ಸುಪ್ರೀಂಕೋರ್ಟ್‌ನಲ್ಲಿ ಲಾಪತಾ ಲೇಡಿಸ್ ಪ್ರದರ್ಶನ, ನ್ಯಾಯಾಲಯಕ್ಕೆ ತಾರಾ ಮೆರುಗು ನೀಡಿದ ಅಮಿರ್ ಖಾನ್, ಕಾಲ್ತುಳಿತವಾಗದಿರಲಿ ಎಂದ ಸಿಜಐ
Laapataa Ladies: ಸುಪ್ರೀಂಕೋರ್ಟ್ ಸ್ಥಾಪನೆಯಾಗಿ 75 ವರ್ಷವಾಗಿರುವ ಸಂದರ್ಭದಲ್ಲಿ ಇಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಸಿನಿಮಾ ಪ್ರದರ್ಶನ ನಡೆಯಿತು. ಅಮಿರ್ ಖಾನ್, ಕಿರಣ್ ರಾವ್ ನ್ಯಾಯಮೂರ್ತಿಗಳ ಜತೆ ಇಂದು ಲಾಪತಾ ಲೇಡಿಸ್ ಸಿನಿಮಾ ವೀಕ್ಷಿಸಿದ್ದಾರೆ.
ಬೆಂಗಳೂರು: ಸುಪ್ರೀಂಕೋರ್ಟ್‌ನಲ್ಲಿ ಇಂದು ಅಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶನದ ಲಾಪತಾ ಲೇಡಿಸ್ ಸಿನಿಮಾ ಪ್ರದರ್ಶನಗೊಂಡಿದೆ. ಸಿನಿವಿಮರ್ಶಕರು ಮತ್ತು ಪ್ರೇಕ್ಷಕರಿಂದ ಸಕಾರಾತ್ಮಕ ವಿಮರ್ಶೆ ಪಡೆದ ಲಾಪತಾ ಲೇಡಿಸ್ ಸಿನಿಮಾವನ್ನು ನ್ಯಾಯಮೂರ್ತಿಗಳು ತಮ್ಮ ಕುಟುಂಬ ಸಮೇತ ವೀಕ್ಷಿಸಿದ್ದಾರೆ. ಅಮಿರ್ ಖಾನ್ ಪ್ರೊಡಕ್ಷನ್‌ನಡಿ ನಿರ್ಮಾಣ ಮಾಡಿರುವ ಈ ಕಾಮಿಡಿ ಡ್ರಾಮಾವು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿದೆ. ಆದರೆ, ಸುಪ್ರೀಂಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳೆಲ್ಲರೂ ಈ ಸಿನಿಮಾ ನೋಡುವ ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ.
ನ್ಯಾಯಾಲಯಕ್ಕೆ ತಾರಾ ಮೆರುಗು
ಸುಪ್ರೀಂಕೋರ್ಟ್‌ಗೆ ಆಗಮಿಸಿದ ಅಮಿರ್ ಖಾನ್ ದಂಪತಿಯನ್ನು ನ್ಯಾಯಮೂರ್ತಿ ಸ್ವಾಗತಿಸಿದರು. "ನನ್ನ ಕೋರ್ಟ್‌ನಲ್ಲಿ ಕಾಲ್ತುಳಿತ ಬೇಡ. ಭಾರತದ ಸರ್ವೋಚ್ಚ ನ್ಯಾಯಾಲಯಕ್ಕೆ ವಿಶೇಷ ಅತಿಥಿಯನ್ನು ನಾವು ಸ್ವಾಗತಿಸುತ್ತೇವೆ. ನೀವು ಯಾಕೆ ನ್ಯಾಯಾಲಯದ ಕಲಾಪವನ್ನು ವೀಕ್ಷಿಸಬಾರದು?. ಬನ್ನಿ ನಿಜ ಜೀವನದಲ್ಲಿ ಕೋರ್ಟ್ ಕಲಾಪ ನೋಡಿ. ಇಂದು ಈ ನ್ಯಾಯಾಲಯಕ್ಕೆ ತಾರಾ ಮೆರುಗು ಬಂದಿದೆ" ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ನ್ಯಾಯಾಲಯದ ಕಲಾಪವನ್ನೂ ಸುಮಾರು ಅರ್ಧ ಗಂಟೆ ವೀಕ್ಷಿಸಿದರು. "ಈ ಸಂದರ್ಭದಲ್ಲಿ ನನ್ನ ಸಿನಿಮಾ ಪ್ರದರ್ಶನಗೊಳ್ಳುವುದು ನನಗೆ ದೊರಕಿದ ಅತಿದೊಡ್ಡ ಗೌರವ" ಎಂದು ಕಿರಣ್ ರಾವ್ ಹೇಳಿದ್ದಾರೆ. ಸಂಜೆ 4.15 ಗಂಟೆಗೆ ಸಿನಿಮಾ ಪ್ರದರ್ಶನ ಆರಂಭವಾಗಿತ್ತು.
