ಬಾಲಿವುಡ್ ಗಲ್ಲಾಪೆಟ್ಟಿಗೆ ದೋಚಿ ದಾಖಲೆ ಬರೆದ ಸ್ತ್ರೀ 2 ಸಿನಿಮಾ; ಶಾರುಖ್ ಖಾನ್ ಅಭಿನಯದ ಜವಾನ್ ಕೂಡ ಹಿಂದೆ ಬಿತ್ತು
ಬಾಲಿವುಡ್ ಸಿನಿಮಾ ಸ್ತ್ರೀ 2 ಹೊಸ ದಾಖಲೆಗಳನ್ನು ಬರೆಯಲಾರಂಭಿಸಿದ್ದು, ಗಲ್ಲಾಪೆಟ್ಟಿಗೆಯನ್ನೂ ದೋಚಿದೆ. ಸಿನಿಮಾ ಪ್ರಿಯರ ಮನಸೂರೆಗೊಂಡಿರುವ ಚಿತ್ರ ಎಬ್ಬಿಸಿದ ಧೂಳಿಗೆ ಜವಾನ್ (ಹಿಂದಿ) ಸಿನಿಮಾದ ಸಾರ್ವಕಾಲಿಕ ಗರಿಷ್ಠ ಗಳಿಕೆಯ ದಾಖಲೆಯೂ ಮರೆಯಾಗಿದೆ.
ಭಾರತದಲ್ಲಿ ಬಾಲಿವುಡ್‌ನ ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿ ಭರ್ಜರಿಯಾಗಿ ಗಲ್ಲಾಪೆಟ್ಟಿಗೆ ತುಂಬಿಸಿಕೊಂಡು ಸ್ತ್ರೀ 2 ಸಿನಿಮಾ ದಾಖಲೆ ಬರೆದಿದೆ. ಬಾಲಿವುಡ್ ಬಾದ್‌ಷಾ ಖ್ಯಾತಿಯ ಶಾರೂಖ್ ಖಾನ್ ಅಭಿಯನದ ಜವಾನ್ ಹಿಂದಿ ಸಿನಿಮಾದ ಸಾರ್ವಕಾಲಿಕ ಗಳಿಕೆಯ ದಾಖಲೆಯನ್ನೂ ಗಾಳಿಗೆ ತೂರಿ ಸ್ತ್ರೀ2 ಸಿನಿಮಾ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಹೌದು, ರಾಜ್‌ಕುಮಾರ್ ರಾವ್, ಶ್ರದ್ಧಾ ಕಪೂರ್, ಅಭಿಷೇಕ್ ಬ್ಯಾನರ್ಜಿ ಮತ್ತು ಅಪರಶಕ್ತಿ ಖುರಾನಾ ನಟಿಸಿರುವ ಸ್ತ್ರೀ 2 ಸಿನಿಮಾ ಈಗಾಗಲೇ ಬಾಲಿವುಡ್ ಬಾದ್‌ಷಾ ಖ್ಯಾತಿಯ ಶಾರೂಖ್ ಖಾನ್ ಅಭಿಯನದ ಜವಾನ್ ಹಿಂದಿ ಸಿನಿಮಾದ ಸಾರ್ವಕಾಲಿಕ ಗಳಿಕೆಯ ದಾಖಲೆಯನ್ನು ಮುರಿದಿದೆ.
ಸ್ತ್ರೀ 2 ಸಿನಿಮಾ ನಿರ್ಮಾಣ ಕಂಪನಿಗಳ ಪೈಕಿ ಒಂದಾದ ಮ್ಯಾಡಾಕ್ ಫಿಲಮ್ಸ್ ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, ಹಿಂದೂಸ್ತಾನದ ಸಾರ್ವಕಾಲಿಕ ಸರ್ವಶ್ರೇಷ್ಠ ನಂಬರ್ 1 ಹಿಂದಿ ಸಿನಿಮಾ ಎಂಬುದನ್ನು ಸ್ತ್ರೀ 2 ಮಾಡಿ ತೋರಿಸಿತು!,. ಈ ಇತಿಹಾಸ ನಿರ್ಮಿಸುವಲ್ಲಿ ನಮ್ಮ ಜೊತೆಗೆ ಕೈ ಜೋಡಿಸಿದ ಎಲ್ಲ ಅಭಿಮಾನಿಗಳಿಗೂ ಧನ್ಯವಾದಗಳು. ಸ್ತ್ರೀ 2 ಇನ್ನೂ ಚಿತ್ರಮಂದಿರಗಳಲ್ಲಿ ಓಡುತ್ತಿದ್ದು, ಇನ್ನೂ ಒಂದಷ್ಟು ಹೊಸ ದಾಖಲೆಗಳನ್ನು ಬರೆಯಲಿದೆ" ಎಂದು ಹೇಳಿಕೊಂಡಿದೆ.
