ಕನ್ನಡ ಸುದ್ದಿ  /  Entertainment  /  Bollywood News Deepika Padukone Pregnant, Ranveer Singh Deepika Expecting Their First Child, Report Pcp

ದೀಪಿಕಾ ಪಡುಕೋಣೆ ಗರ್ಭಿಣಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ ರಣವೀರ್‌ ಸಿಂಗ್‌-ದೀಪಿಕಾ ಜೋಡಿ, ಈಗ ಇಷ್ಟು ತಿಂಗಳಂತೆ

Deepika Padukone pregnant: ಕರ್ನಾಟಕ ಮೂಲದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಗಳು ತಿಳಿಸಿವೆ. ವರದಿಗಳ ಪ್ರಕಾರ ದೀಪಿಕಾ ಪಡುಕೋಣೆಗೆ ಈಗ ಎರಡನೇ ಟ್ರೈಮಿಸ್ಟರ್‌ (ತ್ರೈಮಾಸಿಕ) ಅಂತೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Deepika Padukone pregnant: ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ
Deepika Padukone pregnant: ಮೊದಲ ಮಗುವಿನ ನಿರೀಕ್ಷೆಯಲ್ಲಿ ದೀಪಿಕಾ ಪಡುಕೋಣೆ

ಬೆಂಗಳೂರು: ಮಂಗಳೂರು ಮೂಲದ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಗರ್ಭಿಣಿ ಎಂದು ವರದಿಗಳು ತಿಳಿಸಿವೆ. ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾ ಪಡುಕೋಣೆ ಈಗ ಎರಡನೇ ತ್ರೈಮಾಸಿಕದಲ್ಲಿದ್ದಾರೆ. ಅಂದರೆ 13 ರಿಂದ 26 ವಾರಗಳ ನಡುವೆ ಇದ್ದಾರೆ. 4-6 ತಿಂಗಳ ನಡುವೆ ಇದ್ದಾರೆ. 77ನೇ ಬಿಎಎಫ್‌ಟಿ ರೆಡ್‌ ಕಾರ್ಪೆಟ್‌ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ದೀಪಿಕಾ ತಮ್ಮ ಪ್ರೆಗ್ನೆನ್ಸಿಯನ್ನು ಮರೆಮಾಚಿದ್ದಾರೆ ಎಂದು ವರದಿಗಳು ತಿಳಿಸಿವೆ.

ದೀಪಿಕಾ ಮತ್ತು ರಣವೀರ್‌ ಬಗ್ಗೆ

ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ನವೆಂಬರ್‌ 14, 2018ರಂದು ವಿವಾಹವಾದರು. ಸುಮಾರು 6 ವರ್ಷಗಳ ಕಾಲ ಡೇಟಿಂಗ್‌ ಮಾಡಿದ ಬಳಿಕ ಇಟಲಿಯ ಲೇಕ್‌ ಕಾಮೊದಲ್ಲಿ ವಿವಾಹವಾದರು. ಇವರಿಬ್ಬರು ಮೊದಲ ಬಾರಿಗೆ ಸಂಜಯ್‌ ಲೀಲಾ ಬನ್ಸಾಲಿಯವರ ರೋಮಾಂಟಿಕ್‌ ಸಿನಿಮಾ ಗೊಲಿಯಾನ್‌ ಕಿ ರಾಸ್‌ಲೀಲ್‌ ರಾಮ್‌ ಲೀಲಾ ಸಿನಿಮಾ ಸೆಟ್‌ನಲ್ಲಿ ಭೇಟಿಯಾದರು. ಇದಾದ ಬಳಿಕ ಇವರು ಬಾಜಿರಾವ್‌ ಮಸ್ತಾನಿ ಮತ್ತು ಪದ್ಮಾವತ್‌ ಸಿನಿಮಾದಲ್ಲಿ ಜತೆಯಾಗಿ ನಟಿಸಿದರು. ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಇವರಿಬ್ಬರಬು ಬೆಲ್ಜಿಯಂನಲ್ಲಿ ತಮ್ಮ ಐದನೇ ವಿವಾಹ ವಾರ್ಷಿಕೋತ್ಸವ ಆಚರಿಸಿದರು.

ಮಕ್ಕಳನ್ನು ಹೊಂದುವ ಬಗ್ಗೆ ದೀಪಿಕಾ ಮಾತು

ಈ ವರ್ಷ ಜನವರಿ ತಿಂಗಳಲ್ಲಿ ವೋಗ್ಯೂ ಸಿಂಗಾಪುರ್‌ ಜತೆ ದೀಪಿಕಾ ಪಡುಕೋಣೆ ಮಾತನಾಡುವಾಗ "ತಾಯಿಯಾಗುವ" ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕುರಿತು ಆಲೋಚಿಸುವಿರಾ? ಎಂಬ ಪ್ರಶ್ನೆಗೆ "ಖಂಡಿತಾ, ರಣವೀರ್‌ ಮತ್ತು ನಾನು ಮಕ್ಕಳನ್ನು ಇಷ್ಟಪಡುತ್ತೇವೆ. ನಮ್ಮ ಸ್ವಂತ ಕುಟುಂಬ ಆರಂಭಿಸುವ ದಿನದ ನಿರೀಕ್ಷೆಯಲ್ಲಿದ್ದೇವೆ" ಎಂದು ಅವರು ಹೇಳಿದ್ದಾರೆ.

