ಕನ್ನಡ ಸುದ್ದಿ  /  ಮನರಂಜನೆ  /  Main Atal Hoon Review: ಥೇಟ್‌ ವಾಜಪೇಯಿ ಅವ್ರನ್ನೇ ನೋಡ್ದಂಗಾಯ್ತು, ತ್ರಿಪಾಠಿಯ ಪಾತ್ರ ಪರಕಾಯ ಪ್ರವೇಶ ಅಂದ್ರೆ ಇದೇ ಇರಬೇಕು

Main Atal Hoon Review: ಥೇಟ್‌ ವಾಜಪೇಯಿ ಅವ್ರನ್ನೇ ನೋಡ್ದಂಗಾಯ್ತು, ತ್ರಿಪಾಠಿಯ ಪಾತ್ರ ಪರಕಾಯ ಪ್ರವೇಶ ಅಂದ್ರೆ ಇದೇ ಇರಬೇಕು

Main Atal Hoon Movie review: ಭಾರತದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನಗಾಥೆಯನ್ನು ತೆರೆಮೇಲೆ ತೋರಿಸುವಲ್ಲಿ ಚಿತ್ರತಂಡ ಅಷ್ಟೇನೂ ಯಶಸ್ವಿಯಾಗದೆ ಇರಬಹುದು. ಆದರೆ, ಪಂಕಜ್‌ ತ್ರಿಪಾಠಿ ಮಾತ್ರ ಥೇಟ್‌ ಅಟಲ್‌ ಆಗಿ ಚಿತ್ರದ ಉದ್ದಕ್ಕೂ ಪರಕಾಯ ಪ್ರವೇಶ ಮಾಡಿದ್ದಾರೆ.

