Tiger 3 Review: ಜಾಳು ಜಾಳು ಕಥೆಯಲ್ಲಿ ಮೇಳೈಸಿದ ಸಾಹಸ; ಮಂಕಾದ ಟೈಗರ್ ಘರ್ಜನೆ!
ಸ್ವ್ಯಾಗ್, ಆಕ್ಷನ್ ಹೊರತುಪಡಿಸಿದರೆ ನಟನೆ ವಿಚಾರದಲ್ಲಿ ನೆನಪಿನಲ್ಲಿ ಉಳಿಯುವಂಥದ್ದೇನೂ ಸಲ್ಮಾನ್ ಖಾನ್ ಅವರಿಂದ ಸಂದಾಯವಾಗಿಲ್ಲ. RAW ಏಜೆಂಟ್ ಅನ್ನೋ ಕಾರಣಕ್ಕೆ ಪಾತ್ರವನ್ನು ಮೀರಿ ಸ್ಕ್ರಿಪ್ಟ್ ಆಳಕ್ಕಿಳಿದು ಅತ್ಯುತ್ತಮವಾದುದ್ದೇನು ಅವರಿಂದ ಹೊರಬಂದಿಲ್ಲ. ಹಾಗಾಗಿ ಈ ಟೈಗರ್ ನೀರಸ ಮೂಡಿಸುವುದೇ ಹೆಚ್ಚು.
ಚಿತ್ರ: ಟೈಗರ್
ನಿರ್ಮಾಣ: ಯಶ್ ರಾಜ್ ಫಿಲಂಸ್
ನಿರ್ದೇಶನ: ಮನೀಶ್ ಶರ್ಮಾ
ತಾರಾಗಣ: ಸಲ್ಮಾನ್ ಖಾನ್, ಕತ್ರಿಕಾ ಕೈಫ್, ಇಮ್ರಾನ್ ಹಶ್ಮಿ, ಶಾರುಖ್ ಖಾನ್ ಮುಂತಾದವರು.
ಸ್ಟಾರ್: 2.5\5
Tiger 3 Review: ಸಲ್ಮಾನ್ ಖಾನ್, ಕತ್ರಿನಾ ಕೈಫ್ ನಟನೆಯ ಟೈಗರ್ 3 ಸಿನಿಮಾ ಇಂದು (ನ. 12) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಟೈಗರ್ ಪ್ರಾಂಚೈಸ್‌ನ ಮೂರನೇ ಸಿನಿಮಾ ಇದಾಗಿದ್ದು, ಸ್ಪೈ ಥ್ರಿಲ್ಲರ್‌ನಲ್ಲಿ ಸಲ್ಮಾನ್ ಮತ್ತೆ ಆಕ್ಷನ್ ಅವತಾರ ಎತ್ತಿದ್ದಾರೆ. ಟ್ರೇಲರ್ ಮೂಲಕ ಕುತೂಹಲ ಹೆಚ್ಚಿಸಿಕೊಂಡಿದ್ದ ಈ ಸಿನಿಮಾ ಇದೀಗ, ದೀಪಾವಳಿ ಹಬ್ಬದ ನಿಮಿತ್ತ ಚಿತ್ರಮಂದಿರಕ್ಕೆ ಧಾವಿಸಿದೆ. ಸಲ್ಲು ಅಭಿಮಾನಿಗಳಿಂದಲೂ ಚಿತ್ರಕ್ಕೆ ಭರ್ಜರಿಯಾಗಿಯೇ ಸ್ವಾಗತ ಸಿಕ್ಕಿದೆ.
