Emergency Movie: ಪಂಜಾಬ್‌ನಲ್ಲಿ ಕಂಗನಾ ರಣಾವತ್ ನಟನೆಯ ಎಮರ್ಜೆನ್ಸಿ ಚಿತ್ರದ ವಿರುದ್ಧ ತಿರುಗಿಬಿದ್ದ ಸಿಖ್ ಸಮುದಾಯ, ಪ್ರದರ್ಶನ ಸ್ಥಗಿತ
ಕಂಗನಾ ರಣಾವತ್ ನಟನೆಯ ಎಮರ್ಜೆನ್ಸಿ ಸಿನಿಮಾದಲ್ಲಿ ಸಿಖ್ಖರನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿ, ಪಂಜಾಬ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಈಗಾಗಲೇ ಸಿನಿಮಾ ಪ್ರದರ್ಶನ ರದ್ದುಗೊಳಿಸಲಾಗಿದೆ. ಮುಂಗಡ ಬುಕ್ಕಿಂಗ್ ಸಹ ಸ್ಥಗಿತಗೊಳಿಸಲಾಗಿದೆ.

Kangana Ranaut Emergency: ಬಾಲಿವುಡ್ ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ನಟಸಿ, ನಿರ್ದೇಶಿಸಿದ ಎಮರ್ಜೆನ್ಸಿ ಸಿನಿಮಾ ಇಂದು (ಜ. 17) ಬಿಡುಗಡೆ ಆಗಿದೆ. ಮೊದಲ ದಿನವೇ ಈ ಚಿತ್ರಕ್ಕೀಗ ಪಂಜಾಬ್‌ನಲ್ಲಿ ವಿಘ್ನ ಎದುರಾಗಿದೆ. ಅಲ್ಲಿನ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (SGPC) ಮುಖ್ಯಸ್ಥ ಹರ್ಜಿಂದರ್ ಸಿಂಗ್ ಧಾಮಿ ನೇತೃತ್ವದಲ್ಲಿ ಚಿತ್ರ ಪ್ರದರ್ಶನಕ್ಕೆ ತಡೆಯೊಡ್ಡಲಾಗಿದೆ. ಇದಕ್ಕೂ ಮುನ್ನ ಪಂಜಾಬ್‌ನಲ್ಲಿ ಎಮರ್ಜೆನ್ಸಿ ಸಿನಿಮಾ ಬ್ಯಾನ್ ಮಾಡುವಂತೆ, ಎಸ್‌ಜಿಪಿಸಿ, ಸಿಎಂ ಭಗವಂತ್ ಮಾನ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿತ್ತು. ಅದರಾಚೆಗೂ ಸಿನಿಮಾ ಬಿಡುಗಡೆ ಆಗಿದ್ದೇ ತಡ, ಪಂಜಾಬ್‌ನ ಕೆಲವೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರನೌತ್ ಕಾಣಿಸಿಕೊಂಡಿರುವ ಈ ಚಿತ್ರವು 1975-77ರ ಅವಧಿಯ 21 ತಿಂಗಳ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಸಿನಿಮಾ ಕಟ್ಟಿಕೊಡಲಾಗಿದೆ. ಈ ಸಿನಿಮಾದಲ್ಲಿ ಸಿಖ್ ಸಮುದಾಯವನ್ನು ತಪ್ಪಾಗಿ ನಿರೂಪಿಸಲಾಗಿದೆ. ಸಿಖ್ಖರನ್ನು ಆಕ್ಷೇಪಾರ್ಹ ರೀತಿಯಲ್ಲಿ ತೋರಿಸಲಾಗಿದೆ ಎಂದು ಸಿಖ್ ಸಮುದಾಯ ಚಿತ್ರತಂಡದ ವಿರುದ್ಧ ಗರಂ ಆಗಿತ್ತು. ಇದೆಲ್ಲದರ ನಡುವೆಯೇ ಸಿನಿಮಾ ಪಂಜಾಬ್‌ನಲ್ಲಿ ರಿಲೀಸ್ ಆಗಿದ್ದು, ಚಿತ್ರ ಬಿಡುಗಡೆಗೂ ಇದೀಗ ತಡೆನೀಡಲಾಗಿದೆ.
ಬಿಡುಗಡೆಯ ಮುನ್ನಾದಿನದಂದು ಪಂಜಾಬ್‌ನಲ್ಲಿ ಎಮರ್ಜೆನ್ಸಿ ಸಿನಿಮಾವನ್ನು ನಿಷೇಧಿಸಬೇಕೆಂದು ಕೋರಿ, ಸಿಎಂಗೆ ಪತ್ರ ಬರೆಯಲಾಗಿತ್ತು. "ಸಿಖ್ ಸಮುದಾಯವನ್ನು ದೂಷಿಸುವ ಉದ್ದೇಶದಿಂದ ಮತ್ತು ಇದೊಂದು ರಾಜಕೀಯ ಪ್ರೇರಿತ. ಈ ಕೂಡಲೇ ಈ ಸಿನಿಮಾವನ್ನು ನಿಷೇಧಿಸಬೇಕು" ಎಂದು ನಮೂದಿಸಲಾಗಿತ್ತು. ಮನವಿಯ ನಡುವೆಯೂ ಸಿನಿಮಾ ಪ್ರದರ್ಶನ ಕಂಡ ಲುಧಿಯಾನ, ಅಮೃತಸರ, ಪಟಿಯಾಲ ಸೇರಿ ಪಂಜಾಬ್‌ನ ಹಲವೆಡೆ ಈ ಸಿನಿಮಾ ತೆರೆಕಂಡಿಲ್ಲ. ಚಿತ್ರಮಂದಿರ ಮತ್ತು ಮಾಲ್‌ಗಳ ಮುಂದೆ ಪ್ರತಿಭಟನೆಗಳು ಜೋರಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
