ಬಾಲಿವುಡ್‌ಗೆ ಹೊರಟಿತು ತಮಿಳಿನ ಸೂಪರ್ ಹಿಟ್ ಮಹಾರಾಜ ಸಿನಿಮಾ; ವಿಜಯ್ ಸೇತುಪತಿ ಪಾತ್ರದಲ್ಲಿ ನಟಿಸ್ತಾರಾ ಆಮೀರ್ ಖಾನ್?
ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು, ಕಲೆಕ್ಷನ್ ವಿಚಾರದಲ್ಲಿಯೂ ಶತಕೋಟಿ ಸೇರಿದ ವಿಜಯ್ ಸೇತುಪತಿ ಅಭಿನಯದ ಮಹಾರಾಜ ಸಿನಿಮಾ ಇದೀಗ ಹಿಂದಿಗೆ ರಿಮೇಕ್ ಆಗುತ್ತಿದೆ.

Maharaja Hindi Remake: ಲಾಲ್ ಸಿಂಗ್ ಛಡ್ಡಾ ಸಿನಿಮಾದ ಸೋಲಿನ ಬಳಿಕ ನಟ ಆಮೀರ್ ಖಾನ್ ಮುಂದಿನ ಸಿನಿಮಾ ಈ ವರೆಗೂ ಘೋಷಣೆ ಆಗಿಲ್ಲ. ಸಿನಿಮಾ ಮಾಡ್ತಾರಾ? ಅಥವಾ ಇಲ್ವಾ? ಈ ಬಗ್ಗೆಯೂ ಯಾವುದೇ ಖಚಿತ ಮಾಹಿತಿ ಇಲ್ಲ. ಹೀಗಿರುವಾಗಲೇ ಸೌತ್‌ನಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ಸಿನಿಮಾವೊಂದರ ಮೇಲೆ ಆಮೀರ್ ಖಾನ್ ಕಣ್ಣು ಬಿದ್ದಿದೆ. ಆ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಯಾವುದಾ ಸಿನಿಮಾ? ಇಲ್ಲಿದೆ ನೋಡಿ ಮಾಹಿತಿ.
ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು, ಕಲೆಕ್ಷನ್ ವಿಚಾರದಲ್ಲಿಯೂ ಶತಕೋಟಿ ಸೇರಿದ ವಿಜಯ್ ಸೇತುಪತಿ ಅಭಿನಯದ ಮಹಾರಾಜ ಸಿನಿಮಾ ಇದೀಗ ಹಿಂದಿಗೆ ರಿಮೇಕ್ ಆಗುತ್ತಿದೆ. ರಾಕ್ಷಸನ್, ಜಿಗರ್‌ತಂಡ, ಸೂರರೈ ಪೊಟ್ರು ಸೇರಿ ಹಲವು ತಮಿಳಿನ ಹಿಟ್ ಸಿನಿಮಾಗಳು ಈಗಾಗಲೇ ಹಿಂದಿಗೆ ರಿಮೇಕ್ ಆಗಿವೆ. ಈಗ ಮಹಾರಾಜ ಸಿನಿಮಾ ಸಹ ರಿಮೇಕ್ ಆಗುವ ಹಂತಕ್ಕೆ ಬಂದು ನಿಂತಿದೆ.
ಖಳನಟನಾಗಿಯೇ ಮಿಂಚಿದರೂ, ನಾಯಕನಾಗಿ ವಿಜಯ್ ಸೇತುಪತಿಗೆ ಯಶಸ್ಸು ಸಿಕ್ಕಿರಲ್ಲಿಲ್ಲ. ಆ ಕೊರಗನ್ನು ಮಹಾರಾಜ ಸಿನಿಮಾ ನಿವಾರಣೆ ಮಾಡಿದೆ. ಕಳೆದ ತಿಂಗಳು ಬಿಡುಗಡೆಯಾದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 105 ಕೋಟಿ ಗಳಿಕೆ ಕಂಡಿತ್ತು. ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಿ ಅಲ್ಲಿಯೂ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿತ್ತು. ಇದೀಗ ಇದೇ ಸಿನಿಮಾ ಯಶಸ್ಸಿನ ಓಟ ಮುಂದುವರಿದಿದೆ. ಬಾಲಿವುಡ್‌ಗೂ ಇದರ ರಿಮೇಕ್ ಹಕ್ಕುಗಳು ಮಾರಾಟವಾಗಿವೆ.
ಆಮೀರ್ ಖಾನ್ ನಟಿಸ್ತಾರಾ?
ಕಾಲಿವುಡ್‌ನಲ್ಲಿ ಸದ್ದು ಮಾಡಿದ್ದ ಮಹಾರಾಜ ಸಿನಿಮಾ ಇದೀಗ ಹಿಂದಿಗೆ ರಿಮೇಕ್ ಆಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ವಿಜಯ್ ಸೇತುಪತಿ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಅಮೀರ್ ಖಾನ್ ನಟಿಸಲಿದ್ದಾರೆ ಎನ್ನಲಾಗಿದೆ. ಎ ಆರ್ ಮುರುಗದಾಸ್ ನಿರ್ದೇಶನದ ಗಜಿನಿಯ ಹಿಂದಿ ರೀ-ಮೇಕ್‌ನಲ್ಲಿ ಸೂರ್ಯ ಪಾತ್ರದಲ್ಲಿ ಅಮೀರ್ ಖಾನ್ ನಟಿಸಿ ಹಿಟ್ ಕೊಟ್ಟಿದ್ದರು. ಇದೀಗ ಮಹಾರಾಜ ಚಿತ್ರದ ರಿಮೇಕ್ ರೈಟ್ಸ್ ಖರೀದಿಸಿದ್ದಾರೆ. ಹಾಗಾದರೆ, ಅವರೇ ಸಿನಿಮಾದಲ್ಲಿ ನಟಿಸ್ತಾರಾ? ಅಥವಾ ಬೇರೆಯವರಿಗೆ ಅವರ ಸಂಸ್ಥೆ ಅಡಿ ಸಿನಿಮಾ ಮಾಡ್ತಾರಾ? ಎಂಬುದು ಇನ್ನಷ್ಟೇ ಅಧಿಕೃತವಾಗಬೇಕಿದೆ.
ವಿಜಯ್ ಸೇತುಪತಿಯ 50ನೇ ಸಿನಿಮಾ
ಮಾಸ್ಟರ್, ವಿಕ್ರಮ್ ಮತ್ತು ಜವಾನ್ ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದ ವಿಜಯ್ ಸೇತುಪತಿ ತಮ್ಮ 50ನೇ ಚಿತ್ರ ಮಹಾರಾಜ ಮೂಲಕ ನಾಯಕನಾಗಿ ಹಿಟ್ ಪಡೆದುಕೊಂಡಿದ್ದಾರೆ. ಈ ಹಿಂದೆ ತಮಿಳಿನ 'ಕುರುಂಗು ಟಾಮಿ' ಚಿತ್ರವನ್ನು ನಿರ್ದೇಶಿಸಿದ್ದ ನಿಥಿಲನ್ ಸಾಮಿನಾಥನ್, ಮಹಾರಾಜ ಸಿನಿಮಾ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಮಮತಾ ಮೋಹನ್‌ದಾಸ್, ಅನುರಾಗ್ ಕಶ್ಯಪ್, ಅಭಿರಾಮಿ, ಸೇರಿ ಇನ್ನೂ ಅನೇಕರು ಈ ಚಿತ್ರದಲ್ಲಿ ನಟಿಸಿದ್ದರು. ಕನ್ನಡದ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದರು.
