Sridevi death: ಬಾಲಿವುಡ್ ನಟಿ ಶ್ರೀದೇವಿ ಆಕಸ್ಮಿಕ ಸಾವಿನ ಕುರಿತು ಮೌನ ಮುರಿದ ಬೋನಿ ಕಪೂರ್; ಲೋ ಬಿಪಿ ಇದ್ರೂ ಕಠಿಣ ಡಯೆಟ್ ಮಾಡ್ತಿದ್ರಂತೆ
Boney Kapoor and Sridevi: ಬಾಲಿವುಡ್ನ ಖ್ಯಾತ ನಟಿ ದಿ. ಶ್ರೀದೇವಿ ಸಾವಿನ ಕುರಿತು ಅವರ ಪತಿ ಬೋನಿ ಕಪೂರ್ ಬಾಯ್ಬಿಟ್ಟಿದ್ದಾರೆ .ಇಂಡಿಯನ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ನನ್ನ ಪತ್ನಿಯದ್ದು ಸಹಜ ಸಾವಲ್ಲ, ಅದೊಂದು ಆಕಸ್ಮಿಕ, ಅವರ ಸಾವಿಗೆ ವಿಪರೀತ ಡಯೆಟ್ ಕೂಡ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
ಬೆಂಗಳೂರು: ಇದೇ ಮೊದಲ ಬಾರಿಗೆ ತನ್ನ ಪತ್ನಿ, ಜನಪ್ರಿಯ ಬಾಲಿವುಡ್ ನಟಿ ಶ್ರೀದೇವಿ ಸಾವಿನ ಕುರಿತು ಬೋನಿ ಕಪೂರ್ ಬಾಯ್ಬಿಟ್ಟಿದ್ದಾರೆ. ಆಕೆಯ ಸಾವಿನ ಹಿಂದೆ ತನ್ನ ಪಾತ್ರ ಇರುವ ಕುರಿತ ವದಂತಿಗಳಿಗೆ ಸ್ಪಷ್ಟನೆ ನೀಡುವ ಪ್ರಯತ್ನವನ್ನು ಮಾಡಿದ್ದಾರೆ. 2018ರಲ್ಲಿ ದುಬೈ ಹೋಟೆಲ್ನ ಬಾತ್ಟಬ್ನಲ್ಲಿ ಮುಳುಗಿ ನಟಿ ಶ್ರೀದೇವಿ ಮೃತಪಟ್ಟಿದ್ದರು. ಇವರ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿತ್ತು. "ನನ್ನ ಪತ್ನಿ ಶ್ರೀದೇವಿ ಸಾವು ಸಹಜವಲ್ಲ, ಅದೊಂದು ಆಕಸ್ಮಿಕ" ಎಂದು ಬೋನಿ ಕಪೂರ್ ಹೇಳಿದ್ದಾರೆ.
ಶ್ರೀದೇವಿ ಸಾವಿನ ತನಿಖೆಗೆ ದುಬೈ ಪೊಲೀಸರಿಗೆ ಸಂಪೂರ್ಣವಾಗಿ ಸಹಕರಿಸಿದ್ದೇನೆ. ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಪರೀಕ್ಷೆಗಳನ್ನು ಎದುರಿಸಿದ್ದೇನೆ. ಆದರೆ, ಈ ಸಂದರ್ಭದಲ್ಲಿ ಭಾರತೀಯ ಮಾಧ್ಯಮಗಳು ಪ್ರಕರಣದ ಮೇಲೆ ಸಾಕಷ್ಟು ಒತ್ತಡ ಹಾಕಿದ್ದವು ಎಂದು ಅವರು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳು, ಇದು ಸಹಜ ಸಾವೇ, ಕೊಲೆಯೇ, ಬೋನಿ ಕಪೂರ್ ಈ ಕೊಲೆಯ ಹಿಂದೆ ಇದ್ದಾರೆಯೇ ಇತ್ಯಾದಿ ಪ್ರಶ್ನೆಗಳನ್ನು ಮಾಡಿತ್ತು.
