ಪರೇಶ್ ರಾವಲ್ ವಿರುದ್ಧ ಕೋರ್ಟ್‍ಗೆ ಹೋದ ಅಕ್ಷಯ್ ಕುಮಾರ್; 25 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ
ಬಾಲಿವುಡ್ ಅಂಗಳದಲ್ಲಿ ಒಳ್ಳೆಯ ಗೆಳೆಯರು ಎಂದು ಗುರುತಿಸಿಕೊಂಡವರು ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ನಡುವೆ ಕಂದಕ ಏರ್ಪಟ್ಟಿದ್ದು, ಪರೇಶ್ ರಾವಲ್ ತಮಗೆ 25 ಕೋಟಿ ರೂ. ಪರಿಹಾರ ನೀಡಬೇಕೆಂದು ಅಕ್ಷಯ್ ಕುಮಾರ್ ಒಡೆತನದ ಕೇಫ್ ಆಫ್ ಗುಡ್ ಹೋಪ್ ಫಿಲಂಸ್ ನ್ಯಾಯಾಲಯದಲ್ಲಿ ದಾವೆ ಹೂಡಿದೆ. (ವರದಿ: ಚೇತನ್ ನಾಡಿಗೇರ್)

ಬಾಲಿವುಡ್ ಅಂಗಳದಲ್ಲಿ ಒಳ್ಳೆಯ ಗೆಳೆಯರು ಎಂದು ಗುರುತಿಸಿಕೊಂಡವರು ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್. ಇಬ್ಬರೂ ‘ಹೇರಾ ಫೇರಿ’, ‘ಓ ಮೈ ಗಾಡ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಇದೀಗ ಇವರ ನಡುವೆ ಕಂದಕ ಏರ್ಪಟ್ಟಿದ್ದು, ಪರೇಶ್ ರಾವಲ್ ತಮಗೆ 25 ಕೋಟಿ ರೂ. ಪರಿಹಾರ ನೀಡಬೇಕೆಂದು ಅಕ್ಷಯ್ ಕಮಾರ್ ಒಡೆತನದ ಕೇಫ್ ಆಫ್ ಗುಡ್ ಹೋಪ್ ಫಿಲಂಸ್ ನ್ಯಾಯಾಲಯದಲ್ಲಿ ದಾವೆ ಹೂಡಿದೆ.
ಇಷ್ಟಕ್ಕೂ ಆಗಿದ್ದೇನೆಂದರೆ, ಸುಮಾರು 25 ವರ್ಷಗಳ ಹಿಂದೆ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಮತ್ತು ಪರೇಶ್ ರಾವಲ್ ಅಭಿನಯದ ‘ಹೇರಾ ಫೇರಿ’ ಬಿಡುಗಡೆಯಾಗಿತ್ತು. ಪ್ರಿಯದರ್ಶನ್ ಅಭಿನಯದ ಈ ಚಿತ್ರವು ದೊಡ್ಡ ಯಶಸ್ಸು ಕಂಡು ಮುಂದುವರೆದ ಭಾಗ ಸಹ ಬಂದಿತ್ತು. ಅದಾದ ಮೇಲೆ ಮೂರನೆಯ ಭಾಗದ ಬಗ್ಗೆ ಚರ್ಚೆ ಆಗುತ್ತಲೇ ಇತ್ತಾದರೂ ಚಿತ್ರ ಪ್ರಾರಂಭವಾಗಿರಲಿಲ್ಲ.
ಇತ್ತೀಚೆಗೆ ‘ಹೇರಾ ಫೇರಿ 3’ ಚಿತ್ರದ ಘೋಷಣೆಯಾಗಿದ್ದು, ಚಿತ್ರದ ಟೀಸರ್‍ನ ಚಿತ್ರೀಕರಣ ಸಹ ಚಿತ್ರೀಕರಣ ಸಹ ಮುಗಿದಿತ್ತು. ಮೊದಲೆರಡು ಚಿತ್ರಗಳು ಫಿರೋಜ್ ನಡಿಯಾಡ್‍ವಾಲಾ ನಿರ್ಮಿಸಿದ್ದರು. ಅವರಿಂದ ಚಿತ್ರದ ಹಕ್ಕುಗಳನ್ನು ಪಡೆದ ಅಕ್ಷಯ್ ಕುಮಾರ್, ಈ ಚಿತ್ರವನ್ನು ನಿರ್ಮಿಸುವುದಕ್ಕೆ ಮುಂದಾಗಿದ್ದರು. ಈ ಚಿತ್ರದಲ್ಲಿ ಪರೇಶ್ ರಾವಲ್ ತಮ್ಮ ಬಾಬು ರಾವ್ ಪಾತ್ರವನ್ನು ಮುಂದುವರೆಸಿದರೆ, ಅಕ್ಷಯ್ ಕುಮಾರ್ ಮತ್ತು ಸುನೀಲ್ ಶೆಟ್ಟಿ ಕ್ರಮವಾಗಿ ರಾಜು ಮತ್ತು ಶ್ಯಾಮ್ ಪಾತ್ರಗಳನ್ನು ಮುಂದುವರೆಸಿದ್ದರು. ಏಪ್ರಿಲ್ ಮೂರರಂದು ಚಿತ್ರದ ಟೀಸರ್ಗೆ ಚಿತ್ರೀಕರಣ ಸಹ ಆಗಿತ್ತಂತೆ. ಇನ್ನೇನು ಪೂರ್ಣಪ್ರಮಾಣದ ಚಿತ್ರೀಕರಣ ಪ್ರಾರಂಭವಾಗಬೇಕು ಎನ್ನುವಷ್ಟರಲ್ಲಿ ಪರೇಶ್ ರಾವಲ್, ಚಿತ್ರದಿಂದ ಹಿಂದೆ ಸರಿದಿದ್ದಾರೆ. ತಾವು ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಸಂಭಾವನೆ ಅಥವಾ ಚಿತ್ರತಂಡದೊಂದಿಗೆ ಭಿನ್ನಾಭಿಪ್ರಾಯದಿಂದ ಹೊರನಡೆದಿಲ್ಲ, ವೈಯಕ್ತಿಕ ಕಾರಣಗಳಿಂದ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಹೇರಾ ಫೇರಿ 3’ ಚಿತ್ರವಾಗುತ್ತಿರುವ ಬಗ್ಗೆ ಅಭಿಮಾನಿಗಳು ಖುಷಿಯಾಗಿದ್ದರು. ಹೀಗಿರುವಾಗಲೇ, ಚಿತ್ರದಿಂದ ಪರೇಶ್ ಹಿಂದಕ್ಕೆ ಸರಿದಿದ್ದರ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಪರೇಶ್ ರಾವಲ್ ಅವರ ಈ ನಡೆಯಿಂದ ನಷ್ಟವಾಗಿದೆ ಎಂದು ಆರೋಪಿಸಿ ಅಕ್ಷಯ್ ಕುಮಾರ್ ಒಡೆತನದ ನಿರ್ಮಾಣ ಸಂಸ್ಥೆಯು, 25 ಕೋಟಿ ರೂ. ಪರಿಹಾರ ನೀಡುವಂತೆ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಪರೇಶ್ ರಾವಲ್ ಈ ಚಿತ್ರದಲ್ಲಿ ನಟಿಸುವುದಕ್ಕೆ 11 ಲಕ್ಷ ಮುಂಗಡವನ್ನೂ ಪಡೆದಿದ್ದರಂತೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಅವರು ಕೇಳಿದಷ್ಟು ಸಂಭಾವನೆ ಕೊಡುವುದಕ್ಕೆ ನಿರ್ಮಾಣ ಸಂಸ್ಥೆ ಒಪ್ಪಿದೆಯಂತೆ. ಹೀಗಿರುವಾಗ, ಪರೇಶ್ ರಾವಲ್ ಚಿತ್ರದಲ್ಲಿ ನಟಿಸದಿರುವುದಕ್ಕೆ ಸಮಂಜಸ ಉತ್ತರ ಕೊಡದೆ, ಚಿತ್ರತಂಡದಿಂದ ಹೊರನಡೆದಿದ್ದಾರೆ. ಒಂದು ವಾರದೊಳಗೆ ಅವರು 25 ಕೋಟಿ ರೂ.ಗಳನ್ನು ಡೆಪಾಸಿಟ್ ಇಡದಿದ್ದರೆ, ಅವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸುವುದಾಗಿ ನಿರ್ಮಾಣ ಸಂಸ್ಥೆ ಹೇಳಿದೆ.
ಪರೇಶ್ ಅವರ ನಡೆಯಿಂದ ಚಿತ್ರತಂಡದಲ್ಲಿ ಬೇಸರ ವ್ಯಕ್ತವಾಗಿದೆ. ಪರೇಶ್ ಅವರಿಂದ ಇಂಥದ್ದೊಂದು ನಡೆಯನ್ನು ತಾವು ನಿರೀಕ್ಷಿಸಿರಲಿಲ್ಲ ಎಂದು ನಿರ್ದೇಶಕ ಪ್ರಿಯದರ್ಶನ್ ಹೇಳಿಕೊಂಡಿದ್ದಾರೆ. ಇನ್ನು, ಪರೇಶ್ ರಾವಲ್ ಈ ಚಿತ್ರದಲ್ಲಿ ನಟಿಸದಿದ್ದರೆ, ಚಿತ್ರಕ್ಕೆ ಜೀವವೇ ಇರುವುದಿಲ್ಲ, ಬಾಬು ರಾವ್ ಪಾತ್ರವನ್ನು ಬೇರೆ ಯಾರಿಂದಲೂ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಸುನೀಲ್ ಶೆಟ್ಟಿ ಹೇಳಿಕೊಂಡಿದ್ದಾರೆ. ಈ ಮಧ್ಯೆ, ಪರೇಶ್ ರಾವಲ್ ನ್ಯಾಯಾಲಯದಲ್ಲಿ ಸೂಕ್ತ ಉತ್ತರವನ್ನು ನೀಡುವುದಾಗಿ ಹೇಳಿಕೊಂಡಿದ್ದಾರೆ.
‘ಹೇರಾ ಫೇರಿ 3’ ಚಿತ್ರದಿಂದ ಪರೇಶ್ ರಾವಲ್ ನಿಜಕ್ಕೂ ಹೊರನಡೆಯುತ್ತಾರಾ? ಅಥವಾ ಅವರನ್ನು ಒಪ್ಪಿಸುವುದಕ್ಕೆ ಚಿತ್ರತಂಡ ಸಾಧ್ಯವಾಗುತ್ತದಾ? ಎಂದು ಕಾದು ನೋಡಬೇಕು. (ವರದಿ: ಚೇತನ್ ನಾಡಿಗೇರ್)