Main Atal Hoon: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯಾದ ಪಂಕಜ್ ತ್ರಿಪಾಠಿ; ಮೇನ್ ಅಟಲ್ ಹೂನ್ ಸಿನಿಮಾದ ಟೀಸರ್ ಬಿಡುಗಡೆ
ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಚರಿತ್ರೆ ಆಧರಿತ ಮೇನ್ ಅಟಲ್ ಹೂನ್ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಅಟಲ್ ಬಿಹಾರಿ ವಾಜಪೇಯಿ ಫಾತ್ರದಲ್ಲಿ ಪಂಕಜ್ ತ್ರಿಪಾಠಿ ಬಣ್ಣ ಹಚ್ಚಿದ್ದಾರೆ. ರವಿ ಜಾಧವ್ ನಿರ್ದೇಶನದ ಈ ಸಿನಿಮಾ ಜನವರಿ 24ರಂದು ಬಿಡುಗಡೆಯಾಗಲಿದೆ.
ಮುಖ್ಯಪಾತ್ರದಲ್ಲಿ ನಟಿಸಿರುವ ಮೇನ್ ಅಟಲ್ ಹೂನ್ ಸಿನಿಮಾವು ಮುಂದಿನ ವರ್ಷದ ಆರಂಭದಲ್ಲಿ ಬಿಡುಗಡೆಯಾಗಲಿದೆ. ಇದೀಗ ಚಿತ್ರತಂಡವು ಮೇನ್ ಅಟಲ್ ಹೂನ್ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ. ನಿನ್ನೆ ಬಿಡುಗಡೆಯಾದ ಈ ಟೀಸರ್‌ನಲ್ಲಿ ಏನೇನಿದೆ ವಿಶೇಷ ನೋಡಿಕೊಂಡು ಬರೋಣ.
ಮೇನ್ ಅಟಲ್ ಹೂನ್ ಸಿನಿಮಾದ ಟೀಸರ್ ಬಿಡುಗಡೆ
ಈ ಟೀಸರ್‌ನಲ್ಲಿ ಪಂಕಜ್ ತ್ರಿಪಾಠಿಯನ್ನು ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಆಗಿ ಪರಿಚಯಿಸಲಾಗಿದೆ. ನೋಡಲು ಪಂಕಜ್ ತ್ರಿಪಾಠಿಯವರು ಥೇಟ್ ಅಟಲ್ ಬಿಹಾರಿ ವಾಜಪೇಯಿ ರೀತಿ ಕಾಣಿಸದೆ ಇರಬಹುದು. ಆದರೆ, ಪಂಕಜ್ ಅವರ ಹಾವಭಾವ, ವರ್ತನೆ ಅಟಲ್‌ರನ್ನು ಹೋಲುತ್ತದೆ. ಇದರ ಜತೆ ಪಂಕಜ್ ಡ್ರೆಸ್ಸಿಂಗ್ ಸೆನ್ಸ್ ಕೂಡ ಭಾರತದಲ್ಲಿ ಮೂರು ಬಾರಿ ಪ್ರಧಾನಿಯಾಗಿದ್ದ ವಾಜಪೇಯಿ ಅವರನ್ನು ನೆನಪಿಸುತ್ತದೆ. ಇದೇ ಟೀಸರ್‌ನಲ್ಲಿ "ನಾವು ಬದಲಾವಣೆ ತರಬೇಕು" (ದಾಲೊ ಕೆ ಇಸ್ ದಾಲ್ ದಾಲ್ ಕ ಬೀಚ್, ಏಕ್ ಕಮಲ್ ಖಿಲಾನ ಹೋಗ) ಡೈಲಾಗ್ ಕೂಡ ಇದೆ.
ಈ ಟೀಸರ್ ನೋಡಿ ನೆಟ್ಟಿಗರು ಖುಷಿಪಟ್ಟಿದ್ದಾರೆ. "ಅಟಲ್ ಅವರ ಪಾತ್ರಕ್ಕೆ ಸೂಕ್ತವಾದ ವ್ಯಕ್ತಿ. ಎಷ್ಟು ಸುಂದರ ಅಭಿನಯ" ಎಂದು ಟೀಸರ್‌ಗೆ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸಾಕಷ್ಟು ಜನರು ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಚರಿತ್ರೆಯನ್ನು ಚಿತ್ರಮಂದಿರದಲ್ಲಿ ನೋಡಲು ಕಾಯುತ್ತಿರುವುದಾಗಿ ಹೇಳಿದ್ದಾರೆ. ಈ ಹಿಂದೆ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು.
ಮೇನ್ ಅಟಲ್ ಹೂನ್ ಸಿನಿಮಾದ ಕುರಿತು
ಮೇನ್ ಅಟಲ್ ಹೂನ್ ಸಿನಿಮಾವನ್ನು ರವಿ ಜಾಧವ್ ನಿರ್ದೇಶನ ಮಾಡುತ್ತಿದ್ದಾರೆ. ಭಾನುಶಾಲಿ ಸ್ಟುಡಿಯೋಸ್ ಲಿಮಿಟೆಡ್ ಮತ್ತು ಲೆಜೆಂಡ್ ಸ್ಟುಡಿಯೋಸ್ ಈ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈ ಸಿನಿಮಾದ ಕಥೆಯನ್ನು ರಿಶಿ ವಿರ್ಮಾನಿ ಮತ್ತು ರವಿ ಜಾಧವ್ ಬರೆದಿದಾರೆ. ಸಲೀಮ್ ಸುಲೈಮಾನ್ ಸಂಗೀತ ನೀಡಿದ್ದಾರೆ. ಮನೋಜ್ ಮುತನಿಶರ್ ಅವರ ಹಾಡುಗಳ ಸಾಹಿತ್ಯ ರಚಿಸಿದ್ದಾರೆ. ಈ ಸಿನಿಮಾವು ಜನವರಿ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
"ನಮ್ಮ ಪ್ರಮುಖ ನಾಯಕ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರವನ್ನು ನಿರ್ವಹಿಸುವ ಅವಕಾಶ ದೊರಕಿರುವುದು ನನಗೆ ಸಿಕ್ಕ ಶ್ರೇಷ್ಠ ಗೌರವ. ನಾವು ಈ ಸಿನಿಮಾಕ್ಕಾಗಿ ಸಾಕಷ್ಟು ಓದಿದ್ದೇವೆ, ಮಾಹಿತಿ ಕಲೆ ಹಾಕಿದ್ದೇವೆ. ಅವರ ಜೀವನ, ಜೀವನಶೈಲಿ, ಅವರ ವಿಷನ್ ಕುರಿತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇವೆ" ಎಂದು ಮೇನ್ ಅಟಲ್ ಹೂನ್ ಸಿನಿಮಾದ ಕುರಿತು ಪಂಕಜ್ ತ್ರಿಪಾಠಿ ಈ ಹಿಂದೆ ಹೇಳಿದ್ದರು.
"ಅಟಲ್‌ಜೀ ಅವರನ್ನ ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಪಂಕಜ್ ಅವರ ಪಾಲ್ಗೊಳ್ಳುವಿಕೆ, ಶ್ರದ್ಧೆ ನಾನು ಗಮನಿಸಿದ್ದೇನೆ. ತೆರೆಯ ಮೇಲೆ ಅಟಲ್ ಅವರನ್ನು ನೋಡಿದಂತೆ ನಿಮಗೆ ಖಂಡಿತಾ ಭಾಸವಾಗುತ್ತದೆ" ಎಂದು ರವಿ ಜಾಧವ್ ಹೇಳಿದ್ದಾರೆ.