Main Atal Hoon OTT: ಮೈ ಅಟಲ್ ಹೂನ್ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಘೋಷಣೆ; ಈ ಚಿತ್ರವನ್ನು ಎಲ್ಲಿ, ಯಾವಾಗ ನೋಡಬಹುದು?
ದೇಶ ಕಂಡ ಪ್ರಭಾವಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಆಧರಿತ ಮೈ ಅಟಲ್ ಹೂನ್ ಸಿನಿಮಾ ಚಿತ್ರ ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾಗಿತ್ತು. ಈಗ ಇದೇ ಸಿನಿಮಾ ಒಟಿಟಿಗೆ ಆಗಮಿಸುತ್ತಿದೆ. ಅಧಿಕೃತವಾಗಿ ದಿನಾಂಕವೂ ಘೋಷಣೆಯೂ ಆಗಿದೆ. ಹೀಗಿದೆ ವಿವರ.
Main Atal Hoon OTT Streaming Date: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಆಧರಿತ ಮೈ ಅಟಲ್ ಹೂನ್ ಸಿನಿಮಾ ಜನವರಿ 19ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಚಿತ್ರದಲ್ಲಿ ವಾಜಪೇಯಿ ಪಾತ್ರವನ್ನು ಪಂಕಜ್ ತ್ರಿಪಾಠಿ ನಿರ್ವಹಿಸಿದ್ದರು. ನೋಡುಗರಿಂದ ಸೈ ಎನಿಸಿಕೊಂಡಿದ್ದ ಈ ಸಿನಿಮಾದ ಒಟಿಟಿ ಬಿಡುಗಡೆ ಬಗ್ಗೆ ಸುಳಿವಿರಲಿಲ್ಲ. ಈಗ ಸದ್ದಿಲ್ಲದೆ, ಒಟಿಟಿ ಬಿಡುಗಡೆಯ ದಿನಾಂಕ ಬಹಿರಂಗವಾಗಿದೆ. ಹಾಗಾದರೆ, ಯಾವ ಒಟಿಟಿ ಮತ್ತು ಯಾವಾಗ ರಿಲೀಸ್ ಆಗಲಿದೆ ಈ ಸಿನಿಮಾ ಎಂಬ ಬಗ್ಗೆ ಇಲ್ಲಿದೆ ವಿವರ.
ರವಿ ಜಾಧವ್ ನಿರ್ದೇಶನದಲ್ಲಿ ಮೂಡಿಬಂದಿರುವ ಮೈ ಅಟಲ್ ಹೂನ್ ಚಿತ್ರವನ್ನು ವಿನೋದ್ ಭಾನುಶಾಲಿ, ಸಂದೀಪ್ ಸಿಂಗ್, ಕಮಲೇಶ್ ಭಾನುಶಾಲಿ ನಿರ್ಮಾಣ ಮಾಡಿದ್ದಾರೆ. ತಾರಾಗಣದಲ್ಲಿ ಪಂಕಜ್ ತ್ರಿಪಾಠಿ ವಾಜಪೇಯ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಪಾಯಲ್ ನಾಯರ್ ಇಂದಿರಾ ಗಾಂಧಿಯಾಗಿದ್ದರು. ಹರೇಶ್ ಖಾತ್ರಿ ಜವಾಹರ್ ಲಾಲ್ ನೆಹರು ಪಾತ್ರದಲ್ಲಿದ್ದರೆ, ಏಕ್‌ಲಾಖ್ ಖಾನ್ ಜಯಪ್ರಕಾಶ್ ನಾರಾಯಣ್ ಪಾತ್ರದಲ್ಲಿದ್ದರು. ರಾಜಾ ರಮೇಶ್‌ಕುಮಾರ್, ದಯಾಶಂಕರ್ ಪಾಂಡೆ, ಪ್ರಮೋದ್ ಪಾಠಕ್, ಹರ್ಷದ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ
ಸಹಜವಾಗಿ ಒಂದು ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾದ 30 ದಿನಕ್ಕೆ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭವಾಗುತ್ತದೆ. ಆದರೆ, ಮೈ ಅಟಲ್ ಹೂನ್ ಸಿನಿಮಾ ಎರಡು ತಿಂಗಳ ಬಳಿಕ ಒಟಿಟಿಗೆ ಆಗಮಿಸುತ್ತಿದೆ. ಮೈ ಅಟಲ್ ಹೂನ್ ಸಿನಿಮಾ ಜೀ 5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ವಿಚಾರವನ್ನು Zee5 ಅಧಿಕೃತವಾಗಿ ಘೋಷಣೆ ಮಾಡಿದೆ. ಈ ಮೂಲಕ ಮಾರ್ಚ್ 15ರಂದು ಸ್ಟ್ರೀಮಿಂಗ್ ಶುರುವಾಗಲಿದೆ.