ಸುಪ್ರೀಂಕೋರ್ಟ್ ಸ್ಥಾಪನೆಯಾಗಿ 75 ವರ್ಷವಾಗಿರುವ ಸಂದರ್ಭದಲ್ಲಿ ಈ ಸಿನಿಮಾವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರದರ್ಶನ ಮಾಡಲಾಗಿದೆ. ಲಿಂಗ ಸಂವೇದನೆ ಹೊಂದಿರುವ ಈ ಸಿನಿಮಾದಲ್ಲಿ ರೈಲಿನಲ್ಲಿ ವಧು ಅದಲು ಬದಲಾಗುವ ಕಥೆಯಿದೆ. ಈ ಸಿನಿಮಾದ ನಿರ್ಮಾಪಕರಾದ ಅಮೀರ್ ಖಾನ್ ಮತ್ತು ಸಿನಿಮಾ ನಿರ್ದೇಶಕಿ ಕಿರಣ್ ರಾವ್ ಅವರು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಜತೆ ಸಿನಿಮಾ ವೀಕ್ಷಿಸಿದ್ದಾರೆ.
ಲಾಪತಾ ಲೇಡಿಸ್ 2023ರ ಸಿನಿಮಾ. ಇಬ್ಬರು ಮಧುಮಕ್ಕಳು ಅಚಾನಕಾಗಿ ರೈಲಲ್ಲಿ ಅದಲುಬದಲಾಗುತ್ತಾರೆ. ಅಂದರೆ, ರೈಲು ಇಳಿದು ಒಬ್ಬ ವರ ಬೇರೊಬ್ಬಳು ವಧುವನ್ನು ಕರೆದುಕೊಂಡು ಹೋಗುತ್ತಾನೆ. ರೈಲಿನಲ್ಲಿ ಗ್ರಾಮವೊಂದಕ್ಕೆ ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ಮುಖಕ್ಕೆ ಮುಖಗವಸು ಹಾಕಿಕೊಂಡಿರುವ ಈ ಇಬ್ಬರು ಹೆಣ್ಣು ಮಕ್ಕಳು ಪ್ರತ್ಯೇಕಗೊಳ್ಳುತ್ತಾರೆ. ಇಬ್ಬರು ಬೇರೆಬೇರೆ ಗ್ರಾಮಕ್ಕೆ ವಧುಗಳಾಗಿ ಹೋಗುತ್ತಾರೆ. ಈ ಸಿನಿಮಾವು ವೀಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಬಾಕ್ಸ್ ಆಫೀಸ್‌ನಲ್ಲಿ ಮೊದಲ ಕೆಲವು ದಿನ ಅತ್ಯುತ್ತಮವಾಗಿ ಪ್ರದರ್ಶನ ಕಾಣಲಿಲ್ಲ. ಆಮೇಲೆ ಈ ಸಿನಿಮಾ ಚೆನ್ನಾಗಿದೆ ಎಂಬ ಬಾಯ್ಮಾತಿನ ಪ್ರಚಾರದ ಮೂಲಕವೇ ಗಳಿಕೆ ಹೆಚ್ಚಿಸಿಕೊಂಡಿತ್ತು.
ಲಾಪತಾ ಲೇಡಿಸ್ ಸಿನಿಮಾಕ್ಕೆ ಕಿರಣ್ ರಾವ್ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್ ನಟ ಅಮಿರ್ ಖಾನ್ ಮತ್ತು ಜ್ಯೋತಿ ದೇಶ್‌ಪಾಂಡೆ ನಿರ್ಮಾಣ ಮಾಡಿದ್ದಾರೆ. ರವಿ ಕಿಶನ್ ಜೊತೆಗೆ ನಿತಾಂಶಿ ಗೋಯೆಲ್, ಪ್ರತಿಭಾ ರಂತ, ಸ್ಪರ್ಶ ಶ್ರೀವಾತ್ಸವ್ ಸೇರಿದಂತೆ ಅನೇಕ ಹೊಸ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕಥೆ ಮತ್ತು ಸಂಭಾಷಣೆಯನ್ನು ಸ್ನೇಹಾ ದೇಸಾಯಿ, ಒಂದಿಷ್ಟು ಸಂಭಾಷಣೆಯನ್ನು ದಿವ್ಯನಿಧಿ ಶರ್ಮಾ ಬರೆದಿದ್ದಾರೆ. ಈ ಚಲನಚಿತ್ರ ಟೊರೊಂಟೊ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.