Stree 2 : ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಸ್ತ್ರೀ 2; ಶ್ರದ್ಧಾ, ರಾಜ್‌ಕುಮಾರ್‌ ಹಾರರ್‌ ಸಿನಿಮಾಕ್ಕೆ ಜೈಹೋ ಎಂದ ಪ್ರೇಕ್ಷಕ
ಕನ್ನಡ ಸುದ್ದಿ  /  ಮನರಂಜನೆ  /  Stree 2 : ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಸ್ತ್ರೀ 2; ಶ್ರದ್ಧಾ, ರಾಜ್‌ಕುಮಾರ್‌ ಹಾರರ್‌ ಸಿನಿಮಾಕ್ಕೆ ಜೈಹೋ ಎಂದ ಪ್ರೇಕ್ಷಕ

Stree 2 : ಬಾಕ್ಸ್‌ ಆಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದ ಸ್ತ್ರೀ 2; ಶ್ರದ್ಧಾ, ರಾಜ್‌ಕುಮಾರ್‌ ಹಾರರ್‌ ಸಿನಿಮಾಕ್ಕೆ ಜೈಹೋ ಎಂದ ಪ್ರೇಕ್ಷಕ

Stree 2 Box Office Collection: ಶ್ರದ್ಧಾ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅಭಿನಯದ ಸ್ತ್ರೀ 2 ಸಿನಿಮಾ ಇದೇ ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಿತ್ತು. ಕೆಲವೇ ದಿನಗಳಲ್ಲಿ ಇದರ ಬಾಕ್ಸ್‌ ಆಫೀಸ್‌ ಗಳಿಕೆ 200 ಕೋಟಿ ರೂಪಾಯಿ ದಾಟಿದೆ. ಬಾಕ್ಸ್‌ ಆಫೀಸ್‌ನಲ್ಲಿ ಈ ಹಾರರ್‌ ಸಿನಿಮಾ ಬಂಗಾರದ ಬೆಳೆಯನ್ನೇ ತೆಗೆಯುತ್ತಿದೆ.

Stree 2 ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವರದಿ
Stree 2 ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ವರದಿ

Stree 2 Box Office Collection: ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಭಾರತದ ಚಿತ್ರಮಂದಿರಗಳಲ್ಲಿ ಹಲವು ಸಿನಿಮಾಗಳು ರಿಲೀಸ್‌ ಆಗಿವೆ. ಬಾಲಿವುಡ್‌ನಲ್ಲಿಶ್ರದ್ಧಾ ಕಪೂರ್ ಮತ್ತು ರಾಜ್ ಕುಮಾರ್ ರಾವ್ ಅಭಿನಯದ ಸ್ತ್ರೀ 2 ರಿಲೀಸ್‌ ಆಗಿತ್ತು. ಸ್ಯಾಂಡಲ್‌ವುಡ್‌ನಲ್ಲಿ ಕೃಷ್ಣಂ ಪ್ರಣಯ ಸಖಿ, ಗೌರಿ ಸಿನಿಮಾಗಳು ರಿಲೀಸ್‌ ಆಗಿದ್ದವು. ಕಾಲಿವುಡ್‌ನಲ್ಲಿ ತಂಗಲಾನ್‌ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಈ ಚಿತ್ರಗಳಲ್ಲಿ ಸ್ತ್ರೀ 2 ಸಿನಿಮಾದ ಗಳಿಕೆ ದೊಡ್ಡಮಟ್ಟದಲ್ಲಿದೆ. ಸಕ್‌ನಿಲ್ಕ್‌.ಕಾಂ ಪ್ರಕಾರ ಈ ಸಿನಿಮಾದ ಗಳಿಕೆ ಮೊದಲ ಸೋಮವಾರ ಅಂದರೆ ನಿನ್ನೆ ತುಸು ಇಳಿಕೆ ಕಂಡಿದೆ. ಆದರೆ, ಒಟ್ಟಾರೆ ಕಳೆದ ಐದು ದಿನಗಳಲ್ಲಿ ಭಾರತದ ಬಾಕ್ಸ್‌ ಆಫೀಸ್‌ನಲ್ಲಿ 228.45 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಸ್ತ್ರೀ 2 ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್

