ಸುಳ್ಳಿನ ಕಾಲ ಎಷ್ಟೇ ಸುದೀರ್ಘವಾದರೂ, ಸತ್ಯ ಅದನ್ನು ಬದಲಾಯಿಸಬಲ್ಲದು: ದಿ ಸಾಬರಮತಿ ರಿಪೋರ್ಟ್ ಸಿನಿಮಾ ಬಗ್ಗೆ ಪ್ರಧಾನಿ ಮೋದಿ ಮಾತು
Vikrant Massey On PM Modi: ದಿ ಸಾಬರಮತಿ ರಿಪೋರ್ಟ್ ಸಿನಿಮಾ ವಿಮರ್ಶಕರಿಂದ ಪಾಸಿಟಿವ್ ಪ್ರತಿಕ್ರಿಯೆ ಪಡೆದಿತ್ತು. ಈಗ ಇದೇ ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸತ್ಯಾಂಶ ಹೊರ ಬರುತ್ತಿದೆ. ಜನ ಸಾಮಾನ್ಯರು ನೋಡುವಂತಾಗಿದೆ ಎಂದಿದ್ದಾರೆ.
The Sabarmati Report: ಬಾಲಿವುಡ್ ನಟ ವಿಕ್ರಾಂತ್ ಮಾಸ್ಸೆ ನಟನೆಯ ಚಿತ್ರ ದಿ ಸಾಬರಮತಿ ರಿಪೋರ್ಟ್ ನವೆಂಬರ್ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ವಿಮರ್ಶಕರಿಂದ ಪಾಸಿಟಿವ್ ಪ್ರತಿಕ್ರಿಯೆಯನ್ನೂ ಪಡೆದಿತ್ತು. ಈಗ ಇದೇ ಸಿನಿಮಾ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕೂಡ ಮೆಚ್ಚಿದ್ದಾರೆ. ಸತ್ಯಾಂಶ ಹೊರ ಬರುತ್ತಿದೆ. ಜನ ಸಾಮಾನ್ಯರು ನೋಡುವಂತಾಗಿದೆ ಎಂದಿದ್ದಾರೆ. ಸುಳ್ಳಿನ ಕಾಲ ಎಷ್ಟು ದೀರ್ಘವಾದರೂ ಸತ್ಯ ಮಾತ್ರ ಅದನ್ನು ಬದಲಾಯಿಸಬಲ್ಲದು ಎಂದು ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.
ವಿಕ್ರಾಂತ್ ಮಾಸ್ಸೆ ಅವರ ದಿ ಸಾಬರಮತಿ ರಿಪೋರ್ಟ್ ಸಿನಿಮಾ 2002ರ ಗೋದ್ರಾ ರೈಲು ದುರಂತದ ಕಥೆಯ ಹಿನ್ನೆಲೆಯಲ್ಲಿ ಸಾಗುತ್ತದೆ. ಚಿತ್ರಮಂದಿರದಲ್ಲಿ ನೋಡುಗರನ್ನು ಸೆಳೆದ ಈ ಸಿನಿಮಾ ಕಲೆಕ್ಷನ್ ವಿಚಾರದಲ್ಲಿಯೂ ಮುಂದಡಿ ಇರಿಸಿದೆ. ಹೀಗಿರುವಾಗಲೇ ಇದೇ ಸಿನಿಮಾದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಚಿತ್ರತಂಡದ ಶ್ರಮಕ್ಕೆ ಬೆನ್ನು ತಟ್ಟಿದ್ದಾರೆ. ಮೋದಿ ಅವರ ಟ್ವಿಟ್‌ನ ಸ್ಕ್ರೀನ್ ಶಾಟ್‌ಅನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವ ವಿಕ್ರಾಂತ್, ಪ್ರಧಾನಿಗೆ ಧನ್ಯವಾದ ತಿಳಿಸಿದ್ದಾರೆ.