ಸ್ತ್ರೀ 2 ಸಿನಿಮಾದ ಈ ವರೆಗಿನ ಗಳಿಕೆ ಎಷ್ಟು
ಶ್ರದ್ಧಾ ಕಪೂರ್ ಮತ್ತು ರಾಜ್‌ಕುಮಾರ್ ರಾವ್ ಅಭಿನಯದ ಸ್ತ್ರೀ 2 ಭಾರತದ ಬಾಕ್ಸ್ ಆಫೀಸ್‌ನಲ್ಲಿ ಮಂಗಳವಾರ (ಸೆಪ್ಟೆಂಬರ್ 17)ದ ತನಕ 586 ಕೋಟಿ ರೂಪಾಯಿ ಗಳಿಸಿದೆ ಎಂದು ಟ್ರೇಡ್ ಅನಲಿಸ್ಟ್ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಸಿನಿಮಾದ ಪೋಸ್ಟರ್ ಶೇರ್ ಮಾಡಿರುವ ತರಣ್ ಆದರ್ಶ್, “ಸ್ತ್ರೀ 2 ಹೊಸ ಇತಿಹಾಸ ಬರೆದಿದೆ. ಸಾರ್ವಕಾಲಿಕ ಗರಿಷ್ಠ ಗಳಿಕೆಯ ಹಿಂದಿ ಸಿನಿಮಾ ಎಂಬ ಇತಿಹಾಸ ನಿರ್ಮಿಸಿದೆ. ಇದು ಜವಾನ್ ಸಿನಿಮಾ (ಹಿಂದಿ ಭಾಷೆ)ದ ಸಾರ್ವಕಾಲಿಕ ಗಳಿಕೆಯನ್ನು ಮೀರಿ ಮುನ್ನಡೆದಿದೆ. ಮುಂದಿನ ಹಂತ 600 ಕೋಟಿ ಕ್ಲಬ್ ರಚಿಸುವುದು. ಬಿಡುಗಡೆಯಾದ ಶುಕ್ರವಾರ 3.6 ಕೋಟಿ ರೂ., ಶನಿವಾರ 5.55 ಕೋಟಿ ರೂ., ಭಾನುವಾರ 6.85 ಕೋಟಿ ರೂಪಾಯಿ., ಸೋಮವಾರ 3.17 ಕೋಟಿ ರೂಪಾಯಿ, ಮಂಗಳವಾರ 2.65 ಕೋಟಿ ರೂಪಾಯಿ. ಒಟ್ಟು 586 ಕೋಟಿ” ಎಂದು ಲೆಕ್ಕ ತೋರಿಸಿದ್ದಾರೆ. ಗೊಂದಲ ಮೂಡಿಸುವ ಲೆಕ್ಕವಾದರೂ ಸಿನಿಮಾ ಪ್ರಿಯರ ಗಮನಸೆಳೆದಿರುವುದು ಸತ್ಯ.
ಜವಾನ್ ಸಿನಿಮಾದ ಗಳಿಕೆ ಎಷ್ಟು
ಭಾರತದಲ್ಲಿ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆ ಕಂಡ ಜವಾನ್ ಸಿನಿಮಾದ ಒಟ್ಟು ಕಲೆಕ್ಷನ್ 640.25 ಕೋಟಿ ರೂಪಾಯಿ. ಹಿಂದಿ ಭಾಷೆಯ ಸಿನಿಮಾದ ಸಾರ್ವಕಾಲಿಕ ಕಲೆಕ್ಷನ್ 582.31 ಕೋಟಿ ರೂಪಾಯಿ ಎಂದು Sacnilk.com ವರದಿ ಮಾಡಿದೆ. ಇದು ಕೂಡ ಅಧಿಕೃತ ಲೆಕ್ಕ ಎಂದು ಹೇಳಲಾಗದು.
ಜವಾನ್ (2023) ಅಟ್ಲಿ ನಿರ್ದೇಶನದಲ್ಲಿ ತೆರೆ ಕಂಡ ಆಕ್ಷನ್ ಥ್ರಿಲ್ಲರ್ ಸಿನಿಮಾ. ಇದರಲ್ಲಿ ಶಾರುಖ್ ಖಾನ್ ತಂದೆ ಮತ್ತು ಮಗನಾಗಿ ದ್ವಿಪಾತ್ರಗಳಲ್ಲಿ ನಟಿಸಿದ್ದಾರೆ. ನಯನತಾರಾ, ವಿಜಯ್ ಸೇತುಪತಿ, ದೀಪಿಕಾ ಪಡುಕೋಣೆ, ಪ್ರಿಯಾಮಣಿ ಮತ್ತು ಸನ್ಯಾ ಮಲ್ಹೋತ್ರಾ ಕೂಡ ಚಿತ್ರದಲ್ಲಿದ್ದಾರೆ.
ಇನ್ನು ಸ್ತ್ರೀ 2 ಸಿನಿಮಾ ಬಗ್ಗೆ ಹೇಳುವುದಾದರೆ, ಅಮರ್ ಕೌಶಿಕ್ ನಿರ್ದೇಶನದ ಚಿತ್ರ. ವರುಣ್ ಧವನ್ ಮತ್ತು ಅಕ್ಷಯ್ ಕುಮಾರ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಕಂತಿನ ಸಿನಿಮಾ ಸ್ತ್ರೀ (2018) ಈಗಾಗಲೇ ಭಾರಿ ಹಿಟ್ ಆಗಿದ್ದು, ಮುಂದಿನ ಭಾಗಕ್ಕಾಗಿ ಹೆಚ್ಚಿನ ನಿರೀಕ್ಷೆ ಹುಟ್ಟುಹಾಕಿತ್ತು. ಈಗ ಸ್ತ್ರೀ 2 ಆ ನಿರೀಕ್ಷೆಗಳನ್ನು ಮೀರಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ ಮತ್ತು ಅಪರಶಕ್ತಿ ಖುರಾನಾ ಕೂಡ ನಟಿಸಿದ್ದಾರೆ.