ಈ ಹಿಂದೆ ಬ್ಯಾಂಡ್ ಬಾಜಾ ಬಾರಾತ್, ಶಾರುಖ್ ಖಾನ್ ಜತೆಗೆ ಫ್ಯಾನ್ ಸಿನಿಮಾ ನಿರ್ದೇಶನ ಮಾಡಿದ್ದ ಮನೀಷ್ ಶರ್ಮಾ, ಮೊದಲ ಬಾರಿಗೆ ಬಿಗ್ ಬಜೆಟ್‌ನ ಆಕ್ಷನ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಪ್ರಯತ್ನದಲ್ಲಿ ಗೆದ್ದ ಖುಷಿಯಲ್ಲಿದ್ದಾರೆ. ವಿದೇಶದಲ್ಲಿಯೇ ಬಹುತೇಕ ಶೂಟಿಂಗ್ ಮುಗಿಸಿಕೊಂಡಿರುವ ಟೈಗರ್ 3 ಸಿನಿಮಾ, ಮಾಸ್ ಪ್ರೇಕ್ಷಕರಿಗಾಗಿಯೇ ಹೆಣೆದಂತಿದೆ. ಗನ್ ಸದ್ದಿನ ಜತೆಗೆ ಸಲ್ಮಾನ್ ಮತ್ತು ಶಾರುಖ್ ಜಂಟಿ ಸಾಹಸ ದೃಶ್ಯಗಳು ಕಣ್ಣಿಗೆ ಹಬ್ಬ. ಆದರೆ, ಊಟಕ್ಕೆ ಉಪ್ಪಿನಕಾಯಿ ಇರಬೇಕು, ಉಪ್ಪಿನಕಾಯಿಯೇ ಊಟವಾಗಬಾರದು! ಟೈಗರ್ 3ನಲ್ಲಾಗಿರುವುದೂ ಇದೇ.
ಟೈಗರ್ 3 ಕಥೆ ಏನು?
ಕಳೆದ ಎರಡು ಟೈಗರ್ ಸಿನಿಮಾಗಳ ಕಥೆಯಂತೆ ಇದೂ ಸಹ ಸ್ಪೈ ಥ್ರಿಲ್ಲರ್ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ಟೈಗರ್ (ಸಲ್ಮಾನ್ ಖಾನ್) ಒಬ್ಬ ರಾ ಏಜೆಂಟ್. ಆತನ ಪತ್ನಿ ಜೋಯಾ (ಕತ್ರಿನಾ ಕೈಫ್) ISI ನಲ್ಲಿ ಕೆಲಸ ಮಾಡುವವಳು. ಈ ದಂಪತಿ ಒಟ್ಟಿಗೆ ಸೇರಿ ಭಯೋತ್ಪಾದಕ ವಿಧ್ವಂಸಕ ಕೃತ್ಯಕ್ಕೆ ಮುಂದಾಗುವ ಅತೀಶ್‌ನನ್ನು (ಇಮ್ರಾನ್ ಹಶ್ಮಿ) ಸೆರೆ ಹಿಡಿದು, ಆತನ ನಿಜಬಣ್ಣವನ್ನು ಪಾಕಿಸ್ತಾನದ ಮುಂದೆ ಬಯಲು ಮಾಡಬೇಕೆಂಬುದು ಈ ಜೋಡಿಯ ಪಣ. ಆತನನ್ನು ಈ ಜೋಡಿ ಹೇಗೆ ಹಿಡಿಯುತ್ತದೆ? ಎಂಬುದೇ ಈ ಸಿನಿಮಾದ ಒಂದೆಳೆ.
ಅತ್ಯುತ್ತಮವಾದದ್ದು ಏನೂ ಇಲ್ಲ!
ಈ ಹಿಂದಿನ ಎರಡು ಸಿನಿಮಾಗಳಲ್ಲಿ ಇದೇ ರೀತಿಯ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದರಿಂದ ಟೈಗರ್ ಪಾತ್ರಕ್ಕೆ ಸಲ್ಮಾನ್ ಖಾನ್ ಹೆಚ್ಚು ಶ್ರಮವಹಿಸಿಲ್ಲ. ಜತೆಗೆ ಇದು ಅವರಿಗೆ ಹೊಸದೂ ಅಲ್ಲ! ಸ್ವ್ಯಾಗ್, ಆಕ್ಷನ್ ಹೊರತುಪಡಿಸಿದರೆ ನಟನೆ ವಿಚಾರದಲ್ಲಿ ನೆನಪಿನಲ್ಲಿ ಉಳಿಯುವಂಥದ್ದೇನೂ ಸಲ್ಮಾನ್ ಖಾನ್ ಅವರಿಂದ ಸಂದಾಯವಾಗಿಲ್ಲ. RAW ಏಜೆಂಟ್ ಅನ್ನೋ ಕಾರಣಕ್ಕೆ ಪಾತ್ರವನ್ನು ಮೀರಿ ಸ್ಕ್ರಿಪ್ಟ್ ಆಳಕ್ಕಿಳಿದು ಅತ್ಯುತ್ತಮವಾದುದ್ದೇನು ಅವರಿಂದ ಹೊರಬಂದಿಲ್ಲ. ಹಾಗಾಗಿ ಈ ಟೈಗರ್ ನೀರಸ ಮೂಡಿಸುವುದೇ ಹೆಚ್ಚು.