ಮೇನ್‌ ಅಟಲ್‌ ಹೂನ್‌ ಸಿನಿಮಾ ವಿಮರ್ಶೆ
ಮೇನ್‌ ಅಟಲ್‌ ಹೂನ್‌ ಸಿನಿಮಾ ವಿಮರ್ಶೆ

Main Atal Hoon Movie review: ಅವನು ಅರ್ಧ ಕಣ್ಣು ಮುಚ್ಚಿ ಎಲ್ಲವನ್ನೂ ಹೇಳುವಾಗ... ಏಳು ಸಮುದ್ರದ್ಯಾಂತ ಎಲ್ಲರೂ ಕೇಳುತ್ತಿದ್ದರು (अपनी आधी आँखें बंद करके, जब वह पूरी बात बोलते थे, तोह सात समन्दर पार हर कोई सुनता था). ಮೇನ್‌ ಅಟಲ್‌ ಹೂನ್‌ ಸಿನಿಮಾದ ಆರಂಭದ ದೃಶ್ಯದಲ್ಲಿ ಬರುವ ಈ ಸಾಲುಗಳು ಈ ಸಿನಿಮಾದ ಕುರಿತು ಎಲ್ಲವನ್ನೂ ಹೇಳುತ್ತದೆ. ಭಾರತದ ಹತ್ತನೇ ಪ್ರಧಾನ ಮಂತ್ರಿ, ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನ ಮತ್ತು ಕರಿಯರ್‌ ಕುರಿತು ದೊಡ್ಡ ಪರದೆ ಮೇಲೆ ಕಟ್ಟಿಕೊಡುವ ಪುಟ್ಟ ಪ್ರಯತ್ನದಂತೆ "ಮೇನ್‌ ಅಟಲ್‌ ಹೂನ್‌" ಭಾಸವಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಪಂಕಜ್‌ ತ್ರಿಪಾಠಿ ಅವರು ಈ ಚಿತ್ರದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಆಗಿ ಪರಕಾಯ ಪ್ರವೇಶ ಮಾಡಿದ್ದಾರೆ. ಇದು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್ ನಿರ್ದೇಶನದ ಸಿನಿಮಾ. ಸಿನಿಮಾದಲ್ಲಿ ಎಲ್ಲೂ ಅತಿರೇಕಗಳು ಇಲ್ಲ. ದೇಶಭಕ್ತಿಯ ಸಿನಿಮಾವಾಗಿ ರಾರಾಜಿಸುವುದಿಲ್ಲ. ರಾಜಕಾರಣಿ ಅಥವಾ ಪಕ್ಷದ ಇಮೇಜ್‌ ಆಗಿ ವೈಭವಿಕರಿಸುವುದಿಲ್ಲ. ಅಟಲ್‌ ಅವರ ಹಲವು ದಶಕಗಳ ಪ್ರಯಾಣವನ್ನು ಅವರ ನಿಜವಾದ ಬದುಕಿಗೆ ಗೌರವ ಸೂಚಿಸುವ ಪ್ರಾಮಾಣಿಕ ಪ್ರಯತ್ನದಂತೆ ಕಾಣಿಸುತ್ತದೆ. ಕಾವ್ಯದ ಕುರಿತು ಅವರಿಗಿರುವ ತೀವ್ರ ಆಸಕ್ತಿ, ಕಾನೂನು ಅಧ್ಯಯನ, ಪತ್ರಿಕೆಯ ಸಂಪಾದಕ, ಸ್ವಾತಂತ್ರ್ಯ ಹೋರಾಟಗಾರ, ಅಂತಿಮವಾಗಿ ರಾಜಕೀಯಕ್ಕೆ ಸೇರುವ ಅವರ ಬದುಕಿನ ಪಥಗಳನ್ನು ಈ ಚಿತ್ರ ಬಿಂಬಿಸುತ್ತದೆ. ಕೃತಕ ನಾಟಕೀಯ ಸಿನಿಮ್ಯಾಟಿಕ್‌ ಆಗಿ ಅವರ ಜೀವನವನ್ನು ಲಂಬಿಸದೆ ಶಾಂತ ಸಾಗರದಂತೆ ಅವರ ಜೀವನಗಾಥೆಯನ್ನು ತೆರೆಯ ಮೇಲೆ ತೋರಿಸುವ ಪ್ರಯತ್ನದಂತೆ ಕಾಣಿಸುತ್ತದೆ.

ಮೇನ್‌ ಅಟಲ್‌ ಹೂನ್‌ ಸಿನಿಮಾ ವಿಮರ್ಶೆ

ಚಿತ್ರವು ಅಟಲ್‌ ಅವರ ವಿಸ್ತಾರವಾದ ಜೀವನದ ಕುರಿತು ಹೇಳುವ ಪ್ರಯತ್ನವು ಸಿನಿಮಾದ ದ್ವಿತೀಯಾರ್ಧದಲ್ಲಿ ಅಸಮಂಜಸವಾಗಿ ಕಾಣಿಸಿದೆ. ಚಿತ್ರದ ಕೊನೆಗೆ ಅವಸರವೇ ಕಾಣಿಸುತ್ತದೆ. ಬಾಲ್ಯವನ್ನು ತೋರಿಸುವ ಒಂದು ಫ್ಲ್ಯಾಷ್‌ಬ್ಯಾಕ್‌ ದೃಶ್ಯವಿದೆ. ಅಲ್ಲಿ ಯುವ ಅಟಲ್‌ ತನ್ನ ಆಕರ್ಷಕ ಶೈಲಿಯಲ್ಲಿ ತಾಜ್‌ಮಹಲ್‌ನಲ್ಲಿ ಕವಿತೆ ಓದುತ್ತಾನೆ. ಕೆಲವು ವರ್ಷಗಳ ಬಳಿಕ ಎಲ್ಲರೂ ದೊಡ್ಡವರಾದರು. ಮಧ್ಯರಾತ್ರಿಯಲ್ಲಿ ಸದ್ದಿಲ್ಲದೆ ಕಟ್ಟಡವನ್ನು ಏರುತ್ತಾರೆ. ಇಂಗ್ಲೆಂಡ್‌ ಧ್ವಜವನ್ನು ತೆಗೆದು ಭಾರತದ ತ್ರಿವರ್ಣವನ್ನು ಏರಿಸುತ್ತಾರೆ. ಈ ಅಂಶವು ಅವರ ವ್ಯಕ್ತಿತ್ವದಲ್ಲಿ ಇರುವ ಇನ್ನೊಂದು ಹೋರಾಟದ ಅಂಶವನ್ನೂ ತೋರಿಸುತ್ತದೆ. ಆರ್‌ಎಸ್‌ಎಸ್‌ನಲ್ಲಿ ಅಟಲ್‌ ಅತ್ಯಂತ ಜಾಗರೂಕ ಮತ್ತು ಸಕ್ರಿಯ ಸದಸ್ಯರು. ಅವರು ತಮ್ಮ ಕೆಲಸದ ಮೂಲಕ ಬದಲಾವಣೆ ತರಬೇಕೆಂದು ಬಯಸುತ್ತಾರೆ. ಅಂತಿಮವಾಗಿ ರಾಜಕಾರಣಿಯಾಗಿ ಸಂಸತ್ತಿನಲ್ಲಿ ಅವರು ಮಾಡುವ ಭಾಷಣಗಳು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತವೆ.

