Alia bhatt: ಕಪೂರ್ ಸೊಸೆಯ ಬಿಜಿನೆಸ್ ಮೈಂಡ್!; ಆಲಿಯಾ ಭಟ್ ಬಟ್ಟೆ ಉದ್ಯಮಕ್ಕೆ ಬಂಗಾರದ ಬೆಲೆಕಟ್ಟಿದ ರಿಲಯನ್ಸ್ ಕಂಪನಿ
ಬಾಲಿವುಡ್ ನಟಿ ಆಲಿಯಾ ಭಟ್, ನಟನೆ ಮಾತ್ರವಲ್ಲದೆ ಯಶಸ್ವಿ ಉದ್ಯಮಿಯೂ ಹೌದು. ಈದ್ ಅ ಮಮ್ಮ ಹೆಸರಿನ ಮಕ್ಕಳ ಬಟ್ಟೆ ಬ್ರಾಂಡ್ ಮೂಲಕ ಕೋಟಿ ಕೋಟಿ ಲಾಭದಲ್ಲಿದ್ದಾರೆ ಈ ನಟಿ. ಇದೀಗ ಹೊಸ ವಿಚಾರ ಏನೆಂದರೆ ರಿಲಯನ್ಸ್ ಕಂಪನಿ ಆಲಿಯಾ ಭಟ್ ಬ್ರಾಂಡ್ ಖರೀದಿಸಲು ನಿರ್ಧರಿಸಿದೆ.
Alia bhatt: ಬಾಲಿವುಡ್ ಸಿನಿಮಾ ಮಂದಿ ಬರೀ ನಟನೆಗೆ ಅಂಟಿಕೊಂಡಿಲ್ಲ, ಅದೊಂದೇ ಅವರಿಗೆ ಆದಾಯದ ಮಾರ್ಗವಾಗಿ ಉಳಿದಿಲ್ಲ. ಅದರಾಚೆಗೂ ಹತ್ತಾರು, ನೂರಾರು ಉದ್ಯಮಗಳಲ್ಲಿ ಸಿನಿಮಾ ಮಂದಿ ತೊಡಗಿಸಿಕೊಂಡಿದ್ದಾರೆ. ನಟನೆ ಜತೆಗೆ ಬಿಜಿನೆಸ್‌ಮೆನ್ ಆಗಿಯೂ ಸಕ್ರಿಯರಿದ್ದಾರೆ. ಆ ಪೈಕಿ ಇದೀಗ ಆಲಿಯಾ ಭಟ್ ಬಗ್ಗೆ ಒಂದು ಹೊಸ ಸುದ್ದಿ ಸದ್ಯ ಸದ್ದು ಮಾಡುತ್ತಿದೆ. ಅಲ್ಪ ಬಂಡವಾಳ ಹೂಡಿ ಶುರು ಮಾಡಿದ್ದ ಅವರ ಬಟ್ಟೆ ಉದ್ಯಮಕ್ಕೆ ಇದೀಗ ಬಂಗಾರದ ಬೆಲೆ ಬಂದಿದೆ.
