Amitabh Bachchan Birthday: ಬಿಗ್ ಬಿ ಲವ್ ಸ್ಟೋರಿ; ಅಮಿತಾಬ್ ಬಚ್ಚನ್ನಿಂದ ದೂರ ಇರುವಂತೆ ಜಯಾ ಭಾದುರಿಗೆ ಎಚ್ಚರಿಸಿದ್ದ ರಾಜೇಶ್ ಖನ್ನಾ
Amitabh Bachchan Birthday: ಹೃಷಿಕೇಶ್ ಮುಖರ್ಜಿ ಅವರ 'ಗುಡ್ಡಿ' ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಹಾಗೂ ಜಯಾ ಭಾದುರಿ ಮೊದಲ ಬಾರಿಗೆ ನಟಿಸಿದರು. 1973ರಲ್ಲಿ ಈ ಜೋಡಿ ಮನೆಯವರ ಒಪ್ಪಿಗೆ ಪಡೆದು ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆದರು.
Amitabh Bachchan Birthday: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಇಂದು 81ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಹಿರಿಯ ನಟನಿಗೆ ಅಭಿಮಾನಿಗಳು, ಸ್ನೇಹಿತರು ಶುಭಾಶಯ ಕೋರುತ್ತಿದ್ದಾರೆ. ಕುಟುಂಬದೊಂದಿಗೆ ಅಮಿತಾಬ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 81ನೇ ವಯಸ್ಸಿನಲ್ಲೂ ಅಮಿತಾಬ್ ಬಚ್ಚನ್ ಇತ್ತೀಚೆಗೆ ಚಿತ್ರರಂಗಕ್ಕೆ ಬಂದ ಯುವಕನಂತೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾ, ಜಾಹೀರಾತುಗಳಲ್ಲಿ ನಟಿಸುತ್ತಿರುವುದಲ್ಲದೆ ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮದ ನಿರೂಪಣೆ ಕೂಡಾ ಮಾಡುತ್ತಿದ್ದಾರೆ.
ಅಮಿತಾಬ್ ಜಯಾ ಭಾದುರಿ ಲವ್ ಸ್ಟೋರಿ
ಅಮಿತಾಬ್ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ಅವರದ್ದು ಸುಖೀ ಕುಟುಂಬ. ಪ್ರೀತಿಸುವ ಪತ್ನಿ, ಮುದ್ದಾದ ಮಕ್ಕಳು, ಸೊಸೆ ಮೊಮ್ಕಕ್ಕಳು. ಅಮಿತಾಬ್ ಬಚ್ಚನ್ ಅವರದ್ದು ಲವ್ ಮ್ಯಾರೇಜ್. ರೇಖಾ ಹಾಗೂ ಅಮಿತಾಬ್ ಪ್ರೀತಿಸುತ್ತಿದ್ದರು ಎಂಬ ಸುದ್ದಿ ಇಂದಿಗೂ ಇದೆ. ಆದರೆ ಅಮಿತಾಬ್ ರೇಖಾ ಅವರನ್ನು ಪ್ರೀತಿಸಲಿಲ್ಲ ಎಂದು ಆತ್ಮೀಯರು ಹೇಳುತ್ತಾರೆ. ಅಮಿತಾಬ್ ಬಚ್ಚನ್ ಚಿತ್ರರಂಗಕ್ಕೆ ಬರುವ ಮುನ್ನ ಜಯಾ ಭಾದುರಿ ಬಾಲಿವುಡ್ನಲ್ಲಿ ಸ್ಟಾರ್ಡಮ್ ಗಳಿಸಿದ್ದರು. ಇಬ್ಬರೂ ಮೊದಲ ಬಾರಿ ಭೇಟಿ ಆಗಿದ್ದು ಎಲ್ಲಿ? ಲವ್ ಆಗಿದ್ದು ಹೇಗೆ? ಆತುರಾತುರವಾಗಿ ಮದುವೆ ಆಗಿದ್ದು ಏಕೆ? ಅನ್ನೋ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ.
ಜಯಾ ಭಾದುರಿ ಅಮಿತಾಬ್ ಅವರನ್ನು ಮೊದಲ ಬಾರಿಗೆ ನೋಡಿದ್ದು ಪುಣೆ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ. ಅದು 1970ರ ದಶಕ. ಫಿಲ್ಮ್ ಮೇಕರ್ ಕೆ ಅಬ್ಬಾಸ್ ಹಾಗೂ ಸಂಗಡಿಗರೊಂದಿಗೆ ಅಮಿತಾಬ್ ಬಚ್ಚನ್ ಇನ್ಸ್ಟಿಟ್ಯೂಟ್ಗೆ ಹೋದಾಗ ಮೊದಲು ಜಯಾ ಗಮನ ಸೆಳೆದದ್ದು ಅವರ ಹೈಟ್. ಆ ಸಮಯದಲ್ಲಿ ಬಾಲಿವುಡ್ನಲ್ಲಿ ನೆಲೆಯೂರಲು ಅಮಿತಾಬ್ ಬಚ್ಚನ್ ಬಹಳ ಕಷ್ಟ ಪಡುತ್ತಿದ್ದರು. ಹಾಗೇ ಅಮಿತಾಬ್ ಬಚ್ಚನ್ ಜಯಾ ಭಾದುರಿಯನ್ನು ಮೊದಲು ಗಮಿನಿಸಿದ್ದು ಹಿಂದಿ ಮ್ಯಾಗಜಿನ್ ಮುಖಪುಟದಲ್ಲಿ. ಅವರ ಫೋಟೋ ನೋಡುತ್ತಿದ್ದಂತೆ ಅಮಿತಾಬ್ ಆಕೆಯ ಅಂದಕ್ಕೆ ಸೋತು ಹೋಗಿದ್ದರಂತೆ. ನಂತರ ಇಬ್ಬರೂ ಮುಖಾಮುಖಿ ಆಗಿದ್ದರೇ ಹೊರತು, ಎಂದಿಗೂ ಮಾತನಾಡಿರಲಿಲ್ಲ.