ಇದೇ ಸಮಯದಲ್ಲಿ ತನ್ನ ಹೆತ್ತವರ ಕುರಿತೂ ದೀಪೀಕಾ ಪಡುಕೋಣೆ ಮಾತನಾಡಿದ್ದರು. "ನಾನು ನನ್ನ ಅತ್ತೆಯಂದಿರು, ಮಾವಂದಿರು, ಕುಟುಂಬದ ಸ್ನೇಹಿತರ ಜತೆ ಬೆಳೆದೆ. ನಾನು ಈಗಲೂ ತುಸು ಬದಲಾಗಿಲ್ಲ ಎಂದು ಹೇಳುವವರು ಇದ್ದಾರೆ. ಈ ಉದ್ಯಮದಲ್ಲಿ ಹಣ ಮತ್ತು ಸ್ಥಾನಮಾನ ಎಲ್ಲವನ್ನೂ ಬದಲಾಯಿಸುತ್ತದೆ. ಆದರೆ, ಮನೆಯಲ್ಲಿ ನನ್ನನ್ನು ಯಾರೂ ಸೆಲೆಬ್ರಿಟಿ ರೀತಿ ಉಪಚಾರ ಮಾಡೋದಿಲ್ಲ. ಮೊದಲಿಗೆ ನಾನು ನನ್ನ ಹೆತ್ತವರಿಗೆ ಮಗಳು, ಸಹೋದರಿಗೆ ಸಹೋದರಿ. ಇದನ್ನು ಬದಲಾಯಿಸಲು ಬಯಸುವುದಿಲ್ಲ. ನನ್ನ ಕುಟುಂಬ ನನ್ನನ್ನು ಈ ರೀತಿ ಬೆಳೆಸಿದೆ. ನಮ್ಮ ಕುಟುಂಬವೂ ಇದೇ ಮೌಲ್ಯವನ್ನು ಮುಂದುವರೆಸಬೇಕೆಂದು ರಣವೀರ್‌ ಬಯಸಿದ್ದಾರೆ" ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿನಿಮಾಗಳು

ದೀಪಿಕಾ ಪಡುಕೋಣೆ ಇತ್ತೀಚೆಗೆ ವಾಯುಪಡೆಯ ಸಾಹಸ ಕಥೆಯನ್ನು ಹೊಂದಿರುವ ಫೈಟರ್‌ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹೃತಿಕ್‌ ರೋಷಣ್‌ ಜತೆ ನಾಯಕಿಯಾಗಿ ನಟಿಸಿದ್ದರು. ಇದು ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ಸಿನಿಮಾ. ಇದರಲ್ಲಿ ಅನಿಲ್‌ ಕಪೂರ್‌, ಕರಣ್‌ ಸಿಂಗ್‌ ಗ್ರೋವರ್‌ ಮತ್ತು ಅಕ್ಷಯ್‌ ಓಬೆರಾಯ್‌ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಅವರ ಮುಂದಿನ ಸಿನಿಮಾ ಕಲ್ಕಿ 2898 ಎಡಿ. ಪ್ರಭಾಸ್‌ ಜತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ನಾಗ್‌ ಅಶ್ವಿನ್‌ ನಿರ್ದೇಶನದ ಈ ಸಿನಿಮಾದಲ್ಲಿ ಅಮಿತಾಬ್‌ ಬಚ್ಚನ್‌ ಕೂಡ ನಟಿಸುತ್ತಿದ್ದಾರೆ. 2024ರ ಮೇ 9 ಅಂದರೆ ಮುಂದಿನ ತಿಂಗಳಲ್ಲಿಯೇ ಕಲ್ಕಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ರಣವೀರ್‌ ಅವರು ರೋಹಿತ್‌ ಶೆಟ್ಟಿಯ ಪೊಲೀಸ್‌ ಡ್ರಾಮಾ ಸಿಂಗಾ ಎಗೈನ್‌ನಲ್ಲಿ ಸಿಂಬಾ ಆಗಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದೀಪಿಕಾ, ಅಜಯ್‌ ದೇವ್‌ಗನ್‌, ಅಕ್ಷಯ್‌ ಕುಮಾರ್‌, ಟೈಗರ್‌ ಶ್ರಾಫ್‌, ಅರ್ಜುನ್‌ ಕಪೂರ್‌ ಮತ್ತು ಕರೀನಾ ಕಪೂರ್‌ ಕೂಡ ನಟಿಸುತ್ತಿದ್ದಾರೆ. ಫರ್ಹಾನ್‌ ಅಕ್ತಾರ್‌ ನಿರ್ದೇಶನದ ಡಾನ್‌ 3ಯಲ್ಲಲಿಯೂ ರಣವೀರ್‌ ನಟಿಸಲಿದ್ದಾರೆ. ಈ ಸಿನಿಮಾ 2025ರಲ್ಲಿ ಬಿಡುಗಡೆಯಾಗಲಿದೆ.