ನುಶ್ರತ್ ಭರುಚ್ಚಾ: ಅಂದು 8 ರೂನಲ್ಲಿ ದಿನದೂಡುತ್ತಿದ್ದೆ, ಹಸಿವಾದಾಗ ನೀರು ಕುಡಿಯುತ್ತಿದ್ದೆ!
ಬಾಲಿವುಡ್ ನಟಿ ನುಶ್ರತ್ ಭರುಚ್ಚಾ ಅವರು ತಮ್ಮ ಬದುಕಿನ ಆರಂಭಿಕ ದಿನಗಳಲ್ಲಿ ತಮ್ಮ ಕುಟುಂಬ ಎದುರಿಸಿದ ಆರ್ಥಿಕ ಬಿಕ್ಕಟ್ಟಿನ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ಅಂದಿನ ಆ ಕಷ್ಟವೇ ನನಗೆ ಆರ್ಥಿಕ ಶಿಸ್ತು ರೂಢಿಸಿಕೊಳ್ಳಲು ನೆರವಾಯಿತು ಎಂದು ಅವರು ಹೇಳಿದ್ದಾರೆ.

ಈಗ ಲಕ್ಷಾಂತರ, ಕೋಟ್ಯಾಂತರ ಹಣ ಸಂಪಾದನೆ ಮಾಡುತ್ತಿರುವ ಸಾಕಷ್ಟು ನಟಿಯರು, ನಟರು ತಮ್ಮ ಬದುಕಿನ, ಕರಿಯರ್‌ನ ಆರಂಭದಲ್ಲಿ ಸಾಕಷ್ಟು ಕಷ್ಟಪಡುತ್ತಿದ್ದರು. ತಮ್ಮ ಇತ್ತೀಚಿನ ಚಿತ್ರ 'ಚೋರಿ 2' ಬಿಡುಗಡೆಯ ಸಂಭ್ರಮದಲ್ಲಿರುವ ನಟಿ ನುಶ್ರತ್ ಭರುಚ್ಚಾ ಕೂಡ ತನ್ನ ಬದುಕಿನ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಕಾಲೇಜು ದಿನಗಳಲ್ಲಿ ತಾವು ಅನುಭವಿಸಿದ ಆರ್ಥಿಕ ಸಂಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಆ ದಿನಗಳ ಕಷ್ಟವೇ ಇಂದಿನ ಹಣ ನಿರ್ವಹಣಾ ಕೌಶಲವನ್ನು ತಾನು ಅಳವಡಿಸಿಕೊಳ್ಳಲು ಕಾರಣವಾಯಿತು ಎಂದಿದ್ದಾರೆ.
ಬಾಲಿವುಡ್ ಬಬಲ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಟಿ ನುಶ್ರತ್ ಭರುಚ್ಚಾ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ ಪ್ಯಾರ್ ಕಾ ಪಂಚ್‌ನಾಮಾ ಚಿತ್ರದಲ್ಲಿಯೂ ಈಕೆ ನಟಿಸಿದ್ದರು. ಸಿನಿಮಾವೊಂದರಲ್ಲಿ ನಟಿಸಲು ಚೆಕ್ ದೊರಕಿದ ಬಳಿಕ ತಮ್ಮ ಮುಂದಿನ ಸಂಪಾದನೆ ಹೇಗೆ ಎಂಬ ಅನಿಶ್ಚಿತತೆ ಇರುತ್ತದೆ. ಇಂತಹ ಸಮಯದಲ್ಲಿ ಹಣಕಾಸು ನಿರ್ವಹಣೆಯ ಶಿಸ್ತು ತನಗೆ ನೆರವಾಯಿತು ಎಂದು ಅವರು ಹೇಳಿದ್ದಾರೆ. "ಬಹಳ ಮುಂಚೆಯೇ ನಾನು ತಿಂಗಳಿಗೆ ಎಷ್ಟು ಖರ್ಚು ಮಾಡಬೇಕೆಂದು ನಿರ್ಧರಿಸಿದ್ದೆ. ನನ್ನ ತಿಂಗಳ ಮೂಲಭೂತ ಅಗತ್ಯವೇನು ಎಂದು ತಿಳಿದುಕೊಂಡೆ. ಅದಕ್ಕೆ ಮಾತ್ರ ಖರ್ಚು ಮಾಡುತ್ತಿದ್ದೆ. ಉಳಿದ ಮೊತ್ತವನ್ನು ಹೂಡಿಕೆ ಮತ್ತು ಉಳಿತಾಯ ಖಾತೆಗಳಿಗೆ ಸ್ವಯಂಚಾಲಿತವಾಗಿ ಹೋಗುವಂತೆ ನೋಡಿಕೊಳ್ಳುತ್ತಿದ್ದೆ. ನನ್ನ ಖಾತೆಗೆ ಬರುವ ಮೊದಲೇ ವಿವಿಧ ಹೂಡಿಕೆಗಳಿಗೆ ನನ್ನ ಹಣ ಹೋಗುತ್ತದೆ" ಎಂದು ನಟಿ ಹೇಳಿದ್ದಾರೆ.
