ಎಂಡೊಮೆಟ್ರಿಯೋಸಿಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ ಶಮಿತಾ ಶೆಟ್ಟಿ; ಏನಿದು ಕಾಯಿಲೆ? ಮಹಿಳೆಯರೇ ಎಚ್ಚರವಹಿಸಿ ಎಂದ ಶಿಲ್ಪಾ ಶೆಟ್ಟಿ ಸಹೋದರಿ
ಕನ್ನಡ ಸುದ್ದಿ  /  ಮನರಂಜನೆ  /  ಎಂಡೊಮೆಟ್ರಿಯೋಸಿಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ ಶಮಿತಾ ಶೆಟ್ಟಿ; ಏನಿದು ಕಾಯಿಲೆ? ಮಹಿಳೆಯರೇ ಎಚ್ಚರವಹಿಸಿ ಎಂದ ಶಿಲ್ಪಾ ಶೆಟ್ಟಿ ಸಹೋದರಿ

ಎಂಡೊಮೆಟ್ರಿಯೋಸಿಸ್ ಶಸ್ತ್ರಚಿಕಿತ್ಸೆಗೆ ಒಳಗಾದ ನಟಿ ಶಮಿತಾ ಶೆಟ್ಟಿ; ಏನಿದು ಕಾಯಿಲೆ? ಮಹಿಳೆಯರೇ ಎಚ್ಚರವಹಿಸಿ ಎಂದ ಶಿಲ್ಪಾ ಶೆಟ್ಟಿ ಸಹೋದರಿ

ನಟಿ ಶಮಿತಾ ಶೆಟ್ಟಿ ಅವರು ಎಂಡೊಮೆಟ್ರಿಯೋಸಿಸ್ ಕಾಯಿಲೆಗೆ ಚಿಕತ್ಸೆ ಪಡೆಯುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಬಹುತೇಕ ಮಹಿಳೆಯರಲ್ಲಿ ಇಂತಹ ಕಾಯಿಲೆ ಇರಬಹುದು. ಈ ಕುರಿತು ಕಾಳಜಿ ವಹಿಸಿ ಎಂದು ಮಹಿಳೆಯರಲ್ಲಿ ಜಾಗೃತಿ ಮೂಡಿಸಿದ್ದಾರೆ.

ಎಂಡೊಮೆಟ್ರಿಯೋಸಿಸ್ ಶಸ್ತ್ರಚಿಕಿತ್ಸೆಗೆ ಒಳಗಾದ ಶಮಿತಾ ಶೆಟ್ಟಿ
ಎಂಡೊಮೆಟ್ರಿಯೋಸಿಸ್ ಶಸ್ತ್ರಚಿಕಿತ್ಸೆಗೆ ಒಳಗಾದ ಶಮಿತಾ ಶೆಟ್ಟಿ

ಬೆಂಗಳೂರು: ನಟಿ ಶಮಿತಾ ಶೆಟ್ಟಿ ಎಂಡೊಮೆಟ್ರಿಯೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದೀಗ ಇನ್‌ಸ್ಟಾಗ್ರಾಂನಲ್ಲಿ ತನ್ನ ಆರೋಗ್ಯದ ಕುರಿತು ಅಪ್‌ಡೇಟ್‌ ನೀಡಿದ್ದಾರೆ. ಈ ರೀತಿಯ ತೊಂದರೆಗಳನ್ನು ಬಹುತೇಕ ಮಹಿಳೆಯರು ಅನುಭವಿಸುತ್ತ ಇರಬಹುದು. ನಿಯಮಿತ ತಪಾಸಣೆ ಮಾಡುವ ಮೂಲಕ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ತನ್ನ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಶಮಿತಾ ಶೆಟ್ಟಿ ಮಂಗಳವಾರ ಆಸ್ಪತ್ರೆಯ ಹಾಸಿಗೆಯಿಂದಲೇ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತನ್ನ ಸಹೋದರಿ ಶಿಲ್ಪಾ ಶೆಟ್ಟಿ ಜತೆ ಸಂಭಾಷಣೆ ಮಾಡುತ್ತಿರುವುದು ಕಾಣಿಸಿದೆ. ಇಲ್ಲಿ ಅವರಿಬ್ಬರು ಎಂಡೋಮೆಟ್ರಿಯೋಸಿಸ್‌ ಬಗ್ಗೆ ಮಾತನಾಡಿದ್ದಾರೆ. ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯುವ ಕಾಯಿಲೆ ಇದಾಗಿದೆ.

