ತೂಕ ನಿಯಂತ್ರಣ ಮುಖ್ಯವೆಂದ ಹೇಮಾ ಮಾಲಿನಿ, ವಿನೇಶ್‌ ಫೋಗಟ್‌ ಅನರ್ಹತೆ ಸಂದರ್ಭ ಕನಸಿನ ಕನ್ಯೆ ಆಡೋ ಮಾತಾ ಇದು? ಚಾಟಿ ಬೀಸಿದ ನೆಟ್ಟಿಗರು-bollywood news hema malini comment on vinesh phogat olympics important to keep weight in check internet reacts ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ತೂಕ ನಿಯಂತ್ರಣ ಮುಖ್ಯವೆಂದ ಹೇಮಾ ಮಾಲಿನಿ, ವಿನೇಶ್‌ ಫೋಗಟ್‌ ಅನರ್ಹತೆ ಸಂದರ್ಭ ಕನಸಿನ ಕನ್ಯೆ ಆಡೋ ಮಾತಾ ಇದು? ಚಾಟಿ ಬೀಸಿದ ನೆಟ್ಟಿಗರು

ತೂಕ ನಿಯಂತ್ರಣ ಮುಖ್ಯವೆಂದ ಹೇಮಾ ಮಾಲಿನಿ, ವಿನೇಶ್‌ ಫೋಗಟ್‌ ಅನರ್ಹತೆ ಸಂದರ್ಭ ಕನಸಿನ ಕನ್ಯೆ ಆಡೋ ಮಾತಾ ಇದು? ಚಾಟಿ ಬೀಸಿದ ನೆಟ್ಟಿಗರು

Vinesh Phogat disqualification: ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ವಿನೇಶ್‌ ಫೋಗಟ್‌ ಅನರ್ಹತೆ ಪಡೆದ ಆಘಾತದಲ್ಲಿ ಕ್ರೀಡಾಪ್ರೇಮಿಗಳು ಇದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್‌ ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿಯ ಮಾತೊಂದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ತೂಕ ನಿಯಂತ್ರಣ ಮುಖ್ಯವೆಂದ ಹೇಮಾ ಮಾಲಿನಿ, ವಿನೇಶ್‌ ಅನರ್ಹತೆ ಸಂದರ್ಭ ಕನಸಿನ ಕನ್ಯೆ ಮಾತು
ತೂಕ ನಿಯಂತ್ರಣ ಮುಖ್ಯವೆಂದ ಹೇಮಾ ಮಾಲಿನಿ, ವಿನೇಶ್‌ ಅನರ್ಹತೆ ಸಂದರ್ಭ ಕನಸಿನ ಕನ್ಯೆ ಮಾತು

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ 2024ರ ಮಹಿಳಾ 50 ಕೆಜಿ ವಿಭಾಗದಲ್ಲಿ ಅಧಿಕ ತೂಕ ಹೊಂದಿದ ಕಾರಣಕ್ಕೆ ಫೈನಲ್‌ನಿಂದ ವಿನೇಶ್ ಫೋಗಟ್ ಅನರ್ಹತೆ ಪಡೆದಿದ್ದಾರೆ. ಈ ವಿಭಾಗದ ಸ್ಪರ್ಧೆಯಲ್ಲಿ ಅನುಮತಿ ನೀಡಿದ್ದಕ್ಕಿಂತ 100 ಗ್ರಾಂ ಹೆಚ್ಚು ತೂಕ ಹೊಂದಿರುವ ಕಾರಣಕ್ಕೆ ಅನರ್ಹರಾದರು. ಒಲಿಂಪಿಕ್ಸ್‌ನ ತನ್ನ ಮೊದಲ ಪಂದ್ಯದ ವೇಳೆ ಇವರ ತೂಕ ಸರಿಯಾಗಿತ್ತು. ಆದರೆ, ಫೈನಲ್‌ ಸಮಯದಲ್ಲಿ ನೂರು ಗ್ರಾಂ ತೂಕ ಹೆಚ್ಚಳವಾಗಿದ್ದು, ಅನರ್ಹತೆಗೆ ಕಾರಣವಾಯಿತು. ದೇಹದ ತೂಕದ ಈ ಕನಿಷ್ಠ ಏರುಪೇರು ಭಾರತದ ಕ್ರೀಡಾಳುವಿನ ದೊಡ್ಡ ಕನಸಿಗೆ ಹಿನ್ನೆಡೆ ತಂದಿದೆ. ಈ ಕುರಿತು ದೇಶಕ್ಕೆ ದೇಶವೇ ಆಘಾತದಲ್ಲಿದೆ. ಈ ಸಂದರ್ಭದಲ್ಲಿ ಹಿರಿಯ ನಟಿ ಮತ್ತು ರಾಜಕಾರಣಿ ಕನಸಿನ ಕನ್ಯೆ ಎಂದೇ ಖ್ಯಾತಿ ಪಡೆದ ಹೇಮಾ ಮಾಲಿನಿ ನೀಡಿದ ಹೇಳಿಕೆಯೊಂದು ವೈರಲ್‌ ಆಗಿದೆ. ಈ ಸಂದರ್ಭದಲ್ಲಿ ಇವರು "ಫ್ಯಾಷನ್‌ ಮತ್ತು ಆರೋಗ್ಯ ಪಾಠ" ನೀಡಿದ್ದಾರೆ. ನಾವು ನಮ್ಮ ತೂಕವನ್ನು ನಿಯಂತ್ರಣದಲ್ಲಿಡುವುದು "ನಮ್ಮೆಲ್ಲರಿಗೂ ಒಂದು ಪಾಠ" ಎಂದು ಹೇಮಾ ಮಾಲಿನಿ ಹೇಳಿಕೆ ನೀಡಿದ್ದಾರೆ.

ಹೇಮಾ ಮಾಲಿನಿ ಏನಂದ್ರು?

"ಇದು ತುಂಬಾ ಆಶ್ಚರ್ಯಕರ. 100 ಗ್ರಾಂ ತೂಕಕ್ಕಾಗಿ ಆಕೆಯನ್ನು ಅನರ್ಹಗೊಳಿಸಲಾಗಿದೆ. ಇದು ವಿಚಿತ್ರವಾಗಿದೆ. ನಾವೆಲ್ಲರೂ ತೂಕವನ್ನು ನಿಯಂತ್ರನದಲ್ಲಿಡುವುದು ಮುಖ್ಯ. ಇದು ನಮ್ಮೆಲ್ಲರಿಗೂ ಒಂದು ಪಾಠ. ಆಕೆ ಬೇಗನೇ ತನ್ನ 100 ಗ್ರಾಂ ತೂಕ ಕಳೆದುಕೊಳ್ಳಬೇಕೆಂದು ನಾನು ಆಸಿಸುವೆ. ಆದರೆ, ಅವಳಿಗೆ ಅವಕಾಶ ಸಿಗುವುದಿಲ್ಲ" ಎಂದು ಪಿಟಿಐ ಸುದ್ದಿ ಸಂಸ್ಥೆಗೆ ನಟಿ ಹೇಮಾ ಮಾಲಿನಿ ಪ್ರತಿಕ್ರಿಯೆ ನೀಡಿದ್ದರು.