ಚಾಧವ್‌ ಮತ್ತು ರಿಷಿ ವೀರಮಾನಿ ಬರೆದ ಕಥೆಯು ಹೆಚ್ಚು ವೇಗ ಹೊಂದಿಲ್ಲ. ಹೆಚ್ಚು ಪ್ರಭಾವಶಾಲಿಯಾಗಿಲ್ಲ. ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ತಮ್ಮ ಮಂತ್ರಿಗಳ ಜತೆ ಶಾಂತಿ ಪ್ರಸ್ತಾಪ ಮತ್ತು ಪಾಕಿಸ್ತಾನದ ಜತೆ ಮುಂದಿನ ಯುದ್ಧದ ಬಗ್ಗೆ ಚರ್ಚಿಸುವ ಪ್ರಮುಖ ದೃಶ್ಯದೊಂದಿಗೆ ಸಿನಿಮಾ ಆರಂಭವಾಗುತ್ತದೆ. ಕೆಲವೇ ನಿಮಿಷಗಳಲ್ಲಿ ಅಟಲ್‌ ಅವರ ವ್ಯಕ್ತಿತ್ವವು ಶಾಂತ ಮತ್ತು ಆಕ್ರಮಣಶೀಲ ಮಿಶ್ರಣವೆಂಬ ಅಂಶವನ್ನು ಸಾದರಪಡಿಸುತ್ತದೆ. ಆದರ್ಶವಾದಿಯಾಗಿ, ನೆರೆಹೊರೆ ದೇಶಗಳ ಜತೆ ಸಂಬಂಧ ಸರಿಪಡಿಸಲು ಪ್ರಯತ್ನಿಸುವ ವ್ಯಕ್ತಿಯಾಗಿ ಕಾಣಿಸುತ್ತಾರೆ. ದೇಶಕ್ಕೆ ಯಾವಾಗಲೂ ಮೊದಲ ಸ್ಥಾನ ನೀಡುತ್ತಾರೆ. ಆದರೆ, ಶತ್ರುಗಳು ಬೆನ್ನಹಿಂದೆ ಇದ್ದಾರೆ ಎಂದು ಗೊತ್ತಾದಗ ಯಾವುದೇ ದೃಢ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ. ದಿವಂಗತ ಮಾಜಿ ಪ್ರಧಾನಿಯ ವ್ಯಕ್ತಿತ್ವವನ್ನು ಸೂಕ್ಷ್ಮವಾದ ರೀತಿಯಲ್ಲಿ ತೋರಿಸುವ ಪ್ರಯತ್ನವನ್ನು ಚಿತ್ರ ಮಾಡಿದೆ. ಆದರೆ, ನಿಧಾನಗತಿಯ ಮತ್ತು ಮಂಕಾದ ಚಿತ್ರಕಥೆಯು ಅಟಲ್‌ ಅವರನ್ನು ಪ್ರಭಾವಶಾಲಿಯಾಗಿ ತೋರಿಸುವಲ್ಲಿ ಸೋತಿದೆ. ಕೆಲವೊಂದು ಊರುಗಳ ಹೆಸರನ್ನು ನೀವು ಗೂಗಲ್‌ನಲ್ಲಿ ಸರ್ಚ್‌ ಮಾಡಿ ಹುಡುಕಬೇಕಷ್ಟೇ.