ಶಸ್ತ್ರಚಿಕಿತ್ಸೆಗೆ ಮುನ್ನ ಹೀಗಂದ್ರು ಶಮಿತಾ ಶೆಟ್ಟಿ

ನಟಿ ಶಮಿತಾ ಶೆಟ್ಟಿ ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತು ಸರ್ಜಿಕಲ್‌ ಕ್ಯಾಪ್‌ ಧರಿಸುವ ದೃಶ್ಯ ವಿಡಿಯೋದ ಆರಂಭದಲ್ಲಿ ಕಾಣಿಸುತ್ತಾರೆ. ಮತ್ತೊಂದೆಡೆ ನಟಿ ಶಿಲ್ಪಾ ಶೆಟ್ಟಿ ತನ್ನ ಸಹೋದರಿಯಲ್ಲಿ "ಕ್ಯಾ ಹುವಾ?" (ಏನಾಯಿತು?) ಎಂದು ಕೇಳುತ್ತಾರೆ. ಅದಕ್ಕೆ ಶಮಿತಾ "ನಾನು ಎಂಡೋಮೆಟ್ರಿಯಾಸಿಸ್‌ನೊಂದಿಗೆ ಹೋರಾಡುತ್ತಿದ್ದೇನೆ" ಎಂಬ ಮಾಹಿತಿಯನ್ನು ಬಹಿರಂಗಪಡಿಸುತ್ತಾರೆ. "ಹೆಚ್ಚಿನ ಮಹಿಳೆಯರಲ್ಲಿ ಇಂತಹ ಕಾಯಿಲೆ ಇರುತ್ತದೆ. ಆದರೆ, ಇದರ ಕುರಿತು ಎಚ್ಚರಿಕೆ ವಹಿಸದೆ ಇರುತ್ತಾರೆ. ಎಲ್ಲರೂ ಆಗಾಗ ತಪಾಸಣೆ ಮಾಡುವ ಮೂಲಕ ಇಂತಹ ರೋಗಗಳ ಕುರಿತು ಜಾಗೃತಿ ವಹಿಸಿ" ಎಂದು ಶಮಿತಾ ಶೆಟ್ಟಿ ಹೇಳಿದ್ದಾರೆ.

"ಈ ವಿಡಿಯೋ ನೋಡುತ್ತಿರುವ ಎಲ್ಲಾ ಮಹಿಳೆಯರೇ, ದಯವಿಟ್ಟು ಎಂಡೋಮೆಟ್ರಿಯಾಸಿಸ್‌ ಬಗ್ಗೆ ಗೂಗಲ್‌ನಲ್ಲಿ ಸರ್ಚ್‌ ಮಾಡಿ ತಿಳಿದುಕೊಳ್ಳಿ. ಏಕೆಂದರೆ, ಆ ಕಾಯಿಲೆ ನಿಮ್ಮಲ್ಲಿಯೂ ಇರಬಹುದು. ನೀವು ಈ ಕಾಯಿಲೆ ಹೊಂದದೆಯೂ ಇರಬಹುದು. ಆದರೆ, ಈ ರೋಗ ಲಕ್ಷಣಗಳು ಇವೆಯೇ ಎಂದು ತಿಳಿಯಲು ಗೂಗಲ್‌ನಲ್ಲಿ ಎಂಡೋಮೆಟ್ರಿಯಾಸಿಸ್‌ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ" ಎಂದು ಶಮಿತಾ ಶೆಟ್ಟಿ ಹೇಳಿದ್ದಾರೆ.

