Emergency OTT: ಸದ್ದಿಲ್ಲದೆ ಒಟಿಟಿಗೆ ಆಗಮಿಸಿದ ಕಂಗನಾ ರಣಾವತ್ ನಟನೆಯ ಎಮರ್ಜೆನ್ಸಿ; ಹೋಳಿ ಹಬ್ಬಕ್ಕೆ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಕಥೆ
ಎಮರ್ಜೆನ್ಸಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ: ಕಂಗನಾ ರಣಾವತ್ ನಿರ್ದೇಶನ ಮತ್ತು ನಟನೆಯ ಎಮರ್ಜೆನ್ಸಿ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಹೋಳಿ ಹಬ್ಬದ ಸಮಯದಲ್ಲಿ ಸದ್ದಿಲ್ಲದೆ ಒಟಿಟಿಗೆ ಆಗಮಿಸಿದ ಈ ಸಿನಿಮಾವು ಭಾರತದ 1975ರ ಕಾಲದ ತುರ್ತುಪರಿಸ್ಥಿತಿ ಕಥೆಯನ್ನು ಆಧರಿಸಿದೆ.

ಎಮರ್ಜೆನ್ಸಿ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ: ಬಾಲಿವುಡ್‌ನ ಎಮರ್ಜೆನ್ಸಿ ಸಿನಿಮಾ ಕೊನೆಗೂ ನೆಟ್‌ಫ್ಲಿಕ್ಸ್‌ಗೆ ಆಗಮಿಸಿದೆ. ಕಂಗನಾ ರಣಾವತ್ ನಿರ್ದೇಶನ ಮತ್ತು ನಟನೆಯ ಈ ಸಿನಿಮಾ ಹೋಳಿ ಹಬ್ಬದ ಸಮಯದಲ್ಲಿ ಒಟಿಟಿಗೆ ಆಗಮಿಸಿದೆ. ಈ ಸಿನಿಮಾದಲ್ಲಿ ಕಂಗನಾ ರಣಾವತ್ ಅವರು ತುರ್ತು ಪರಿಸ್ಥಿತಿ ಕಾಲದ ಪ್ರಧಾನಮಂತ್ರಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಮಾರ್ಚ್ 14ರಂದು ಬಿಡುಗಡೆಯಾಗಲಿದೆ ಎಂದು ಕಂಗನಾ ರಣಾವತ್ ತಿಳಿಸಿದ್ದರು. ಇದೀಗ ಈ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
"ನಾನು ಮಣಿಕರ್ಣಿಕಾದ ಬಳಿ ನಿರ್ದೇಶನ ಮಾಡಿರುವ ಎರಡನೇ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಿ" ಎಂದು ಕಂಗನಾ ರಣಾವತ್ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. ಎಮರ್ಜೆನ್ಸಿ ಸಿನಿಮಾವು ಈ ಹಿಂದೆಯೇ ಒಟಿಟಿಯಲ್ಲಿ ಬಿಡುಗಡೆಯಾಗಬೇಕಿತ್ತು. ಈ ಸಿನಿಮಾ ಮಾರ್ಚ್ 17ರಂದು ಆಗಮಿಸುವ ನಿರೀಕ್ಷೆಯಿತ್ತು. ಆದರೆ, ಅದನ್ನು ರಿಶೆಡ್ಯೂಲ್ ಮಾಡಲಾಗಿತ್ತು. ಇದೀಗ ಮಾರ್ಚ್ 14ರಂದು ಬಿಡುಗಡೆಯಾಗಿದೆ. ಈ ರಾಜಕೀಯ ಥ್ರಿಲ್ಲರ್ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡದೆ ಇರುವವರು ಒಟಿಟಿಯಲ್ಲಿ ಕಣ್ತುಂಬಿಕೊಳ್ಳಬಹುದು. ಜನವರಿ 17ರಂದು ಚಿತ್ರಮಂದಿರಗಳಲ್ಲಿ ಎಮರ್ಜೆನ್ಸಿ ಬಿಡುಗಡೆಯಾಗಿತ್ತು.