ಜೀ5 ಒಟಿಟಿಯಲ್ಲಿ ಬಿಡುಗಡೆ
“ಅಟಲ್ ಬಿಹಾರಿ ಅವರು ಉತ್ತಮ ದೃಷ್ಟಿಕೋನ ಮತ್ತು ನಿರ್ಧಾರಗಳೊಂದಿಗೆ ದೇಶದ ದಿಕ್ಕನ್ನೇ ಬದಲಿಸಿದರು. ಮೈ ಅಟಲ್ ಹೂನ್ ಸಿನಿಮಾ ಮಾರ್ಚ್ 14 ರಂದು Zee5ನಲ್ಲಿ ಪ್ರೀಮಿಯರ್ ಆಗಲಿದೆ” ಎಂದು Zee5 ತನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಅಟಲ್ ಚಿತ್ರದಲ್ಲಿ ಏನಿತ್ತು?
ರಾಜಕೀಯ ರಂಗದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಸಾಧನೆಯ ಹಾದಿ ಮತ್ತು ಪ್ರಧಾನಿಯಾಗಿ ಅವರ ಸೇವೆಯನ್ನು ಅಟಲ್ ಚಿತ್ರದಲ್ಲಿ ನಿರ್ದೇಶಕರು ತೆರೆಮೇಲೆ ತಂದಿದ್ದರು. ಕೇವಲ ಓರ್ವ ರಾಜಕಾರಣಿ, ಮಾತುಗಾರ ಅಷ್ಟೇ ಅಲ್ಲದೆ ಅವರೊಳಗೊಬ್ಬ ಪುಟಾಣಿ ಮಗುವಿನ ಮನಸೂ ಇತ್ತು ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದರು ನಿರ್ದೇಶಕರು. ರಾಜಕೀಯದ ಜತೆಗೆ ವೈಯಕ್ತಿಕವಾಗಿ ಎದುರಿಸಿದ ಸವಾಲುಗಳು, ಕುಟುಂಬ ಮತ್ತು ಸ್ನೇಹಿತರೊಂದಿಗಿನ ಅವರ ಬಂಧ ಎಲ್ಲವನ್ನೂ ಸಿನಿಮಾದಲ್ಲಿ ಪ್ರದರ್ಶಿಸಲಾಗಿತ್ತು. ಪಾಕಿಸ್ತಾನದೊಂದಿಗಿನ ಕಾರ್ಗಿಲ್ ಯುದ್ಧ, ಪೋಖ್ರಾನ್ ಪರಮಾಣು ಪರೀಕ್ಷೆ ವಿಚಾರಗಳೂ ಸಿನಿಮಾದಲ್ಲಿದ್ದವು.
ಅಟಲ್ ಬಿಹಾರಿ ವಾಜಪೇಯಿ ತಮ್ಮ ರಾಜಕೀಯ ಆಳ್ವಿಕೆಯಲ್ಲಿ ಹತ್ತು ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಬಿಜೆಪಿಯ ಪ್ರಮುಖ ಮತ್ತು ಪ್ರಬಲ ನಾಯಕರಾಗಿದ್ದರು. 1996ರಲ್ಲಿ 13 ದಿನಗಳ ಕಾಲ ಸೇವೆ ಸಲ್ಲಿಸಿದ ನಂತರ 1998 ರಿಂದ 2004 ರವರೆಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಆ ಅವಧಿಯಲ್ಲಿ ದೇಶದ ದಿಕ್ಕನ್ನೇ ಬದಲಿಸಲು ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.
ಹನುಮಾನ್ ಒಟಿಟಿ ರಿಲೀಸ್ ಯಾವಾಗ?
ಹನುಮಾನ್ ಸಿನಿಮಾ ಒಟಿಟಿ ಬಿಡುಗಡೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮಾರ್ಚ್ 8ಕ್ಕೆ ಈ ಸಿನಿಮಾ ಜೀ5ನಲ್ಲಿ ಸ್ಟ್ರೀಮಿಂಗ್ ಆರಂಭಿಸಬೇಕಿತ್ತು. ಆದರೆ, ಈ ವರೆಗೂ ಸಿನಿಮಾದ ಸ್ಟ್ರೀಮಿಂಗ್ ಡೇಟ್ ಖಚಿತವಾಗಿಲ್ಲ. ಪ್ರಶಾಂತ್ ವರ್ಮಾ ನಿರ್ದೇಶನದ ಹನುಮಾನ್ ಚಿತ್ರದಲ್ಲಿ ತೇಜ ಸಜ್ಜ ನಾಯಕನಾಗಿ ನಟಿಸಿದ್ದು, ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು.
ವಿಭಾಗ