ಅಮಿತಾಬ್ ಬಚ್ಚನ್ನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದ ರಾಜೇಶ್ ಖನ್ನಾ
ಹೃಷಿಕೇಶ್ ಮುಖರ್ಜಿ ಅವರ 'ಗುಡ್ಡಿ' ಸಿನಿಮಾ ಮೂಲಕ ಈ ಜೋಡಿ ಮೊದಲ ಬಾರಿಗೆ ತೆರೆ ಮೇಲೆ ಜೋಡಿಯಾದರು. ಇಬ್ಬರಿಗೂ ಆಕರ್ಷಣೆ ಇತ್ತಾದರೂ ಯಾರೂ ತಮ್ಮ ಮನಸ್ಸಿನಲ್ಲಿದ್ದ ಭಾವನೆಯನ್ನು ವ್ಯಕ್ತಪಡಿಸಿರಲಿಲ್ಲ. ಅಮಿತಾಬ್, ಹರಿವಂಶರಾಯ್ ಬಚ್ಚನ್ ಅವರ ಮಗ ಎಂದು ತಿಳಿಯುತ್ತಿದ್ದಂತೆ ಜಯಾ ಭಾದುರಿ ಅಮಿತಾಬ್ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚಾಗಿದೆ. ಮುಂದೆ 'ಏಕ್ ನಜರ್' ಸಿನಿಮಾ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಆ ಸಮಯದಲ್ಲಿ ನಟ ರಾಜೇಶ್ ಖನ್ನಾ ಹಾಗೂ ಜಯಾ ಭಾದುರಿ ಬಹಳ ಕ್ಲೋಸ್ ಫ್ರೆಂಡ್ಸ್. ಇವರಿಬ್ಬರ ಆತ್ಮೀಯತೆ ನೋಡಿ, ಆತನಿಂದ ದೂರ ಇರುವುದಾಗಿ ಎಚ್ಚರಿಕೆ ನೀಡಿದ್ದರಂತೆ. ಆದರೆ ಇದ್ಯಾವುದಕ್ಕೂ ಜಯಾ ಜಗ್ಗಲಿಲ್ಲ.
1973ರಲ್ಲಿ 'ಜಂಜೀರ್' ಸಿನಿಮಾ ಹಿಟ್ ಆಗುತ್ತಿದ್ದಂತೆ ಅಮಿತಾಬ್ ಬಚ್ಚನ್, ತಮ್ಮ ಸ್ನೇಹಿತರೊಂದಿಗೆ ಲಂಡನ್ಗೆ ಹೋಗಲು ನಿರ್ಧರಿಸಿದ್ದಾರೆ. ಆದರೆ ಮದುವೆ ಆಗದೆ ಯಾವುದೇ ಹುಡುಗಿಯೊಂದಿಗೆ ಹೊರಗೆ ಹೋಗದಂತೆ ಅಮಿತಾಬ್ ಬಚ್ಚನ್ ನಿರಾಕರಿಸಿದ್ದಾರೆ. ಆಗಲೇ ಅಮಿತಾಬ್ ಬಚ್ಚನ್ ಒಂದು ನಿರ್ಧಾರಕ್ಕೆ ಬಂದು ಜಯಾ ಭಾದುರಿ ಪ್ರಪೋಸ್ ಮಾಡಿದ್ದಾರೆ. ಜಯಾ ಕೂಡಾ ಒಪ್ಪಿದ್ಧಾರೆ, ಇಬ್ಬರ ಮನೆಯವರೂ ಇವರ ಪ್ರೀತಿಗೆ ಒಪ್ಪಿದ್ದಾರೆ. ಜೂನ್ 3, 1973 ಅಮಿತಾಬ್ - ಜಯಾ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟರು. ಅದೇ ದಿನ ಇಬ್ಬರೂ ಲಂಡನ್ ತೆರಳಿದ್ದಾರೆ.
ಸಿನಿಮಾಗಳ ವಿಚಾರಕ್ಕೆ ಬರುವುದಾದರೆ ಅಮಿತಾಬ್ ಬಚ್ಚನ್ ಗಣಪತ್, ಉಮೇಶ್ ಕ್ರಾನಿಕಲ್ಸ್, ಕಲ್ಕಿ 2898 ಎಡಿ, ಬಟರ್ಫ್ಲೈ ಸೇರಿದಂತೆ ಹೆಸರಿಡದ ಮತ್ತೊಂದು ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ.