ರಣಬೀರ್ ಕಪೂರ್ ನಟನೆಯ ರಾಮಾಯಣದ ಬಜೆಟ್ ಬರೋಬ್ಬರಿ 835 ಕೋಟಿ ರೂ.; ಈ ಸಿನಿಮಾ ಬಿಡುಗಡೆ ಯಾವಾಗ? ಇಲ್ಲಿದೆ ವಿವರ
ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತಾ ದೇವಿಯಾಗಿ, ಲಾರಾ ದತ್ತಾ ಕೈಕೇಯಿಯಾಗಿ, ಸನ್ನಿ ಡಿಯೋಲ್ ಹನುಮಾನ್ ಪಾತ್ರದಲ್ಲಿ ಮತ್ತು ಶೀಬಾ ಚಡ್ಡಾ ಮಂಥರೆ ಪಾತ್ರದಲ್ಲಿ ನಟಿಸಲಿದ್ದಾರೆ.
ಬೆಂಗಳೂರು: ನಿತೀಶ್ ತಿವಾರಿ ಅವರ ಬಹು ನಿರೀಕ್ಷಿತ ಚಿತ್ರ ರಾಮಾಯಣದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ರಾಮಾಯಣದ ಚಿತ್ರದ ಬಜೆಟ್ 835 ಕೋಟಿ ರೂಪಾಯಿ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ. ಸಿನಿಮಾ ವ್ಯಾಪಾರ ವಿಶ್ಲೇಷಕ ಸುಮಿತ್ ಕಡೇಲ್ ಚಿತ್ರದ ಬಿಡುಗಡೆಯ ದಿನಾಂಕದ ಬಗ್ಗೆ ಮಾತನಾಡಿದ್ದಾರೆ.
835 ಕೋಟಿ ರೂ. ಬಜೆಟ್‌ನಲ್ಲಿ ರಾಮಾಯಣ ನಿರ್ಮಾಣ
ಬಾಲಿವುಡ್ ಹಂಗಾಮವು ಮೂಲವೊಂದನ್ನು ಉಲ್ಲೇಖಿಸಿ ರಾಮಾಯಣ ಸಿನಿಮಾದ ಬಜೆಟ್ ವಿವರ ನೀಡಿದೆ. "ರಾಮಾಯಣವು ಕೇವಲ ಒಂದು ಚಲನಚಿತ್ರವಲ್ಲ. ಅದೊಂದು ಭಾವನೆಯಾಗಿದೆ. ಈ ಸಿನಿಮಾವನ್ನು ಜಾಗತಿಕ ದೃಶ್ಯವಾಗಿ ರೂಪಿಸಲು ಪ್ರಯತ್ನಿಸುತ್ತಿದ್ದಾರೆ. ಕೇವಲ ರಾಮಾಯಣ: ಭಾಗ 1 ಕ್ಕಾಗಿ 100 ಮಿಲಿಯನ್ ಡಾಲರ್ (835 ಕೋಟಿ ರೂ.) ಬಜೆಟ್ ವಿನಿಯೋಗಿಸಲಾಗುತ್ತದೆ. ಈ ಫ್ರ್ಯಾಂಚೈಸ್ ಬೆಳೆದಂತೆ ಇದನ್ನು ಮತ್ತಷ್ಟು ವಿಸ್ತರಿಸಲು ನಮಿತ್ ಮಲ್ಹೋತ್ರಾ ಯೋಜಿಸಿದ್ದಾರೆ. ರಣಬೀರ್ ಕಪೂರ್ ಅವರೊಂದಿಗೆ ರಾಮನ ಪಾತ್ರದಲ್ಲಿ ಪ್ರೇಕ್ಷಕರನ್ನು ದೃಶ್ಯ ವೈಭವಕ್ಕೆ ಕರೆದೊಯ್ಯಲಾಗುತ್ತದೆ" ಎಂದು ಮೂಲವನ್ನು ಉಲ್ಲೇಖಿಸಿ ಬಾಲಿವುಡ್ ಹಂಗಾಮ ವರದಿ ಮಾಡಿದೆ.
