ಪಠಾಣ್, ಜವಾನ್, ಡಂಕಿ ಸಿನಿಮಾಗಳನ್ನು ವೀಕ್ಷಿಸಿದ್ದು ಎಷ್ಟು ಮಂದಿ? ನೂತನ ದಾಖಲೆ ಬರೆದ ಶಾರುಖ್ ಖಾನ್
ಡಂಕಿ, ಜವಾನ್ ಹಾಗೂ ಪಠಾಣ್ ಸಿನಿಮಾಗಳ ಮೂಲಕ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಹಿಟ್ ಬಾರಿಸಿದ ರೆಕಾರ್ಡ್ ಶಾರುಖ್ ಖಾನ್ ಹೆಸರಿನಲ್ಲಿದೆ . ಬರೀ ಕಲೆಕ್ಷನ್ ಅಷ್ಟೇ ಅಲ್ಲ ಈ ಮೂರು ಚಿತ್ರಗಳನ್ನು ವೀಕ್ಷಿಸಿದ್ದು, ಬರೋಬ್ಬರಿ ಎಂಟು ಕೋಟಿ ಮಂದಿ!
Shah Rukh Khan: 2018ರಲ್ಲಿ ಜೀರೋ ಸಿನಿಮಾ ಸೋತ ಬಳಿಕ ಅಕ್ಷರಶಃ ಜೀರೋ ಆಗಿದ್ದ ಕಿಂಗ್ ಖಾನ್ ಶಾರುಖ್ ಖಾನ್, ಇದೀಗ ಪುಟಿದೆದ್ದಿದ್ದಾರೆ. ಒಂದಲ್ಲ ಎರಡಲ್ಲ ಮೂರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಈ ನಟ. ಪಠಾಣ್, ಜವಾನ್, ಡಂಕಿ ಸಿನಿಮಾಗಳು ಹಿಟ್ ಪಟ್ಟಿ ಸೇರಿ ಗಳಿಕೆಯಲ್ಲೂ ಕಮಾಲ್ ಮಾಡಿವೆ. ಹೌದು ಕಿಂಗ್ ಈಸ್ ಆಲ್ವೇಸ್ ಕಿಂಗ್. ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅಭಿಮಾನಿಗಳು ಹೀಗಂತ ಹೆಮ್ಮೆಯಿಂದ ಕೂಗುತ್ತಿದ್ದಾರೆ. ಅದಕ್ಕೆ ಕಾರಣ ಕಿಂಗ್ ಖಾನ್ ಹೆಸರಿಗೆ ಇದೀಗ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ.
2023ರಲ್ಲಿ ಬಾಕ್ಸಾಫೀಸ್ ಧೂಳಿಪಟ ಮಾಡಿದ ಕೀರ್ತಿ ಶಾರುಖ್ ಗೆ ಸಲ್ಲುತ್ತದೆ. ಡಂಕಿ, ಜವಾನ್ ಹಾಗೂ ಪಠಾಣ್ ಸಿನಿಮಾಗಳ ಮೂಲಕ ಒಂದೇ ವರ್ಷದಲ್ಲಿ ಹ್ಯಾಟ್ರಿಕ್ ಹಿಟ್ ಬಾರಿಸಿದ ರೆಕಾರ್ಡ್ ಬಾದ್ ಷಾಗೆ ಸೇರಿದೆ. ಬರೀ ಕಲೆಕ್ಷನ್ ಅಷ್ಟೇ ಅಲ್ಲ ಈ ಮೂರು ಚಿತ್ರಗಳನ್ನು ವೀಕ್ಷಿಸಿದ್ದು, ಬರೋಬ್ಬರಿ ಎಂಟು ಕೋಟಿ ಮಂದಿ! ಒಂದು ವರ್ಷದಲ್ಲಿಯೇ ಇಷ್ಟು ಮಂದಿ ಸಿನಿಮಾ ವೀಕ್ಷಿಸಿರುವುದು ದಾಖಲೆಯೇ ಸರಿ. ಹಾಗಾದರೆ ಯಾವ ಸಿನಿಮಾವನ್ನು ಎಷ್ಟಷ್ಟು ಮಂದಿ ನೋಡಿದ್ದಾರೆ. ಇದರ ಅಂಕಿ ಅಂಶ ಹೇಗೆ ಸಾಧ್ಯ?
