ಶಾರೂಖ್, ಸಲ್ಮಾನ್, ಅಮಿರ್ 'ಖಾನ್'ಗಳನ್ನು ಹಿಂದಿಕ್ಕಿದ ಒಬ್ಬನೇ ಒಬ್ಬ ಹಮ್ಮೀರ; ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 9000 ಕೋಟಿ ರೂ ಗಳಿಕೆ
ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ ಒಟ್ಟಾರೆ ಎಲ್ಲಾ ಸಿನಿಮಾಗಳ ಗಳಿಕೆಯಲ್ಲಿ 9 ಸಾವಿರ ಕೋಟಿ ರೂಗೂ ಹೆಚ್ಚು ಗಳಿಕೆ ಮಾಡಿರುವ ಭಾರತದ ಒಬ್ಬನೇ ಒಬ್ಬ ನಟ ಇದ್ದಾರೆ. ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಇವರು ಶಾರೂಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್‌ಗಿಂತಲೂ ಹೆಚ್ಚು ಗಳಿಕೆ ಮಾಡಿದ್ದಾರೆ.

ಕಳೆದ ಮೂರು ದಶಕಗಳಲ್ಲಿ ಬಾಲಿವುಡ್ ಬಾಕ್ಸ್ ಆಫೀಸ್ ಅನ್ನು ಮೂವರು ಖಾನ್‌ಗಳು ಆಳಿದ್ದಾರೆ. ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಜತೆಯಾಗಿ 80 ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 1994ರ ಬಳಿಕ ಪ್ರತಿವರ್ಷ ಅತ್ಯಧಿಕ ಗ್ರಾಸಿಂಗ್ ಹಿಂದಿ ಸಿನಿಮಾಗಳನ್ನು ನೀಡುತ್ತಿದ್ದರು. ಸುಮಾರು ಒಂದು ದಶಕದ ಬಳಿಕ ಇವರ ದಾಖಲೆಗಳನ್ನು ಉಡೀಶ್ ಮಾಡಲು ಒಬ್ಬ ಬಂದಿದ್ದ. ಮೂರು ಖಾನ್‌ಗಳ ಬಳಿಕ ಬಂದ ಈ ನಟ ಬಾಕ್ಸ್ ಆಫೀಸ್‌ನಲ್ಲಿ ಖಾನ್‌ಗಳ ದಾಖಲೆಯನ್ನೂ ಉಡೀಸ್ ಮಾಡಿದ್ದನು. ಬನ್ನಿ ಆ ನಟನ ಬಗ್ಗೆ ತಿಳಿದುಕೊಳ್ಳೋಣ.
ಖಾನ್‌ಗಳನ್ನು ಬಾಕ್ಸ್ ಆಫೀಸ್‌ನಲ್ಲಿ ಮೀರಿಸಿದ ಹೀರೋ
ಖಾನ್‌ಗಳನ್ನು ಬಾಕ್ಸ್ ಆಫೀಸ್‌ನಲ್ಲಿ ಮೀರಿಸಿದ ಹೀರೋ ಅಕ್ಷಯ್ ಕುಮಾರ್. ಹೌದು, 2007ರಿಂದ 2019ರ ತನಕ ಭಾರತೀಯ ಸಿನಿಮಾ ಉದ್ಯಮದಲ್ಲಿ ಅಕ್ಷಯ ಕುಮಾರ್ ದೊಡ್ಡ ಮಟ್ಟದ ದಾಖಲೆ ಬರೆದರು. ತನ್ನ ಕರಿಯರ್‌ನಲ್ಲಿ ಅಕ್ಷಯ್ ಕುಮಾರ್ 130ರ ಆಸುಪಾಸಿನಲ್ಲಿ ಸಿನಿಮಾ ಮಾಡಿದ್ದಾರೆ. ಈ ಎಲ್ಲಾ ಸಿನಿಮಾಗಳ ಒಟ್ಟಾರೆ ಗಳಿಕೆ 9 ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚು. ಶಾರೂಖ್ ಖಾನ್‌ನ ಎಲ್ಲಾ ಸಿನಿಮಾದ ಜಾಗತಿಕ ಬಾಕ್ಸ್ ಆಫೀಸ್ ಗಳಿಕೆ 8 ಸಾವಿರ ಕೋಟಿ ರೂಪಾಯಿ ಆಸುಪಾಸಿನಲ್ಲಿದೆ. ಸಲ್ಮಾನ್ ಖಾನ್ ಕೂಡ ಒಟ್ಟಾರೆ 8 ಸಾವಿರ ಕೋಟಿ ಗಳಿಕೆ ಮಾಡಿದ್ದಾರೆ. ಇನ್ನೊಂದೆಡೆ, ಆಮೀರ್ ಖಾನ್ ಅವರ ಎರಡು ದಶಕದ ಒಟ್ಟು ಬಾಕ್ಸ್ ಆಫೀಸ್ ಗಳಿಕೆ 6500 ಕೋಟಿ ರೂಪಾಯಿ ಆಸುಪಾಸಿನಲ್ಲಿದೆ.