ಅಟಲ್‌ ಸಿನಿಮಾ ಡಾಕ್ಯುಮೆಂಟರಿ ರೀತಿ ಇದೆಯೇ?

ಚಿತ್ರದ ಬಹುತೇಕ ಭಾಗಗಳು ಅಟಲ್‌ ಬಿಹಾರಿ ವಾಜಪೇಯಿ ಅವರ ಜೀವನದ ಪ್ರಮುಖ ಘಟನೆಗಳ ಸಾಕ್ಷ್ಯಚಿತ್ರದಂತೆ ಕಾಣಿಸುತ್ತದೆ. ಮಹಾತ್ಮ ಗಾಂಧಿಯವರ ಹತ್ಯೆ, 1953 ರಲ್ಲಿ ಕಾಶ್ಮೀರ ದಾಳಿ, 1962 ರಲ್ಲಿ ಚೀನಾದೊಂದಿಗಿನ ಯುದ್ಧ, 1963 ರಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧ, 1975 ರಲ್ಲಿ ತುರ್ತು ಪರಿಸ್ಥಿತಿ ಹೀಗೆ ಹಲವು ಅಂಶಗಳು ನಮ್ಮ ಇತಿಹಾಸದ ಪುಟಗಳ ಭಾಗವಾಗಿ ಕಾಣಿಸುತ್ತದೆ. ಅಟಲ್‌ ಅವರ ಜೀವನ ತಿಳಿಸಲು ಈ ಅಂಶಗಳು ಅಗತ್ಯ ಎನ್ನುವುದು ನಿಜ. ಇವುಗಳನ್ನು ಸಂಕ್ಷಿಪ್ತವಾಗಿ ತೋರಿಸಿದ್ದರೆ ಸಾಕಿತ್ತು. ಇಂತಹ ಅಂಶಗಳೇ ಚಿತ್ರವನ್ನು ನಿಧಾನಗತಿಯಲ್ಲಿ ಸಾಗುವಂತೆ ಮಾಡುತ್ತದೆ. ನಿರೂಪಣೆಯೂ ಭಾವನಾತ್ಮಕವಾಗಿ ಪ್ರಭಾವ ಬೀರುವುದಿಲ್ಲ.

ಸಿನಿಮಾ ಇಂಟರ್‌ವೆಲ್‌ ಬಳಿಕ ಆಮೆಗಿಂತಲೂ ನಿಧಾನವಾಗಿ ತೆವಳುತ್ತದೆ. ಭಾರತೀಯ ಜನತಾ ಪಕ್ಷದ ರಚನೆಯ ನಂತರ ಹಲವು ಘಟನೆಗಳನ್ನು ತೋರಿಸಲಾಗಿದೆ. 1998 ರಲ್ಲಿ ಪೋಖ್ರಾನ್ ಪರೀಕ್ಷೆಗಳ ನಂತರ ಭಾರತ ಪರಮಾಣು ಶಕ್ತಿಯಾಗುವುದು, ದೆಹಲಿಯಿಂದ ಪಾಕಿಸ್ತಾನಕ್ಕೆ ಬಸ್ ಸವಾರಿ ಮತ್ತು ಕಾರ್ಗಿಲ್ ಯುದ್ಧ, ಅಟಲ್ ಅವರ ಪ್ರಮುಖ ಹೆಗ್ಗುರುತುಗಳು. ಎರಡು ಗಂಟೆ 19 ನಿಮಿಷದಲ್ಲಿ ಇಂತಹ ಅನೇಕ ವಿಷಯಗಳನ್ನು ತೋರಿಸಲು ಪ್ರಯತ್ನಿಸಿರುವುದರಿಂದ ಇವು ಹಲವು ದೃಶ್ಯಗಳ ಕೊಲಾಜ್‌ನಂತೆ ಭಾಸವಾಗುತ್ತದೆ. ಇತಿಹಾಸ ಮತ್ತು ರಾಜಕೀಯದಲ್ಲಿ ಆಸಕ್ತಿ ಇಲ್ಲದೆ ಇದ್ದವರಿಗೆ ಮೇನ್‌ ಅಟಲ್‌ ಹೂನ್‌ ಆಪ್ತವಾಗದು.

