Poonam Pandey: ಪೂನಂ ಪಾಂಡೆ ಸಾವಿನ ನಾಟಕ ಮತ್ತು ಸೋಷಿಯಲ್ ಮೀಡಿಯಾ ಗುಂಗಲ್ಲಿ ನಾವು ಎಡವಿದ್ದೆಲ್ಲಿ?
ಒಂದು ಸಾವಾಗಿದೆ ಎಂದರೆ ಅಲ್ಲಿ ಹತ್ತು ಹಲವು ಪ್ರಶ್ನೆಗಳು ಹರಿದಾಡುತ್ತವೆ, ಆ ಪೈಕಿ ಪೂನಂ ಪಾಂಡೆ ಸಾವು ನಿಜವಾ? ಎಂದು ಕಲ್ಪಿಸಿಕೊಳ್ಳುವುದಕ್ಕೂ ಮುನ್ನವೇ ಎಲ್ಲೆಡೆ ಅದು ನಿಜವಾದ ಸಾವು ಎಂದು ಸುದ್ದಿಯಾಯ್ತು! ಸೋಷಿಯಲ್ ಮೀಡಿಯಾ ಪೋಸ್ಟ್ ನಂಬಿ, ಎಲ್ಲರೂ ಶಾಕ್ ಆದರು. ಹಾಗಾದರೆ, ಜಾಲತಾಣದಲ್ಲಿ ಈ ರೀತಿಯ ವಿಚಾರಗಳು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ?
Poonam Pndey Publicity Stunt: ಮೊನ್ನೆ ಚೆನ್ನಾಗಿಯೇ ಇದ್ದ ನಟಿಯೊಬ್ಬಳು, ಹಠಾತ್ ನಿಧನ ಹೊಂದುತ್ತಾಳೆ. ಆಕೆಯ ಸಾವಿನ ಬಗ್ಗೆ ಸಣ್ಣ ಸುಳಿವೂ ಸಿಗುವುದಿಲ್ಲ. ಆ ಸಾವು ಸೋಷಿಯಲ್ ಮೀಡಿಯಾ ಎಂಬ ಸಮುದ್ರದಲ್ಲಿ ದೊಡ್ಡ ಅಲೆಯನ್ನೇ ಎಬ್ಬಿಸುತ್ತದೆ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಈ ಸಾವಿನ ಸುದ್ದಿ ಆಕೆಯ ಅಧಿಕೃತ ಖಾತೆಯ ಮೂಲಕವೇ ಹೊರಬಂದ ಬಳಿಕ ಅದು ಮತ್ತಷ್ಟು ತೂಕವನ್ನೂ ಪಡೆದುಕೊಳ್ಳುತ್ತದೆ. ಜನ ಇದೇ ಸತ್ಯ ಎಂದು ನಂಬುವುದಕ್ಕೆ ಇದಕ್ಕಿಂತ ಇನ್ನೇನು ಸಾಕ್ಷ್ಯ ಬೇಕು ಅಲ್ವಾ?
ಬಾಲಿವುಡ್ ನಟಿ ಪೂನಂ ಪಾಂಡೆ ಇನ್ನಿಲ್ಲ ಎಂಬ ಸುದ್ದಿ ಸ್ವತಃ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ನಿಂದ ಶುಕ್ರವಾರ (ಫೆ. 2) ಮಧ್ಯಾಹ್ನದ ಹೊತ್ತಿಗೆ ಹೊರಬಿಳ್ಳುತ್ತದೆ. ಅಷ್ಟೇ, ಮುಂದಿನದ್ದು RIP ಅನ್ನೋ ಪದಗಳ ಸುರಿಮಳೆ ಮತ್ತು ಕಂಬನಿಯ ಇಮೋಜಿಯ ರಾಶಿ. ಇದರಾಚೆಗೆ ಈ ಸುದ್ದಿಯ ಸತ್ಯಾಸತ್ಯತೆಯ ಬಗ್ಗೆ ಸ್ಪಷ್ಟತೆ ಇಲ್ಲ. ಯಾರಲ್ಲೂ ಅದು ಅಷ್ಟಾಗಿ ಕಾಣಲಿಲ್ಲ. ಇನ್ನು ಕೆಲವರು ಇದು ಸುಳ್ಳು ಸುದ್ದಿ, ಪ್ರಚಾರದ ಗಿಮಿಕ್ ಎಂದೆಲ್ಲ ಸಂಬೋಧಿಸಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದರೇ ಹೊರತು, ನಿಖರತೆಯ ಕೊರತೆ ಎಲ್ಲರಲ್ಲೂ ಇತ್ತು.