ಆಲಿಯಾ ಭಟ್ ಈದ್ ಅ ಮಮ್ಮ ಹೆಸರಿನ ಬಟ್ಟೆ ಬಿಜಿನೆಸ್ ಶುರುಮಾಡಿದ್ದಾರೆ. 2020ರಲ್ಲಿಯೇ ಆರಂಭವಾದ ಈ ಉದ್ಯಮ, ಆಫ್‌ಲೈನ್ ಮತ್ತು ಆನ್‌ಲೈನ್ ಎರಡರಲ್ಲೂ ಲಭ್ಯವಿದೆ. ಆನ್‌ಲೈನ್‌ನಲ್ಲಿ ಬುಕ್‌ಮಾಡಿ, ಆನ್‌ಲೈನ್ ಮೂಲಕವೇ ಆಯ್ಕೆ ಮಾಡಿದ ಬಟ್ಟೆ ನಿಮ್ಮ ಮನೆ ತಲುಪುತ್ತದೆ. ಮಕ್ಕಳ ಉಡುಗೆಯನ್ನಷ್ಟೇ ಇಲ್ಲಿ ಮಾರಾಟ ಮಾಡಲಾಗುತ್ತದೆ. ಇದೀಗ ಇದೇ ಆಲಿಯಾ ಭಟ್ ಉದ್ಯಮದ ಮೇಲೆ ರಿಲಯನ್ಸ್ ಕಣ್ಣು ಬಿದ್ದಿದೆ. ದೊಡ್ಡ ಮೊತ್ತಕ್ಕೆ ಈ ಉದ್ಯಮವನ್ನು ಖರೀದಿಸಲು ರಿಲಯನ್ಸ್ ನಿರ್ಧರಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಈಗಾಗಲೇ ರಿಯಲನ್ಸ್ ಬಳಿ ಬಟ್ಟೆಗೆ ಸಂಬಂಧಿಸಿದ ಸಾಕಷ್ಟು ಬ್ರಾಂಡ್‌ಗಳಿವೆ. ಇದೀಗ ಆ ಬತ್ತಳಿಕೆಗೆ ಆಲಿಯಾ ಭಟ್ ಈದ್ ಅ ಮಮ್ಮ ಬ್ರಾಂಡ್ ಸಹ ಇನ್ನೇನು ಶೀಘ್ರದಲ್ಲಿ ಸೇರ್ಪಡೆಗೊಳ್ಳಲಿದೆ ಎಂದೇ ಹೇಳಲಾಗುತ್ತಿದೆ. ಎರಡೂ ಕಡೆಯಿಂದಲೂ ಮಾತುಕತೆ ಅಂತಿಮ ಘಟ್ಟಕ್ಕೆ ಬಂದಿದ್ದು, ಅಧಿಕೃತ ಸ್ವೀಕಾರ ಒಂದೇ ಬಾಕಿ ಉಳಿದಿದೆ. ಹೀಗೆ ಸಿನಿಮಾದಲ್ಲಿ ಸ್ಟಾರ್ ನಟಿಯಾಗಿ, ಅಲ್ಲಿಯೂ ಕೋಟಿ ಕೋಟಿ ಸಂಭಾವನೆ ಪಡೆಯುವ ಆಲಿಯಾ, ಉದ್ಯಮದಲ್ಲಿಯೂ ನೂರಾರು ಕೋಟಿಯ ಲಾಭ ನೀಡುತ್ತಿದ್ದಾರೆ.
ಆಲಿಯಾ ರೀತಿ ಯೋಚಿಸಬೇಕಿದೆ.. ಇಲ್ಲದಿದ್ದರೆ ಸಮಯ ಸರಿಯಬಹುದು
ಆಲಿಯಾ ಉದ್ಯಮದಲ್ಲಿ ಹೀಗೆ ಮುಂದೆ ಸಾಗಿದ ಪರಿ ಕಂಡು ರಂಗಸ್ವಾಮಿ ಮೂಕನಹಳ್ಳಿ ಎಂಬುವವರು ಸುದೀರ್ಘ ಬರಹವೊಂದನ್ನು ಫೇಸ್‌ಬುಕ್ ವಾಲ್‌ಗೆ ಅಂಟಿಸಿದ್ದಾರೆ. ಹೀಗಿದೆ ಅವರ ಬರಹ.
