ಹಿಂದಿ ಚಿತ್ರರಂಗ ಫೇಕ್, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್
ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರಕಾರ ಹಿಂದಿ ಚಿತ್ರರಂಗ ಫೇಕ್ ಆಗಿದೆ. ತನ್ನ ತವರು ಮಂಡಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಕಂಗನಾ ರಣಾವತ್ ತನ್ನ ಮುಂದಿನ ನಟನೆ ಕರಿಯರ್ ಕುರಿತು ಮಾತನಾಡಿದ್ದಾರೆ.

ಬೆಂಗಳೂರು: 2024ರ ಲೋಕಸಭಾ ಚುನಾವಣೆಯ ನಂತರ ಬಾಲಿವುಡ್ ತೊರೆಯುವ ಬಗ್ಗೆ ಕಂಗನಾ ರನೌತ್ ಸುಳಿವು ನೀಡಿದ್ದಾರೆ. ಸುದ್ದಿ ಮಾಧ್ಯಮ ಆಜ್‌ತಕ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ "ನನ್ನ ಪ್ರಕಾರ ಹಿಂದಿ ಚಿತ್ರರಂಗ ನಕಲಿಯಾಗಿದೆ. ನಾನು ಮುಂದೆ ಸಕ್ರಿಯ ರಾಜಕೀಯದಲ್ಲಿ ತೊಡಗುವೆ" ಎಂದು ಒಪ್ಪಿಕೊಂಡಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಯಾವುದೇ ಚಿತ್ರಗಳಲ್ಲಿ ನಟಿಸದೆ ಇರುವ ಸೂಚನೆ ನೀಡಿದ್ದಾರೆ.
ಬಾಲಿವುಡ್ ನಕಲಿ ಎಂದ ಕಂಗನಾ ರಣಾವತ್
ಮಂಡಿ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದರೆ ಬಾಲಿವುಡ್ ತೊರೆಯುತ್ತೀರಾ ಎಂಬ ಪ್ರಶ್ನೆಗೆ ಕಂಗನಾ ರಣಾವತ್ ಹೀಗೆ ಉತ್ತರಿಸಿದ್ದಾರೆ. "ಬಾಲಿವುಡ್ ಚಲನಚಿತ್ರ ಜಗತ್ತು ಸುಳ್ಳು, ಅಲ್ಲಿ ಎಲ್ಲವೂ ನಕಲಿ. ಅದು ಪ್ರೇಕ್ಷಕರನ್ನು ಸೆಳೆಯಲು ನಕಲಿ ಗುಳ್ಳೆಯಂತೆ ಹೊಳೆಯುವ ಜಗತ್ತು. ಇದು ವಾಸ್ತವ. ನಾನು ತುಂಬಾ ಭಾವೋದ್ರಿಕ್ತ ವ್ಯಕ್ತಿ. ಚಲನಚಿತ್ರಗಳಲ್ಲಿ ನಟಿಸದೆ ಇದ್ದರೆ ಚಲನಚಿತ್ರಗಳಿಗೆ ಕತೆ ಬರೆಯುವೆ. ನನಗೆ ಪಾತ್ರ ನಿರ್ವಹಿಸಲು ಬೇಸರವಾದರೆ ಸಿನಿಮಾ ನಿರ್ದೇಶಿಸುತ್ತೇನೆ ಅಥವಾ ನಿರ್ಮಿಸುತ್ತೇನೆ" ಎಂದು ಹೇಳಿದ್ದಾರೆ. ಈ ಮೂಲಕ ಒಂದು ಕಡೆ ಬಾಲಿವುಡ್‌ಗೆ ಗುಡ್‌ಬೈ ಹೇಳುವ ಮನಸ್ಸು ಹೊಂದಿದ್ದರೂ ಈ ಕ್ಷೇತ್ರದಲ್ಲಿ ನಟನೆ ಹೊರತುಪಡಿಸಿದ ವಿಭಾಗಗಳಲ್ಲಿ ಕೆಲಸ ಮಾಡುವ ಆಸಕ್ತಿಯನ್ನೂ ವ್ಯಕ್ತಪಡಿಸಿದ್ದಾರೆ.
ಕಂಗನಾ ರಣಾವತ್ ರಾಜಕೀಯ ಪ್ರವೇಶ
ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ತವರು ಪ್ರದೇಶವಾದ ಮಂಡಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಇವರು ಸದ್ಯ ಪ್ರಚಾರದಲ್ಲಿ ಬಿಝಿಯಾಗಿದ್ದಾರೆ. ಕಂಗನಾ ಅವರು ಅನುರಾಗ್ ಬಸು ನಿರ್ದೇಶನದ ಗ್ಯಾಂಗ್ ಸ್ಟರ್ ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಮತ್ತು ಶೈನಿ ಅಹುಜಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಮಹೇಶ್ ಭಟನ್ ನಿರ್ಮಾಣದ ಚಿತ್ರ. ಕ್ವೀನ್, ತನು ವೆಡ್ಸ್ ಮನು ಮತ್ತು ತನು ವೆಡ್ಸ್ ಮನು ರಿಟರ್ನ್ಸ್ ನಂತಹ ಚಿತ್ರಗಳೊಂದಿಗೆ ಕಂಗನಾ ಖ್ಯಾತಿ ಪಡೆದಿದ್ದಾರೆ.
ಕಂಗನಾ ರಣಾವತ್ ಮುಂದಿನ ಪ್ರಾಜೆಕ್ಟ್‌ಗಳು
ಕಂಗನಾ ನಿರ್ದೇಶನದ ಎಮರ್ಜೆನ್ಸಿ ಸಿನಿಮಾ ಜೂನ್ ನಲ್ಲಿ ಬಿಡುಗಡೆಯಾಗಬೇಕಿತ್ತು. ಈ ಚಿತ್ರವು 1975 ರಿಂದ 1977 ರವರೆಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶಾದ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗಿನಿಂದ 21 ತಿಂಗಳ ಅವಧಿಯ ಘಟನೆಗಳನ್ನು ಆಧರಿಸಿದೆ. ರಾಜಕೀಯ ಅವಧಿಯ ನಾಟಕದಲ್ಲಿ ಕಂಗನಾ ರಣಾವತ್ ಇಂದಿರಾ ಗಾಂಧಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸೀತಾ: ದಿ ಅವತಾರ, ನೋಟಿ ಬಿನೋದಿನಿ ಇವರ ಮುಂಬರುವ ಚಿತ್ರಗಳು. ಇದರೊಂದಿಗೆ ಆರ್. ಮಾಧವನ್ ಜತೆಗೆ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲಿದ್ದಾರೆ. ಚುನಾವಣಾ ಫಲಿತಾಂಶದಲ್ಲಿ ಗೆಲುವು ಪಡೆದರೆ ಈ ಎಲ್ಲಾ ಪ್ರಾಜೆಕ್ಟ್‌ಗಳನ್ನು ನಿಲ್ಲಿಸುವ ಸಾಧ್ಯತೆಯೂ ಇದೆ.

ವಿಭಾಗ