Amitabh Bachchan: ಇನ್‌ಸ್ಟಾದಲ್ಲಿ ಸೊಸೆ ಐಶ್ವರ್ಯಾರನ್ನು ಅನ್‌ಫಾಲೋ ಮಾಡಿದ ಬೆನ್ನಲ್ಲೇ ಅಮಿತಾಬ್ ಕಡೆಯಿಂದ ಬಂತು ಹೊಸ ಪೋಸ್ಟ್
ಬಚ್ಚನ್ ಕುಟುಂಬದಲ್ಲಿ ಯಾವುದೂ ಸರಿಯಿಲ್ವಾ? ಹೀಗೊಂದು ಪ್ರಶ್ನೆ ಕಳೆದ ಕೆಲ ದಿನಗಳಿಂದಲ ಕೇಳಿ ಬರುತ್ತಲೇ ಇತ್ತು. ಹೀಗಿರುವಾಗಲೇ ಅಮಿತಾಬ್ ಬಚ್ಚನ್ ಸಹ ಇದೇ ವಿಷಯಕ್ಕೆ ಸುಳಿವೊಂದನ್ನು ನೀಡಿದ್ದಾರೆ.
Amitabh Bachchan: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಭಾರತೀಯ ಸಿನಿಮಾದ ದಂತಕತೆ. ಒಂದು ಕಾಲದಲ್ಲಿ ಇಡೀ ಬಾಲಿವುಡ್ ಚಿತ್ರೋದ್ಯಮವನ್ನೇ ಆಳಿದ ಆಂಗ್ರಿ ಯಂಗ್ ಮ್ಯಾನ್. ಅಪ್ಪನ ಆ ಸಿನಿಮಾ ಗತ್ತನ್ನು ಮಗ ಅಭಿಷೇಕ್ ಬಚ್ಚನ್ ಮುಂದುವರಿಸಿದ್ದರಾದರೂ, ಅಪ್ಪನ ಖದರ್ ಉಳಿಸಿಕೊಂಡಿಲ್ಲ. ಹೀಗಿರುವಾಗಲೇ ಐಶ್ವರ್ಯಾ ರೈ ಅವರ ಜತೆ ಅಭಿಷೇಕ್ ವಿವಾಹ ನೆರವೇರುತ್ತದೆ. ಆರಾಧ್ಯಾ ಹೆಸರಿನ ಮಗಳೂ ಈ ದಂಪತಿಗಿದೆ. ಹೀಗೆ ಸಾಗುವ ಈ ದಾಂಪತ್ಯದಲ್ಲಿ ಸದ್ಯ ಬಿರುಗಾಳಿ ಬೀಸಿದೆಯೇ?
ಹೀಗೊಂದು ಪ್ರಶ್ನೆ ಉದ್ಭವವಾಗಿಯೇ ಹಲವು ದಿನಗಳಾಗಿವೆ. ಆಗಾಗ ಅಭಿಷೇಕ್- ಐಶ್ವರ್ಯಾ ನಡುವೆ ಯಾವುದೂ ಸರಿಯಿಲ್ಲ ಎಂಬ ವದಂತಿಗಳೂ ಹರಿದಾಡುತ್ತಿವೆ. ಇದೀಗ ಅದಕ್ಕೆ ಮತ್ತಷ್ಟು ಪುಷ್ಠಿ ನೀಡಿತ್ತು ಅಮಿತಾಬ್ ಬಚ್ಚನ್ ಅವರಲ್ಲಿನ ಈ ಬದಲಾವಣೆ. ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಂನಲ್ಲಿನಲ್ಲಿ ಸೊಸೆ ಐಶ್ವರ್ಯಾ ಅವರನ್ನು ಅನ್‌ಫಾಲೋ ಮಾಡಿದ್ದರು. ಈ ಸುದ್ದಿ ಕಾಳ್ಗಿಚ್ಚಿನಂತೆ ಪಸರಿಸಿದ್ದಲ್ಲದೆ, ಬಚ್ಚನ್ ಕುಟುಂಬದಲ್ಲಿ ವೈಮನಸ್ಸು ಮನೆ ಮಾಡಿದೆ ಎಂದೇ ಹೇಳಲಾಗುತ್ತಿದೆ.