ಕಳೆದ ವಾರ ಸ್ವಾತಂತ್ರ್ಯ ದಿನ ಮತ್ತು ವೀಕೆಂಡ್‌ ರಜೆಯ ಸದುಪಯೋಗ ಪಡೆದುಕೊಳ್ಳಲು ಹಲವು ಸಿನಿಮಾಗಳು ಬಿಡುಗಡೆಯಾಗಿದ್ದವು. ಸ್ತ್ರೀ 2 ಸಿನಿಮಾ ಸ್ವಾತಂತ್ರ್ಯ ದಿನಕ್ಕೆ ಒಂದು ದಿನ ಮುನ್ನ ಪ್ರೀಮಿಯರ್‌ ಶೋದಲ್ಲಿ 8.5 ಕೋಟಿ ರೂಪಾಯಿ ಗಳಿಸಿತ್ತು. ಈ ಚಿತ್ರವು ಭಾರತದಲ್ಲಿ ತನ್ನ ಆರಂಭಿಕ ದಿನದಂದು 51.8 ಕೋಟಿ ರೂ.ಗಳ ನಿವ್ವಳ ಗಳಿಕೆ ಮಾಡಿದೆ. ಮೊದಲ ಶುಕ್ರವಾರ 31.4 ಕೋಟಿ ರೂ.ಗಳನ್ನು ಗಳಿಸಿತು ಎಂದು ಬಾಕ್ಸ್‌ ಆಫೀಸ್‌ ವರದಿ ನೀಡುದ ಸಕ್‌ನಿಲ್ಕ್.ಕಾಂ ತಿಳಿಸಿದೆ.

ಸ್ತ್ರೀ 2 ಸಿನಿಮಾ ವೀಕೆಂಡ್‌ನಲ್ಲಿ ಉತ್ತಮ ಗಳಿಕೆ ಮಾಡಿದೆ. ಮೊದಲ ಶನಿವಾರ ಈ ಸಿನಿಮಾದ ಬಾಕ್ಸ್‌ ಆಫೀಸ್‌ ಗಳಿಕೆ ಶೇಕಡ 39.65 ಏರಿಕೆ ಕಂಡಿದೆ. ಭಾನುವಾರ ಗಳಿಕೆ ಶೇಕಡ 27.48 ರಷ್ಟು ಹೆಚ್ಚಳವಾಗಿದೆ. ಶನಿವಾರ ಮತ್ತು ಭಾನುವಾರ 43.98 ಕೋಟಿ ಮತ್ತು 55.9 ಕೋಟಿ ರೂ. ಗಳಿಕೆ ಮಾಡಿದೆ. ಮೊದಲ ಸೋಮವಾರದ ಗಳಿಕೆ 37 ಕೋಟಿ ರೂಪಾಯಿ ಇತ್ತು. ಒಟ್ಟು ಐದು ದಿನಗಳ ಸಂಗ್ರಹವು ಸುಮಾರು 228.45 ಕೋಟಿ ರೂ.ಗೆ ತಲುಪಿದೆ.

ನಿರ್ಮಾಪಕರಾದ ಮ್ಯಾಡಾಕ್ ಫಿಲ್ಮ್ಸ್ ಮಾಹಿತಿ ನೀಡಿದ ಪ್ರಕಾರ ಸ್ತ್ರೀ 2 ಸಿನಿಮಾ ವಿಶ್ವಾದ್ಯಂತ 283 ಕೋಟಿ ರೂ. ಗಳಿಕೆ ಮಾಡಿದೆ. ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಸ್ತ್ರೀ 2 ಗಳಿಕೆ ಅತ್ಯುತ್ತಮವಾಗಿ ಹೊರಹೊಮ್ಮಿದೆ. ಭಾನುವಾರದ ಗಳಿಕೆಯು ಸ್ವಾತಂತ್ರ್ಯ ದಿನದ ಗಳಿಕೆಗಿಂತ ಹೆಚ್ಚಾಗಿದೆ. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 283 ಕೋಟಿ ಮತ್ತು ಭಾರತದಲ್ಲಿ204 ಕೋಟಿ ರೂಪಾಯಿ ಗಳಿಕೆ ಮಾಡಿದೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

2018ರಲ್ಲಿ ತೆರೆಕಂಡ 'ಸ್ತ್ರೀ' ಚಿತ್ರದ ಮುಂದುವರಿದ ಭಾಗ 'ಸ್ತ್ರೀ 2ʼ. ಈ ಸಿನಿಮಾದಲ್ಲಿ ರಾಜ್ ಕುಮಾರ್ ರಾವ್, ಶ್ರದ್ಧಾ ಕಪೂರ್, ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ ಮತ್ತು ಅಪರ್ಶಕ್ತಿ ಖುರಾನಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವರುಣ್ ಧವನ್ ಭೇಡಿಯಾ ಪಾತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ರಾಜ್ ಕುಮಾರ್ ಅವರ ವಿಕ್ಕಿ ಎಂಬ ಟೈಲರ್ ನೇತೃತ್ವದ ಸ್ನೇಹಿತರ ಗುಂಪಿನ ಸುತ್ತ ಸುತ್ತುತ್ತದೆ. ಹಾರರ್‌ ಸಿನಿಮಾ ಪ್ರಿಯರನ್ನು ಸ್ತ್ರೀ 2 ಗಮನ ಸೆಳೆದಿದೆ.

Whats_app_banner