‘ಒಂದು ವೇಳೆ ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ರೆ, ಸುಮ್ನೆ ಬಿಡ್ತಿದ್ರಾ?’ ಧರ್ಮ ಎಳೆದು ತಂದ ನಟಿ ಸ್ವರಾ ಭಾಸ್ಕರ್
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಮಹಿಳಾ ದೌರ್ಜನ್ಯ ಪ್ರಕರಣದ ವಿಚಾರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರಾಜಕೀಯ ಬಣ್ಣ ಪಡೆದ ಈ ಕೇಸ್, ಕರ್ನಾಟಕ ಮಾತ್ರವಲ್ಲ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಈ ನಡುವೆ ಈ ಪ್ರಕರಣದ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸಿದ್ದಾರೆ.

Prajwal Revanna: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮೊಮ್ಮಗ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕಳೆದೊಂದು ವಾರದಿಂದ ಭಾರೀ ಚರ್ಚೆಯಲ್ಲಿದ್ದಾರೆ. ಅದಕ್ಕೆ ಕಾರಣ ಲೈಂಗಿಕ ಹಗರಣ! ದೊಡ್ಡ ಮಟ್ಟದ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಗಂಭೀರ ಆರೋಪವನ್ನೇ ಸಂಸದ ಪ್ರಜ್ವಲ್ ರೇವಣ್ಣ ಎದುರಿಸಿದ್ದಾರೆ. ಲೈಂಗಿಕ ಶೋಷಣೆ, ಸೆಕ್ಸ್ ವಿಡಿಯೋ ರೆಕಾರ್ಡ್ ಮತ್ತು ಕೊಲೆ ಬೆದರಿಕೆ ಸೇರಿ ಹತ್ತು ಹಲವು ಕೇಸ್‌ಗಳೂ ಈಗಾಗಲೇ ದಾಖಲಾಗಿವೆ. SITಯು ಈ ಪ್ರಕರಣದ ತನಿಖೆ ನಡೆಸುತ್ತಿದೆ.
ಹಾಸನ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ, ಪೆನ್‌ಡ್ರೈವ್‌ಗಳು ಹಾಸನದ ಬೀದಿ ಬೀದಿ ತಲುಪುತ್ತಿದ್ದಂತೆ, ನಾಪತ್ತೆಯಾಗಿದ್ದರು. ರಾಜ್ಯ ಜೆಡಿಎಸ್ ಮತ್ತು ಬಿಜೆಪಿಯನ್ನು ಆಡಳಿತಾರೂಢ ಕಾಂಗ್ರೆಸ್ ಸಹ ಟೀಕಿಸಿತ್ತು. ಈ ಪ್ರಕರಣ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು. ಈ ನಡುವೆ ಒಂದಷ್ಟು ಜೆಡಿಎಸ್ ಪಕ್ಷದಿಂದಲೇ ಪ್ರಜ್ವಲ್ ರೇವಣ್ಣ ಅವರನ್ನು ಉಚ್ಚಾಟನೆ ಸಹ ಮಾಡಲಾಗಿತ್ತು. ಹರಿದಾಡುತ್ತಿರುವ ವಿಡಿಯೋಗಳನ್ನು ಮಾರ್ಫ್ ಮಾಡಲಾಗಿದೆ. ಈ ಬಗ್ಗೆ ನನ್ನ ವಕೀಲರು ಮಾತನಾಡುತ್ತಾರೆ ಎಂದೂ ಪ್ರಜ್ವಲ್ ರೇವಣ್ಣ ಟ್ವಿಟ್ ಮೂಲಕ ಹೇಳಿಕೊಂಡಿದ್ದರು.
ಮೋದಿ ವಿರುದ್ಧ ತಿರುಗಿ ಬಿದ್ದ ಸ್ವರಾ ಭಾಸ್ಕರ್
ಈಗ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ನಟಿಸಿ, ಕಳೆದ ವರ್ಷವಷ್ಟೇ ಸಾಮಾಜಿಕ ಹೋರಾಟಗಾರ ಫಹಾದ್ ಅಹ್ಮದ್ ಜತೆ ವಿವಾಹವಾಗಿ ಸಾಕಷ್ಟು ಸುದ್ದಿಯಾಗಿದ್ದ ಸ್ವರಾ ಭಾಸ್ಕರ್, ಪ್ರಜ್ವಲ್ ರೇವಣ್ಣ ಕೇಸ್ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಟ್ಟಿನಿಂದಲೇ ಪೋಸ್ಟ್ ಹಂಚಿಕೊಂಡಿದ್ದರೆ, ಆ ಪೋಸ್ಟ್‌ನಲ್ಲಿ ಕೇಂದ್ರ ಬಿಜೆಪಿ ಆಡಳಿತಾರೂಢ ಮೋಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದೇ ಕೋಪದಲ್ಲಿಯೇ ಧರ್ಮವನ್ನೂ ಈ ಪ್ರಕರಣದಲ್ಲಿ ಎಳೆದು ತಂದಿದ್ದಾರೆ ಸ್ವರಾ. ಹೀಗಿದೆ ಸ್ವರಾ ಟ್ವಿಟ್.
ಮುಸ್ಲಿಂ ವ್ಯಕ್ತಿ ಆಗಿದ್ರೆ ಸುಮ್ನೆ ಬಿಡ್ತಿದ್ರಾ?
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೌನವಾಗಿರುವುದು ಏಕೆ ಎಂದಿರುವ ಸ್ವರಾ, "ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಬಗ್ಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೌನವಾಗಿರುವುದಕ್ಕೆ ನಾವೇಕೆ ಬೆಚ್ಚಿಬಿದ್ದಿದ್ದೇವೆ? ಗೊತ್ತಿದ್ದೂ ಮೋದಿ ಅವರ ಪರ ಪ್ರಚಾರ ಮಾಡಿದ್ದು ನಮಗೇಕೆ ಆಘಾತ ತಂದಿದೆ?" ಎಂದಿದ್ದಾರೆ.
ಮುಂದುವರಿದು, "ಕಥುವಾ, ಉನ್ನಾವೋ, ಹತ್ರಾಸ್, ಕುಲದೀಪ್ ಸೆಂಗರ್, ಬ್ರಿಜ್‌ಭೂಷಣ್ ಶರಣ್ ಮತ್ತು ಇತರರ ಉದಾಹರಣೆ ನಮ್ಮಲ್ಲಿದೆ! ಅಪರಾಧಿ ಮುಸ್ಲಿಂ ಅಥವಾ ಟಿಎಂಸಿ/ ಕಾಂಗ್ರೆಸ್‌ನವರಾಗಿದ್ದರೆ ಮಾತ್ರ ಅವರು ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಾರೆ" ಎಂದು ಸ್ವರಾ ಭಾಸ್ಕರ್ ಕಟುವಾಗಿಯೇ ಟೀಕೆ ಮಾಡಿದ್ದಾರೆ.
ಹೀಗಿದೆ ಸ್ವರಾ ಟ್ವಿಟ್ ಪೋಸ್ಟ್

ವಿಭಾಗ