Oscar Award: ಆಸ್ಕರ್ ವೇದಿಕೆಯಲ್ಲಿ ಲಗಾನ್ ಕಲಾ ನಿರ್ದೇಶಕನ ನೆನಪು; ಯಾರಿದು ನಿತಿನ್ ಚಂದ್ರಕಾಂತ್ ದೇಸಾಯಿ
ಭಾರತದ ಕಲಾ ನಿರ್ದೇಶಕ ದಿವಂಗತ ನಿತಿನ್ ಚಂದ್ರಕಾಂತ್ ದೇಸಾಯಿ ಅವರನ್ನು ಆಸ್ಕರ್ ವೇದಿಕೆಯ ಮೆಮೊರಿಯಂ (ಚಿರಸ್ಮರಣೆ) ವಿಭಾಗದಲ್ಲಿ ನೆನಪಿಸಿಕೊಳ್ಳಲಾಗಿದೆ. ಲಗಾನ್, ಜೋಧಾ ಅಕ್ಬರ್ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿದ ನಿತಿನ್ ಚಂದ್ರಕಾಂತ್ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಬೆಂಗಳೂರು: ಲಗಾನ್, ಜೋಧ ಅಕ್ಬರ್ ಮುಂತಾದ ಸಿನಿಮಾಗಳಿಗೆ ಕೆಲಸ ಮಾಡಿರುವ ಭಾರತದ ಕಲಾ ನಿರ್ದೇಶಕ ದಿ. ನಿತಿನ್ ಚಂದ್ರಕಾಂತ್ ದೇಸಾಯಿ ಅವರನ್ನು ಆಸ್ಕರ್ ವೇದಿಕೆಯ ಮೆಮೊರಿಯಂ (ಚಿರಸ್ಮರಣೆ) ವಿಭಾಗದಲ್ಲಿ ನೆನಪಿಸಿಕೊಳ್ಳಲಾಗಿದೆ. ಆಸ್ಕರ್ ನಾಮನಿರ್ದೇಶನಗೊಂಡ ಲಗಾನ್ ಮತ್ತು ಹಮ್ ದಿಲ್ ದೇ ಚುಕೆ ಸನಮ್‌ನಂತಹ ಬ್ಲಾಕ್‌ಬಸ್ಟರ್ ಚಲನಚಿತ್ರಗಳಿಗಾಗಿ ಸೆಟ್‌ಗಳನ್ನು ರಚಿಸಿದ ಹೆಸರಾಂತ ಪ್ರೊಡಕ್ಷನ್ ಡೈರೆಕ್ಟರ್ ಇವರಾಗಿದ್ದಾರೆ. 96 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಇನ್ ಮೆಮೋರಿಯಮ್ ವಿಭಾಗದಲ್ಲಿ ಇವರನ್ನು ನೆನಪಿಸಿಕೊಂಡು ಗೌರವ ಸೂಚಿಸಲಾಗಿದೆ.
ಪ್ರತಿವರ್ಷ ಅಕಾಡೆಮಿ ಪ್ರಶಸ್ತಿ ವಿತರಣೆ ಸಂದರ್ಭದಲ್ಲಿ ಇನ್ ಮೆಮೋರಿಯಮ್ ಮಾಂಟೇಜ್‌ನಲ್ಲಿ ಕಳೆದ ಒಂದು ವರ್ಷದಲ್ಲಿ ನಿಧನರಾದ ಉದ್ಯಮ ದಂತಕಥೆಗಳನ್ನು ನೆನಪಿಸಿಕೊಂಡು ಗೌರವ ಸಲ್ಲಿಸಲಾಗುತ್ತದೆ. 57 ವರ್ಷದ ದೇಸಾಯಿ ಅವರು ಮುಂಬೈ ಸಮೀಪದ ಕರ್ಜತ್‌ನಲ್ಲಿರುವ ತಮ್ಮ ಸ್ಟುಡಿಯೋದಲ್ಲಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಜೋಧಾ ಅಕ್ಬರ್ ಮತ್ತು ಪ್ರೇಮ್ ರತನ್ ಧನ್ ಪಾಯೋ ಮುಂತಾದ ಸಿನಿಮಾಗಳಲ್ಲಿ, ಕೌನ್ ಬನೇಗಾ ಕರೋಡ್‌ಪತಿಯಂತಹ ಟಿವಿ ರಸಪ್ರಶ್ನೆ ಕಾರ್ಯಕ್ರಮದ ಕಲಾ ನಿರ್ದೇಶನದ ಮೂಲಕ ನಿತಿನ್ ಚಂದ್ರಕಾಂತ್ ದೇಸಾಯಿ ಜನಪ್ರಿಯತೆ ಪಡೆದಿದ್ದರು. 30 ವರ್ಷಗಳ ಕಾಲ ತಮ್ಮ ಸಿನಿಮಾ ವೃತ್ತಿಜೀವನದಲ್ಲಿ ನಿತಿನ್ ಚಂದ್ರಕಾಂತ್ ದೇಸಾಯಿ ಅವರು ವಿಧು ವಿನೋದ್ ಚೋಪ್ರಾ, ಸಂಜಯ್ ಲೀಲಾ ಬನ್ಸಾಲಿ, ರಾಜ್‌ಕುಮಾರ್ ಹಿರಾನಿ ಮತ್ತು ಅಶುತೋಷ್ ಗೋವಾರಿಕರ್ ಅವರಂತಹ ನಿರ್ದೇಶಕರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.