ಮೋದಿ ಟ್ವಿಟ್‌ಗೆ ವಿಕ್ರಾಂತ್ ನಮನ
'ಗೌರವಾನ್ವಿತ ಪ್ರಧಾನಮಂತ್ರಿಗಳೇ, ದಿ ಸಾಬರಮತಿ ರಿಪೋರ್ಟ್ ಸಿನಿಮಾಕ್ಕೆ ನಿಮ್ಮ ಸ್ಪೂರ್ತಿದಾಯಕ ಮತ್ತು ಪಾಸಿಟಿವ್ ಮಾತುಗಳಿಗೆ ಧನ್ಯವಾದಗಳು. ನಿಮ್ಮ ಈ ಮೆಚ್ಚುಗೆಯು, ನಾವು ಸರಿಯಾದ ದಿಕ್ಕಿನಲ್ಲಿದ್ದೇವೆ ಎಂಬುದನ್ನು ಸಾಬೀತುಪಡಿಸುತ್ತದೆ. ಈ ಎಲ್ಲ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದಿದ್ದಾರೆ ವಿಕ್ರಾಂತ್. "ಇತಿಹಾಸವು ಇದಕ್ಕೆ ಸಾಕ್ಷಿಯಾಗಿದೆ. ಅದು ದೇಶವಾಗಲಿ ಅಥವಾ ವ್ಯಕ್ತಿಯಾಗಲಿ, ಬಿದ್ದ ನಂತರವೇ ಒಬ್ಬರು ಚೇತರಿಸಿಕೊಳ್ಳುತ್ತಾರೆ. ಸುಳ್ಳಿನ ಕಾಲ ಎಷ್ಟೇ ಸುದೀರ್ಘವಾದರೂ, ಸತ್ಯ ಮಾತ್ರ ಅದನ್ನು ಬದಲಾಯಿಸಬಲ್ಲದು" ಎಂದಿದ್ದಾರೆ ವಿಕ್ರಾಂತ್.
ಚಿತ್ರದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಇದರೊಂದಿಗೆ ವಿಕ್ರಾಂತ್ ಮಾಸ್ಸೆ ಅವರ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾದ ಬಗ್ಗೆ ಪ್ರಧಾನಿ ಮೋದಿಯವರ ಪ್ರತಿಕ್ರಿಯೆ ಹೀಗಿದೆ. “ಸರಿಯಾಗಿ ಹೇಳಿದ್ದಾರೆ. ಸತ್ಯ ಹೊರಬರುವುದು ಒಳ್ಳೆಯದು. ಅದು ಕೂಡ ಸಾಮಾನ್ಯ ಜನರು ನೋಡುವ ರೀತಿಯಲ್ಲಿ. ಒಂದು ನಕಲಿ ಕಥೆಯು ಸೀಮಿತ ಅವಧಿಯವರೆಗೆ ಮಾತ್ರ ಇರುತ್ತದೆ. ಬಳಿಕ ಸತ್ಯಗಳು ಯಾವತ್ತಿದ್ದರೂ ಹೊರಬರಲೇಬೇಕು" ಎಂದು ತಂಡದ ಬೆನ್ನು ತಟ್ಟಿದ್ದಾರೆ.
ಏನಿದು ಗೋಧ್ರಾ ಘಟನೆ?
‘ದಿ ಸಾಬರಮತಿ ರಿಪೋರ್ಟ್’ ಚಿತ್ರದ ಕಥೆ ಗೋದ್ರಾ ಘಟನೆಯನ್ನು ಆಧರಿಸಿದೆ. ಭಾರತದ ಇತಿಹಾಸದಲ್ಲಿ ಇದೊಂದು ಕರಾಳ ದಿನ ಎಂದೂ ಕರೆಯಲಾಗುತ್ತದೆ. 2002ರ ಫೆಬ್ರವರಿ 27ರಂದು ಮಧ್ಯಾಹ್ನ 12 ಸುಮಾರಿಗೆ ಸಾಬರಮತಿ ಎಕ್ಸ್‌ಪ್ರೆಸ್ ರೈಲು ಗೋಧ್ರಾ ರೈಲು ನಿಲ್ದಾಣ ತಲುಪಿತ್ತು. ಬಿಹಾರದ ಮುಜಾಫರ್‌ಪುರದಿಂದ ಗುಜರಾತ್‌ನ ಅಹಮದಾಬಾದ್‌ಗೆ ತೆರಳುತ್ತಿದ್ದ ಈ ರೈಲಿನಲ್ಲಿ ಸಾವಿರಾರು ಪ್ರಯಾಣಿಕರದ್ದರು. ಹೀಗಿರುವಾಗಲೇ ಇದೇ ರೈಲಿನ ಮೇಲೆ ಹಠಾತ್ ದಾಳಿ ನಡೆಸಲಾಯಿತು. ರೈಲಿನ ನಾಲ್ಕು ಬೋಗಿಗಳು ಬೆಂಕಿಗಾಹುತಿಯಾದವು. ಈ ಘಟನೆಯಲ್ಲಿ 59 ಜನರ ಸಾವಾಯಿತು. 48 ಪ್ರಯಾಣಿಕರು ಗಾಯಗೊಂಡಿದ್ದರು. ಈ ಘಟನೆಯನ್ನೇ ದಿ ಸಾಬರಮತಿ ರಿಪೋರ್ಟ್ ಸಿನಿಮಾದಲ್ಲಿ ತೋರಿಸಲಾಗಿದೆ.