ಶ್ರೀದೇವಿ ಸಾವಿನ ಕುರಿತು ಬೋನಿ ಕಪೂರ್ ಪ್ರತಿಕ್ರಿಯೆ
ಶ್ರೀದೇವಿ ಸಾವಿಗೆ ಸಂಬಂಧಪಟ್ಟಂತೆ ಬೋನಿ ಕಪೂರ್ ಮೇಲಿರುವ ಆರೋಪಗಳ ಕುರಿತ ಮಾಧ್ಯಮ ಪ್ರಶ್ನೆಗೆ ಅವರು ಈ ರೀತಿ ವಿವರಿಸಿದ್ದಾರೆ. " ಅದು ಆಕಸ್ಮಿಕ ಸಾವು. ನಾನು ಅದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಿರಲು ನಿರ್ಧರಿಸಿದೆ. ಏಕೆಂದರೆ ನಾನು ಸುಮಾರು 24 ಅಥವಾ 48 ಗಂಟೆಗಳ ಕಾಲ ನನ್ನನ್ನು ತನಿಖೆ ಮತ್ತು ವಿಚಾರಣೆಗೆ ಒಳಪಡಿಸಿದಾಗ ಅದರ ಬಗ್ಗೆ ಮಾತನಾಡಿದ್ದೇನೆ. ಹೀಗಾಗಿ ದುಬೈ ಪೊಲೀಸರಿಂದ ಕ್ಲೀನ್ ಚಿಟ್ ಸಿಕ್ಕಿದೆ. ವಾಸ್ತವವಾಗಿ, ಭಾರತೀಯ ಮಾಧ್ಯಮಗಳಿಂದ ಹೆಚ್ಚಿನ ಒತ್ತಡವಿರುವುದರಿಂದ ನಾನು ಈ ಕಠಿಣ ತನಿಖೆಗೆ ಒಳಗಾಗಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಎಲ್ಲಾ ಬಗೆಯ ಪರೀಕ್ಷೆಗಳಿಗೆ ಒಳಗಾದೆ. ಬಳಿಕ ಇದು ನೀರಿನಲ್ಲಿ ಮುಳುಗಿ ಸಂಭವಿಸಿದ ಆಕಸ್ಮಿಕ ಸಾವು ಎನ್ನುವುದು ರುಜುವಾಯಿತು" ಎಂದು ಅವರು ಹೇಳಿದ್ದಾರೆ.
ಶ್ರೀ ದೇವಿ ಡಯೆಟ್ ಕುರಿತು ಬೋನಿ ಕಪೂರ್ ಮಾತು
ಬೋನಿ ಕಪೂರ್ ಅವರು ಶ್ರೀದೇವಿಯ ಆರೋಗ್ಯದ ಕುರಿತೂ ವಿವರ ನೀಡಿದ್ದಾರೆ. ಅವರ ಆರೋಗ್ಯವು ಡಯೆಟ್ನಿಂದ ಪ್ರಭಾವತಿವಾಗಿದೆ. ಅವರ ಕುಟುಂಬದ ವೈದ್ಯರು ಶ್ರೀದೇವಿಯ ಕಟ್ಟುನಿಟ್ಟಿನ ಪಥ್ಯ ಅನುಸರಿಸಲು ಸಲಹೆ ನೀಡಿದ್ದಾರೆ. "ಅವಳು ಆಗಾಗ ಹಸಿವಿನಿಂದ ಬಳಲುತ್ತಿದ್ದಳು, ಆದರೆ ತಾನು ಚೆನ್ನಾಗಿ ಕಾಣಬೇಕೆಂದು ಬಯಸಿದ್ದಳು" ಎಂದು ಅವರು ಹೇಳಿದ್ದಾರೆ.
"ಶ್ರೀದೇವಿ ಅವರು ಉತ್ತಮ ದೇಹ ಆಕಾರ ಖಚಿತಪಡಿಸಿಕೊಳ್ಳಲು ಸದಾ ಗಮನ ನೀಡುತ್ತಿದ್ದಳು. ಸಿನಿಮಾ ತೆರೆಯ ಮೇಲೆ ಉತ್ತಮವಾಗಿ ಕಾಣಿಸಲು ಪ್ರಯತ್ನಿಸುತ್ತಿದ್ದಳು. ಹಿಂದೊಮ್ಮೆ ತನ್ನ ತೂಕವನ್ನು 46-47 ಕೆಜಿಗೆ ಇಳಿಸಿಕೊಂಡಿದ್ದಳು" ಎಂದು ಹೇಳಿದ ಬೋನಿ ಕಪೂರ್ ಇಂಗ್ಲಿಷ್ ವಿಂಗ್ಲಿಷ್ನಂತಹ ಚಿತ್ರದ ಉದಾಹರಣೆಯನ್ನು ನೀಡಿದ್ದಾರೆ. ಶ್ರೀದೇವಿಯು ಉಪ್ಪು ಸೇವನೆ ತಪ್ಪಿಸುತ್ತಿದ್ದರು ಎಂಬ ಮಾಹಿತಿಯನ್ನೂ ಬೋನಿ ಕಪೂರ್ ನೀಡಿದ್ದಾರೆ.
