Salman khan: ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿಯ ಹೊಣೆ ಹೊತ್ತ ಅನ್ಮೋಲ್; ಇದು ಕೇವಲ ಟ್ರೇಲರ್ ಎಂದ ಬಿಷ್ಣೋಯ್ ಸಹೋದರ
ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ಮಾಡಿದು ತಾನೆಂದು ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಹೊಣೆ ಹೊತ್ತುಕೊಂಡಿದ್ದಾನೆ. ಇದು ಕೇವಲ ಟ್ರೇಲರ್ ಎಂಬ ಎಚ್ಚರಿಕೆಯನ್ನೂ ಆತ ಸೋಷಿಯಲ್ ಮೀಡಿಯಾದಲ್ಲಿ ನೀಡಿದ್ದಾನೆ.
ಬೆಂಗಳೂರು: ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ಮಾಡಿದ್ದು ತಾನೇ ಎಂದು ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಹೇಳಿದ್ದಾರೆ. ಅಮೆರಿಕದಲ್ಲಿರುವ ಈ ಮೋಸ್ಟ್ ವಾಟೆಂಡ್ ಗ್ಯಾಂಗ್‌ಸ್ಟಾರ್ ಸೋಷಿಯಲ್ ಮೀಡಿಯಾದಲ್ಲಿ"ದಾಳಿ ಹೊಣೆ ಹೊತ್ತು" ಪೋಸ್ಟ್ ಮಾಡಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಭಾನುವಾರ ನಡೆದ ಗುಂಡಿನ ದಾಳಿಯ ಹೊಣೆಯನ್ನು ಈತ ಹೊತ್ತುಕೊಂಡಿದ್ದಾನೆ. ಈ ಗುಂಡಿನ ದಾಳಿ ಕೇವಲ ಟ್ರೇಲರ್ ಎಂದು ಆತ ಹೇಳಿದ್ದಾನೆ.
ಅನ್ಮೋಲ್ ಸಂದೇಶವೇನು?
ಅನ್ಮೋಲ್ ಸೋಷಿಯಲ್ ಮೀಡಿಯಾದಲ್ಲಿ ಹೀಗೆ ಪೋಸ್ಟ್ ಮಾಡಿದ್ದಾನೆ. "ನಮಗೆ ಶಾಂತಿ ಬೇಕು. ದಬ್ಬಾಳಿಕೆಯ ವಿರುದ್ಧದ ಏಕೈಕ ನಿರ್ಧಾರ ಯುದ್ಧವಾಗಿದ್ದರೆ, ಆಗಲಿ. ಸಲ್ಮಾನ್ ಖಾನ್ ಅವರೇ ನಾವು ನಿಮಗೆ ಈಗ ಕೇವಲ ಟ್ರೇಲರ್ ಅನ್ನು ತೋರಿಸಿದ್ದೇವೆ. ಇದರಿಂದ ನಿಮಗೆ ನಮ್ಮ ಶಕ್ತಿಯ ಅರಿವಾಗಿರಬಹುದು. ಇದನ್ನು ಟೆಸ್ಟ್ ಮಾಡಲು ಹೋಗಬೇಡಿ. ಇದು ಮೊದಲ ಮತ್ತು ಕೊನೆಯ ಎಚ್ಚರಿಕೆ. ಇದಾದ ನಂತರ ನಾವು ಮನೆಯ ಹೊರಗೆ ಗುಂಡು ಹಾರಿಸುವುದಿಲ್ಲ. ನಮ್ಮಲ್ಲಿ ದಾವೂದ್ ಇಬ್ರಾಹಿಂ ಮತ್ತು ಚೋಟಾ ಶಕೀಲ್ ಹೆಸರಿನ ನಾಯಿಗಳಿವೆ. ಈಗ ನಾನು ಹೆಚ್ಚು ಮಾತನಾಡುವ ಅಭ್ಯಾಸ ಹೊಂದಿಲ್ಲ" ಎಂದು ಸೋಷಿಯಲ್ ಮೀಡಿಯಾದಲ್ಲಿ ಅನ್ಮೋಲ್ ಪೋಸ್ಟ್ ಮಾಡಿದ್ದಾನೆ.
ಏನಿದು ಘಟನೆ?
ಭಾನುವಾರ ಮುಂಜಾನೆ ಮುಂಬೈನ ಬಾಂದ್ರಾದಲ್ಲಿರುವ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ನಾಲ್ಕು ಸುತ್ತು ಗುಂಡು ಹೊಡೆದಿದ್ದರು. ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಮುಂಜಾನೆ 4.51 ರ ಸುಮಾರಿಗೆ ಈ ಘಟನೆ ನಡೆದಿದೆ. ಬಾಂದ್ರಾದಲ್ಲಿರುವ ಸಲ್ಮಾನ್ ಮನೆಯ ಹೊರಗೆ ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಗಾಳಿಯಲ್ಲಿ ಹಲವು ಸುತ್ತು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇದಾದ ಬಳಿಕ ಬಾಲಿವುಡ್ ನಟನ ಮನೆಯ ಹೊರಗೆ ಸೆಕ್ಯುರಿಟಿ ಹೆಚ್ಚಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಅಪರಾಧ ವಿಭಾಗ, ಸ್ಥಳೀಯ ಪೊಲೀಸರು ಮತ್ತು ವಿಧಿವಿಜ್ಞಾನ ತಂಡಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಮನೆಯ ಹೊರಗೆ ಹಾರಿಸಲಾದ ಗುಂಡುಗಳ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ವಾಂಟೆಡ್ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಈ ಹಿಂದೆಯೂ ಹಲವು ಬಾರಿ ಸಲ್ಮಾನ್ ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಪಂಜಾಬಿ ಗಾಯಕ ಮತ್ತು ರಾಪರ್ ಸಿಧು ಮೂಸ್ ವಾಲಾ ಅವರ ಹತ್ಯೆಗೆ ಲಾರೆನ್ಸ್ ಬಿಷ್ಣೋಯ್ ಅವರ ಗ್ಯಾಂಗ್ ಕಾರಣವಾಗಿತ್ತು. ಅನ್ಮೋಲ್ ಬಿಷ್ಣೋಯ್ ಅಲಿಯಾಸ್ ಭಾನು ಮೂಸ್ ವಾಲಾ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯಾಗಿದ್ದಾನೆ. ಇದೀಗ ಈತನೇ ಈ ದಾಳಿಯ ಹೊಣೆ ಹೊತ್ತಿದ್ದಾನೆ. ನಕಲಿ ಪಾಸ್‌ಪೋರ್ಟ್ ನೆರವಿನಿಂದ ಭಾರತದಿಂದ ಪರಾರಿಯಾಗಿದ್ದನು. 2023ರಲ್ಲಿ ಈತ ಕೀನ್ಯಾದಲ್ಲಿದ್ದ. ನಿರಂತರವಾಗಿ ತನ್ನ ವಾಸಸ್ಥಳವನ್ನು ಬದಲಾಯಿಸುತ್ತ ತಲೆಮರೆಸಿಕೊಂಡಿದ್ದಾನೆ ಎಂದು ವರದಿಗಳು ಹೇಳಿವೆ.