ಕನ್ನಡ ಸುದ್ದಿ  /  ಮನರಂಜನೆ  /  ಕಿರಣ್‌ ರಾವ್‌ ನಿರ್ದೇಶನದ ಲಾಪತಾ ಲೇಡಿಸ್‌ ಕಥೆ ಕದ್ದದ್ದಾ? ಥೇಟ್‌ ನಮ್ಮ ಸಿನಿಮಾದ ದೃಶ್ಯಗಳ ಯಥಾವತ್‌ ನಕಲು ಅಂದ್ರು ಅನಂತ್‌ ಮಹಾದೇವನ್‌

ಕಿರಣ್‌ ರಾವ್‌ ನಿರ್ದೇಶನದ ಲಾಪತಾ ಲೇಡಿಸ್‌ ಕಥೆ ಕದ್ದದ್ದಾ? ಥೇಟ್‌ ನಮ್ಮ ಸಿನಿಮಾದ ದೃಶ್ಯಗಳ ಯಥಾವತ್‌ ನಕಲು ಅಂದ್ರು ಅನಂತ್‌ ಮಹಾದೇವನ್‌

Laapataa Ladies vs Ghoonghat Ke Pat Khol: ಕಿರಣ್‌ ರಾವ್‌ ನಿರ್ದೇಶನದ ಲಾಪತಾ ಲೇಡಿಸ್‌ ಎಂಬ ಬಾಲಿವುಡ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಕಮಾಲ್‌ ಮಾಡಿತ್ತು. ಇದೀಗ ಈ ಚಿತ್ರದ ಕಥೆಯನ್ನು ನಮ್ಮ ಸಿನಿಮಾ ಘೂಂಘಾಟ್ ಕೆ ಪಾಟ್ ಖೋಲ್ (Ghoonghat Ke Pat Khol)ನಿಂದ ಯಥಾವತ್‌ ಬಳಸಲಾಗಿದೆ ಎಂದು ಅನಂತ್‌ ಮಹಾದೇವನ್‌ ಹೇಳಿದ್ದಾರೆ.

ಲಾಪತಾ ಲೇಡಿಸ್‌  ವರ್ಸಸ್‌ ಘೂಂಘಾಟ್ ಕೆ ಪಾಟ್ ಖೋಲ್
ಲಾಪತಾ ಲೇಡಿಸ್‌ ವರ್ಸಸ್‌ ಘೂಂಘಾಟ್ ಕೆ ಪಾಟ್ ಖೋಲ್

ಬೆಂಗಳೂರು: ಕಿರಣ್ ರಾವ್ ನಿರ್ದೇಶನದ ಲಾಪತಾ ಲೇಡಿಸ್‌ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ವಿಯಾದ ಕಥೆ ಎಲ್ಲರಿಗೂ ಗೊತ್ತು. ಆದರೆ, ಈ ಸಿನಿಮಾದ ಕಥೆಯನ್ನು ಹೋಲುವ ಕಥೆಯ ಸಿನಿಮಾವೊಂದು ಈಗಾಗಲೇ ಇದೆ ಎನ್ನುವ ಸಂಗತಿ ಗೊತ್ತೇ?. ಇದೀಗ ನಟ-ಚಲನಚಿತ್ರ ನಿರ್ಮಾಪಕ ಅನಂತ್ ಮಹಾದೇವನ್ ಒಂದಿಷ್ಟು ವಿವರ ನೀಡಿದ್ದಾರೆ. ಲಾಪತಾ ಲೇಡಿಸ್‌ ಸಿನಿಮಾದ ಕಥೆಯು ಬಹುತೇಕ 1999 ರ ಘೂಂಘಾಟ್ ಕೆ ಪಟ್ ಖೋಲ್ ಸಿನಿಮಾವನ್ನು ಹೋಲುತ್ತದೆ ಎಂದು ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಲಾಪತಾ ಲೇಡಿಸ್‌ ಸಿನಿಮಾದ ಕಥೆ ಕದ್ದದ್ದಾ?

