Bastar Twitter Review: ಬೋರ್‌ ಹೊಡೆಸ್ತಾ ಬಸ್ತರ್‌ ಸಿನಿಮಾ? ಅದಾ ಶರ್ಮಾ ನಟನೆಯ ನಕ್ಸಲಿಸಂ ಆಧರಿತ ಚಿತ್ರ ನೋಡಿ ಪ್ರೇಕ್ಷಕರು ಹೀಗಂದ್ರು
ಕನ್ನಡ ಸುದ್ದಿ  /  ಮನರಂಜನೆ  /  Bastar Twitter Review: ಬೋರ್‌ ಹೊಡೆಸ್ತಾ ಬಸ್ತರ್‌ ಸಿನಿಮಾ? ಅದಾ ಶರ್ಮಾ ನಟನೆಯ ನಕ್ಸಲಿಸಂ ಆಧರಿತ ಚಿತ್ರ ನೋಡಿ ಪ್ರೇಕ್ಷಕರು ಹೀಗಂದ್ರು

Bastar Twitter Review: ಬೋರ್‌ ಹೊಡೆಸ್ತಾ ಬಸ್ತರ್‌ ಸಿನಿಮಾ? ಅದಾ ಶರ್ಮಾ ನಟನೆಯ ನಕ್ಸಲಿಸಂ ಆಧರಿತ ಚಿತ್ರ ನೋಡಿ ಪ್ರೇಕ್ಷಕರು ಹೀಗಂದ್ರು

ʼದಿ ಕೇರಳ ಸ್ಟೋರಿʼ ಮೂಲಕ ಗಮನ ಸೆಳೆದ ಅದಾ ಶರ್ಮಾ ಇದೀಗ ನಕ್ಸಲಿಸಂ ಆಧಾರಿತ ಸಿನಿಮಾದಲ್ಲಿ ಮಿಂಚಿದ್ದಾರೆ. ಇವರ ನಟನೆಯ ಬಸ್ತರ್‌ ಸಿನಿಮಾ ಬಿಡುಗಡೆಯಾಗಿದ್ದು, ಈ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಭಯೋತ್ಪಾದನೆ ಹಿನ್ನೆಲೆಯ ಸಿನಿಮಾಕ್ಕೆ ಸುದೀಪ್ತೋ ಸೇನ್‌ ಆಕ್ಷನ್‌ ಕಟ್‌ ಹೇಳಿದ್ದಾರೆ.

ಬಸ್ತರ್‌ ಸಿನಿಮಾಕ್ಕೆ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ
ಬಸ್ತರ್‌ ಸಿನಿಮಾಕ್ಕೆ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ

Bastar Twitter Review: ʼದಿ ಕೇರಳ ಸ್ಟೋರಿʼ ಎಂಬ ನೈಜ ಘಟನೆ ಆಧಾರಿತ ಸಿನಿಮಾ ಮಾಡುವ ಮೂಲಕ ದೇಶದ ಗಮನ ಸೆಳೆದ ನಿರ್ದೇಶಕ ಸುದೀಪ್ತೋ ಸೇನ್‌ ಇದೀಗ ಮತ್ತೊಂದು ಬಹುನಿರೀಕ್ಷಿತ ಸಿನಿಮಾದ ಮೂಲಕ ಬಂದಿದ್ದಾರೆ. ಈ ಸಿನಿಮಾದ ಹೆಸರು ʼಬಸ್ತರ್‌ʼ. ನಕ್ಸ್‌ಲಿಸಂ ಆಧಾರಿತ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಅದಾ ಶರ್ಮಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಕ್ರೈಮ್‌ ಕಥಾಹಂದರದ ಈ ಸಿನಿಮಾ ಇಂದು (ಮಾರ್ಚ್‌ 15) ಬಿಡುಗಡೆಯಾಗಿದೆ.

ನಕ್ಸಲಿಸಂ ಲೋಕದ ಒಳ ಹೊರಗನ್ನು ಬಿಂಬಿಸುವ ಚಿತ್ರ ಇದಾಗಿದ್ದು, ನಕ್ಸಲಿಸಂ ಮೂಲ ಹಾಗೂ ನಕ್ಸಲೈಟ್‌ಗಳಿಂದ ಸಮಾಜದ ಮೇಲಾಗುವ ಪರಿಣಾಮವನ್ನು ತೋರಿಸಲಾಗಿದೆ. ಅದಾ ಶರ್ಮಾ ಜೊತೆಗೆ ಈ ಸಿನಿಮಾದಲ್ಲಿ ಇಂದಿರಾ ತಿವಾರಿ, ವಿಜಯ್ ಕೃಷ್ಣ, ಯಶಪಾಲ್ ಶರ್ಮಾ, ರೈಮಾ ಸೇನ್, ಶಿಲ್ಪಾ ಶುಕ್ಲಾ ಮುಂತಾದವರು ನಟಿಸಿದ್ದಾರೆ.

ಐಪಿಎಸ್‌ ಅಧಿಕಾರಿ ನಿರ್ಜಾ ಮಾಧವನ್‌ ಅವರ ನೈಜಕಥೆಯನ್ನು ಆಧರಿಸಿದ ಸಿನಿಮಾ ಇದಾಗಿದ್ದು, ನಕ್ಸಲ್‌ ನಿಗ್ರಹ ದಳದಲ್ಲಿದ್ದ ಆಕೆಯ ಹೋರಾಟ ಪರಾಕ್ರಮದ ಕಥೆಯನ್ನು ಚಿತ್ರ ಬಚ್ಚಿಡುತ್ತದೆ. ನಿರ್ಜಾ ಮಾಧವನ್‌ ಪಾತ್ರಕ್ಕೆ ಅದಾ ಬಣ್ಣ ಹಚ್ಚಿದ್ದಾರೆ. ಅಲ್ಲದೇ ತಮ್ಮ ಮನೋಜ್ಞ ಅಭಿನಯದ ಮೂಲಕ ಜನರ ಮೆಚ್ಚುಗೆ ಗಳಿಸಿದ್ದಾರೆ.