ಹೋಳಿ ಹಬ್ಬಕ್ಕೆ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಕಥೆ
ಇದೀಗ ಅಭಿಮಾನಿಗಳಿಗೆ ಹೋಳಿ ಹಬ್ಬದ ಉಡುಗೊರೆಯಾಗಿ ಎಮರ್ಜೆನ್ಸಿ ಸಿನಿಮಾವನ್ನು ಒಟಿಟಿಯಲ್ಲಿ ಕಂಗನಾ ಬಿಡುಗಡೆ ಮಾಡಿದ್ದಾರೆ. ಸದ್ಯ ಈ ಸಿನಿಮಾ ಹಿಂದಿಯಲ್ಲಿ ಮಾತ್ರ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ ಬಿಡುಗಡೆಯಾಗಿಲ್ಲ.
ಈ ಸಿನಿಮಾವನ್ನು ಮನಿಕರ್ಣಿಕಾ ಫಿಲ್ಮ್ಸ್ ಮತ್ತು ಜೀ ಸ್ಟುಡಿಯೋ ಬ್ಯಾನರ್‌ನಡಿ ನಿರ್ಮಾಣ ಮಾಡಲಾಗಿದೆ. ಇದು 1975ರ ಕಾಲದ ಎಮರ್ಜೆನ್ಸಿ ಅವಧಿಯ ಕಥೆಯನ್ನು ಹೊಂದಿದೆ. ಈ ಸಿನಿಮಾ ಜನವರಿ 17ರಂದು ಬಿಡುಗಡೆಯಾದ ಸಂದರ್ಭದಲ್ಲಿ ಸಾಕಷ್ಟು ಪ್ರತಿಭಟನೆಯಾಗಿತ್ತು.
ಇದು ಪ್ರಧಾನಿ ಇಂದಿರಾ ಗಾಂಧಿ ಬಯೋಪಿಕ್. ಕಂಗನಾ ರಣಾವತ್ ಅವರು ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿದರೆ, ಅನುಪಮ್ ಖೇರ್, ಶ್ರೇಯಸ್ ತಲಪಾಡೆ, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಸತೀಶ್ ಕೌಶಿಕ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು 146 ನಿಮಿಷಗಳ ಅವಧಿಯ ಸಿನಿಮಾ. 60 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ.
"ಇದು ಕ್ರಾನಿಕಲ್ ಇತಿಹಾಸದ ಪ್ರಮುಖ ಅಧ್ಯಾಯ. ಕಂಗನಾ ರಣಾವತ್ ಅವರ ಅದ್ಭುತ ಅಭಿನಯವನ್ನು ಎಮರ್ಜೆನ್ಸಿಯಲ್ಲಿ ನೋಡಬಹುದು. ಇದರಲ್ಲಿ ಕೆಲವು ಅದ್ಭುತ ನಾಟಕೀಯ ಕ್ಷಣಗಳು ನಿಮ್ಮ ನೆನಪಿನಲ್ಲಿ ಉಳಿಯುತ್ತದೆ. ಡಾಕ್ಯುಮೆಂಟರಿ ಶೈಲಿ ಮತ್ತು ಕೆಲವು ಸಂಚಿಕೆಗಳನ್ನು ಆತುರವಾಗಿ ಮುಗಿಸಿರುವುದು ಚಿತ್ರದ ಪರಿಣಾಮವನ್ನು ದುರ್ಬಲಗೊಳಿಸಿದೆ" ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ತರಣ್ ಆದರ್ಶ್ ಎಮರ್ಜೆನ್ಸಿ ಸಿನಿಮಾವನ್ನು ವಿಮರ್ಶೆ ಮಾಡಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 'ಎಮರ್ಜೆನ್ಸಿ' ಸೆಪ್ಟೆಂಬರ್ 6, 2024 ರಂದು ಬಿಡುಗಡೆಯಾಗಬೇಕಿತ್ತು. ಆದರೆ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣಪತ್ರ ದೊರಕಿರಲಿಲ್ಲ. ಬಳಿಕ ಈ ಸಿನಿಮಾದಲ್ಲಿ ಹಲವು ಕತ್ತರಿ ಪ್ರಯೋಗ ಮಾಡಲಾಯಿತು. ಕೊನೆಗೆ ಚಿತ್ರಕ್ಕೆ ಯು ಎ ಪ್ರಮಾಣ ಪತ್ರ ನೀಡಲಾಯಿತು.

ವಿಭಾಗ