Akshay Kumar Birthday: ಸತತ ಸಿನಿಮಾ ಸೋಲಿನ ಬಳಿಕ ಭೂತ್‌ ಬಂಗ್ಲಾ ಸೇರಿದ ಅಕ್ಷಯ್‌ ಕುಮಾರ್‌; 14 ವರ್ಷದ ಬಳಿಕ ಈ ನಿರ್ಧಾರ-bollywood news akshay kumars birthday special bhooth bangla first look released reunion with priyadarshan mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Akshay Kumar Birthday: ಸತತ ಸಿನಿಮಾ ಸೋಲಿನ ಬಳಿಕ ಭೂತ್‌ ಬಂಗ್ಲಾ ಸೇರಿದ ಅಕ್ಷಯ್‌ ಕುಮಾರ್‌; 14 ವರ್ಷದ ಬಳಿಕ ಈ ನಿರ್ಧಾರ

Akshay Kumar Birthday: ಸತತ ಸಿನಿಮಾ ಸೋಲಿನ ಬಳಿಕ ಭೂತ್‌ ಬಂಗ್ಲಾ ಸೇರಿದ ಅಕ್ಷಯ್‌ ಕುಮಾರ್‌; 14 ವರ್ಷದ ಬಳಿಕ ಈ ನಿರ್ಧಾರ

ಅಕ್ಷಯ್‌ ಕುಮಾರ್‌ ಮತ್ತು ನಿರ್ದೇಶಕ ಪ್ರಿಯದರ್ಶನ್‌ 14 ವರ್ಷಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಸರಣಿ ಕಾಮಿಡಿ ಸಿನಿಮಾ ನೀಡಿದ್ದ ಈ ಜೋಡಿ, ಇದೀಗ ಭೂತ್‌ ಬಂಗ್ಲಾ ಮೂಲಕ ಆಗಮಿಸುತ್ತಿದೆ. ಅಕ್ಷಯ್‌ ಅವರ ಬರ್ತ್‌ಡೇ ಪ್ರಯುಕ್ತ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ.

ಅಕ್ಷಯ್‌ ಕುಮಾರ್‌ ಅವರ ಭೂತ್‌ ಬಂಗ್ಲಾ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ
ಅಕ್ಷಯ್‌ ಕುಮಾರ್‌ ಅವರ ಭೂತ್‌ ಬಂಗ್ಲಾ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ

Bhooth Bangla First Look Released: ಅಕ್ಷಯ್‌ ಕುಮಾರ್‌ ಗೆಲುವಿನ ಹಪಹಪಿಯಲ್ಲಿದ್ದಾರೆ. ಒಂದು ಕಾಲದಲ್ಲಿ ಮುಟ್ಟಿದ್ದೆಲ್ಲ ಚಿನ್ನ ಎಂಬಂತೆ ಅವರು ಮಾಡಿದ ಸಿನಿಮಾಗಳೆಲ್ಲ ಸೂಪರ್‌ ಹಿಟ್‌ ಆಗುತ್ತಿದ್ದವು. ಆದರೆ, ಇತ್ತೀಚಿನ ಕೆಲ ವರ್ಷಗಳಿಂದ ಇದೇ ನಟ ಗೆಲುವಿಗಾಗಿ ಕಾಯುತ್ತಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟ ಅಕ್ಷಯ್‌ ಕುಮಾರ್‌ಗೆ ಗೆಲುವಿನ ಜರೂರತ್ತಿದೆ. ಅದರಂತೆ, ಇಂದು (ಸೆ. 9) ನಟ ಅಕ್ಷಯ್‌ ಕುಮಾರ್‌ ಅವರ ಬರ್ತ್‌ಡೇ. ಈ ನಿಮಿತ್ತ ಅವರ ಹೊಸ ಸಿನಿಮಾ ಭೂತ್‌ ಬಂಗ್ಲಾ ಘೋಷಣೆ ಆಗಿದೆ.

ಬಾಲಿವುಡ್‌ ಕಿಲಾಡಿ ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಕಳೆದ ಕೆಲವು ತಿಂಗಳುಗಳಿಂದ ಗಲ್ಲಾಪೆಟ್ಟಿಗೆಯಲ್ಲಿ ಮೋಡಿ ಮಾಡಿಲ್ಲ. ಈ ವರ್ಷ ಬಿಡುಗಡೆಯಾದ ಅವರ ಮೂರು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲನುಭವಿಸಿದವು. ಖೇಲ್ ಖೇಲ್ ಮೇ ಸಿನಿಮಾ ಮೂಲಕ, ಅಕ್ಷಯ್‌ ಕುಮಾರ್‌ ಮತ್ತೊಮ್ಮೆ ಹಾಸ್ಯ ಪ್ರಕಾರಕ್ಕೆ ಮರಳಿದರೂ, ಅದೂ ಈ ಹಿಂದಿನ ಹಾಸ್ಯ ಸಿನಿಮಾಗಳಂತೆ ಕೈ ಹಿಡಿಯಲಿಲ್ಲ. ಈಗ ಅಕ್ಷಯ್ ಕುಮಾರ್ ತಮ್ಮ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಭೂತ್‌ ಬಂಗ್ಲಾ ಸಿನಿಮಾದೊಂದಿಗೆ 14 ವರ್ಷಗಳ ಬಳಿಕ ನಿರ್ದೇಶಕ ಪ್ರಿಯದರ್ಶನ್‌ ಜತೆ ಕೈ ಜೋಡಿಸಿದ್ದಾರೆ.