ಬಸ್ತಾರ್‌ ಚಿತ್ರಕಥೆ ಹೀಗಿದೆ

1910ರಲ್ಲಿ ಛತ್ತೀಸ್‌ಗಢದಲ್ಲಿ ಹುಟ್ಟಿಕೊಂಡ ಬಸ್ತರ್‌ ಧಂಗೆಯನ್ನು ಆಧರಿಸಿದ ಸಿನಿಮಾ ಇದಾಗಿದೆ. ಭಯೋತ್ಪಾದಕ ಹಿನ್ನೆಲೆಯ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸಿನಿಮಾವನ್ನು ಮೆಚ್ಚಿ ಹೊಗಳಿದರೆ, ಇನ್ನೂ ಕೆಲವರು ʼಭಯಾನಕವಾಗಿದೆʼ ಎಂದಿದ್ದಾರೆ.

ಪ್ರೇಕ್ಷಕರು ಮಾತ್ರವಲ್ಲದೇ ವಿಮರ್ಶಕರೂ ಕೂಡ ಈ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆಯನ್ನೇ ನೀಡಿದ್ದು, ಟ್ವಿಟರ್‌ನಲ್ಲಿ ಜನರು ವ್ಯಕ್ತಪಡಿಸಿದ ಅಭಿಪ್ರಾಯಗಳು ಹೀಗಿವೆ.

ಸಿನಿಮಾವನ್ನು ಡಿಸಾಸ್ಟರ್‌ ಎಂದು ಕರೆದಿರುವ ಹರಪ್ರಸಾದ್‌ ಬೆಹ್ರಾ ಎನ್ನುವವರು ಇದೊಂದು ರಾಜಕೀಯ ಪ್ರೇರಿತ ಕಾಲ್ಪನಿಕ ಕಥೆ, ಇದಕ್ಕೂ ವಾಸ್ತವಕ್ಕೂ ಸಂಬಂಧವಿಲ್ಲ. ಭಯಂಕರ ಸಂಭಾಷಣೆ, ಓವರ್‌ ಆಕ್ಟಿಂಗ್‌, ಅತ್ಯಂತ ಕೆಟ್ಟ ಎಡಿಟಿಂಗ್‌ ನಿಧಾನಗತಿಯ ಚಿತ್ರಕಥೆಯ ಮೂಲಕ ಈ ಸಿನಿಮಾ ಬೋರು ಹೊಡೆಸುತ್ತಿದೆ ಎಂದು ಅವರ ಬರೆದುಕೊಂಡಿದ್ದಾರೆ.

ʼಈ ಚಿತ್ರ ಪ್ರೇಕ್ಷಕರ ಹೃದಯ ಮುಟ್ಟುತ್ತದೆ ಎಂಬ ಖಾತ್ರಿಯಿಲ್ಲ. ನಿರ್ಜಾ ಮಾಧವನ್‌ ಪಾತ್ರದಲ್ಲಿ ಅದಾ ಶರ್ಮಾ ನಟನೆ ಅದ್ಭುತʼ ಎಂದು ವೈದೇಹಿ ಎನ್ನುವವರು ಬರೆದುಕೊಂಡಿದ್ದಾರೆ.

ʼಬಸ್ತಾರ್‌ ಚಿತ್ರವು ಕ್ರೂರತೆಯನ್ನು ಬಿಂಬಿಸುವಂತಿದೆʼ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.

ಯಾರೂ ಹೇಳದ ಕಥೆಯನ್ನು ತೆರೆ ಮೇಲೆ ತರುವ ಮೂಲಕ ಮತ್ತೊಮ್ಮೆ ದೇಶದ ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ ದಿ ಕೇರಳ ಸ್ಟೋರಿ ನಿರ್ದೇಶಕ ಸುದೀಪ್ತೋ. ಸಿನಿಮಾ ನಿರ್ಮಾಪಕರಿಗೆ ಹ್ಯಾಟ್ಸ್‌ಆಫ್‌. ಇಂತಹ ವಿಷಯಗಳನ್ನು ಸಿನಿಮಾ ಮಾಡದೇ ಹೋದರೆ ಜನರಿಗೆ ನೈಜ ಪರಿಸ್ಥಿತಿ ಅರ್ಥವಾಗುವುದಿಲ್ಲ. ಚಿತ್ರದಲ್ಲಿ ಅದಾ ಶರ್ಮಾ ಹಾಗೂ ಇಂದಿರಾ ತಿವಾರಿ ಅವರ ನಟನೆಯ ಅದ್ಭುತ ಎಂದು ಟ್ವಿಟರ್‌ ಬಳಕೆದಾರೊಬ್ಬರು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ನಕ್ಸಲಿಸಂ, ನಕ್ಸಲರ ಜೀವನ, ನಕ್ಸಲಿಸಂ ಹುಟ್ಟಿಕೊಂಡಿದ್ದು ನಿರ್ಜಾ ಮಾಧವನ್‌ ಬದುಕಿನ ಕಥೆಯನ್ನು ತಿಳಿಯಲು ನೀವೂ ಬಸ್ತಾರ್‌ ಸಿನಿಮಾ ನೋಡಿ.

Whats_app_banner