ಕಥೆಗಿಂತ ಸಾಹಸ ದೃಶ್ಯಗಳ ತೋರಣ
ಹೊಡಿ ಬಡಿ ಆಟದಲ್ಲಿ ಪ್ರೇಕ್ಷಕನಿಗೆ ಸೀಟಿನ ತುದಿಗೆ ತಂದು ಕೂರಿಸುವ ದೃಶ್ಯಗಳು ಕೊರತೆ ಎದ್ದು ಕಾಣಿಸುತ್ತದೆ. ಒಂದು ಸ್ಪೈ ಸಿನಿಮಾ ಬಯಸುವ ಏರಿಳಿತಗಳು, ಕೌತುಕಗಳು ಸಿನಿಮಾದಲ್ಲಿ ಕಾಣಸಿಗುವುದೇ ಅಪರೂಪ. ಇಡೀ ಸಿನಿಮಾದಲ್ಲಿ ಕಥೆಗಿಂತ ಸಾಹಸ ದೃಶ್ಯಗಳೇ ಹೆಚ್ಚು ಮೇಳೈಸಿವೆ. ನಾಯಕ ತಾನೊಬ್ಬ ಸ್ಪೈ ಅನ್ನೋದನ್ನು ಮರೆತು, ಆಕ್ಷನ್ ಸನ್ನಿವೇಶಗಳಲ್ಲಿಯೇ ಕಳೆದುಹೋದಂತಿದೆ. ಕತ್ರಿನಾ ಕೈಫ್ ಐಎಸ್‌ಐ ಏಜೆಂಟ್ ಜೋಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಮಹತ್ವದ ಪಾತ್ರದಲ್ಲಿ ಕಾಣಿಸಿಕೊಂಡರೂ, ಅದು ಹೆಚ್ಚು ಸದ್ದು ಮಾಡುವುದಿಲ್ಲ.
ಟೈಗರ್-ಪಠಾಣ್ ಫೈಟ್!
ಇನ್ನು ಇಡೀ ಸಿನಿಮಾದ ಹೈಲೈಟ್ ಎಂದರೆ ಅದು ಸಲ್ಲು-ಶಾರುಖ್. ಈ ಹಿಂದಿನ ಪಠಾಣ್ ಚಿತ್ರದ ದೃಶ್ಯವೊಂದರಲ್ಲಿ ಸಲ್ಮಾನ್ ಖಾನ್ ಅವರ ಎಂಟ್ರಿಯಾಗಿತ್ತು. ಇದೀಗ ಟೈಗರ್ ಚಿತ್ರದಲ್ಲಿ ಪಠಾಣ್ ಎಂಟ್ರಿಯಾಗಿದೆ. ಈ ಇಬ್ಬರೂ ತೆರೆಮೇಲೆ 15ರಿಂದ 20 ನಿಮಿಷ ಕಾಣಿಸಿಕೊಳ್ಳುತ್ತಾರೆ. ಇಬ್ಬರು ಬಿಗ್ ಸ್ಟಾರ್‌ಗಳನ್ನು ಒಂದೇ ತೆರೆಮೇಲೆ ಕಣ್ತುಂಬಿಕೊಳ್ಳುವುದು ನೋಡುಗನ ಕಣ್ಣಿಗೆ ಹಬ್ಬವೇ ಸರಿ. ಸಾಹಸ ದೃಶ್ಯದಲ್ಲಿ ಇಬ್ಬರೂ ಅಬ್ಬರಿಸಿ ಬೊಬ್ಬಿರಿದಿದ್ದಾರೆ.