ಸಿತಾರೆ ಜಮೀನ್ ಪರ್ ಸಿನಿಮಾ ಮೂಲಕ ಆಮೀರ್ ಖಾನ್ ಕಂಬ್ಯಾಕ್; ಮತ್ತೆ ನಕ್ಷತ್ರಗಳೊಂದಿಗೆ ವಾಪಸಾಗುತ್ತಿದ್ದಾರೆ ಮಿಸ್ಟರ್ ಫರ್ಫೆಕ್ಷನಿಸ್ಟ್
Aamir Khan: ‘ಸಿತಾರೆ ಜಮೀನ್ ಪರ್’ ಚಿತ್ರ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ. ಈ ಚಿತ್ರವನ್ನು ಆರ್.ಎಸ್. ಪ್ರಸನ್ನ ನಿರ್ದೇಶನ ಮಾಡಿದ್ದು, ಆಮೀರ್ ಖಾನ್ ಜೊತೆಗೆ ಜೆನಿಲಿಯಾ ಡಿ’ಸೋಜ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Sitaare Zameen Par: ‘ಲಾಲ್ ಸಿಂಗ್ ಛಡ್ಢಾ’ ಚಿತ್ರದ ನಂತರ ಅಭಿನಯ ಸಾಕು ಎಂಬರ್ಥದಲ್ಲಿ ಮಾತನಾಡಿದ್ದರು ಆಮೀರ್ ಖಾನ್. ಅವರು ಚಿತ್ರರಂಗದಿಂದ ನಿವೃತ್ತಿ ಪಡೆಯದಿದ್ದರೂ, ಒಂದು ದೊಡ್ಡ ಬ್ರೇಕ್ ಬೇಕು ಎಂದು ಚಿತ್ರರಂಗದಿಂದ ದೂರವೇ ಇದ್ದರು. ಇದೀಗ ಅವರಿಗೆ ಜ್ಞಾನೋದಯವಾಗಿರುವಂತಿದೆ. ಅವರು ಮತ್ತೆ ನಟನೆಗೆ ವಾಪಸ್ಸಾಗಿದ್ದು, ಆಮೀರ್ ಅಭಿನಯದ ‘ಸಿತಾರೆ ಜಮೀನ್ ಪರ್’ ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ರೆಡ್ ಸೀ ಫಿಲ್ಮ್ ಫೆಸ್ಟಿವಲ್‍ನಲ್ಲಿ ಭಾಗವಹಿಸಿ ಮಾತನಾಡಿರುವ ಆಮೀರ್, ‘’ಸಿತಾರೆ ಜಮೀನ್ ಪರ್’ ಚಿತ್ರವು ನಾನೇ ನಿರ್ದೇಶನ ಮಾಡಿದ ‘ತಾರೇ ಜಮೀನ್ ಪರ್’ನ ಮುಂದುವರೆದ ಭಾಗವಲ್ಲದಿದ್ದರೂ, ವಿಷಯದಲ್ಲಿ ಅದು ಒಂದರ್ಥದಲ್ಲಿ ಮುಂದುವರೆದ ಭಾಗವೇ. ಆ ಚಿತ್ರ ಪಾತ್ರಧಾರಿಗಳ್ಯಾರೂ ಇಲ್ಲಿ ಮುಂದುವರೆಯುವುದಿಲ್ಲ. ಇಲ್ಲಿ ಬೇರೆಯದೇ ಕಥೆ ಇದೆ ಮತ್ತು ಒಂದಿಷ್ಟು ಹೊಸ ಪಾತ್ರಗಳು ಇವೆ. ಆ ಚಿತ್ರಕ್ಕಿಂತ ಇಲ್ಲಿ ಇನ್ನೂ ಹಲವು ವಿಷಯಗಳನ್ನು ಹೇಳಲಾಗಿದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ದೌರ್ಬಲ್ಯಗಳಿರುತ್ತವೆ. ಅದೇ ರೀತಿ ಪ್ರತಿಯೊಬ್ಬರಿಗೂ ಅವರದ್ದೇ ಆದ ವಿಶಿಷ್ಟ ಗುಣಗಳಿರುತ್ತವೆ. ಅಂತಹ ಗುಣಗಳ ಕುರಿತು ಚಿತ್ರ ಮಾಡಿದ್ದೇವೆ’ ಎಂದಿದ್ದಾರೆ.