ಜವಾನ್ ಚಿತ್ರದ 3.93 ಕೋಟಿ ಟಿಕೆಟ್ ಮಾರಾಟವಾಗಿದ್ದು, ಪಠಾಣ್ 3.20 ಕೋಟಿ, ಡಂಕಿ 1 ಕೋಟಿ ಟಿಕೆಟ್‌ಗಳನ್ನು ಮಾರಿಕೊಂಡಿದೆ. ಈ ಮೂಲಕ ಒಂದೇ ವರ್ಷದಲ್ಲಿ ಬರೋಬ್ಬರಿ 8 ಕೋಟಿ ಟಿಕೆಟ್ ಮಾರಿಕೊಳ್ಳುವುದರ ಜತೆಗೆ ಈ ಸಾಧನೆ ಮಾಡಿದ ಮೊದಲ ಬಾಲಿವುಡ್ ತಾರೆಯಾಗಿ ಹೊರಹೊಮ್ಮಿದ್ದಾರೆ ಶಾರುಖ್ ಖಾನ್.
2023ರಲ್ಲಿ ಜವಾನ್ ಹಾಗೂ ಪಠಾಣ್ ಗಳಿಕೆಯಲ್ಲಿ ದಾಖಲೆ ಬರೆದಿದ್ದು, ಅದಕ್ಕೆ ಡಂಕಿ ಕೂಡ ಸೇರ್ಪಡೆಯಾಯಿತು. ಕಳೆದ ವರ್ಷದ ಆರಂಭದಲ್ಲಿ ಪಠಾಣ್ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿತು. ಈ ಚಿತ್ರ ಹಿಂದಿ ಬೆಲ್ಟ್ ನಲ್ಲಿಯೇ 524 ಕೋಟಿ ಬಾಚಿತ್ತು. ಭಾರತಾದ್ಯಂತ 545 ಕೋಟಿ ಲೂಟಿ ಮಾಡಿದ್ದ ಪಠಾಣ್ ಒಟ್ಟಾರೆ ವಿಶ್ವಾದ್ಯಂತ 1055 ಕೋಟಿ ಗಳಿಕೆ ಕಂಡಿತ್ತು. ಆ ನಂತರ ಜೂನ್ ನಲ್ಲಿ ತೆರೆಕಂಡ ಜವಾನ್, ಹಿಂದಿ ಚಿತ್ರರಂಗದಲ್ಲಿ 643 ಕೋಟಿ ಕಲೆಕ್ಷನ್ ಮಾಡಿದರೆ, ವಿಶ್ವಾದ್ಯಂತ 580 ಕೋಟಿ ಲೂಟಿ ಮಾಡಿತ್ತು. ಡಿಸೆಂಬರ್ ನಲ್ಲಿ ಬಿಡುಗಡೆಯಾದ ಡಂಕಿ ಕೇವಲ 13 ದಿನದಲ್ಲಿ 410 ಕೋಟಿ ಗಳಿಕೆ ಮಾಡಿತ್ತು.
ಡಂಕಿ ಸಿನಿಮಾಗೆ ರಾಜ್ ಕುಮಾರ್ ಹಿರಾನಿ ಆಕ್ಷನ್ ಕಟ್ ಹೇಳಿದ್ದು, ಚಿತ್ರದಲ್ಲಿ ಶಾರುಖ್ ಖಾನ್, ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್ ಮುಂತಾದವರು ನಟಿಸಿದ್ದಾರೆ. ಕತೆಯ ಆಯ್ಕೆಯಲ್ಲಿ ಪ್ರತಿಬಾರಿ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಒಂದು ಗಟ್ಟಿಯಾದ ಕಥಾವಸ್ತು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದು ಸಿನಿಪ್ರೇಮಿಗಳಿಗೆ ಗೊತ್ತಿರುವ ಸಂಗತಿ. ಅದೇ ರೀತಿ ಈ ಚಿತ್ರದಲ್ಲಿ ಕೆಲಸ ಅರಸಿ ಅಕ್ರಮವಾಗಿ ದೇಶಗಳ ಗಡಿ ದಾಟುವವರ ಕಥೆಯನ್ನು ಡಂಕಿ ಮೂಲಕ ತೋರಿಸಿದ್ದರು. 'ಡಂಕಿ’ ಸಿನಿಮಾವನ್ನು ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.\