ನಟ ಅಕ್ಷಯ್ ಕುಮಾರ್ ವೈವಿಧ್ಯಮಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದು ಇವರು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಪ್ರಮಾಣದ ಯಶಸ್ಸು ಪಡೆಯಲು ಸಾಧ್ಯವಾಗಿದೆ. ಅಕ್ಷಯ್ ಕುಂಆರ್‌ಅವರು ಒಟ್ಟು 40 ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇವುಗಳಲ್ಲಿ 14 ಸೂಪರ್‌ಹಿಟ್, ಬ್ಲಾಕ್‌ಬಸ್ಟರ್ ಸಿನಿಮಾಗಳು ಸೇರಿವೆ. ಸಲ್ಮಾನ್ ಖಾನ್ 38 ಹಿಟ್ ಸಿನಿಮಾ ನೀಡಿದ್ದಾರೆ. ಶಾರೂಖ್ ಖಾನ್ 34 ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆಮೀರ್ ಖಾನ್ 21 ಹಿಟ್ ನೀಡಿದ್ದಾರೆ. ಇವರೆಲ್ಲರೂ ತಮ್ಮ ಒಟ್ಟು ಚಿತ್ರಗಳಲ್ಲಿ ಶೇಕಡ 45-50ರಷ್ಟು ಸಿನಿಮಾಗಳಲ್ಲಿ ಯಶಸ್ಸು ಪಡೆದಿದ್ದಾರೆ. ಅಕ್ಷಯ್ ಕುಮಾರ್‌ಗೆ ಒಟ್ಟಾರೆ ಸಿನಿಮಾಗಳಲ್ಲಿ ಯಶಸ್ಸಿನ ಪ್ರಮಾಣ ಶೇಕಡ 30ರಷ್ಟಿದೆ.
ಖಾನ್‌ಗಳು ತಮ್ಮ ಮೊದಲ ದಶಕದಲ್ಲಿ ಅಕ್ಷಯ್ ಕುಮಾರ್‌ಗಿಂತ ಮುಂದೆ ಇದ್ದರು. 1999ರವರೆಗೆ ಅಕ್ಷಯ್ ಸಿನಿಮಾಗಳು ವಿಶ್ವಾದ್ಯಂತ 253 ಕೋಟಿ ರೂಪಾಯಿ ಗಳಿಸಿದವು. ಆದರೆ, ಅಕ್ಷಯ್ ಕುಮಾರ್‌ಗಿಂತ ಹೆಚ್ಚು ಗಳಿಕೆಯನ್ನು ಸಲ್ಮಾನ್ ಖಾನ್ (751 ಕೋಟಿ), ಶಾರುಖ್ ಖಾನ್ (740 ಕೋಟಿ), ಮತ್ತು ಆಮೀರ್ ಖಾನ್ (360 ಕೋಟಿ) ಆ ಸಮಯದಲ್ಲಿ ಮಾಡಿದ್ದರು.
2007ರಿಂದ 2019ರವರೆಗೆ ಅಕ್ಷಯ್ ಕುಮಾರ್‌ಗೆ ಬಾಕ್ಸ್ ಆಫೀಸ್‌ನಲ್ಲಿ ಸುವರ್ಣ ಯುಗ ಎಂದು ಹೇಳಬಹುದು. ಪ್ರತಿ ವರ್ಷ ಹಲವು ಹಿಟ್ ಸಿನಿಮಾಗಳನ್ನು ನೀಡಿದರು. ಈ ಅವಧಿಯಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಇವರ ಚಿತ್ರಗಳು 6400 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಕೆ ಮಾಡಿವೆ. ಆ ಸಮಯದಲ್ಲಿ ಮೂವರು ಖಾನ್‌ಗಳ ತಲಾ ಗಳಿಕೆ 4500 ಕೋಟಿ ರೂನಿಂದ 5500 ಕೋಟಿ ರೂವರೆಗೆ ಇದೆ. ಆ ದಶಕದಲ್ಲಿ ಅಕ್ಷಯ್ ಕುಮಾರ್ ಎರಡು ವರ್ಷಗಳ ಕಾಲ ಸತತವಾಗಿ 1 ಸಾವಿರ ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದರು. ಇದು ಅವರ ಅಭೂತಪೂರ್ವ ಸಾಧನೆ ಎನ್ನಬಹುದು.
ಆದರೆ, ಇತ್ತೀಚೆಗ ಅಕ್ಷಯ್ ಕುಮಾರ್‌ಗೆ ಸತತವಾಗಿ ಸೋಲಾಗುತ್ತಿದೆ. ಕೊರೊನಾ ಬಳಿಕ ಇವರು ಹಲವು ಸಿನಿಮಾಗಳ ಗಳಿಕೆಯಲ್ಲಿ ಹಿನ್ನೆಡೆ ಅನುಭವಿಸಿದರು. 2021-23ರ ಅವಧಿಯಲ್ಲಿ ಇವರ ಯಾವ ಸಿನಿಮಾಗಳೂ ಹಿಟ್ ಆಗಲಿಲ್ಲ. 2024ರಲ್ಲಿ ಒಎಂಜಿ 2 ಸಿನಿಮಾದ ಮೂಲಕ ತುಸು ಚೇತರಿಸಿಕೊಂಡರು. 2025ರಲ್ಲಿ ಸ್ಕೈ ಫೋರ್ಸ್ ಮತ್ತು ಕೇಸರಿ ಚಾಪ್ಟರ್ 2 ಸಿನಿಮಾಗಳ ಗಳಿಕೆ 100 ಕೋಟಿ ದಾಟಿವೆ.
ವಿಭಾಗ