ಕಳೆದ ತಿಂಗಳು ನಿಧನರಾದ ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರಿಗೆ ಶ್ರದ್ಧಾಂಜಲಿಯೊಂದಿಗೆ ಇನ್ ಮೆಮೋರಿಯಮ್ ಕಾರ್ಯಕ್ರಮ ಪ್ರಾರಂಭವಾಯಿತು. ಕಳೆದ ವರ್ಷದ ಸಮಾರಂಭದಲ್ಲಿ ನವಲ್ನಿ ಕುರಿತ ಸಾಕ್ಷ್ಯಚಿತ್ರವು ವೈಶಿಷ್ಟ್ಯದ ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ನಟರಾದ ಕಾರ್ಲ್ ವೆದರ್ಸ್, ಲೀ ಸನ್-ಕ್ಯುನ್, ಮ್ಯಾಥ್ಯೂ ಪೆರ್ರಿ, ಗ್ಲೆಂಡಾ ಜಾಕ್ಸನ್, ರಯಾನ್ ಓ'ನೀಲ್, ಮೈಕೆಲ್ ಗ್ಯಾಂಬೊನ್, ಜೂಲಿಯನ್ ಸ್ಯಾಂಡ್ಸ್, ಗಾಯಕ ಟೀನಾ ಟರ್ನರ್, ಹ್ಯಾರಿ ಬೆಲಾಫೊಂಟೆ ಮತ್ತು ರಾಬಿ ರಾಬರ್ಟ್‌ಸನ್ ಮತ್ತು ಹಾಸ್ಯನಟ ರಿಚರ್ಡ್ ಲೆವಿಸ್ ಅವರನ್ನು ನೆನಪಿಸಲಾಯಿತು.
96ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ಲಾಸ್ ಏಂಜಲೀಸ್‌ನಲ್ಲಿ ಭಾನುವಾರ ನಡೆದಿದೆ. ಇದು ಭಾರತದ ಕಾಲಮಾನದ ಪ್ರಕಾರ ಇಂದು ಮುಂಜಾನೆ ನಡೆದಿದೆ. ಜಿಮ್ಮಿ ಕಿಮ್ಮೆಲ್ ಈ ಕಾರ್ಯಕ್ರಮ ನಡೆಸಿಕೊಟ್ಟರು. ಕ್ರಿಸ್ಟೋಫರ್ ನೋಲನ್ ಅವರ ಜೀವನಾಧಾರಿತ ನಾಟಕ ಓಪನ್‌ಹೈಮರ್ ಸಿನಿಮಾಕ್ಕೆ ಈ ಬಾರಿ ಅತ್ಯುತ್ತಮ ಸಿನಿಮಾ ಸೇರಿದಂತೆ ಒಟ್ಟು ಏಳು ಆಸ್ಕರ್‌ಗಳು ದೊರಕಿವೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಪೋಷಕ ನಟ, ಅತ್ಯುತ್ತಮ ಛಾಯಾಗ್ರಹಣ, ಅತ್ಯುತ್ತಮ ಸಂಕಲನ ಮತ್ತು ಅತ್ಯುತ್ತಮ ಮೂಲ ಸಿನಿಮಾ ಸೇರಿದಂತೆ ಒಟ್ಟು ಏಳು ವಿಭಾಗದಲ್ಲಿ ಓಪನ್‌ಹೈಮರ್ ಪ್ರಶಸ್ತಿ ಗೆದ್ದುಕೊಂಡಿದೆ. ಸಿಲಿಯನ್ ಮರ್ಫಿ ನೇತೃತ್ವದ ಡ್ರಾಮಾವು ಹದಿಮೂರು ನಾಮನಿರ್ದೇಶನದೊಂದಿಗೆ ಈ ಪ್ರಶಸ್ತಿ ಸಮಾರಂಭದಲ್ಲಿ ಮುಂಚೂಣಿಯಲ್ಲಿದೆ. ಬಾರ್ಬಿ, ಪೂರ್ ಥಿಂಗ್ಸ್ ಮತ್ತು ದಿ ಝೋನ್ ಆಫ್ ಇಂಟರೆಸ್ಟ್ ಮುಂತಾದ ಸಿನಿಮಾಗಳಿಗೂ ಆಸ್ಕರ್ ಲಭಿಸಿದೆ.