"ಇದು ತುಂಬಾ ನೋವಿನಿಂದ ಕೂಡಿದೆ. ಅಹಿತಕರವಾಗಿದೆ. ನಿಮ್ಮ ದೇಹದಲ್ಲೂ ಈ ಕಾರಣಕ್ಕಾಗಿ ನೋವು ಆಗುತ್ತಿರಬಹುದು. ದಯವಿಟ್ಟು ನಿಮ್ಮ ದೇಹದ ನೋವುಗಳನ್ನು ಆಲಿಸಿ. ಪಾಸಿಟೀವ್‌ ಆಗಿರಿ" ಎಂದು ಅವರು ಹೇಳಿದ್ದಾರೆ. ಈ ವಿಡಿಯೋದ ಬಳಿಕ ಶಮಿತಾ ಶೆಟ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

"ಸುಮಾರು ಶೇಕಡ 40 ಮಹಿಳೆಯರು ಎಂಡೊಮೆಟ್ರಿಯೋಸಿಸ್‌ನಿಂದ ಬಳಲುತ್ತಿದ್ದಾರೆ ಎನ್ನುವುದು ನಿಮಗೆ ತಿಳಿದಿದೆಯೇ? ನಮ್ಮಲ್ಲಿ ಹೆಚ್ಚಿನವರಿಗೆ ಈ ರೋಗದ ಬಗ್ಗೆ ತಿಳಿದಿಲ್ಲ. ನನ್ನ ನೋವಿಗೆ ಮೂಲ ಕಾರಣವನ್ನು ಕಂಡುಹಿಡಿದ ನನ್ನ ವೈದ್ಯರು, ನನ್ನ ಸ್ತ್ರೀರೋಗ ಡಾ. ನೀತಾ ವಾರ್ತಿ ಮತ್ತು ನನ್ನ ಜಿಪಿ ಡಾ.ಸುನೀತಾ ಬ್ಯಾನರ್ಜಿ ಅವರಿಗೆ ಧನ್ಯವಾದಗಳು" ಎಂದು ಶಮಿತಾ ಶೆಟ್ಟಿ ಹೇಳಿದ್ದಾರೆ.

ಎಂಡೊಮೆಟ್ರಿಯೋಸಿಸ್ ಬಗ್ಗೆ ತಿಳಿಯಿರಿ

ಚಾಕೊಲೇಟ್ ಸಿಸ್ಟ್' ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಎಂಡೊಮೆಟ್ರಿಯೊಸಿಸ್ ರೋಗನಿರ್ಣಯಕ್ಕೆ ಬಹಳ ಸಮಯ ಬೇಕು. ಈ ತೊಂದರೆ ತಿಳಿಯಲು ಒಂದು ದಶಕವಾದರೂ ಬೇಕಾಗಬಹುದು. ಇದು ಮಹಿಳೆಯರ ಜೀವನದ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅಪಾರವಾದ ಕೆಳ ಬೆನ್ನುನೋವು, ಸಂಭೋಗದ ಸಮಯದಲ್ಲಿ ಅಥವಾ ನಂತರ ನೋವು, ಅತಿಯಾದ ರಕ್ತಸ್ರಾವ, ಜೀರ್ಣಕಾರಿ ಸಮಸ್ಯೆಗಳು, ನೋವಿನ ಮೂತ್ರ ವಿಸರ್ಜನೆ, ಆಯಾಸ, ಖಿನ್ನತೆ ಅಥವಾ ಆತಂಕ ಮತ್ತು ಕಿಬ್ಬೊಟ್ಟೆ ಉಬ್ಬುವುದು ಮತ್ತು ವಾಕರಿಕೆ ಮುಂತಾದ ರೋಗಲಕ್ಷಣಗಳನ್ನು ಹೊಂದಿರುವ ಎಂಡೋಮೆಟ್ರಿಯೋಸಿಸ್‌ ಬಗ್ಗೆ ಕನ್ನಡದಲ್ಲಿ ವಿವರವಾಗಿ ತಿಳಿಯಲು ಇಲ್ಲಿ ಕ್ಲಿಕ್‌ ಮಾಡಿ.

Whats_app_banner