ಸೆಪ್ಟೆಂಬರ್ 24ರಂದು ನಟಿ ಪರಿಣಿತಿ ಚೋಪ್ರಾ -ಸಂಸದ ರಾಘವ್ ಚಡ್ಡಾರ ಮದುವೆ, ಹೀಗಿರಲಿದೆ ರಾಗ್ನೀತಿ ವಿವಾಹ ವೈಭೋಗ
ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ವಿವಾಹ ಇದೇ ಸೆಪ್ಟೆಂಬರ್ 24ರಂದು ನಡೆಯಲಿದೆ. ಸಂಸದರ ಜತೆ ಪರಿಣಿತಿ ವಿವಾಹಕ್ಕೆ ರಾಗ್ನೀತಿ ಎಂಬ ಥೀಮ್ ಇಡಲಾಗಿದೆ. ಈ ವಿವಾಹ ವೈಭೋಗದ ವಿವರವನ್ನು ನಾವು ಪಡೆದುಕೊಳ್ಳೋಣ.
ನಟಿ ಪರಿಣಿತಿ ಚೋಪ್ರಾ ಮತ್ತು ಸಂಸದ ರಾಘವ್ ಚಡ್ಡಾ ಅವರು ಸೆಪ್ಟೆಂಬರ್ 24ರಂದು ವಿವಾಹವಾಗಲಿದ್ದಾರೆ. ಈ ವಿವಾಹದ ಕುರಿತು ಗುಪ್ಚುಪ್ ಸಿದ್ಧತೆಗಳು ನಡೆಯುತ್ತಿವೆ. ಕೆಲವು ವರದಿಗಳ ಪ್ರಕಾರ ಈ ಜೋಡಿ ಉದಯಪುರದಲ್ಲಿ ಒಂದು ವಾರಗಳ ಕಾಲ ದೀರ್ಘ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಮದುವೆ ಪೂರ್ವ ಕಾರ್ಯಕ್ರಮದ ಫೋಟೋಗಳನ್ನು ಶೇರ್ ಮಾಡಲಾಗಿದೆ.
ಇದೇ ಸಮಯದಲ್ಲಿ ನಟಿಯ ಮುಂಬೈ ಮನೆಯೂ ಅಲಂಕಾರಗೊಂಡಿದೆ. ಒಟ್ಟಾರೆ ಈ ಎರಡು ಕುಟುಂಬದ ಮದುವೆಯಿಂದಾಗಿ ಎರಡೂ ಕಡೆ ಹಬ್ಬದ ಕಳೆ ಮೂಡಿದೆ. ಈ ಮದುವೆ ಕುರಿತು ಸಾಕಷ್ಟು ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ.
ಇವರಿಬ್ಬರ ಮದುವೆ ಕಾರ್ಯಕ್ರಮಗಳು ಹೇಗಿರಬಹುದು, ಯಾವುದೆಲ್ಲ ಕಾರ್ಯಕ್ರಮಗಳು ಇರಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿದೆ. ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ಮದುವೆಯಲ್ಲಿ ಮ್ಯೂಸಿಕಲ್ ಜರ್ನಿ ಇರಲಿದೆಯಂತೆ. 90 ರ ದಶಕದ ಹಾಡುಗಳ ಹಬ್ಬವೇ ಇರಲಿದೆಯಂತೆ.
ಇದೇ ರೀತಿ ಆಹಾರದ ಮೆನು ಏನು ಇರಲಿದೆ ಎಂಬ ಪ್ರಶ್ನೆಯೂ ಎಲ್ಲರಲ್ಲಿಯೂ ಮೂಡಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ವರದಿಗಳ ಪ್ರಕಾರ ಪಂಜಾಬಿ ಅಡುಗೆಯ ವೈವಿಧ್ಯ ಇರಲಿದೆ. ಇವರಿಬ್ಬರೂ ಪಂಜಾಬಿ ಮೂಲದವರಾಗಿರುವುದರಿಂದ ಪಂಜಾಬಿ ಅಡುಗೆಯೇ ಇರಲಿದೆ ಎಂಬ ಊಹೆ ಇದಾಗಿದೆ. ಆದರೆ, ಉದಯಪುರದಲ್ಲಿ ವಿವಾಹ ಸಮಾರಂಭ ನಡೆಯುವುದರಿಂದ ರಾಜಸ್ಥಾನಿ ರುಚಿಕರ ಅಡುಗೆಗಳು ಮೆನುವಿನಲ್ಲಿ ಇರಬಹುದು.