ಮುಂದಿನ ವರ್ಷ ಸಿತಾರೆ ಜಮೀನ್ ಪರ್
ಈಗಾಗಲೇ ‘ಸಿತಾರೆ ಜಮೀನ್ ಪರ್’ ಚಿತ್ರ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿದೆ. ಈ ಚಿತ್ರವನ್ನು ಆರ್.ಎಸ್. ಪ್ರಸನ್ನ ನಿರ್ದೇಶನ ಮಾಡಿದ್ದು, ಆಮೀರ್ ಖಾನ್ ಜೊತೆಗೆ ಜೆನಿಲಿಯಾ ಡಿ’ಸೋಜ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಪಾನಿಶ್ ಚಿತ್ರ ‘ಚಾಂಪಿಯನ್ಸ್’ನ ರೀಮೇಕ್ ಇದಾಗಿದ್ದು, ಈ ಚಿತ್ರವನ್ನು ಆಮೀರ್ ಖಾನ್ ಪ್ರೊಡಕ್ಷನ್ಸ್ನಡಿ ಆಮೀರ್ ಖಾನ್ ನಿರ್ಮಾಣ ಮಾಡುತ್ತಿದ್ದಾರೆ.
ಮಗನ ಸಿನಿಮಾದಲ್ಲೂ ನಟನೆ..
ಇದಲ್ಲದೆ, ಸನ್ನಿ ಡಿಯೋಲ್ ಅಭಿನಯದ ‘ಲಾಹೋರ್ 1947’, ತಮ್ಮ ಮಗ ಜುನೈದ್ ಖಾನ್ ಅಭಿನಯದ ‘ಏಕ್ ದಿನ್’ ಸೇರಿದಂತೆ ಒಟ್ಟು ಆರು ಚಿತ್ರಗಳನ್ನ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರರಂಗದಿಂದ ನಿವೃತ್ತಿ ಪಡೆಯುವುದಕ್ಕೆ ಮುಂದಾಗಿದ್ದ ಆಮೀರ್, ಹೀಗೆ ಏಕಾಏಕಿ ಇಷ್ಟೊಂದು ಚಿತ್ರಗಳಲ್ಲಿ ತೊಡಗಿಸಿಕೊಂಡಿರುವುದೇಕೆ? ಎಂ ವಿಷಯದ ಕುರಿತು ಕೆಲವು ತಿಂಗಳುಗಳ ಹಿಂದೆ ಮಾತನಾಡಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬಿಜಿ
‘ನಾನ್ಯಾವತ್ತೂ ಒಟ್ಟಿಗೆ ಇಷ್ಟೊಂದು ಚಿತ್ರಗಳಲ್ಲಿ ತೊಡಗಿಸಿಕೊಂಡಿರಲಿಲ್ಲ. ಈ ಬಾರಿ ತೊಡಗಿಸಿಕೊಳ್ಳುತ್ತಿರುವುದಕ್ಕೂ ಕಾರಣವಿದೆ. ಜೀವನವನ್ನು ನಂಬುವುದಕ್ಕೆ ಆಗುವುದಿಲ್ಲ. ಯಾರಿಗೆ ಗೊತ್ತು, ನಾವು ನಾಳೆಯೇ ಸಾಯಬಹುದು. ನನಗೀಗ 59 ವರ್ಷ. ಮುಂದಿನ 10 ವರ್ಷಗಳ ಕಾಲ ಸಕ್ರಿಯವಾಗಿರಬಹುದು. ಹಾಗಾಗಿ, 70 ಆಗುವಷ್ಟರಲ್ಲಿ ಇನ್ನಷ್ಟು ಕೆಲಸಗಳನ್ನು ಮಾಡಬೇಕಿದೆ. ಅದಕ್ಕಿಂತ ಹೆಚ್ಚಾಗಿ, ನನಗೆ ವಯಸ್ಸಾಗುತ್ತಿದೆ. ಇಂಥ ಸಂದರ್ಭದಲ್ಲಿ ಚಿತ್ರರಂಗಕ್ಕೆ ಒಂದಿಷ್ಟು ಕ್ರಿಯಾಶೀಲ ಬರಹಗಾರರು, ನಟರು, ನಿರ್ದೇಶಕರಿಗೆ ಒಂದು ವೇದಿಕೆ ಸೃಷ್ಟಿಸಬೇಕಿದೆ. ಹಾಗಾಗಿ, ಒಂದು ಬಾರಿಗೆ ಒಂದೇ ಚಿತ್ರ ಎಂಬ ಕಲ್ಪನೆ ಬಿಟ್ಟು, ಇತ್ತೀಚೆಗೆ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ’ ಎಂದು ಹೇಳಿದ್ದಾರೆ.