ಫೈಟರ್ ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನವೇ ಬಹುಕೋಟಿ ಗಳಿಸಿದ ಹೃತಿಕ್ ರೋಷನ್- ದೀಪಿಕಾ ಪಡುಕೋಣೆ ಸಿನಿಮಾ
Fighter box office collection day 1: ಹೃತಿಕ್ ರೋಷನ್ ನಟನೆಯ ಫೈಟರ್ ಸಿನಿಮಾ ಜನವರಿ 25ರಂದು ಬಿಡುಗಡೆಯಾಗಿದ್ದು, ಮೊದಲ ದಿನ 22 ಕೋಟಿ ರೂಪಾಯಿ ಬಾಚಿಕೊಂಡಿದೆ. ಇದು ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರವಾಗಿದ್ದು, ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸಿದ್ದಾರೆ.
ಹೃತಿಕ್ ರೋಷಣ್ ನಟನೆಯ ಫೈಟರ್ ಸಿನಿಮಾ ಜನವರಿ 25ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಭಾರತೀಯ ವಾಯುಪಡೆಯ ಅಧಿಕಾರಿಗಳಾಗಿ ನಟಿಸಿದ್ದಾರೆ. ಸಚ್‌ನಿಲ್ಕ್.ಕಾಂ ವರದಿ ಪ್ರಕಾರ ಮೊದಲ ದಿನ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಫೈಟರ್ ಸಿನಿಮಾವು 22 ಕೋಟಿ ರೂಪಾಯಿ ಗಳಿಸಿದೆ.
ಫೈಟರ್ ಬಾಕ್ಸ್ ಆಫೀಸ್ ಗಳಿಕೆ ದಿನ 1
ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷಣ್ ನಟಿಸಿರುವ ಸಿನಿಮಾವು ಭಾರತದಲ್ಲಿ ಮೊದಲ ದಿನ 22 ಕೋಟಿ ಗಳಿಸಿರುವ ಅಂದಾಜನ್ನು ಸಚ್‌ನಿಲ್ಕ್.ಕಾಂ ನೀಡಿದೆ. ಆದರೆ, ಇನ್ನೊಂದು ವರದಿ ಪ್ರಕಾರ, ಕೇವಲ ಅಡ್ವಾನ್ಸ್ ಬುಕ್ಕಿಂಗ್ ಮಾತ್ರ ಪರಿಗಣಿಸಿದರೆ ಮೊದಲ ದಿನ ಫೈಟರ್ ಸಿನಿಮಾ 7.21 ಕೋಟಿ ಗಳಿಸಿದೆ. ಗುರುವಾರ ಸಿನಿಮಾ ಬಿಡುಗಡೆಯಾಗಿರುವುದರಿಂದ ಆರಂಭದ ದಿನದ ಕಲೆಕ್ಷನ್ ಕಡಿಮೆ ಇರಬಹುದು. ಆದರೆ, ಇಂದು ಶುಕ್ರವಾರ. ಬಹುತೇಕರು ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದಾರೆ. ಈ ರಜಾ ದಿನದಂದು ಹೆಚ್ಚಿನ ಜನರು ಥಿಯೇಟರ್‌ಗೆ ಆಗಮಿಸಿಬಹುದು. ಶನಿವಾರ ಮತ್ತು ಭಾನುವಾರವೂ ಫೈಟರ್ ಕಲೆಕ್ಷನ್ ಹೆಚ್ಚಿರಬಹುದು.
ಫೈಟರ್ ಸಿನಿಮಾದ ಬಗ್ಗೆ
ಫೈಟರ್ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಹೃತಿಕ್ ರೋಷಣ್ ಮತ್ತು ದೀಪಿಕಾ ಪಡುಕೋಣೆ ಜತೆಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್, ತಲತ್ ಅಜೀಜ್, ಸಂಜೀವ್ ಜೈಸ್ವಾಲ್, ರಿಷಭ್ ಸಾಹ್ನಿ ಮತ್ತು ಅಶುತೋಷ್ ರಾಣಾ ಕೂಡ ನಟಿಸಿದ್ದಾರೆ. ಮಾರ್ಫ್ಲಿಕ್ಸ್ ಫಿಕ್ಚರ್ಸ್ ಜೆ ವಿಯಾಕಾಮ್18 ಸ್ಟುಡಿಯೋಸ್ ಈ ಸಿನಿಮಾ ನಿರ್ಮಾಣ ಮಾಡಿದೆ. ಭಾರತೀಯ ವಾಯುಪಡೆಯ ಸಾಹಸ, ದೇಶಭಕ್ತಿ ಇತ್ಯಾದಿ ವಿಷಯಗಳು ಚಿತ್ರದಲ್ಲಿದೆ.
ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಫೈಟರ್ ಚಿತ್ರದಲ್ಲಿ ಫೈಟರ್ ಜೆಟ್‌ಗಳ ಸ್ಕ್ವಾಡ್ರನ್ ಲೀಡರ್‌ಗಳಾಗಿ ನಟಿಸುತ್ತಿದ್ದಾರೆ. ಇವರಿಬ್ಬರ ಜತೆಗೆ ಅನಿಲ್ ಕಪೂರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೃತಿಕ್ ರೋಷನ್ ಅವರು ಸ್ಕ್ವಾಡ್ರಾನ್ ಲೀಡರ್ ಶಂಶೀರ್ ಪಠಾನಿಯಾ ಆಲಿಯಾಸ್ ಪಟ್ಟಿಯಾಗಿ, ದೀಪಿಕಾ ಪಡುಕೋಣೆ ಅವರು ಸ್ಕ್ವಾಡ್ರಾನ್ ಲೀಡರ್ ಮಿನಲ್ ರಾಥೋರ್ ಆಲಿಯಾಸ್ ಮಿನಿಯಾಗಿ ಕಾಣಿಸಿಕೊಂಡಿದ್ದಾರೆ. ಅನಿಲ್ ಅವರು ಗ್ರೂಪ್ ಕ್ಯಾಪ್ಟನ್ ರಾಕೇಶ್ ಜೈ ಸಿಂಗ್ ಆಲಿಯಾಸ್ ರಾಕಿಯಾಗಿ ನಟಿಸಿದ್ದಾರೆ.
ಒಟಿಟಿಯಲ್ಲೂ ಸಿನಿಮಾ ಹಬ್ಬ
ಗಣರಾಜ್ಯೋತ್ಸವದ ಸಮಯದಲ್ಲಿ ಹಲವು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆಯಾಗಿವೆ. ಈ ವಾರ ರಣಬೀರ್ ಕಪೂರ್ ನಟನೆಯ ಅನಿಮಲ್, ವಿಕ್ಕಿ ಕೌಶಲ್ ನಟನೆಯ ಸ್ಯಾಮ್ ಬಹದ್ದೂರ್, ಕರ್ಮಾ ಕಾಲಿಂಗ್ ಸೇರಿದಂತೆ ಹಲವು ಸಿನೆಮಾಗಳು, ವೆಬ್ ಸರಣಿಗಳು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಿವೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಕೂಡ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಬಿಡುಗಡೆ ಕುರಿತು ಸಾಕಷ್ಟು ಗೊಂದಲಗಳು ಇದ್ದವು. ರಕ್ಷಿತ್ ಶೆಟ್ಟಿ ಈ ಸಿನಿಮಾವನ್ನು ಆರಂಭದಲ್ಲಿ ರೆಂಟಲ್‌ಗೆ ಬಿಡುಗಡೆ ಮಾಡಬಹುದು ಎಂಬ ಗುಸುಗುಸು ಇದ್ದವು. ಅಮೆಜಾನ್ ಪ್ರೈಮ್ ವಿಡಿಯೋ ಬದಲು ಝೀ 5ನಲ್ಲಿ ಬಿಡುಗಡೆ ಮಾಡಬಹುದು ಎಂದುಕೊಳ್ಳಲಾಗಿತ್ತು. ಆದರೆ, ಇಂತಹ ಗೊಂದಲಗಳು ನಿವಾರಣೆಯಾಗಿದ್ದು, ಅಕ್ಟೋಬರ್ 25ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ.