Yodha Twitter Review: ‘ಯೋಧ’ನಿಗೆ ಸಿಕ್ತು ಪ್ರೇಕ್ಷಕರ ಬಹುಪರಾಕ್; ಹೈಜಾಕ್ ಕಥೆಯಲ್ಲಿ ಹೈ ಫರ್ಫಾಮನ್ಸ್ ನೀಡಿದ ಸಿದ್ಧಾರ್ಥ್ ಮಲ್ಹೋತ್ರಾ
ಬಾಲಿವುಡ್ ಅಂಗಳದಿಂದ ಇಂದು (ಮಾ. 15) ಹೊರಬಂದ ಯೋಧ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಿದ್ಧಾರ್ಥ್ ಮಲ್ಹೋತ್ರಾ ನಟನೆಯ ಈ ಸಿನಿಮಾಕ್ಕೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲೂ ನೆಟ್ಟಿಗರಿಂದ ಪಾಸಿಟಿವ್ ಪ್ರಚಾರ ಮುಂದುವರಿದಿದೆ.
Yodha Twitter Riview: ಬಾಲಿವುಡ್‌ನಲ್ಲಿ ದೇಶಪ್ರೇಮದ ಕಥೆಯ ಸಿನಿಮಾಗಳು ಆಗಾಗ ಬರುತ್ತಲೇ ಇರುತ್ತವೆ. ಇದೀಗ ಸಿದ್ಧಾರ್ಥ್ ಮಲ್ಹೋತ್ರಾ ನಾಯಕನಾಗಿ ನಟಿಸಿರುವ ಯೋಧ ಚಿತ್ರ ಸಹ ಅದೇ ಪ್ರಕಾರದ ಕಥೆಯನ್ನೊಳಗೊಂಡ ಸಿನಿಮಾ. ಇಂದು (ಮಾ. 15) ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಆಡಿಯೆನ್ಸ್ ಚಿತ್ರತಂಡದ ಶ್ರಮಕ್ಕೆ ಪೂರ್ಣಾಂಕ ನೀಡುತ್ತಿದ್ದಾರೆ. ಸಿದ್ಧಾರ್ಥ್ ಅವರ ಸಾಹಸಕ್ಕೆ ಶಿಳ್ಳೆ ಚಪ್ಪಾಳೆಯೂ ಪ್ರಾಪ್ತವಾಗಿದೆ.
ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ ನಿರ್ದೇಶಿಸಿದ ಯೋಧ ಸಿನಿಮಾ 2001ರ ಕಾಲಘಟ್ಟದಲ್ಲಿ ನಡೆಯುವ ಕಥೆ. ವಿಮಾನದ ಹೈಜಾಕ್ ಹಿನ್ನೆಲೆಯಲ್ಲಿ ಸಾಗುವ ಈ ಸಿನಿಮಾದಲ್ಲಿ ಮೈನವಿರೇಳಿಸುವ ಆಕ್ಷನ್ ಸನ್ನಿವೇಶಗಳ ಮೂಲಕವೇ ಸಿದ್ಧಾರ್ಥ್ ಹೊಸ ಅವತಾರ ಎತ್ತಿದ್ದಾರೆ. ಈ ಹಿಂದೆ ಶೇರ್‌ಷಾ ಸಿನಿಮಾದಲ್ಲೂ ಆರ್ಮಿ ಆಫೀಸರ್ ಆಗಿ ಸಿದ್ಧಾರ್ಥ್ ನಟಿಸಿದ್ದರು. ಇದೀಗ ಅದೇ ನಿರ್ಮಾಪಕರ ಜತೆಗೆ ಯೋಧ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್‌ನಲ್ಲಿ ಈಗಾಗಲೇ ಹೈಜಾಕ್‌ಗೆ ಸಂಬಂಧಿಸಿದ ಸಾಕಷ್ಟು ಸಿನಿಮಾಗಳು ಬಂದಿವೆ. ಇಲ್ಲಿಯೂ ಅದೇ ಥರದ ಕಥೆಯೊಂದನ್ನು ಹಿಡಿದು ತಂದಿದ್ದಾರೆ ನಿರ್ದೇಶಕ ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ. ಅಮೆಜಾನ್ ಪ್ರೈಂ ಸಹಯೋಗದೊಂದಿಗೆ ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್‌ನಿಂದ ಈ ಸಿನಿಮಾ ನಿರ್ಮಾಣವಾಗಿದೆ. ಟ್ರೇಲರ್ ಮೂಲಕವೇ ಹೆಚ್ಚು ಗಮನ ಸೆಳೆದಿದ್ದ ಈ ಸಿನಿಮಾ ಈಗ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದ್ದಂತೆ, ನೋಡುಗರಿಂದ ಮೆಚ್ಚುಗೆ ಪಡೆದಿದೆ.
ಅಪ್ಪನಂತೆ ಮಗನೂ ದೇಶ ಕಾಯುವ ಯೋಧನಾಗಬೇಕು ಎಂಬ ಆಸೆ ಕಟ್ಟಿಕೊಳ್ಳುತ್ತಾನೆ. ಆ ಕನಸನ್ನು ನನಸಾಗಿಸಿಕೊಂಡು ಕೈಯಲ್ಲಿ ಗನ್ ಹಿಡಿದು ನಿಲ್ಲುತ್ತಾನೆ. ದುಷ್ಟರ ಹುಟ್ಟಡಗಿಸಿ ನಡುಕ ಹುಟ್ಟಿಸುತ್ತಾನೆ. ಈ ನಡುವೆ ಒಂದಷ್ಟು ಅಪವಾದಗಳೂ ಆತನ ವಿರುದ್ಧ ಕೇಳಿಬರುತ್ತವೆ. ಸೇನೆಯಿಂದಲೂ ಹಿಂದೆ ಸರಿಯುತ್ತಾನೆ. ಒಂದು ಗಳಿಗೆಯಲ್ಲಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ, ಆ ವಿಮಾನವೇ ಹೈಜಾಕ್ ಆಗುತ್ತದೆ. ಅವರ ಕಪಿಮುಷ್ಠಿಯಿಂದ ಕಥಾನಾಯಕ ಎಲ್ಲರನ್ನು ಹೇಗೆ ರಕ್ಷಿಸುತ್ತಾನೆ ಎಂಬುದೇ ಈ ಸಿನಿಮಾದ ಒಂದೆಳೆ.
ಇದೀಗ ಇದೇ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರಮಂದಿರಲ್ಲಿ ಸಿನಿಮಾ ನೋಡಿದ ಬಳಿಕ ಎದ್ದು ನಿಂತು ಗೌರವ ಸಲ್ಲಿಸುವ ಕೆಲಸವೂ ಆಗಿದೆ. ಅಂಥ ಕೆಲವು ವಿಡಿಯೋಗಳು ವೈರಲ್ ಆಗುತ್ತಿವೆ. ಹಾಗಾದರೆ, ಈ ಸಿನಿಮಾ ನೋಡಿ ನೆಟ್ಟಿಗ ಏನೆಂದ, ಟ್ವಿಟರ್‌ನಲ್ಲಿ ಯಾರೆಲ್ಲ, ಏನೆಲ್ಲ ಕಾಮೆಂಟ್ ಹಾಕಿದ್ದಾರೆ? ಇಲ್ಲಿದೆ ಟ್ವಿಟರ್ ವಿಮರ್ಶೆ.