ತೀವ್ರ ಡಯೆಟ್, ಕಡಿಮೆ ರಕ್ತದೊತ್ತಡ, ಉಪ್ಪು ಸೇವನೆಯಿಂದ ದೂರ
"ನನ್ನನ್ನು ಮದುವೆಯಾದ ಸಮಯದಿಂದ ಗಮನಿಸುತ್ತಿದ್ದೇನೆ. ತುಂಬಾ ಡಯೆಟ್ ಮಾಡುತ್ತಿದ್ದರು. ವೈದ್ಯರು ಆಕೆಯ ಲೋ ಬಿಪಿ ವಿಚಾರವನ್ನು ಹೇಳುತ್ತಲೇ ಬಂದಿದ್ದರು. ಉಪ್ಪು ಕಡಿಮೆ ಮಾಡುವ ತೀವ್ರ ಆಹಾರಕ್ರಮ ಅನುಸರಿಸಬೇಡಿ ಎಂದು ವೈದ್ಯರು ಸಲಹೆ ನೀಡಿದ್ದರು" ಎಂದು ಬೋನಿ ಕಪೂರ್ ನೆನಪಿಸಿಕೊಂಡಿದ್ದಾರೆ. "ಇದು ದುರದೃಷ್ಟಕರ ಘಟನೆ. ಶ್ರೀದೇವಿ ತೀರಿಕೊಂಡಾಗ ನಾಗಾರ್ಜುನ ಸಾಂತ್ವಾನ ಹೇಳಲು ಬಂದಿದ್ದರು. ಒಂದು ಚಲನಚಿತ್ರದ ಸಮಯದಲ್ಲಿ ತೀವ್ರ ಡಯೆಟ್ ಮಾಡಿದ್ದನ್ನು ಮತ್ತು ಬಾತ್ರೂಂನಲ್ಲಿ ತಲೆತಿರುಗಿ ಬಿದ್ದು ಹಲ್ಲು ಮುರಿದುಕೊಂಡಿದ್ದ ವಿಚಾರವನ್ನು ನಾಗಾರ್ಜುನ ನನಗೆ ಹೇಳಿದ್ದರು" ಎಂದು ಅವರು ನೆನಪಿಸಿಕೊಂಡಿದ್ದಾರೆ.
ಶ್ರೀದೇವಿಯನ್ನು ಮದುವೆಯಾದ ಬಳಿಕ ಅವರು ಕಟ್ಟುನಿಟ್ಟಾದ ಆಹಾರಕ್ರಮವನ್ನು ಅನುಸರಿಸುವ ಬಗ್ಗೆ ನನಗೆ ತಿಳಿದಿತ್ತು ಎಂದು ಬೋನಿ ಹೇಳಿಕೊಂಡಿದ್ದಾರೆ. ಉಪ್ಪು ಸಹಿತ ಆಹಾರ ಸೇವನೆ ಮಾಡುವಂತೆ ವೈದ್ಯರು ಹೇಳಿದ್ದರು. ಆದರೆ, ದುರದೃಷ್ಟವಶಾತ್ ಶ್ರೀದೇವಿ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ" ಎಂದು ಅವರು ಹೇಳಿದ್ದಾರೆ. 2018 ರಲ್ಲಿ ದುಬೈ ಹೋಟೆಲ್ನ ಬಾತ್ಟಬ್ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟಿದ್ದರು. ದಂಪತಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತ ದುಬೈಗೆ ಬಂದಿದ್ದರು. ನಟ ಬೋನಿ ಕಪೂರ್ ಮತ್ತು ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರನ್ನು ಅಗಲಿದ್ದರು.