Randeep Hooda: ಮಣಿಪುರದ ಸುಂದರಿ ಜತೆ 47ರ ಹರೆಯದ ನಟ ರಣದೀಪ್ ಹೂಡಾ ಮದುವೆ
ಬಾಲಿವುಡ್ ನಟ ರಣದೀಪ್ ಹೂಡಾ, ಮದುವೆಯ ತಯಾರಿಯಲ್ಲಿದ್ದಾರೆ. ಬಹುಕಾಲದ ಗೆಳತಿ ಲಿನ್ ಲೈಶ್ರಾಮ್ ಜತೆಗೆ ಇದೇ ತಿಂಗಳಾಂತ್ಯಕ್ಕೆ ಬಾಳ ಬಂಧನಕ್ಕೆ ಬಲಗಾಲಿಡಲಿದ್ದಾರೆ.
Randeep Hooda: ಬಾಲಿವುಡ್ನಲ್ಲಿ ತಮ್ಮ ವಿಭಿನ್ನ ಸಿನಿಮಾಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ ನಟ ರಣದೀಪ್ ಹೂಡಾ. ಕಳೆದ ಎರಡು ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಹೂಡಾ, ಸಾಕಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೇರಿ ಕೋಮ್, ರಂಗೂನ್ ಸೇರಿ ಇತ್ತೀಚಿನ ಜಾನೇ ಜಾನ್ ಸಿನಿಮಾದಲ್ಲಿಯೂ ನಟಿಸಿದ್ದರು. ಇದೀಗ ಇದೇ ನಟ ಜಂಟಿಯಾಗುತ್ತಿದ್ದಾರೆ. ತಮ್ಮ 47ರ ಹರೆಯದಲ್ಲಿ ರಣದೀಪ್, ತಮ್ಮ ದೀರ್ಘಕಾಲದ ಗೆಳತಿ ಲಿನ್ ಲೈಶ್ರಾಮ್ ಅವರನ್ನು ವರಿಸಲಿದ್ದಾರೆ.
ಹಾಗಾದರೆ ಯಾವಾಗ ಮದುವೆ? ಸದ್ಯದ ಅವರ ಆಪ್ತ ಬಳಗದ ಮಾಹಿತಿ ಪ್ರಕಾರ, ಇದೇ ನವೆಂಬರ್ ತಿಂಗಳಾಂತ್ಯಕ್ಕೆ ರಣದೀಪ್ ಲಿನ್ ಅವರನ್ನು ಮದುವೆ ಆಗಲಿದ್ದಾರೆ. ಹಾಗಂತ ಇದು ಅದ್ಧೂರಿ ಮದುವೆಯಲ್ಲ. ಆಪ್ತರು, ಸ್ನೇಹಿತರು ಮತ್ತು ಎರಡೂ ಕುಟುಂಬದ ಸಮ್ಮುಖದಲ್ಲಿ ಈ ಜೋಡಿ ಬಾಳ ಬಂಧನಕ್ಕೆ ಕಾಲಿಡಲಿದ್ದಾರೆ. ಸದ್ಯಕ್ಕೆ ಇನ್ನೇನು ಅಧಿಕೃತವಾಗಿ ಮದುವೆಯ ದಿನಾಂಕ, ಮತ್ತು ಮದುವೆಯ ಸ್ಥಳ ಹೊರಬೀಳಬೇಕಿದೆ.
ಯಾರು ಈ ಲಿನ್ ಲೈಶ್ರಾಮ್..
ರಣದೀಪ್ ಹೂಡಾ ಅವರ ಗೆಳತಿ ಮಣಿಪುರದ ಪ್ರಸಿದ್ಧ ಮಾಡೆಲ್. ಇದಲ್ಲದೆ, ಹಲವು ಬಾಲಿವುಡ್ ಚಿತ್ರಗಳಲ್ಲೂ ಕೆಲಸ ಮಾಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ಮೇರಿ ಕೋಮ್ ಚಿತ್ರದಲ್ಲೂ, ಲಿನ್ ಕಾಣಿಸಿಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದ ನಿರೂಪಕರಾಗಿಯೂ ಲಿನ್ ಕಾಣಿಸಿಕೊಂಡಿದ್ದಾರೆ. ಇದೀಗ ಇದೇ ತಮ್ಮ ಬಹುಕಾಲದ ಗೆಳೆಯನ ಜತೆಗೆ ಸಪ್ತಪದಿ ತುಳಿಯಲಿದ್ದಾರೆ.
ರೂಪದರ್ಶಿ ಲಿನ್ ಲೈಶ್ರಾಮ್ ಮಿಸ್ ನಾರ್ತ್ ಈಸ್ಟ್ ಸೌಂದರ್ಯ ಸ್ಪರ್ಧೆಯಲ್ಲೂ ಭಾಗವಹಿಸಿ ರನ್ನರ್ ಅಪ್ ಆಗಿದ್ದಾರೆ. ಇದರ ಜತೆಗೆ ಲಿನ್ ನಟನೆಯ ಜೊತೆಗೆ ಆಭರಣ ವ್ಯವಹಾರದಲ್ಲೂ ತೊಡಗಿಸಿಕೊಂಡಿದ್ದಾರೆ.