ಈ ಹಿಂದೆ ಮದುಮಗಳು ಕುದುರೆ ಮೇಲೆ ಬರಲಿದ್ದಾಳೆ ಎಂದು ಹೇಳಲಾಗಿತ್ತು. ಇದೀಗ ಪಕ್ಕಾ ಆದ ಸುದ್ದಿ ಪ್ರಕಾರ ಮದುಮಗಳು ಕುದುರೆಯಲ್ಲಿ ಅಲ್ಲ, ದೋಣಿಯಲ್ಲಿ ಆಗಮಿಸಲಿದ್ದಾಳೆ. ದೆಹಲಿಯಲ್ಲಿ ಸೆಪ್ಟೆಂಬರ್ 17ರಿಂದಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿವೆ. ಇದಕ್ಕೆ ಕುಟುಂಬದ ಕೆಲವು ಹತ್ತಿರದ ಸಂಬಂಧಿಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ.
ನನ್ನ ಮದುವೆ ಹೀಗೆಯೇ ಇರಬೇಕು ಎಂದು ಪರಿಣಿತಿ ಬಯಸಿದ್ದಾರೆ. ಹೀಗಾಗಿ ಪ್ರತಿಯೊಂದು ವಿಷಯದಲ್ಲೂ ಅಚ್ಚುಕಟ್ಟುತನ ಇರಲಿದೆ ಎನ್ನಲಾಗಿದೆ. ಮದುವೆಗೆ ಕೇವಲ ಹತ್ತಿರದ ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ಮಾತ್ರ ಬರಬೇಕಂತೆ. ಮದುವೆಗೆ ಆಗಮಿಸುವ ಅತಿಥಿಗಳಿಗೆ ಕೆಲವೊಂದು ಪ್ರವಾಸೋದ್ಯಮ ಚಟುವಟಿಕೆಯನ್ನೂ ಈ ಜೋಡಿ ಆಯೋಜಿಸಿದೆಯಂತೆ.
ಇವರು ನಿಶ್ಚಿತಾರ್ಥಕ್ಕೆ ಮೊದಲು ತಮ್ಮ ಡೇಟಿಂಗ್ ಕುರಿತು ಸಾರ್ವಜನಿಕವಾಗಿ ಎಂದೂ ಮಾತನಾಡಿರಲಿಲ್ಲ. ಆದರೆ, ಹಲವು ವರ್ಷಗಳಿಂದ ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದರು. ಅಧಿಕೃತವಾಗಿ ಇದೇ ಮೇ ತಿಂಗಳಿನಲ್ಲಿ ಇವರು ಉಂಗುರ ಬದಲಾಯಿಸಿಕೊಂಡಿದ್ದರು. ಬಳಿಕ ಇವರ ಫೋಟೊಗಳು, ವಿಡಿಯೋಗಳು ಆನ್ಲೈನ್ನಲ್ಲಿ ವೈರಲ್ ಆಗತೊಡಗಿತ್ತು. ಇವರು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ್ದು, ಪ್ರವಾಸ ಹೋಗಿರುವುದು ಎಲ್ಲವೂ ಬಯಲಾಗಿತ್ತು.
ನಿಶ್ಚಿತಾರ್ಥದ ಬಳಿಕ ಜೀವನ ಹೇಗಿದೆ ಎಂದು ಕೇಳಿದ ಪ್ರಶ್ನೆಗೆ ರಾಘವ್ ಚಡ್ಡಾ ಉತ್ತರಿಸಿದ್ದಾರೆ. "ಇದನ್ನು ರಾಜಕರಣ ಎಂದುಕೊಳ್ಳಬಾರದು. ವೈಯಕ್ತಿಕವಾಗಿಯೂ ತೆಗೆದುಕೊಳ್ಳಬಾರದು. ಈಗ ನನ್ನ ಸಹೋದ್ಯೋಗಿಗಳು, ಪಕ್ಷದ ಸ್ನೇಹಿತರು, ಹಿರಿಯರು ನನ್ನನ್ನು ಟೀಕೆ ಮಾಡುತ್ತಿಲ್ಲ. ಅದಕ್ಕೂ ಮೊದಲು ಮದುವೆ ಯಾವಾಗ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ನಾವು ಶೀಘ್ರದಲ್ಲಿಯೇ ಮದುವೆಯಾಗಲಿದ್ದೇವೆ ಎಂದು ಈಗ ಎಲ್ಲರಿಗೂ ತಿಳಿದಿದೆ. ಜೀವನ ಈಗ ಸಾಕಷ್ಟು ಬದಲಾಗಿದೆ" ಎಂದು ಅವರು ದಿ ಕ್ವಿಂಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಈ ಕುರಿತ ವರದಿ ಇಲ್ಲಿದೆ.