"ಇದು ಕಾಕತಾಳೀಯದಂತೆ ಇದೆ. ನಾನು ಲಾಪತಾ ಲೇಡಿಸ್‌ ನೋಡಿದ್ದೇನೆ. ಈ ಸಿನಿಮಾದ ಆರಂಭದ ಮತ್ತು ನಂತರದ ಕೆಲವು ಘಟನೆಗಳು ಒಂದೇ ಆಗಿವೆ. ನಮ್ಮ ಘೂಂಘಾಟ್ ಕೆ ಪಾಟ್ ಖೋಲ್ ಚಿತ್ರದಲ್ಲಿ ನಗರದ ಹುಡುಗನೊಬ್ಬ ಮದುವೆಯಾಗಲು ಹಳ್ಳಿಗೆ ಹೋಗುತ್ತಾನೆ. ಘೂಂಘಾಟ್‌ನಲ್ಲಿರುವ ತನ್ನ ನವ ವಧುವನ್ನು ರೈಲ್ವೆ ನಿಲ್ದಾಣದಲ್ಲಿ ಕಾಯಲು ಹೇಳಿ ಏನೋ ತರಲು ಹೋಗುತ್ತಾನೆ. ವಾಪಸ್‌ ಬಂದಾಗ ಆ ಸ್ಥಳದಲ್ಲಿ ಕುಳಿತಿದ್ದ ಬೇರೊಬ್ಬ ವಧುವನನ್ನು (ಮುಖದ ಪರದೆ ಹಾಕಿರುವುದರಿಂದ ತಿಳಿಯದೆ) ಕರೆದುಕೊಂಡು ಹೋಗುತ್ತಾನೆ. ಈ ಮೂಲಕ ವಧು ಅದಲುಬದಲಾಗುತ್ತಾಳೆ. ಪೋಲೀಸರು ಮಹಿಳೆಯ ಫೋಟೋವನ್ನು ನೋಡುವ, ಮುಖಕ್ಕೆ ಪರದೆ ಹಾಕಿರುವುದರಿಂದ ಫೋಟೋದಲ್ಲಿ ಗುರುತಿಸಲು ಸಾಧ್ಯವಾಗದ ದೃಶ್ಯವು ನನ್ನ ಚಿತ್ರದಲ್ಲಿದೆ. ಆದರೆ, ನನ್ನ ಘೋಂಘಾಟ್‌ನಲ್ಲಿ ಪೊಲೀಸ್‌ ಬದಲು ಬೇರೊಬ್ಬ ವ್ಯಕ್ತಿ ಫೋಟೋದಲ್ಲಿರುವ ವಧುವನ್ನು ಗುರುತಿಸಲು ವಿಫಲವಾಗುತ್ತಾನೆ" ಎಂದು ನಟ-ಚಲನಚಿತ್ರ ನಿರ್ಮಾಪಕ ಅನಂತ್ ಮಹಾದೇವನ್ ಮಾಹಿತಿ ನೀಡಿದ್ದಾರೆ.

ಇನ್ನಷ್ಟು ಹೋಲಿಕೆಗಳಿವೆ

"ಘೂಂಘಾಟ್ ಕೆ ಪಾಟ್ ಖೋಲ್ ಸಿನಿಮಾದಲ್ಲಿ ಇಬ್ಬರು ಮಹಿಳೆಯರು ಕೊನೆಗೆ ಅದಲುಬದಲಾದ ವ್ಯಕ್ತಿಗಳ ಜತೆಗೆ ಮತ್ತೆ ಮದುವೆಯಾಗುತ್ತಾರೆ. ನಾಲ್ಕು ಪಾತ್ರಗಳ ಮೊದಲ ಮದುವೆ ಕೊನೆಯಾಗುತ್ತದೆ. ಮತ್ತೆ ಹೊಸದಾಗಿ ಮದುವೆಯಾಗುತ್ತಾರೆ. ಸಿನಿಮಾದ ಹಲವು ಸನ್ನಿವೇಶಗಳು, ದೃಶ್ಯಗಳು ನಮ್ಮ ಸಿನಿಮಾದಲ್ಲಿದ್ದಂತೆ ಇವೆ. ರೈಲು ನಿಲ್ದಾಣದಲ್ಲಿ ಅದಲುಬದಲಾಗುವ ಸನ್ನಿವೇಶ ಮತ್ತು ಪರದೆ ಹಾಕಿಕೊಂಡು ಫೋಟೋದಲ್ಲಿ ಗುರುತಿಸಲಾಗದೆ ಇರುವ ಸನ್ನಿವೇಶವಂತೂ ನಮ್ಮ ಸಿನಿಮಾದ ಯಥಾವತ್‌ ನಕಲಾಗಿದೆ" ಎಂದು ಅವರು ಹೇಳಿದ್ದಾರೆ.

