ಒಟಿಟಿಗಿಂತ ಮೊದಲು ಟಿವಿಯಲ್ಲಿ ಬರುತ್ತಿದೆ ಬ್ಲಾಕ್‌ಬಸ್ಟರ್ ಹಾರರ್ ಕಾಮಿಡಿ ಸಿನಿಮಾ; ಈ ದಿನಾಂಕ ಬರೆದಿಟ್ಟುಕೊಳ್ಳಿ
Munjya Horror Comedy: ಹಾರರ್ ಕಾಮಿಡಿ ಸಿನಿಮಾವೊಂದು ಒಟಿಟಿ ಬದಲಿಗೆ ನೇರವಾಗಿ ಟಿವಿ ಪ್ರೀಮಿಯರ್‌ಗೆ ತಯಾರಿ ನಡೆಸುತ್ತಿದೆ. ಥಿಯೇಟರ್‌ನಲ್ಲಿ ಯಶಸ್ಸಿನ ಬಳಿಕ ಚಿತ್ರತಂಡ ನೇರವಾಗಿ ಟಿವಿ ಪ್ರೀಮಿಯರ್ ಡೇಟ್ ಅನೌನ್ಸ್ ಮಾಡಿದೆ.
ಇತ್ತೀಚೆಗಿನ ಹಾರರ್ ಕಾಮಿಡಿ ಸಿನಿಮಾಗಳಲ್ಲಿ ಹಿಂದಿಯಲ್ಲಿ ಬಿಡುಗಡೆಯಾದ ಮುಂಜ್ಯ ಸಿನಿಮಾ ಭಾರಿ ಹಿಟ್ ಆಯ್ತು. ಚಿತ್ರಮಂದಿರಗಳಲ್ಲಿ ಚಲನಚಿತ್ರ ಬಿಡುಗಡೆಯಾಗಿ ಎರಡೂವರೆ ತಿಂಗಳಾಗಿದೆ. ಆದರೆ, ಇಲ್ಲಿಯವರೆಗೂ ಯಾವುದೇ ಒಟಿಟಿ ವೇದಿಕೆಗಳಲ್ಲಿ ಸಿನಿಮಾ ಬಂದಿಲ್ಲ. ಅಭಿಮಾನಿಗಳು ಮನೆಯಲ್ಲೇ ಕುಳಿತು ಸಿನಿಮಾ ನೋಡಲು ಕಾಯುತ್ತಿದ್ದಾರೆ. ಈ ಸಿನಿಮಾದ ಒಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿರುವ ಫ್ಯಾನ್ಸ್‌ಗೆ ಅಚ್ಚರಿಯ ಸುದ್ದಿ ಇದೆ. ಈ ಸಿನಿಮಾ ಒಟಿಟಿಗೆ ಬರುತ್ತಿಲ್ಲ. ಬದಲಿಗೆ ನೇರವಾಗಿ ಸ್ಟಾರ್ ಗೋಲ್ಡ್ ವಾಹಿನಿಯಲ್ಲಿ ಮೊದಲ ಬಾರಿಗೆ ಪ್ರಸಾರವಾಗಲಿದೆ.
ಮುಂಜ್ಯ ಸಿನಿಮಾ ಟಿವಿ ಪ್ರೀಮಿಯರ್ ದಿನಾಂಕ
ಮರಾಠಿ ನಿರ್ದೇಶಕ ಆದಿತ್ಯ ಸರ್ಪೋದರ್ ನಿರ್ದೇಶನದ ಮುಂಜ್ಯ ಚಿತ್ರವು ಹೆಚ್ಚು ನಿರೀಕ್ಷೆಗಳಿಲ್ಲದೆ ಬಿಡುಗಡೆಯಾಗಿದ್ದ ಸಿನಿಮಾ. ಆದರೆ, ಬೆಳ್ಳಿ ತೆರೆಗೆ ಅಪ್ಪಳಿಸಿ ಸಂಚಲನ ಮೂಡಿಸಿತ್ತು. ಜೂನ್ 7ರಂದು ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ 132 ಕೋಟಿ ರೂಪಾಯಿ ಬಾಚಿಕೊಂಡಿತು. ಕೇವಲ 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಮುಂಜ್ಯಾ ಚಿತ್ರದಿಂದ ನಿರ್ಮಾಪಕರಿಗೆ ಲಾಭದ ಸುರಿಮಳೆಯಾಯಿತು.