ಪೂನಂ ಪಾಂಡೆ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರು. ಅಡಲ್ಟ್ ಸಿನಿಮಾಗಳಲ್ಲೂ ಈ ನಟಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ತಮ್ಮ ಅರೇ ನಗ್ನ ದೇಹದ ದರ್ಶನ ಮಾಡಿಸುವುದರಲ್ಲಿಯೇ ಈ ನಟಿ ಹೆಚ್ಚು ಸಮಯ ಕಳೆಯುವುದುಂಟು. ವಿವಾದ, ವಿಷಾದವೂ ಈ ನಟಿಗೆ ಹೊಸದೇನಲ್ಲ. ವಿವಾದಾತ್ಮಕ ಹೇಳಿಕೆ, ಮದುವೆ, ಗಂಡ, ವಿಚ್ಛೇದನ, ಬೋಲ್ಡ್‌ನೆಸ್ ಇವೆಲ್ಲವೂ ಈ ನಟಿಯ ಜನಪ್ರಿಯತೆ ಹೆಚ್ಚಿಸಿದ ವಿಷಯಗಳು. ಇದೀಗ ಇದೇ ಜನಪ್ರಿಯತೆಯನ್ನೇ ಅಸ್ತ್ರವಾಗಿಸಿಕೊಂಡು, ಸಾವಿನ ನಾಟಕವಾಡಿ ಅಲ್ಲಿಂದಲೂ ಎದ್ದು, ಗೆದ್ದು ಬಂದಿದ್ದಾರೆ. ಅಂದುಕೊಂಡಿದ್ದ ಉದ್ದೇಶ ಈಡೇರಿದ ಮತ್ತು ಅದನ್ನು ಸಾಧಿಸಿದ ಖುಷಿಯಲ್ಲಿದ್ದಾರೆ ಪೂನಂ.
ಗರ್ಭಕಂಠ ಕ್ಯಾನ್ಸರ್ ಕಾಯಿಲೆಯ ಬಗ್ಗೆ ದೇಶದ ಜನತೆಗೆ ಜಾಗೃತಿ ಮೂಡಿಸುವ ವಿಚಾರವೇನೋ ಸರಿಯಿದೆ. ಆದರೆ, ಅದಕ್ಕೆ ಈ ರೀತಿಯ ಅಸ್ತ್ರ ಬಳಸಬೇಕೇ? ಈ ರೀತಿಯ ಪ್ರಶ್ನೆ ಸೋಷಿಯಲ್ ಮೀಡಿಯಾ ವಲಯದಲ್ಲಿ ಸದ್ಯ ಚರ್ಚೆಯ ವಿಷಯವಾಗಿದೆ. ನಟಿಯನ್ನು ಮನಬಂದಂತೆ ಆಡಿಕೊಳ್ಳುವವರೂ ಹೆಚ್ಚಾಗಿದ್ದಾರೆ. ಟ್ರೋಲ್, ಮೀಮ್‌ಗಳಿಗೂ ಪೂನಂ ಆಹಾರವಾಗುತ್ತಿದ್ದಾರೆ ಪೂನಂ ಪಾಂಡೆ. ಸಾವಿನ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳಲು ಇಷ್ಟೆಲ್ಲ ಸರ್ಕಸ್ ಮಾಡುವ ಅವಶ್ಯಕತೆ ಏನಿತ್ತು? ಎಂದೂ ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾ ವಲಯದಲ್ಲಿ ಮೂಡಿರುವ ಪ್ರಶ್ನೆಗಳೇನು?
ಸಾವನ್ನು ನಂಬುವುದಕ್ಕೂ ಮುನ್ನ ಸಿಗದ ಉತ್ತರಗಳು!