ಲಾಪತಾ ಲೇಡಿಸ್‌ ಲೇಖಕರ ಪ್ರತಿಕ್ರಿಯೆ

"ನಾನು ಈ ಸಿನಿಮಾದ ಕಥೆಯ ಸಾರಾಂಶವನ್ನು ಒಂದು ವರ್ಷದ ಹಿಂದೆಯೇ ಇದೆ. ನನ್ನ ಕಥೆ, ಚಿತ್ರಕಥೆ, ಸಂಭಾಷಣೆ, ಕ್ಯಾರೆಕ್ಟರೈಸೇಶನ್ ಮತ್ತು ದೃಶ್ಯಗಳು ಎಲ್ಲವೂ ಶೇಕಡಾ 100 ರಷ್ಟು ಒರಿಜಿನಲ್. ನಾನು ಯಾವುದೇ ಕಥೆ, ಚಲನಚಿತ್ರ ಅಥವಾ ಕಾದಂಬರಿಯಿಂದ ಸ್ಫೂರ್ತಿ ಪಡೆದಿಲ್ಲ. ನಾನು ಅನಂತ್ ಮಹಾದೇವನ್ ಅವರ ಸಿನಿಮಾ ನೋಡಿಲ್ಲ. ಇದು ರವೀಂದ್ರನಾಥ ಟ್ಯಾಗೋರ್ ಅವರ ಬಂಗಾಳಿ ಕಾದಂಬರಿ ನೌಕಾಡುಬಿಯಿಂದ ಸ್ಫೂರ್ತಿ ಪಡೆದಿದೆಯೇ ಎಂದು ಇತ್ತೀಚೆಗೆ ನನ್ನನ್ನು ಕೇಳಲಾಗಿತ್ತು. ಬರವಣಿಗೆಯೂ ಮೂಲಭೂತ ನೈತಿಕತೆಯನ್ನು ನಮಗೆ ಕಲಿಸುವುದರಿಂದ ನಾನು ಇನ್ನೊಬ್ಬರ ಕಥೆಯನ್ನು ನಕಲು ಮಾಡುವುದಿಲ್ಲ" ಎಂದು ಸಿನಿಮಾದ ಕಥೆಯ ಲೇಖಕರಾದ ಬಿಪ್ಲಬ್ ಗೋಸ್ವಾಮಿ ಹೇಳಿದ್ದಾರೆ.

ಲಾಪತಾ ಲೇಡಿಸ್‌ ಸಿನಿಮಾದ ಕುರಿತು

ಗ್ರಾಮೀಣ ಭಾರತದ ಕಥೆಯನ್ನು ಹೊಂದಿರುವ ಸಿನಿಮಾ. ರೈಲು ಪ್ರಯಾಣದ ಸಮಯದಲ್ಲಿ ಹೊಸದಾಗಿ ಮದುವೆಯಾದ ಇಬ್ಬರು ಯುವಕರ ಪತ್ನಿಯರು ಅದಲು ಬದಲಾಗುತ್ತಾರೆ. ಮುಖಕ್ಕೆ ಪರದೆ ಮುಚ್ಚಿಕೊಂಡ ಕಾರಣ ಈ ಘಟನೆ ನಡೆಯುತ್ತದೆ. ಕಾಣೆಯಾದ ಪ್ರಕರಣದ ತನಿಖೆಯನ್ನು ಪೊಲೀಸ್ ಅಧಿಕಾರಿ (ರವಿ ಕಿಶನ್ ಪಾತ್ರ) ವಹಿಸಿಕೊಂಡಾಗ ಈ ಸಿನಿಮಾ ಯಾವ ಹಾದಿ ಹಿಡಿಯುತ್ತದೆ ಎಂಬ ಅಂಶವನ್ನು ಈ ಸಿನಿಮಾದಲ್ಲಿ ತಿಳಿಸಲಾಗಿದೆ. ಅಮೀರ್ ಖಾನ್ ಪ್ರೊಡಕ್ಷನ್ಸ್, ಕಿಂಡ್ಲಿಂಗ್ ಪಿಕ್ಚರ್ಸ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಅಮೀರ್ ಖಾನ್, ಕಿರಣ್ ರಾವ್ ಮತ್ತು ಜ್ಯೋತಿ ದೇಶಪಾಂಡೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರವು ಮಾರ್ಚ್ 1 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈಗ ಈ ಸಿನಿಮಾ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

ಟಿ20 ವರ್ಲ್ಡ್‌ಕಪ್ 2024