"ಜಗತ್ತಿನ ಹಣಕಾಸು ಸಮಸ್ಯೆಗೆ ಉತ್ತರವಿರುವುದು ಉದ್ಯಮಶೀಲತೆಯಲ್ಲಿ ಎನ್ನುವುದರ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ. ಮುಂದಿನ 8/10 ವರ್ಷದಲ್ಲಿ ವ್ಯವಹಾರಿಕ ಪ್ರಪಂಚಕ್ಕೆ ಕಾಲಿಡಲಿರುವ ಮಕ್ಕಳಿಗೆ ಇಂದು ನೀವು ಯಾವ ಶಿಕ್ಷಣ ನೀಡಬೇಕು? ನೀಡುತ್ತಿದ್ದೀರಿ? ಎನ್ನುವುದು ಬಹಳ ಮುಖ್ಯ. ಏಕೆಂದರೆ ಸಮಯ ಎನ್ನುವುದು ಬಹಳ ವೇಗದಲ್ಲಿ ಸರಿದು ಹೋಗುತ್ತದೆ. ಸದ್ದಿಲ್ಲದೇ ನಮ್ಮ ಮಕ್ಕಳು ಅದ್ಯಾವ ಗಳಿಗೆಯಲ್ಲೂ 25/28/30ರ ವಯಸ್ಸಿಗೆ ಬಂದು ಬಿಡುತ್ತಾರೆ. ಬದುಕಿಗೆ 'ಅರ್ಥ' ವನ್ನು ಕಂಡುಕೊಳ್ಳದೆ, ಸಮಯವೂ ಸರಿದು ಹೋದರೆ, ನಾವೇನು? ನಮ್ಮ ಬದುಕಿನ ಉದ್ದೇಶವೇನು? ಇತ್ಯಾದಿ ಭೂತಪ್ಪಗಳು ಅವರನ್ನು ಕಾಡಲು ಶುರು ಮಾಡುತ್ತದೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಬೇಕಾಗುವ ಸಮಯಕ್ಕೂ ಇಂದು ಅರ್ಥ ಬೇಕೇ ಬೇಕು. ಇಂದು ನಾವು ನೀಡುತ್ತಿರುವ ಫಾರ್ಮಲ್ ಎಜುಕೇಶನ್ ಕವಡೆ ಕಾಸಿಗೆ ಕಿಮ್ಮತ್ತಿಲ್ಲದಂತ್ತಾಗುತ್ತದೆ. ನಾಳೆ ಹೀಗಾಗುತ್ತದೆ ಎನ್ನುವ ಅಲ್ಪಸ್ವಲ್ಪ ತಿಳಿವಳಿಕೆ ಇರುವ ಪೋಷಕರು ಕೂಡ ಅನ್ಯ ಮಾರ್ಗವಿಲ್ಲದೆ ಅವವೇ ಶಾಲೆ , ಕಾಲೇಜುಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಸಮಯ ಕಳೆಯುವ ಆಟಕ್ಕೆ ಮಕ್ಕಳನ್ನು ಸಜ್ಜು ಮಾಡುತ್ತಿದ್ದೇವೆಯೇ ಹೊರತು , ಸದ್ವಿನಿಯೋಗಕಕ್ಕಲ್ಲ . ಹೌದ ಅಲ್ವಾ ? ಉತ್ತರ ಕಂಡುಕೊಳ್ಳಬೇಕಾಗಿದೆ.
