ಅನಿಮಲ್ ಟ್ರೈಲರ್ ಬಿಡುಗಡೆ: ರಣಬೀರ್ ಕಪೂರ್, ಬಾಬಿ ಡಿಯೋಲ್ ರಕ್ತಸಿಕ್ತ ಅಧ್ಯಾಯ, ಕೌರ್ಯದ ರಗಡ್ ಚಿತ್ರಣ; ರಶ್ಮಿಕಾ ಮಂದಣ್ಣ ಪಾತ್ರವೇನು
Animal trailer: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ, ರಣಬೀರ್ ಕಪೂರ್, ಅನಿಲ್ ಕಪೂರ್, ರಶ್ಮಿಕಾ ಮಂದಣ್ಣ, ಬಾಬಿ ಡಿಯೋಲ್ ನಟನೆಯ ಅನಿಮಲ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಹೇಗಿದೆ ಅನಿಮಲ್ ಟ್ರೈಲರ್? ಬನ್ನಿ ನೋಡೋಣ.
Animal trailer: ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ನೋಡಿ ಸಾಕಷ್ಟು ಜನರಿಗೆ ಅಚ್ಚರಿಯಾಗಿದೆ. ಪ್ರೀತಿ ಪ್ರೇಮ ಮತ್ತು ಕೊಂಚ ಹೊಡೆದಾಟ ನಿರೀಕ್ಷಿಸಿದ್ದವರಿಗೆ ಇಲ್ಲಿ ರಗಡ್ ರಕ್ತಪಾತ, ಪಾತಕಲೋಕ, ರಕ್ತಸಿಕ್ತ ಅಧ್ಯಾಯ ಮತ್ತು ಅಪ್ಪ-ಮಗನ ಬಾಂಧವ್ಯ ಕಾಣಿಸಿದೆ. ಅನಿಮಲ್ ಚಿತ್ರತಂಡವು ಇಂದು ಟ್ರೈಲರ್ ಬಿಡುಗಡೆ ಮಾಡಿದೆ. ಈ ಟ್ರೈಲರ್ ರೋಮಾಂಚನಕಾರಿ ಸಾಹಸ, ರಕ್ತಸಿಕ್ತ ಪಾತಕ ಲೋಕದ ಅನಾವರಣ ಮಾಡಿದೆ. ಇದೇ ಟ್ರೈಲರ್‌ನಲ್ಲಿ ರಣಬೀರ್ ಮತ್ತು ಬಾಬಿ ಡಿಯೋಲ್ ನಡುವಿನ ಹೋಯ್ದಾಟವೂ ಕಾಣಿಸುತ್ತದೆ. ಕೆಲವು ಕಡೆ ರಶ್ಮಿಕಾ ಮಂದಣ್ಣ ಕೂಡ ಟ್ರೈಲರ್‌ನಲ್ಲಿದ್ದು, ಈ ಪಾತಕ ಜಗತ್ತಿನ ನಡುವಿನ ಹೋರಾಟದಲ್ಲಿ ಸಿಲುಕಿಕೊಂಡಂತೆ ಕಾಣಿಸುತ್ತಾರೆ.
ಅನಿಮಲ್ ಟ್ರೈಲರ್ ವೀಕ್ಷಿಸಿ
ರಣಬೀರ್ ಕಪೂರ್ ಈ ಚಿತ್ರದಲ್ಲಿ ರಕ್ತಸಿಕ್ತ ಅವತಾರದಲ್ಲಿ ಕಾಣಿಸಿದ್ದಾರೆ. ಯಾವುದೇ ಕರುಣೆ ಇಲ್ಲದೆ ಚಾಕುವಿನಿಂದ, ಗರಗಸದಿಂದ, ಮೆಷಿನ್ ಗನ್‌ನಿಂದ ಸಾಯಿಸುತ್ತ ಸಾಗುತ್ತಾರೆ. ಟೀಸರ್‌ನಲ್ಲಿ ಈಗಾಗಲೇ ಇಂತಹ ಪಾತ್ರದ ಸುಳಿವು ಇತ್ತು. ಟ್ರೈಲರ್‌ನಲ್ಲಿ ರಣಬೀರ್ ಕಪೂರ್‌ನ ನಿಜ ಮುಖದ ಅನಾವರಣವಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ರಣಬೀರ್ ಸಂಗಾತಿಯಾಗಿ ಜತೆಯಾಗಿದ್ದಾರೆ. ಒಂದು ದೃಶ್ಯದಲ್ಲಿ ರಶ್ಮಿಕಾ ಮಂದಣ್ಣ ಮಾತು ಒಪ್ಪದ ರಣಬೀರ್ ಕಪೂರ್ ರಶ್ಮಿಕಾರ ಕೊರಳಿಗೆ ಕೈ ಹಾಕುವ ದೃಶ್ಯವೂ ಇದೆ. ಇಂತಹ ಒರಟನೊಂದಿಗೆ ಜೀವನ ಸಾಗಿಸುವ, ಹೋರಾಟಗಳ ಜತೆ ಜತೆಯಾಗಿರುವ ಸಹಧರ್ಮಿಣಿಯಂತೆ ರಶ್ಮಿಕಾ ಮಂದಣ್ಣ ಕಾಣಿಸಿದ್ದಾರೆ.
