ಹೇಮಾ ಮಾಲಿನಿ ಮಗಳ ದಾಂಪತ್ಯದಲ್ಲಿ ಬಿರುಕು; ವಿಚ್ಛೇದನದತ್ತ ಇಶಾ ಡಿಯೋಲ್-ಭರತ್ ತಖ್ತಾನಿ, ದಂಪತಿ ಜಂಟಿ ಹೇಳಿಕೆ ವೈರಲ್
Esha Deol Bharat Takhtani separation: ನಟಿ ಇಶಾ ಡಿಯೋಲ್ ಮತ್ತು ಉದ್ಯಮಿ ಭರತ್ ತಖ್ತಾನಿ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇವರಿಬ್ಬರು ಪರಸ್ಪರ ಸೌಹಾರ್ದಯುತವಾಗಿ ದೂರವಾಗಲು ನಿರ್ಧರಿಸಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇಶಾ ಡಿಯೋಲ್ ಅವರು ಬಾಲಿವುಡ್ ಸ್ಟಾರ್ ನಟ ಧರ್ಮೇಂದ್ರ ಮತ್ತು ಕನಸಿನ ಕನ್ಯೆ ಹೇಮಾ ಮಾಲಿನಿ ಮಗಳು.
ಬಾಲಿವುಡ್ ಸ್ಟಾರ್ ನಟ ಧರ್ಮೇಂದ್ರ ಮತ್ತು ಕನಸಿನ ಕನ್ಯೆ ಹೇಮಾ ಮಾಲಿನಿ ಮಗಳಾದ ಇಶಾ ಡಿಯೋಲ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ದಂಪತಿ ಪರಸ್ಪರ ಸೌಹಾರ್ದಯುತವಾಗಿ ದೂರವಾಗಲು ನಿರ್ಧರಿಸಿದ್ದಾರೆ. ಹನ್ನೆರಡು ವರ್ಷದ ದಾಂಪತ್ಯಕ್ಕೆ ಕೊನೆ ಹಾಡಲು ಇವರಿಬ್ಬರು ನಿರ್ಧರಿಸಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕನ್ನಡದಲ್ಲಿ ಕೇರ್ ಆಫ್ ಫುಟ್‌ಪಾತ್ 2ನಲ್ಲಿ ನಟಿಸಿರುವ ಇಶಾ ಡಿಯೋಲ್ ಹಿಂದಿಯಲ್ಲಿ ಧೂಮ್, ಕೇಕ್‌ವಾಕ್, ಶಾದಿ ನಂಬರ್ ಒನ್ ಸೇರಿದಂತೆ ಹತ್ತು ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.
ಇಶಾ ಡಿಯೋಲ್-ಭರತ್ ತಖ್ತಾನಿ ಜಂಟಿ ಹೇಳಿಕೆ
ನಟಿ ಇಶಾ ಡಿಯೋಲ್ ಮತ್ತು ಪತಿ, ಉದ್ಯಮಿ ಭರತ್ ತಖ್ತಾನಿ ಪ್ರತ್ಯೇಕಗೊಳ್ಳಲು ಮುಂದಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. "ನಮ್ಮ ವೈವಾಹಿಕ ಬಂಧ ಮುಗಿದಿದೆ" ಎಂದು ದೆಹಲಿ ಟೈಮ್ಸ್‌ಗೆ ಇವರಿಬ್ಬರು ಜಂಟಿ ಹೇಳಿಕೆ ನೀಡಿದ್ದಾರೆ. "ನಾವು ಪರಸ್ಪರ, ಸೌಹಾರ್ದಯುತವಾಗಿ ಬೇರ್ಪಡಲು ನಿರ್ಧರಿಸಿದ್ದೇವೆ. ನಮ್ಮ ಜೀವನದ ಈ ಬದಲಾವಣೆಯ ಸಂದರ್ಭದಲ್ಲಿ ನಮ್ಮ ಇಬ್ಬರು ಮಕ್ಕಳ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಮುಂದುವರೆಯಲಿದ್ದೇವೆ. ನಮ್ಮ ಗೌಪ್ಯತೆಯನ್ನು ಗೌರವಿಸುವಿರೆಂದು ನಂಬಿದ್ದೇವೆ" ಎಂದು ಜಂಟಿ ಹೇಳಿಕೆಯಲ್ಲಿ ಹೇಳಿದ್ದಾರೆ.
ನಟಿ ಇಶಾ ಡಿಯೋಲ್ ಮತ್ತು ಉದ್ಯಮಿ ಭರತ್ ತಖ್ತಾನಿ 2012 ರಲ್ಲಿ ವಿವಾಹವಾಗಿದ್ದರು. ಇವರ ವಿವಾಹ ಮುಂಬೈನ ಇಸ್ಕಾನ್ ಟೆಂಪಲ್‌ನಲ್ಲಿ ನಡೆದಿತ್ತು. 2017ರಲ್ಲಿ ಇವರಿಗೆ ಮೊದಲ ಮಗುವಾಗಿತ್ತ 2019ರಲ್ಲಿ ಇವರಿಗೆ ಎರಡನೇ ಮಗುವಾಗಿತ್ತು. ಇವರ ಮಕ್ಕಳ ಹೆಸರು. ರಾಧ್ಯ ಮತ್ತು ಮಿರಾಯಾ.