ಮೂರ್ಖತನದ ಮತ್ತು ಸಂವೇದನಾರಹಿತ ಹೇಳಿಕೆ

ಹೇಮಾ ಮಾಲಿನಿ ಹೇಳಿಕೆಯು ಇಂಟರ್‌ನೆಟ್‌ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದು ತುಂಬಾ ಸಿಲ್ಲಿ ಹೇಳಿಕೆ. ಇವರು ಸಂಸತ್ತಿನಲ್ಲಿರಲು ಅನರ್ಹರು ಎಂದು ನೂರಾರು ಜನರು ಕಾಮೆಂಟ್‌ ಮಾಡಿದ್ದಾರೆ. "ಜನರು ಹೇಮಾ ಮಾಲಿನಿಯಂತ ಜನರಿಗೆ ಏಕೆ ಮತ ಹಾಕುತ್ತಾರೆ ಎಂದು ನನಗೆ ಅರ್ಥವಾಗುವುದಿಲ್ಲ" ಎಂದು ಒಬ್ಬರು ಬರೆದಿದ್ದಾರೆ. "ಈ ಸಂದರ್ಭದಲ್ಲಿ ನೀಡುವ ಹೇಳಿಕೆ ಇದಲ್ಲ. ಇದು ಅತ್ಯಂತ ಮೂರ್ಖತನದ ಮತ್ತು ಸಂವೇದನಾರಹಿತ ಹೇಳಿಕೆ. 100 ಗ್ರಾಂನಷ್ಟು ತೂಕ ಹೆಚ್ಚಿರುವುದು ಅನಾರೋಗ್ಯಕರವೆಂದು ಚಿಂತಿಸುವುದಕ್ಕಿಂತ ಅದು ಒಲಿಂಪಿಕ್ಸ್‌ನ ವ್ಯವಸ್ಥೆಯ ದೋಷ ಮತ್ತು ನಮ್ಮೆಲ್ಲರ ದುರಾದೃಷ್ಟ" ಎಂದು ಇನ್ನೊಬ್ಬರು ಹೇಳಿದ್ದಾರೆ.

"ಈ ಒಲಿಂಪಿಕ್ ಕ್ರೀಡಾಪಟುಗಳು ಅನುಸರಿಸುವ ವಿಪರೀತ ತರಬೇತಿ ಮತ್ತು ಕಟ್ಟುನಿಟ್ಟಾದ ಆಹಾರಕ್ರಮ ನಿಮಗೆ ತಿಳಿದಿದೆಯೇ... ಶಕ್ತಿ ಮತ್ತು ಕೌಶಲ್ಯದಲ್ಲಿ ವಿಶ್ವದ ನಂ.1 ಆಟಗಾರ್ತಿಯನ್ನು ಅವರು ಸೋಲಿಸಿಲ್ಲವೇ? ಇವರ ಹೇಳಿಕೆ ಹೇಗಿದೆ ಅಂದ್ರೆ ಫೋಗಟ್‌ ಪ್ರತಿದಿನ ಸಮೋಸಾ ಮತ್ತು ಐಸ್ ಕ್ರೀಮ್ ತಿನ್ನುತ್ತಿದ್ದಳು ಎನ್ನುವಂತೆ ಇದೆ. ಆರೋಗ್ಯಕರ ಜೀವನವು ಒಂದು ಪ್ರಮುಖ ಸಂದೇಶವಾಗಿದೆ. ಆದರೆ, ಅದನ್ನು ಹೇಳುವ ಸಮಯ ಇದಲ್ಲ" ಎಂದು ಇನ್ನೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

"ಹೇಮಾ ಮಾಲಿನಿಗೆ ಕ್ರೀಡೆ ಮತ್ತು ಕುಸ್ತಿಯ ಬಗ್ಗೆ ಏನೂ ತಿಳಿದಿಲ್ಲ, ಅವಳು ತನಗೆ ತಿಳಿದಿರುವುದನ್ನು ಹೇಳುತ್ತಾಳೆ. ಅವರ ಪ್ರಕಾರ ತೂಕ ಕಡಿಮೆ ಇರುವುದು ಸೌಂದರ್ಯದ ಮಾನದಂಡಗಳು. ದಯವಿಟ್ಟು ಅವಳನ್ನು ದ್ವೇಷಿಸಬೇಡಿ. ಇದು ಅವಳ ತಪ್ಪಲ್ಲ, ಅವಳು ಬಾಲಿವುಡ್ ಉದ್ಯಮದಲ್ಲಿ ಬೆಳೆದಳು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಆಲಿಯಾ ಭಟ್, ವಿಕ್ಕಿ ಕೌಶಲ್, ಫರ್ಹಾನ್ ಅಖ್ತರ್, ತಾಪ್ಸಿ ಪನ್ನು, ಸೋನಾಕ್ಷಿ ಸಿನ್ಹಾ ಮತ್ತು ವರುಣ್ ಗ್ರೋವರ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ವಿನೇಶ್‌ ಫೋಗಟ್‌ ಅನರ್ಹತೆ ಕುರಿತು ಬೇಸರ ವ್ಯಕ್ತಪಡಿಸಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.