ರಾಮಾಯಣದ ಪೋಸ್ಟ್ ಪ್ರೊಡಕ್ಷನ್ ವಿಚಾರ
"ರಾಮಾಯಣದ ಬಜೆಟ್ 835 ಕೋಟಿ ರೂಪಾಯಿ. ಈ ಚಿತ್ರಕ್ಕೆ 600 ದಿನಗಳ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಬೇಕಾಗುತ್ತವೆ. ಸಿನಿಮಾ ಶೂಟಿಂಗ್ ಮಾಡಿದ ಬಳಿಕವೂ ಸಾಕಷ್ಟು ಖರ್ಚು ಇರುತ್ತದೆ. ಈ ಸಿನಿಮಾದ ಮೂಲಕ ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಆಲೋಚನೆ ಇದೆ" ಎಂದು ಮೂಲಗಳನ್ನು ಉಲ್ಲೇಖಿಸಿ ಬಾಲಿವುಡ್ ಹಂಗಾಮ ವರದಿ ಮಾಡಿದೆ.
ರಾಮಾಯಣ ಬಿಡುಗಡೆಯ ದಿನಾಂಕ
ಸುಮಿತ್ ಕಡೇಲ್ ರಾಮಾಯಣದ ಬಿಡುಗಡೆಯ ವರ್ಷದ ಕುರಿತು ಮಾಹಿತಿ ನೀಡಿದ್ದಾರೆ. "ರಾಮಾಯಣ (ಭಾಗ 1) ಅಕ್ಟೋಬರ್ 2027 ರಲ್ಲಿ ಬಿಡುಗಡೆಯಾಗಲಿದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತಾ ದೇವಿಯಾಗಿ, ಲಾರಾ ದತ್ತಾ ಕೈಕೇಯಿಯಾಗಿ, ಸನ್ನಿ ಡಿಯೋಲ್ ಹನುಮಾನ್ ಆಗಿ ಮತ್ತು ಶೀಬಾ ಚಡ್ಡಾ ಮಂಥರೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಕುರಿತು ಚಿತ್ರತಂಡವು ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲ. ಇತ್ತೀಚೆಗೆ ರಣಬೀರ್ ಕಪೂರ್ ಅವರು ಬಿಲ್ಲುಗಾರಿಕೆ ತರಬೇತುದಾರರೊಂದಿಗೆ ಇರುವ ಫೋಟೋಗಳನ್ನು ಫ್ಯಾನ್ಸ್ ಹಂಚಿಕೊಂಡಿದ್ದಾರೆ. ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಪರಿಪೂರ್ಣವಾಗಿ ನಟಿಸಲು ಬಿಲ್ಲುಗಾರಿಕೆ ಕಲಿಯುತ್ತಿದ್ದಾರೆ ಎನ್ನುವ ಸುಳಿವು ಈ ಮೂಲಕ ದೊರಕಿದೆ.
ಇತ್ತೀಚೆಗೆ, ನಟ ಅಜಿಂಕ್ಯ ದೇವ್ ರಾಮಾಯಣ ತಂಡವನ್ನು ಸೇರಿಕೊಂಡಿದ್ದಾರೆ. ರಣಬೀರ್ ಅವರೊಂದಿಗೆ ಸೆಲ್ಫಿ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅಜಿಂಕ್ಯ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಸೂಚನೆ ನೀಡಿದ್ದಾರೆ. ಭಗವಾನ್ ರಾಮನ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ ಋಷಿ ವಿಶ್ವಾಮಿತ್ರನ ಪಾತ್ರವನ್ನು ಅಜಿಂಕ್ಯ ನಿರ್ವಹಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.
"ರಾಮಾಯಣ ಸಿನಿಮಾದಲ್ಲಿ ಅದ್ಭುತ ಪಾತ್ರವನ್ನು ನಿರ್ವಹಿಸಲು ಉತ್ಸುಕನಾಗಿದ್ದೇನೆ. ಮೊದಲು ನೀತು ಸಿಂಗ್ ಕಪೂರ್ ಅವರೊಂದಿಗೆ, ಬಳಿಕ ಕರಿಷ್ಮಾ ಕಪೂರ್ ಜತೆ ವೆಬ್ ಸರಣಿಗಾಗಿ ಕೆಲಸ ಮಾಡಿದೆ. ಇದೀಗ ರಣಬೀರ್ ಕಪೂರ್ ಜತೆ ಪರದೆ ಹಂಚಿಕೊಳ್ಳುತ್ತಿದ್ದೇನೆ" ಎಂದು ಮಾಹಿತಿ ನೀಡಿದ್ದಾರೆ.