ಈ ಚಿತ್ರದ ಒಟಿಟಿ ಹಕ್ಕುಗಳನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಪಡೆದುಕೊಂಡಿದೆ. ಆದರೆ ಇನ್ನೂ ಸ್ಟ್ರೀಮಿಂಗ್ ಆಗಿಲ್ಲ. ಅದಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಶರ್ವರಿ ವಾಘ್, ಅಭಯ್ ವರ್ಮಾ, ಸತ್ಯರಾಜ್, ಮೋನಾ ಸಿಂಗ್ ಅಭಿನಯದ ಮುಂಜ್ಯಾ ಚಿತ್ರ OTT ಬಿಡುಗಡೆಯ ಕುರಿತು ಯಾವುದೇ ಅಪ್‌ಡೇಟ್ ಇಲ್ಲ. ಇದು ಫ್ಯಾನ್ಸ್‌ಗೆ ಆಶ್ಚರ್ಯ ಮೂಡಿಸಿದೆ.
ಸಾಮಾನ್ಯವಾಗಿ ಯಾವುದೇ ಸಿನಿಮಾ ಒಟಿಟಿಯಲ್ಲಿ ಮೊದಲು ಬರುತ್ತದೆ. ಆ ನಂತರ ಟಿವಿಯಲ್ಲಿ ಪ್ರಸಾರವಾಗುತ್ತದೆ. ಆದರೆ, ಮುಂಜ್ಯ ಚಿತ್ರದ ವಿಷಯದಲ್ಲಿ ಇದು ಭಿನ್ನ. ಈ ಸಿನಿಮಾ ಮುಂದಿನ ಶನಿವಾರ (ಆಗಸ್ಟ್ 24)ದಂದು ಸ್ಟಾರ್ ಗೋಲ್ಡ್ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಮುಂಜ್ಯದಂತಹ ಹಾರರ್ ಕಾಮಿಡಿ ಸಿನಿಮಾಗಳಿಗೆ ಥಿಯೇಟರ್‌ಗಳಿಗಿಂತ ಒಟಿಟಿಯಲ್ಲಿ ಹೆಚ್ಚಿನ ಪ್ರತಿಕ್ರಿಯೆ ಸಿಗುತ್ತದೆ. ಆದರೆ, ಈ ಸಿನಿಮಾ ನೇರವಾಗಿ ಟಿವಿಗೆ ಬರುತ್ತಿದೆಯೇ ಹೊರತು ಒಟಿಟಿಗೆ ಬರುತ್ತಿಲ್ಲ.
ಮುಂಜ್ಯಾ ಸಿನಿಮಾ ಕುರಿತು ಮತ್ತಷ್ಟು
ಮುಂಜ್ಯಾ ಚಿತ್ರವು ಹಾರರ್ ಕಾಮಿಡಿ ಪ್ರಕಾರದ ಚಿತ್ರ. ತನ್ನ ಗೆಳತಿಯೊಂದಿಗೆ ತವರು ಮನೆಗೆ ಹೋಗಿ ಮದುವೆಗಾಗಿ ಕಾತರದಿಂದ ಕಾಯುತ್ತಿರುವ ಯುವಕನೊಬ್ಬ ಮುಂಜ್ಯ ಎಂಬ ಶಕ್ತಿಯೊಂದರ ವಶವಾಗುತ್ತಾನೆ. ಆ ನಂತರ ಏನೆಲ್ಲಾ ಪರಿಣಾಮವಾಗುತ್ತದೆ ಎಂಬುದು ನಗು ತರಿಸುವುದು ಮಾತ್ರವಲ್ಲದೆ ಭಯಾನಕವಾಗಿದೆ. ನಿರ್ದೇಶಕರ ಈ ಪರಿಕಲ್ಪನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಚಿತ್ರವು 132 ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ 2024ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ಐದನೇ ಹಿಂದಿ ಚಲನಚಿತ್ರವಾಯಿತು. ಇಡೀ ಮರಾಠಿ ಸಂಸ್ಕೃತಿ ಈ ಸಿನಿಮಾದಲ್ಲಿ ಗೋಚರಿಸುತ್ತದೆ.