ನಾವೆಲ್ಲಾ ಟ್ರೊಲ್ ಮಾಡಿ ನಗುವ ಅಲಿಯಾ ಭಟ್ ಎನ್ನುವಾಕೆ ಈದ್ ಅ ಮಮ್ಮ (Ed-a-Mamma) ಎನ್ನುವ ಮಕ್ಕಳ ಫ್ಯಾಷನ್ ಬ್ರಾಂಡ್ ಬಟ್ಟೆಗಳ ಆನ್ಲೈನ್ ಮಾರಾಟ ಮಳಿಗೆಯ ಒಡತಿ. ಕೆಲವು ರಿಟೇಲ್ ಶಾಪ್‌ಗಳ ಮೂಲಕ ಆಫ್ ಲೈನ್ ಕೂಡ ಮಾರಾಟ ನಡೆಯುತ್ತಿದೆ. ನಿಮಗೆ ತಿಳಿದಿರಲಿ ಆಕೆ ಇದಕ್ಕೆ ಹೆಚ್ಚಿನ ಜನರನ್ನು ಕೆಲಸಕ್ಕೆ ತೆಗೆದುಕೊಂಡಿಲ್ಲ. ಬಟ್ಟೆಯ ಡಿಸೈನ್ ಮಾಡಿ ವೆಬ್‌ನಲ್ಲಿ ಹಾಕುತ್ತಾರೆ. ಆರ್ಡರ್ ಬಂದ ನಂತರ ಪ್ರಿಂಟ್ ಆನ್ ಡಿಮ್ಯಾಂಡ್ ಕೆಲಸ ಶುರುವಾಗುತ್ತದೆ. ನಾಲ್ಕೈದು ಅಪ್ಲಿಕೇಷನ್‌ಗಳು, ಸ್ಟಾರ್ಟ್ ಅಪ್ ಗಳು, ಒಂದು ಡಿಸೈನ್ ಮಾಡುತ್ತದೆ, ಒಂದು ಪ್ರಿಂಟ್, ಇನ್ನೊಂದು ಮಾರ್ಕೆಟಿಂಗ್, ಇನ್ನೊಂದು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತದೆ. ಆಕೆ ಮಾಡಿದ್ದು ಇವರನ್ನ ಬಳಸಿಕೊಂಡು ತನಗೆ ಬೇಕಾದ ಏಕೋ ಸಿಸ್ಟಮ್ ಸೃಷ್ಟಿಸಿಕೊಂಡದ್ದು! ಇವತ್ತಿಗೆ ಹೆಚ್ಚೆಂದರೆ 150 ಕೋಟಿ ಬೆಲೆಬಾಳುವ ಈ ಬ್ರ್ಯಾಂಡ್‌ಅನ್ನು ರಿಲಯನ್ಸ್ 300/350 ಕೋಟಿ ರೂಪಾಯಿಗೆ ಖರೀದಿ ಮಾಡಲು ಎಲ್ಲಾ ಮಾತುಕತೆ ಮುಗಿಸಿದೆ. ಇನ್ನೊಂದು ವಾರದಲ್ಲಿ ಒಪ್ಪಂದಕ್ಕೆ ಸಹಿ ಬೀಳುತ್ತದೆ. ಅಲಿಯಾ ಅದರ ಅರ್ಧಕ್ಕೂ ಕಡಿಮೆ ದುಡ್ಡಿನಲ್ಲಿ ಇನ್ನೊಂದು ಉದ್ಯಮ ತೆಗೆಯುತ್ತಾಳೆ ಖಂಡಿತ !
ಅವರಿವರ ದೂಷಣೆ ಮಾಡುತ್ತಾ, ಟ್ರೋಲ್ ಮಾಡುತ್ತಾ ಸಮಯ ಕಳೆದವರು, ಇನ್ನೂ ಅದೇ ಕೆಲಸದಲ್ಲಿ ಮಗ್ನರು! ನಾವು ಜಗತ್ತಿಗೆ ಉದಾಹರಣೆಯಾಗಿ ಬದುಕಲು ಸಾಧ್ಯವಾದರೆ ಒಳಿತು, ಇಲ್ಲವಾದಲ್ಲಿ ನಮ್ಮ ಮಕ್ಕಳಿಗೆ ಮೇಲ್ಪಂಕ್ತಿ ಹಾಕಿಕೊಡುವ ಮಟ್ಟಕ್ಕಾದರೂ ಬದುಕುವುದು ಬೇಡವೇ? ಎಚ್ಚರ, 5/10 ವರ್ಷದಲ್ಲಿ ಪೂರ್ಣ ಪ್ರಮಾಣದಲ್ಲಿ ಬದಲಾಗುವ ಜಗತ್ತಿಗೆ ಸಿದ್ಧವಾಗಬೇಕು, ಮಕ್ಕಳನ್ನ ಸಿದ್ಧಗೊಳಿಸಬೇಕು.