ಸಿಂಬಾ) ಪಾತ್ರದಲ್ಲಿ ಎದುರಾಗಿದ್ದಾರೆ. ವೀರ್ ಸೂರ್ಯವಂಶಿಯಾಗಿ ಅಕ್ಷಯ್ ಕುಮಾರ್ ಖಡಕ್ ಆಗಿಯೇ ಅಬ್ಬರಿಸಿದ್ದಾರೆ. ಈ ಕಾಪ್ ಯೂನಿವರ್ಸ್‌ಗೆ ಇದೀಗ ಟೈಗರ್ ಶ್ರಾಫ್ ಮತ್ತು ಶಕ್ತಿ ಶೆಟ್ಟಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಈ ಸಿನಿಮಾ ನವೆಂಬರ್ 1ರಂದು ತೆರೆಗೆ ಬರಲಿದ್ದು, ಕಾರ್ತಿಕ್ ಆರ್ಯನ್ ಅವರ ಭುಲ್ ಭುಲ್ಲಯ್ಯ 3 ಚಿತ್ರದ ಜತೆಗೆ ಕ್ಲ್ಯಾಶ್ ಆಗಲಿದೆ.