2007ರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಬೇರೆಯಾಗಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿವೆ. ಈ ನಡುವೆ ಅಮಿತಾಬ್ ಜತೆಗೂ ನಿತ್ಯ ಜಗಳ, ಮನಸ್ಥಾಪಗಳಾಗುತ್ತಿದೆ ಎಂದೇ ಹೇಳಲಾಗುತ್ತಿದೆ. ಮನೆಯ ವಾತಾವರಣ ಸರಿಯಿಲ್ಲ ಎನ್ನಲಾಗುತ್ತಿದೆ. ಏತನ್ಮಧ್ಯೆ ಅಮಿತಾಬ್ ಸೊಸೆ ಐಶ್ವರ್ಯಾ ಅವರನ್ನು ಟ್ವಿಟರ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ.
ಬಿಗ್ ಬಿ ಹೊಸ ಟ್ವಿಟ್
ಸೋಷಿಯಲ್ ಮೀಡಿಯಾದಲ್ಲಿ ಅಮಿತಾಬ್ ಮತ್ತು ಐಶ್ವರ್ಯಾ ನಡುವೆ ಯಾವುದೂ ಸರಿಯಿಲ್ಲ ಎಂಬ ಪುಕಾರ ಹಬ್ಬುತ್ತಿದ್ದಂತೆ, ಅಮಿತಾಬ್ ಬಚ್ಚನ್ ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿದ್ದಾರೆ. X ವೇದಿಕೆಯಲ್ಲಿ "ಎಲ್ಲವೂ ಹೇಳಲಾಗಿದೆ, ಎಲ್ಲವನ್ನೂ ಮಾಡಲಾಗಿದೆ.. ಮಾಡುವುದನ್ನು ಮಾಡಲಾಗಿದೆ" ಎಂಬರ್ಥದಲ್ಲಿ ಹೇಳಿಕೊಂಡಿದ್ದಾರೆ. ಅಮಿತಾಬ್ ಮಾತಿನ ಅರ್ಥ ಏನಿರಬಹುದೆಂದೇ ಎಲ್ಲರೂ ತಲೆಕೆಡಿಸಿಕೊಳ್ಳುತ್ತಿದ್ದಾರೆ.
ಬಿಗ್ ಬಿಗೆ 36 ಮಿಲಿಯನ್ ಫಾಲೋವರ್ಸ್
ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಬಿಗ್ ಬಿ ಅವರ ಇನ್‌ಸ್ಟಾಗ್ರಾಂ ಹ್ಯಾಂಡಲ್‌ನಲ್ಲಿ 36.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಇದಲ್ಲದೇ ಅಮಿತಾಬ್ 74 ಮಂದಿಯನ್ನು ಫಾಲೋ ಮಾಡುತ್ತಿದ್ದಾರೆ. ವಿಶೇಷವೆಂದರೆ ಈ 74 ಮಂದಿಯಲ್ಲಿ ಅಭಿಷೇಕ್ ಬಚ್ಚನ್ ಸೇರಿದಂತೆ ಇಂಡಸ್ಟ್ರಿಯ ಎಲ್ಲ ಗಣ್ಯರು ಇದ್ದಾರೆ. ಆದರೆ ಅವರ ಸೊಸೆ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಹೆಸರು ಈ ಪಟ್ಟಿಯಲ್ಲಿಲ್ಲ.
'ದಿ ಆರ್ಚೀಸ್' ಶೋನಲ್ಲಿ ಬಚ್ಚನ್ ಕುಟುಂಬ
ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್ ಮೊಮ್ಮಗ ಅಗಸ್ತ್ಯ ನಂದಾ ಅವರ ಮೊದಲ ಚಿತ್ರ ‘ದಿ ಆರ್ಚೀಸ್’ ಪ್ರೀಮಿಯಮ್ ನಡೆಯಿತು. ಈ ಸಮಯದಲ್ಲಿ ಅಮಿತಾಬ್ ಬಚ್ಚನ್ ಅವರ ಇಡೀ ಕುಟುಂಬವು ಹಾಜರಿ ಹಾಕಿತ್ತು. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಜಯಾ ಬಚ್ಚನ್, ಆರಾಧ್ಯ ಬಚ್ಚನ್, ಅಜಿತಾಭ್ ಬಚ್ಚನ್, ನಿಖಿಲ್ ನಂದಾ ಮತ್ತು ಶ್ವೇತಾ ಬಚ್ಚನ್ ಮುಂತಾದ ಅನೇಕರು ಒಟ್ಟಿಗೆ ಕಾಣಿಸಿಕೊಂಡರು.