ಬಾಲ್ಯದ ಆರ್ಥಿಕ ಸಂಕಷ್ಟ
39 ವರ್ಷದ ನಟಿ ತನ್ನ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ನಾನು ಚಿಕ್ಕವಳಿದ್ದಾಗಲೇ ನನ್ನ ಹೆತ್ತವರು ಸಾಕಷ್ಟು ಕಷ್ಟಪಡುತ್ತಿದ್ದರು. ಅವರು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರು. ಇದು ನನ್ನ ಇಂದಿನ ಆರ್ಥಿಕ ಶಿಸ್ತಿಗೆ ಕಾರಣ ಎಂದು ಅವರು ಹೇಳಿದ್ದಾರೆ. "ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಬಾರದು ಎಂಬ ಅರಿವು ನನಗಿತ್ತು. ನಾನು ಐದು ವರ್ಷಗಳ ಕಾಲ ಕಾಲೇಜಿಗೆ ಹೋಗುತ್ತಿದ್ದೆ. ಆಗ ದಿನಕ್ಕೆ 8 ರೂಪಾಯಿ ಮಾತ್ರ ಖರ್ಚು ಮಾಡುತ್ತಿದ್ದೆ. ಅದು ಕೇವಲ ನನ್ನ ಪ್ರಯಾಣಕ್ಕೆ ಮಾಡುವ ಖರ್ಚಾಗಿತ್ತು. ಬೇರೆ ಖರ್ಚಿಗೆ ಹಣವಿರಲಿಲ್ಲ. ರೈಲು ಮತ್ತು ಬಸ್‌ನಲ್ಲಿ ಕಾಲೇಜಿಗೆ ಹೋಗುತ್ತಿದ್ದೆ. ನನಗೆ ಹಸಿವಾದಗ ನೀರು ಕುಡಿಯುತ್ತಿದ್ದೆ" ಎಂದು ಅವರು ಕಾಲೇಜು ದಿನಗಳ ಕಷ್ಟವನ್ನು ನೆನಪಿಸಿಕೊಂಡಿದ್ದಾರೆ.
ನುಶ್ರತ್ ಅವರ ಇತ್ತೀಚಿನ ಪ್ರಾಜೆಕ್ಟ್
ವಿಶಾಲ್ ಫ್ಯೂರಿಯಾ ನಿರ್ದೇಶನದ ನುಶ್ರತ್ ಅವರ ಇತ್ತೀಚಿನ ಚಿತ್ರ ಚೋರಿ 2 ಈ ತಿಂಗಳ ಆರಂಭದಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಯಿತು. ಚೋರಿಯಲ್ಲಿ ಸೋಹಾ ಅಲಿ ಖಾನ್, ಗಶ್ಮೀರ್ ಮಹಾಜನಿ, ಸೌರಭ್ ಗೋಯಲ್, ಪಲ್ಲವಿ ಅಜಯ್, ಕುಲದೀಪ್ ಸರೀನ್ ಮತ್ತು ಹಾರ್ದಿಕಾ ಶರ್ಮಾ ಮುಂತಾದವರು ನಟಿಸಿದ್ದಾರೆ. ಇದು 2021ರ ಹಾರರ್ ಸಿನಿಮಾ ಚೋರಿಯ ಮುಂದುವರಿದ ಭಾಗವಾಗಿದೆ.