ಅಕ್ಷಯ್ ಹೆಗಲ ಮೇಲೆ ಕಪ್ಪು ಬೆಕ್ಕು

ಭೂತ್‌ ಬಂಗ್ಲಾ ಇದೊಂದು ಹಾರರ್ ಕಾಮಿಡಿ ಸಿನಿಮಾ. ಅದರ ಮೋಷನ್ ಪೋಸ್ಟರ್ ಅನ್ನು ಅಕ್ಷಯ್‌ ಕುಮಾರ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಕುತೂಹಲ ಮೂಡಿಸಿದೆ. “ವರ್ಷದಿಂದ ವರ್ಷಕ್ಕೆ ನನ್ನ ಹುಟ್ಟುಹಬ್ಬದಂದು ನೀವು ನೀಡುವ ಪ್ರೀತಿಗೆ ಧನ್ಯವಾದಗಳು! 'ಭೂತ್ ಬಂಗ್ಲಾ'ದ ಫಸ್ಟ್‌ ಲುಕ್‌ ಜತೆಗೆ ಈ ವರ್ಷವನ್ನು ಆಚರಿಸಿ! 14 ವರ್ಷಗಳ ನಂತರ ಪ್ರಿಯದರ್ಶನ್ ಅವರೊಂದಿಗೆ ಮತ್ತೆ ಒಂದಾಗಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಈ ಕನಸಿನ ಸಹಯೋಗವು ಬಹಳ ಸಮಯದ ಬಳಿಕ ಒದಗಿಬಂದಿದೆ. ಈ ಅದ್ಭುತ ಪ್ರಯಾಣವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ಮ್ಯಾಜಿಕ್‌ಗಾಗಿ ಟ್ಯೂನ್ ಮಾಡಿ!" ಎಂದಿದ್ದಾರೆ.

14 ವರ್ಷದ ಬಳಿಕ ಒಂದಾದ ಜೋಡಿ

ಅಕ್ಷಯ್‌ ಕುಮಾರ್‌ ಶೇರ್‌ ಮಾಡಿದ ಫಸ್ಟ್‌ಲುಕ್‌ನಲ್ಲಿ ನಾಯಕ ಅಕ್ಷಯ್‌ ಹಾಲು ಕುಡಿಯುತ್ತಿದ್ದಾರೆ. ಕಪ್ಪು ಬೆಕ್ಕು ಅವರ ಭುಜದ ಮೇಲೆ ಕುಳಿತಿದೆ. ಹಿಂದೆ ಬೃಹತ್‌ ಬಂಗಲೆ ಇದೆ. ಇದೆಲ್ಲವನ್ನು ನೋಡುತ್ತಿದ್ದರೆ ಇದು ಹಾರರ್‌ ಕಾಮಿಡಿ ಸಿನಿಮಾ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇನ್ನು ಪ್ರಿಯದರ್ಶನ್‌ ಜತೆಗೆ ಈ ಹಿಂದೆ 'ಹೇರಾ ಫೇರಿ', 'ಭೂಲ್ ಭುಲೈಯ್ಯಾ', 'ಭಾಗಂ ಭಾಗ್' ಮತ್ತು 'ಗರಂ ಮಸಾಲಾ' ಚಿತ್ರಗಳಲ್ಲಿ ನಟಿಸಿದ್ದರು. ಖಟ್ಟಾ- ಮೀಠಾ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಇದೀಗ ಸುದೀರ್ಘ 14 ವರ್ಷದ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿದೆ.

ಫ್ಯಾನ್ಸ್‌ ಖುಷ್‌

ಈ ಟೀಸರ್‌ಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, 'ಮಾಂತ್ರಿಕ ಜೋಡಿ ಹಿಂತಿರುಗಿದೆ. 14 ವರ್ಷಗಳ ಬಳಿಕ 7ನೇ ಬಾರಿಗೆ ಇಬ್ಬರೂ ಒಟ್ಟಿಗೆ ಸೇರುತ್ತಿದ್ದಾರೆ" ಎಂದು ಕಾಮೆಂಟ್‌ ಹಾಕಿದರೆ, ಇನ್ನೊಬ್ಬ ಬಳಕೆದಾರ, ಲೆಜೆಂಡರಿ ಯೂನಿಯನ್ ಎಂದು ಹಾರೈಸಿ, ಬರ್ತ್‌ಡೇ ಶುಭ ಕೋರಿದ್ದಾರೆ. ಸದ್ಯ ಸಿನಿಮಾ ಯಾವ ಹಂತದಲ್ಲಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಕಥೆಯ ವಿಚಾರಕ್ಕೆ ಬಂದರೆ ಇದೊಂದು ಬ್ಲ್ಯಾಕ್ ಮ್ಯಾಜಿಕ್ ಆಧರಿತ ಕಥೆ ಎಂಬುದು ಗೊತ್ತಾಗುತ್ತದೆ. ಈ ಚಿತ್ರದಲ್ಲಿ ಅಕ್ಷಯ್‌ ಕುಮಾರ್‌ ಜತೆಗೆ ಕಿಯಾರಾ ಅಡ್ವಾಣಿ, ಕೀರ್ತಿ ಸುರೇಶ್ ಮತ್ತು ಆಲಿಯಾ ಭಟ್ ಕಾಣಿಸಿಕೊಳ್ಳಬಹುದು ಎಂಬ ವದಂತಿಗಳಿವೆ.

mysore-dasara_Entry_Point