- ಒಂದು ಸಾವಾಗಿದೆ ಎಂದರೆ ಅಲ್ಲಿ ಹತ್ತು ಹಲವು ಪ್ರಶ್ನೆಗಳು ಹರಿದಾಡುತ್ತವೆ, ಆ ಪೈಕಿ ಪೂನಂ ಸಾವು ನಿಜವಾ? ಎಂದು ಕಲ್ಪಿಸಿಕೊಳ್ಳುವುದಕ್ಕೂ ಮುನ್ನವೇ ಎಲ್ಲೆಡೆ ಅದು ನಿಜವಾದ ಸಾವೇ ಎಂದು ಸುದ್ದಿಯಾಯ್ತು! ಸೋಷಿಯಲ್ ಮೀಡಿಯಾ ಪೋಸ್ಟ್ ನಂಬಿ, ಎಲ್ಲರೂ ಶಾಕ್ ಆದರು. ಹಾಗಾದರೆ, ಜಾಲತಾಣದಲ್ಲಿ ಈ ರೀತಿಯ ವಿಚಾರಗಳು ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ?
- ಪೂನಂ ಸಾವಿನ ನಾಟಕ ಇದು ಪ್ರೀ ಪ್ಲಾನ್ ಆಗಿರುವುದೇನೋ ನಿಜ. ಆದರೆ, ಈ ಸುದ್ದಿಯನ್ನು ನಂಬುವುದಕ್ಕೂ ಮುನ್ನ ನಾವು ಎಡವಿದ್ದೆಲ್ಲಿ? ಈ ಬಗ್ಗೆ ಅಧಿಕೃತವಾಗಿ ಕುಟುಂಬದ ಮೂಲದಿಂದ ಉತ್ತರಗಳು ಬಂದಿವೆಯೇ? ಇಲ್ಲ. ಚಿಕಿತ್ಸೆಗೆ ದಾಖಲಾಗಿದ್ದ ಆಸ್ಪತ್ರೆಯ ವರದಿ ರಿಲೀಸ್ ಆಯಿತೆ? ಇಲ್ಲ.
- ಗರ್ಭಕಂಠ ಕ್ಯಾನ್ಸರ್‌ನಿಂದ ಪೂನಂ ಪಾಂಡೆ ಸಾವಾಗಿದೆ ಎಂಬುದು ನಿಜವೇ ಆಗಿದ್ದರೆ, ಅದಕ್ಕೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆ ಮತ್ತು ವೈದ್ಯರ ಅಧಿಕೃತ ವರದಿ ಹೊರಬೀಳಬೇಕಿತ್ತು. ಆ ಪ್ರಕ್ರಿಯೆಯೂ ಇಲ್ಲಿ ನಡೆಯಲಿಲ್ಲ. ನೇರವಾಗಿ ಒಂದೇ ಒಂದು ಇನ್‌ಸ್ಟಾ ಪೋಸ್ಟ್‌ಅನ್ನೇ ನಂಬಿ, ಸಾವಿನ ಸುದ್ದಿಯೇ ಮೇಲುಗೈ ಸಾಧಿಸಿತು.
- ಪೂನಂ ಪಾಂಡೆ ಓರ್ವ ಸೆಲೆಬ್ರಿಟಿ. ಆ ನಟಿ ಸತ್ತು ಅದಾಗಲೇ ನಾಲ್ಕು ದಿನವಾಗಿದೆ. ಹಾಗಾದರೆ ನಟಿಯ ಅಂತ್ಯಸಂಸ್ಕಾರ ಆಗಿದ್ದೆಲ್ಲಿ? ಸೋಷಿಯಲ್ ಮೀಡಿಯಾದ ಅಲೆಯಲ್ಲಿ ಈ ಪ್ರಶ್ನೆಗೂ ಉತ್ತರ ಸಿಗಲಿಲ್ಲ. ಇಷ್ಟೆಲ್ಲ ಪ್ರಶ್ನೆಗಳಿದ್ದರೂ, ಅದ್ಹೇಗೆ ಅಷ್ಟು ನಿಖರವಾಗಿ ಈ ಸಾವು ಎಲ್ಲರೊಳಗೂ ನಿಜವೆಂದು ಬಿಂಬಿತವಾಯ್ತು? ಇದೆಲ್ಲವನ್ನು ನೋಡಿದರೆ, ನಾವು ಎಡವಿದ್ದೆಲ್ಲಿ? ಈ ಪ್ರಶ್ನೆಗೆ ನಮ್ಮನ್ನು ನಾವೇ ಪರಾಮರ್ಶೆ ಮಾಡಿಕೊಳ್ಳಬೇಕಿದೆ.