ಪಂಕಜ್‌ ತ್ರಿಪಾಠಿಯ ಅಮೋಘ ಅಭಿನಯಕ್ಕೆ ಭೇಷ್‌ ಹೇಳದೆ ಇರಲು ಸಾಧ್ಯವೇ?

ಈ ಚಿತ್ರದ ಹಲವು ನ್ಯೂನತೆ, ಲೋಪದೋಷಗಳ ಹೊರತಾಗಿಯೂ ಪಂಕಜ್‌ ತ್ರಿಪಾಠಿ ಅಭಿನಯಕ್ಕೆ ನೂರಕ್ಕೆ ನೂರು ಅಂಕ ನೀಡಿದರೆ ತಪ್ಪಾಗದು. ಅವರ ಘನ ಗಂಭೀರ ಅಭಿನಯ ಸೆಳೆಯುತ್ತದೆ. ಅವರ ನಟನೆಯೇ ಈ ಚಿತ್ರದ ಆಸ್ತಿ. ಅಟಲ್‌ ಬಿಹಾರಿ ವಾಜಪೇಯಿಯಾಗಿ ಅವರು ನಿಜಾರ್ಥದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ತನ್ನ ಮುಖದಲ್ಲಿ ಹಲವು ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ದೈಹಿಕವಾಗಿ ಪಂಕಜ್‌ ಅವರು ಅಟಲ್‌ರಂತೆ ಕಾಣಿಸದೆ ಇದ್ದರೂ ಅವರ ಧ್ವನಿ, ಮ್ಯಾನರಿಸಂ ಥೇಟ್‌ ಅಟಲ್‌ ಬಿಹಾರಿ ಅವರನ್ನೇ ನೆನಪಿಸುತ್ತದೆ.