ಈ ವಿಚ್ಛೇದನ ವದಂತಿ ಕುರಿತು ಹೆಚ್ಚಿನ ವಿವರ ಪಡೆಯಲು ಹಿಂದೂಸ್ತಾನ್ ಟೈಮ್ಸ್ ಇಶಾ ಮತ್ತು ಅವರ ತಾಯಿ, ನಟಿ ಹೇಮಾ ಮಾಲಿನಿ ಸಂಪರ್ಕಿಸಲು ಯತ್ನಿಸಿದೆ. ಹೆಚ್ಚಿನ ವಿವರ ಲಭ್ಯವಾದ ಬಳಿಕ ಮಾಹಿತಿ ನೀಡಲಾಗುವುದು.
ಕನ್ನಡ ಚಿತ್ರದಲ್ಲೂ ನಟಿಸಿದ್ದರು ಇಶಾ ಡಿಯೋಲ್
ಕೇರ್ ಆಫ್ ಫುಟ್‌ಪಾತ್ 2 ಎಂಬ ಸಿನಿಮಾದಲ್ಲಿ ಇಶಾ ಡಿಯೋಲ್ ನಟಿಸಿದ್ದರು. ಇದು ಕಿಲ್ ದೆಮ್ ಯಂಗ್ ಎಂಬ ಹಿಂದಿ ಸಿನಿಮಾದ ಕನ್ನಡ ಆವೃತ್ತಿ. ಕನ್ನಡ ನಟ ಕಿಶನ್ ಶ್ರೀಕಾಂತ್ ಜತೆ ಈ ಚಿತ್ರದಲ್ಲಿ ನಟಿಸಿದ್ದರು.
ಇಶಾ ಡಿಯೋಲ್ ಸಿನಿಮಾಗಳು
2002ರಲ್ಲಿ ಕೋಯ್ ಮೇರೆ ದಿಲ್ ಸೇ ಪೋಚೆ, ನ ತುಮ್ ಜಾನೋ ಹಮ್, ಕ್ಯಾ ದಿಲ್ ನೇ ಕಹಾ ಚಿತ್ರಗಳಲ್ಲಿ ನಟಿಸಿದ್ದರು. 2003ರಲ್ಲಿ ಕುಚ್ ತೋ ಹೈ, ಚೂರಾ ಲಿಯಾ ಹೈ ತುಮ್ನೆ, ಎಲ್‌ಒಸಿ: ಕಾರಿಗಲ್ ಚಿತ್ರಗಳಲ್ಲಿ ನಟಿಸಿದ್ದರು. 2004ರಲ್ಲಿ ಆಯುತ ಇಜುಥು, ಯುವ, ಧೂಮ್ ಚಿತ್ರಗಳಲ್ಲಿ ನಟಿಸಿದ್ದರು. ಇದರ ಮುಂದಿನ ವರ್ಷಗಳಲ್ಲಿ ಇನ್‌ಸಾನ್, ಕಾಲ್, ಮೇಣ್ ಐಶಾ ಹೈ ಹೂನ್, ದೂಸ್, ನೋ ಎಂಟ್ರಿ ಶಾದಿ ನಂಬರ್ ಒನ್ ಚಿತ್ರಗಳಲ್ಲಿ ನಟಿಸಿದ್ದರು.
ಪ್ಯಾರೇ ಮೋಹನ್, ಅಂಖಿ, ಜಸ್ಟ್ ಮ್ಯಾರಿಡ್, ಡಾರ್ಲಿಂಗ್, ಕ್ಯಾಸ್, ಸಂಡೆ, ಮನಿ ಹೈ ತೋ ಹನಿ ಹೈ, ಒನ್ ಟು ತ್ರಿ, ಹೈಜಾಕ್, ಟೆಲ್ ಮಿ ಓ ಖುದಾ, ಕಿಲ್ ದೆಮ್ ಯುಂಗ್, ಕೇಕ್ ವಾಕ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೋಡಿಸ್ ಎಕ್ಸ್ 2, ರುದ್ರಾ: ದಿ ಎಡ್ಜ್ ಆಫ್ ಡಾರ್ಕ್‌ನೆಸ್ಟ್, ಹಂಟರ್ ತೂತೆಗಾ ನಹಿ ತೋಡೆಗಾ ಮುಂದಾದ ಟೆಲಿವಿಷನ್ ಶೋಗಳಲ್ಲಿ ನಟಿಸಿದ್ದಾರೆ.
ಇಶಾ ಡಿಯೋಲ್ ಪಡೆದ ಪ್ರಶಸ್ತಿಗಳು
ಬಾಲಿವುಡ್ ಮೂವಿ ಅವಾರ್ಡ್, 48ನೇ ಫಿಲ್ಮ್‌ಫೇರ್ ಅವಾರ್ಡ್, ಸ್ಕ್ರೀನ್ ಅವಾರ್ಡ್, ಝೀ ಸಿನಿ ಅವಾರ್ಡ್, 4ನೇ ಐಐಎಫ್‌ಎ ಅವಾರ್ಡ್, 8ನೇ ಐಐಎಫ್‌ಎ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಇಶಾ ಡಿಯೋಲ್ ಪಡೆದಿದ್ದಾರೆ.