ಡಿಸೆಂಬರ್ 1ರಂದು ಅನಿಮಲ್ ಸಿನಿಮಾ ಬಿಡುಗಡೆ
ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಸಿನಿಮಾ ಪ್ಯಾನ್ ಇಂಡಿಯನ್ ಮಟ್ಟದಲ್ಲಿ ಡಿಸೆಂಬರ್ 1 ರಂದು ರಿಲೀಸ್ ಆಗಲಿದೆ. ಸಂದೀಪ್ ವಂಗಾ ಅವರು ಈ ಚಿತ್ರದಲ್ಲಿ ಅಪ್ಪ-ಮಗನ ಬಾಂಧವ್ಯದ ಹಿನ್ನೆಲೆಯನ್ನು ಇಟ್ಟುಕೊಂಡು ಕ್ರೈಂ ಡ್ರಾಮಾ ಥ್ರಿಲ್ಲರ್ ಸಿನಿಮಾ ನಿರ್ಮಿಸುತ್ತಿದ್ದಾರೆ. ರಣಬೀರ್ ಕಪೂರ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಇದ್ದಾರೆ. ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಬಾಬಿ ಡಿಯೋಲ್ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸುಮಾರು ನೂರು ಕೋಟಿ ಬಜೆಟ್‌ನಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವ ಈ ಸಿನಿಮಾ ಮುಂದಿನ ವಾರ ಬಿಡುಗಡೆಯಾಗಲಿದೆ. ಇದನ್ನೂ ಓದಿ: Kaiva Song Lyrics: ಕೈವ ಸಿನಿಮಾದ ಸಂಕ್ರಾಂತಿ ಸಂಜೇಲಿ ಹಚ್ಚಿಟ್ಟ ದೀಪ ಹಾಡಿನ ಲಿರಿಕ್ಸ್ ಇಲ್ಲಿದೆ ನೋಡಿ; ಓ ದೇವರೆ ನೀನಿದ್ದರೆ ನೋಡು
ಪ್ಯಾನ್ ಇಂಡಿಯಾ ಸಿನಿಮಾ
ಅನಿಮಲ್ ಪ್ಯಾನ್ ಇಂಡಿಯಾ ಸಿನಿಮಾ. ಕನ್ನಡದಲ್ಲೂ ಬಿಡುಗಡೆಯಾಗಲಿದೆ. ಸಂದೀಪ್ ವಂಗ ಅವರು ಅರ್ಜುನ್ ರೆಡ್ಡಿ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದ್ದರು ಅವರು ಈ ಚಿತ್ರವನ್ನು ಹಿಂದಿಯಲ್ಲಿ ಕಬೀರ್ ಸಿಂಗ್ ಹೆಸರಿನೊಂದಿಗೆ ರಿಮೇಕ್ ಮಾಡಲಾಗಿತ್ತು. ಇದಾದ ನಾಲ್ಕು ವರ್ಷಗಳ ಬಳಿಕ ಸಂದೀಪ್ ವಂಗಾ ನಿರ್ದೇಶನದ ಚಿತ್ರ ಇದಾಗಿದೆ. ಅನಿಮಲ್ ನಂತರ ಸಂದೀಪ್ ವಂಗ ಪ್ರಭಾಸ್ ಜೊತೆ ಸ್ಪಿರಿಟ್ ಸಿನಿಮಾ ಮಾಡಲಿದ್ದಾರೆ. ಈ ಚಿತ್ರದ ಟ್ರೈಲರ್ ನೋಡಿದರೆ ಅನಿಮಲ್ ಬ್ಲಾಕ್‌ಬಸ್ಟರ್ ಸಿನಿಮಾವಾಗುವ ಎಲ್ಲಾ ಸೂಚನೆಗಳಿವೆ.
ಅನಿಮಲ್ ಗ್ಯಾಂಗ್‌ಸ್ಟಾರ್ ಸಿನಿಮಾ. ಇಲ್ಲಿ ರಣಬೀರ್ ಕಪೂರ್ ಸಾಹಸ ದೃಶ್ಯಗಳೊಂದಿಗೆ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ. ಟ್ರೈಲರ್‌ನಲ್ಲಿ ರಕ್ತಸಿಕ್ತ ಅಧ್ಯಾಯ ಹೆಚ್ಚು ಕಂಡಿದೆ. ಪ್ರೀತಿಪ್ರೇಮ ಸಂಬಂಧಗಳ ಕುರಿತು ಚಿತ್ರ ಮಾತನಾಡಲಿದೆ. ಅಪ್ಪ ಮಗನ ಸಂಬಂಧದ ಕುರಿತೂ ಈ ಸಿನಿಮಾ ಬೆಳಕು ಚೆಲ್ಲಲಿದೆ. ಅನಿಲ್ ಕಪೂರ್ ಅವರು ರಣಬೀರ್ ಕಪೂರ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದ್ದಾರೆ.