ಭಾಷಣ ಮಾಡುವಾಗ, ಸಂಭಾಷಣೆ ಮಾಡುವಾಗ ದೇಹದ ಹಾವಭಾವಗಳು, ಕಣ್ಣುಗಳು, ನಗು ಎಲ್ಲವೂ ನಿಜವಾದ ಅಟಲ್‌ ಬಿಹಾರಿ ವಾಜಪೇಯಿ ಅವರನ್ನೇ ಕಣ್ಣಿನ ಮುಂದೆ ತರುತ್ತದೆ. ಪಂಕಜ್ ರಾಮಲೀಲಾ ಮೈದಾನದಲ್ಲಿ ಮಳೆ ಸುರಿಯುತ್ತಿದ್ದರೂ ಭಾಷಣ ಮಾಡುವ ದೃಶ್ಯ ನಿಜಕ್ಕೂ ಉತ್ತಮವಾಗಿ ಬರೆದ ಮತ್ತು ಸುಂದರವಾಗಿ ಚಿತ್ರೀಕರಿಸಿರುವ ದೃಶ್ಯಗಳಲ್ಲಿ ಒಂದಾಗಿದೆ. ಇದಾದ ಬಳಿಕ ಅಟಲ್ ಅವರ ತಂದೆಯಾಗಿ ಪಿಯೂಷ್ ಮಿಶ್ರಾ ನಟನೆಯೂ ನಮ್ಮ ಮನಸ್ಸನ್ನು ಗೆಲ್ಲುತ್ತದೆ. ಪಿಯೂಷ್ ಮತ್ತು ಪಂಕಜ್ ಅವರ ತಂದೆ-ಮಗನ ದೃಶ್ಯಗಳು ತುಂಬಾ ಇಷ್ಟವಾಗುತ್ತವೆ. ದೇಶದ ಉನ್ನತಿಗಾಗಿ ತನ್ನ ಜೀವನವನ್ನು ಮುಡಿಪಾಗಿಡಲು ಬಯಸುತ್ತೇನೆ ಎಂದು ತನ್ನ ತಂದೆಯಲ್ಲಿ ಅಟಲ್‌ ಹೇಳುವ ದೃಶ್ಯ ಗಮನ ಸೆಳೆಯುತ್ತದೆ. ಎಲ್‌ಕೆ ಅಡ್ವಾಣಿಯಾಗಿ ರಾಜಾ ರಮೇಶ್‌ಕುಮಾರ್ ಸೇವಕ್ ಮತ್ತು ಸುಷ್ಮಾ ಸ್ವರಾಜ್ ಆಗಿ ಗೌರಿ ಸುಖಾಂಕರ್ ಅವರು ಸಿನಿಮಾಕ್ಕೆ ಸರಿಯಾದ ಬೆಂಬಲ ನೀಡುತ್ತಾರೆ.

ಈ ಸಿನಿಮಾ ಅಟಲ್ ಬಿಹಾರಿ ವಾಜಪೇಯಿ, ಜವಾಹರ್ ಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ಹಲವಾರು ಸಿಲೂಯೆಟ್ ಮತ್ತು ಲಾಂಗ್ ಶಾಟ್‌ಗಳನ್ನು ಹೊಂದಿದೆ. , ಹಿಂದಿನ ಘಟನೆಗಳ ಕಪ್ಪು-ಬಿಳುಪು ಆರ್ಕೈವಲ್ ಫೂಟೇಜ್ ನಿರೂಪಣೆಯನ್ನು ಹೆಚ್ಚು ಅಧಿಕೃತ ಮತ್ತು ನೈಜವಾಗಿ ಕಾಣುವಂತೆ ಮಾಡುತ್ತದೆ. ಒಟ್ಟಾರೆ, ಮೇನ್‌ ಅಟಲ್‌ ಹೂನ್‌ ಸಿನಿಮಾವು ಅಟಲ್‌ ಅವರ ಜೀವನ ಪ್ರಯಾಣವನ್ನು ದಾಖಲಿಸಲು ಮಾಡಿರುವ ವಿನಮ್ರ ಮತ್ತು ಶ್ರದ್ಧಾಪೂರ್ವಕ ಪ್ರಯತ್ನವಾಗಿದೆ. ಪಂಕಜ್‌ ತ್ರಿಪಾಠಿಯವರ ಪರಕಾಯ ಪ್ರವೇಶವಾಗಿದೆ. ಆದರೆ, ಕಥೆ ಹೇಳುವ ರೀತಿಯಲ್ಲಿ ಸೋತಿರುವುದು ಮೇನ್‌ ಅಟಲ್‌ ಹೂನ್‌ನ ಒಂದು ದೊಡ್ಡ ಕೊರತೆಯಾಗಿದೆ.

ಸಿನಿಮಾ ವಿಮರ್ಶೆ: ಮೋನಿಕಾ ರಾವಲ್‌ ಕುಕ್ರೆಜಾ, ಹಿಂದೂಸ್ತಾನ್‌ ಟೈಮ್ಸ್‌

ಕನ್ನಡಕ್ಕೆ: ಪ್ರವೀಣ್‌ ಚಂದ್ರ ಪುತ್ತೂರು, ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ

'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ. ಇಮೇಲ್: ht.kannada@htdigital.in

ಟಿ20 ವರ್ಲ್ಡ್‌ಕಪ್ 2024